ಹೊನ್ನಾಳಿ: ತಾಲ್ಲೂಕಿನ ಅರಕೆರೆಯಲ್ಲಿರುವ ಕರ್ಣಾಟಕ ಬ್ಯಾಂಕ್‌ಗೆ ಮಂಗಳವಾರ ರಾತ್ರಿ ನುಗ್ಗಿದ ದರೋಡೆಕೋರರ ತಂಡವೊಂದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿ ಪರಾರಿಯಾಗಿದೆ.
ಬ್ಯಾಂಕ್‌ಗೆ ಹೊಂದಿಕೊಂಡಂತಿರುವ ಮನೆಯ ಗೋಡೆಯನ್ನು ಕೊರೆದು ಒಳನುಗ್ಗಿದ ಕಳ್ಳರು ಅಲ್ಲಿನ ಸಿ.ಸಿ.ಟಿ.ವಿ ಕ್ಯಾಮೆರಾ, ಕಂಪ್ಯೂಟರ್‍ಗಳನ್ನು ನಾಶಮಾಡಿ ನಂತರ ಸ್ಟ್ರಾಂಗ್‍ರೂಮಿನ ಕಾಂಕ್ರೀಟ್ ಗೋಡೆಯನ್ನು ಮಷಿನ್‍ನಿಂದ ಕೊರೆದು ಒಳನುಗ್ಗಿ ಅಲ್ಲಿನ ಸೇಫ್ಟಿ ಲಾಕರ್‍ಗಳನ್ನು ತೆರೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಕೊನೆಗೆ ನಿರಾಶರಾಗಿ ಅಲ್ಲಿದ್ದ ಕಂಪ್ಯೂಟರ್ ಹಾಗೂ ಸಿ.ಸಿ.ಟಿ.ವಿ. ಕ್ಯಾಮೆರಾಗಳೊಂದಿಗೆ ಪರಾರಿಯಾಗಿದ್ದಾರೆ.
ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿತ್ತು. ಶ್ವಾನಗಳು ಬ್ಯಾಂಕ್ ಸಮೀಪದ ಡಾಬಾವರೆಗೆ ಹೋಗಿ ಅಲ್ಲೇ ನಿಂತ ಕಾರಣ ಕಳ್ಳರು ಡಾಬಾಕ್ಕೆ ಹೋಗಿ ಅಲ್ಲಿಂದ ಪರಾರಿಯಾಗಿರಬಹುದೆಂದು ಶಂಕಿಸಲಾಗಿದೆ.
’ಸ್ಥಳಕ್ಕೆ ಭೇಟಿ ನೀಡಿದ್ದ ಬ್ಯಾಂಕ್‌ನ ಪ್ರಾದೇಶಿಕ ಅಧಿಕಾರಿ ಬಿ.ವಿ.ಎಚ್. ಉಪಾಧ್ಯಾಯ ಮಾತನಾಡಿ, ’ಬ್ಯಾಂಕ್‌ನಲ್ಲಿದ್ದ ₹3.18 ಲಕ್ಷ ಹಾಗೂ 340 ಪ್ಯಾಕೆಟ್‍ಗಳಲ್ಲಿ ₹1.5 ಕೋಟಿ ಮೌಲ್ಯದ ಚಿನ್ನಾಭರಣಗಳು ಸುರಕ್ಷಿತವಾಗಿದ್ದು, ಯಾವುದೇ ಕಳ್ಳತನ ನಡೆದಿಲ್ಲ‘ ಎಂದು ಸ್ಪಷ್ಟಪಡಿಸಿದರು.
ಇದು ಎರಡನೇ ಬಾರಿ:
’2014ರ ಆಗಸ್ಟ್ 15ರಂದು ಇದೇ ಬ್ಯಾಂಕ್‌ನಲ್ಲಿ ದರೋಡೆ ನಡೆದಿತ್ತು. ಅಂದಾಜು 12 ಕೆಜಿ ಚಿನ್ನ, ₹2.50 ಲಕ್ಷ ಕಳ್ಳತನ ಮಾಡಲಾಗಿತ್ತು. ಆದರೆ ಈ ಪ್ರಕರಣ ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ‘ ಎಂದು ಗ್ರಾಮಸ್ಥರು ದೂರಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯ:
ಶಿವಮೊಗ್ಗ ಹರಿಹರ ಹೆದ್ದಾರಿಯ ಪಕ್ಕದಲ್ಲಿದ್ದರೂ ಈ ಬ್ಯಾಂಕ್ ಗ್ರಾಮದಿಂದ ಸುಮಾರು ದೂರವಿದೆ. ಮೊದಲ ಕಳ್ಳತನದ ಪ್ರಕರಣ ನಡೆದಾಗಲೇ ಎಚ್ಚೆತ್ತುಕೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಈ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಈ ಬ್ಯಾಂಕ್‌ನ ಸುತ್ತಮುತ್ತ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸದಿರುವುದು, ರಾತ್ರಿ ವೇಳೆ ಕಾವಲುಗಾರರನ್ನು ನೇಮಕ ಮಾಡದಿರುವುದು ನಿರ್ಲಕ್ಷ್ಯ ಎಂದಿದ್ದಾರೆ.
ಸಿಪಿಐ ಬ್ರಿಜೇಶ್ ಮಾಥ್ಯೂ, ಪಿಎಸ್‍ಐ ತಿಪ್ಪೇಸ್ವಾಮಿ, ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.