ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾತಿ ಕೆರೆ: ಅಪಾಯಕಾರಿ ರಸ್ತೆಗೆ ತಡೆಗೋಡೆ ಇಲ್ಲ!

ಯಾಮಾರಿದರೆ ಯಮನ ಪಾದವೇ ಗತಿ: ಪಿಡಬ್ಲ್ಯೂಡಿ ಇಲಾಖೆ ದಿವ್ಯ ನಿರ್ಲಕ್ಷ್ಯ
Published 3 ಏಪ್ರಿಲ್ 2024, 5:46 IST
Last Updated 3 ಏಪ್ರಿಲ್ 2024, 5:46 IST
ಅಕ್ಷರ ಗಾತ್ರ

ಹರಿಹರ: ಹರಿಹರ- ದಾವಣಗೆರೆ ಅವಳಿ ನಗರ ಮಧ್ಯದಲ್ಲಿ ಬಾತಿ ಕೆರೆ ಇದೆ. ಬೀರೂರು-ಸಮ್ಮಸಗಿ (ಹಳೆ ಪೂನಾ-ಬೆಂಗಳೂರು ರಸ್ತೆ) ಹೆದ್ದಾರಿಗೆ ಅಂಟಿಕೊಂಡು ಅಂದಾಜು ಒಂದು ಕಿ.ಮೀ. ಉದ್ದದ ಏರಿಯನ್ನು ಈ ಕೆರೆ ಹೊಂದಿದೆ.

ರಸ್ತೆ ಬದಿಯಲ್ಲಿ ನದಿ, ಕೆರೆ, ಹೊಂಡ, ಹಳ್ಳಗಳಿದ್ದಲ್ಲಿ ಎರಡೂ ಕಡೆ ರಕ್ಷಣಾ ಗೋಡೆ ಅಥವಾ ಕಲ್ಲುಗಳನ್ನು ಅಳವಡಿಸಲಾಗುತ್ತದೆ. ಈ ಕೆರೆಗೆ ದಶಕಗಳ ಹಿಂದೆ ಅಳವಡಿಸಿದ್ದ ರಕ್ಷಣಾ ಕಲ್ಲುಗಳು ಕಾಲಾಂತರದಲ್ಲಿ ಕಿತ್ತು ಹೋಗಿವೆ.

ಈ ಹೆದ್ದಾರಿ ಪಿಡಬ್ಲ್ಯೂಡಿ ಇಲಾಖೆಗೆ ಸೇರಿದ್ದು, ಇಲಾಖೆ ಅಧಿಕಾರಿಗಳು ಸಮಸ್ಯೆಯನ್ನು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಈ ಕೆರೆ ನೀರಾವರಿ ಉದ್ದೇಶದ್ದಾಗಿದೆ. ಭದ್ರಾ ಕಾಲುವೆ ನೀರಿನ ಮೂಲವಾಗಿದ್ದು, ವರ್ಷದ 12 ತಿಂಗಳೂ ಈ ಕೆರೆಯಲ್ಲಿ ನೀರು ಇರುತ್ತದೆ. ಮಳೆಗಾಲದಲ್ಲಿ ಸುತ್ತಲಿನ ಜಮೀನುಗಳ ಬಸಿ ನೀರು ಸೇರಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ.

ಆ ದುರಂತ ಮರೆಯಲಾದೀತೆ?:

ದಾವಣಗೆಯಿಂದ ರಾಣೆಬೆನ್ನೂರು ತಾಲ್ಲೂಕು ಕರೂರು ಗ್ರಾಮಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಮಗುಚಿ ಕೆರೆ ಪಾತ್ರಕ್ಕೆ ಬಿದ್ದು 12 ಜನ ಅಸುನೀಗಿದ ಘಟನೆ 23 ವರ್ಷಗಳ ಹಿಂದೆ ನಡೆದಿತ್ತು. ಇದಲ್ಲದೇ ಸಣ್ಣ, ಪುಟ್ಟ ಅವಘಡಗಳು ಕೆರೆ ಏರಿಯಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ.

ಈ ರಸ್ತೆಯಲ್ಲಿ ಸಾರಿಗೆ ಸಂಸ್ಥೆಗೆ ಸೇರಿದ ಅಂದಾಜು 1,500 ಬಸ್ಸುಗಳು ಸಂಚರಿಸುತ್ತವೆ. ನೂರಾರು ಲಾರಿ, ಕಾರು, ಆಟೋ, ಬೈಕ್ ಇತರೆ ವಾಹನಗಳು ಹಗಲು– ರಾತ್ರಿ ಸಂಚರಿಸುತ್ತವೆ. ಅವಳಿ ನಗರವಾಗಿರುವುದರಿಂದ ವಿದ್ಯಾರ್ಥಿಗಳು, ಉದ್ಯೋಗಿ, ವ್ಯಾಪಾರಸ್ಥರು ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಾರೆ.

ಈ ರಸ್ತೆ ನೇರವಾಗಿಲ್ಲ:

ಬಿಲ್ಲಿನ ರೂಪದಲ್ಲಿ ಈ ರಸ್ತೆ ಇದೆ. ಹೀಗಾಗಿ ವಾಹನ ಸವಾರರು ಸ್ವಲ್ಪ ಯಾಮಾರಿದರೂ, ಸೀದಾ ಕೆರೆಯ ಪಾತ್ರಕ್ಕೆ ವಾಹನ ಸಮೇತ ಬೀಳುತ್ತಾರೆ. 3 ವರ್ಷಗಳ ಹಿಂದೆ ಕೆರೆ ಏರಿ ಮೇಲಿನ ರಸ್ತೆ ವಿಸ್ತರಿಸಿ ದ್ವಿಪಥವಾಗಿಸಲಾಗಿದೆ. ಆಗ ಕಂದಕ ಇರುವ ಭಾಗಕ್ಕೆ ರಕ್ಷಣಾ ಗೋಡೆ ನಿರ್ಮಿಸಿ, ಕೆರೆ ಬದಿಗೆ ಹಾಗೇ ಬಿಡಲಾಗಿದೆ.

ಕೂಡಲೇ ಸಂಬಂಧಿತ ಅಧಿಕಾರಿಗಳು ಕೆರೆ ಏರಿಯ ಪೂರ್ಣ ಭಾಗಕ್ಕೆ ರಕ್ಷಣಾ ಗೋಡೆ ನಿರ್ಮಿಸಿ ಪ್ರಯಾಣಿಕರ ರಕ್ಷಣೆ ಮಾಡಬೇಕಿದೆ.

ವಾರದಲ್ಲಿ 5–6 ಬಾರಿಯಾದರೂ ದಾವಣಗೆರೆಗೆ ಬೈಕ್‌ನಲ್ಲಿ ಹೋಗಿ ಬರುತ್ತೇನೆ. ರಕ್ಷಣಾ ಗೋಡೆ ಇಲ್ಲದ ಕೆರೆ ಏರಿ ಮೇಲೆ ಸಾಗುವಾಗ ಭಯವಾಗುತ್ತದೆ. ರಾತ್ರಿ ವೇಳೆ ಇಲ್ಲಿ ಸಂಚರಿಸುವುದು ಅಪಾಯಕಾರಿ -ಜಿ.ಎಚ್.ಸಿದ್ದೇಶ್, ಬಾತಿ ನಿವಾಸಿ

ಕೆರೆ ಏರಿ ಮೇಲೆ ರಕ್ಷಣಾ ಗೋಡೆ ನಿರ್ಮಿಸಬೇಕಿದೆ ಇದಕ್ಕಾಗಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದರೆ ಕಾಮಗಾರಿ ನಡೆಸುತ್ತೇವೆ

-ಕುಮಾರ ನಾಯ್ಕ ಎಇಇ ಪಿಡಬ್ಲ್ಯೂಡಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT