ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಬೈಕ್‌ ಕರ್ಕಶ ಸದ್ದು: ದಾರಿಹೋಕರಿಗೆ ಢವಢವ

Published 28 ಆಗಸ್ಟ್ 2023, 7:01 IST
Last Updated 28 ಆಗಸ್ಟ್ 2023, 7:01 IST
ಅಕ್ಷರ ಗಾತ್ರ

ದಾವಣಗೆರೆ: ಆಗಷ್ಟೇ ಕಾಲೇಜು ಬಿಟ್ಟಿತ್ತು. ವಿದ್ಯಾರ್ಥಿನಿಯರು ಸಹಪಾಠಿಗಳೊಂದಿಗೆ ಮಾತನಾಡುತ್ತಾ ರಸ್ತೆಯ ಒಂದು ಬದಿಯಲ್ಲಿ ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದರು. ಅದೆಲ್ಲಿಂದಲೋ ವೇಗವಾಗಿ ಬಂದ ಪುಂಡರ ಗುಂಪು ಕಿವಿಗಡಚಿಕ್ಕುವಂತೆ ಬೈಕ್‌ ಸದ್ದು ಮಾಡುತ್ತಾ, ಎಕ್ಸ್‌ಲೇಟರ್‌ ಹೆಚ್ಚಿಸುತ್ತಾ ವಿದ್ಯಾರ್ಥಿನಿಯರ ಕಡೆಗೊಮ್ಮೆ ಕಣ್ಣಾಯಿಸಿ ಕ್ಷಣಮಾತ್ರದಲ್ಲಿ ನಾಪತ್ತೆಯಾದರು.

ಅದು ನಗರದ ಕೆ.ಆರ್‌. ಮಾರುಕಟ್ಟೆಯ ಕಿರುದಾರಿ. ವಾಹನಗಳು ನಿಧಾನವಾಗಿ ಸಾಗುತ್ತಿದ್ದವು. ವೃದ್ಧರು, ಮಹಿಳೆಯರು ರಸ್ತೆ ಬದಿಯಲ್ಲಿ ತರಕಾರಿ ಖರೀದಿಯಲ್ಲಿ ತೊಡಗಿದ್ದರು. ಮುಂದೆ ಸಾಗಲು ಜಾಗವಿಲ್ಲದಿದ್ದರೂ ಜೋರಾಗಿ, ಒಂದೇಸಮನೆ ಹಾರ್ನ್‌ ಮಾಡುತ್ತಾ ಬೈಕ್‌ಗಳಲ್ಲಿ ನುಗ್ಗಿ ಬಂದ ಕಿಡಿಗೇಡಿಗಳು ಅಲ್ಲಿದ್ದ ಜನರಲ್ಲಿ ಕಿರಿಕಿರಿ ಉಂಟು ಮಾಡಿದರು..

ಜಯದೇವ ವೃತ್ತದ ಬಳಿ ಹಸಿರು ಸಿಗ್ನಲ್‌ ಬೀಳಲು ಇನ್ನೂ 50 ಸೆಕೆಂಡ್‌ ಬಾಕಿ ಇತ್ತು. ಕೆಂಪು ದೀಪ ಉರಿಯುತ್ತಿದ್ದರಿಂದ ಮಾರುದ್ದದ ವಾಹನಗಳ ಸಾಲಿತ್ತು. ಬೈಕ್‌ ಸೈಲೆನ್ಸರ್‌ನ ಜೋರು ಸದ್ದಿನೊಂದಿಗೆ ಹಾರ್ನ್‌ ಮಾಡುತ್ತಾ ವಾಹನಗಳನ್ನು ದಾಟುತ್ತಾ ಮುಂದೆ ಸಾಗಿದ ಯುವಕನೊಬ್ಬ ಮತ್ತೊಂದು ಬದಿಯಲ್ಲಿ ಬರುತ್ತಿದ್ದ ವಾಹನಗಳನ್ನು ಲೆಕ್ಕಿಸದೇ ಅಪಾಯಕಾರಿಯಾಗಿ ಬೈಕ್‌ ಓಡಿಸಿಕೊಂಡು ಹೋಗಿಯೇ ಬಿಟ್ಟ. ‘ಸಿಗ್ನಲ್‌ನಲ್ಲಿ ಹಸಿರು ಸಿಗ್ನಲ್‌ಗಳಿಗೆ ಕಾಯುತ್ತ ನಿಂತ ಇತರರು ಬಹುಶಃ ಹುಚ್ಚರು’ ಎಂದೇ ಅವನು ಭಾವಿಸಿದಂತಿತ್ತು.

ನಗರದಲ್ಲಿ ನಿತ್ಯವೂ ಒಂದಿಲ್ಲೊಂದು ಕಡೆಗಳಲ್ಲಿ ಇಂಥ ದೃಶ್ಯಗಳನ್ನು ಕಾಣಬಹುದು. ಇದೆಲ್ಲವೂ ಸಹಜವೇ ಎಂಬಂತಹ ವಾತಾವರಣ ನಗರದಲ್ಲಿದೆ. ಪುಂಡರ ಅಪಾಯಕಾರಿ ಬೈಕ್‌ ರೈಡಿಂಗ್‌ನಿಂದ ಮಹಿಳೆಯರು, ಚಿಕ್ಕಚಿಕ್ಕ ಮಕ್ಕಳು, ವೃದ್ಧರು ಜೀವ ಕೈಯಲ್ಲಿ ಹಿಡಿದು ಓಡಾಡುಬೇಕಾದಂತಹ ಸ್ಥಿತಿ ಇದೆ. ಅದರಲ್ಲೂ ಶಾಲೆ– ಕಾಲೇಜುಗಳ ಬಳಿಯಂತೂ ರೋಡ್‌ರೋಮಿಯೋಗಳ ಕಾಟ ವಿಪರೀತ ಹೆಚ್ಚಾಗಿದೆ. ಇವರ ಕಾಟಕ್ಕೆ ಆಬಾ ವೃದ್ಧರಾಗಿ ಪ್ರತಿಯೊಬ್ಬರೂ ರಸ್ತೆಗಳಲ್ಲಿ ಓಡಾಡಲೂ ಹೆದರುತ್ತಿದ್ದಾರೆ.

ಮುಖ್ಯರಸ್ತೆ, ಕಿರುದಾರಿ ಎಂಬುದನ್ನು ನೋಡದೇ, ಜನಸಂದಣಿ ಮಧ್ಯೆಯೇ ವೇಗವಾಗಿ ಬೈಕ್‌ ಚಲಾಯಿಸುವ ಯುವಕರು ತಾವು ಮಾತ್ರ ಸುರಕ್ಷಿತವಾಗಿ ಸಾಗುತ್ತ, ಅಮಾಯಕರು ಅಪಘಾತ, ಆಘಾತಕ್ಕೆ ಒಳಗಾಗುವಂತೆ ಮಾಡುತ್ತಿದ್ದಾರೆ. ಅದು ಸಂಚಾರ ನಿಯಮದ ಸ್ಪಷ್ಟ ಉಲ್ಲಂಘನೆ ಎಂಬುದು ಎಂಥವರಿಗೂ ಗೊತ್ತಾಗುತ್ತದೆ. ಆದರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸಂಚಾರ ಠಾಣೆ ಪೊಲೀಸರ ಪತ್ತೆಯೇ ಇರುವುದಿಲ್ಲ ಎಂಬುದು ಸೋಜಿಗದ ಸಂಗತಿ.  

ಇದು ಪಡ್ಡೆಗಳ ಕಥೆ. ಇವರಂತೆಯೇ ಮಧ್ಯ ವಯಸ್ಕರೂ ಹೆಲ್ಮೆಟ್‌ ರಹಿತ ಪ್ರಯಾಣ ಮಾಡುವುದು, ತ್ರಿಬಲ್‌ ರೈಡಿಂಗ್‌, ಸಿಗ್ನಲ್‌ ಜಿಗಿದು ಸಾಗುವುದು ನಿತ್ಯ ಕಂಡುಬರುವ ದೃಶ್ಯವಾಗಿದೆ.

ಬೈಕ್‌ ಸೌಂಡ್‌ ಹಾವಳಿ

ಸಾಮಾನ್ಯವಾಗಿ ಹೊಸ ಬೈಕ್‌ ಖರೀದಿಸಿದಾಗ ಆಯಾ ಕಂಪನಿಯ ಸೈಲೆನ್ಸರ್‌ಗಳಲ್ಲಿ ಇರುವಂತಹ ಅಸಲಿ ಮಫ್ಲರ್‌ ಉಪಕರಣಗಳಿಂದಾಗಿ ಹೆಚ್ಚಿನ ಸದ್ದು ಬರುವುದಿಲ್ಲ. ಆದರೆ, ಆಟೊಮೊಬೈಲ್‌ಗಳಲ್ಲಿ ಜೋರು ಸೌಂಡ್‌ ಮಾಡುವಂತಹ ಮಫ್ಲರ್‌ ಖರೀದಿಸುವ ಕಿಡಿಗೇಡಿಗಳು ಬೈಕ್‌ ಗ್ಯಾರೇಜ್‌ ಹಾಗೂ ವೆಲ್ಡಿಂಗ್‌ ಗ್ಯಾರೇಜ್‌ಗಳ ಬಳಿ ಅವುಗಳನ್ನು ತಮ್ಮ ಬೈಕ್‌ ಸೈಲೆನ್ಸರ್‌ಗಳಲ್ಲಿ ಅಳವಡಿಸಿಕೊಳ್ಳುತ್ತಾರೆ. ಇದರಿಂದ ಬೈಕ್‌ಗಳು ವಿಪರೀತ ಸದ್ದು ಮಾಡುತ್ತಿವೆ. 

ಎಲ್ಲರೂ ತಮ್ಮತ್ತ ನೋಡಬೇಕು, ತಾನು ‘ಹೀರೋ’ ಎಂಬ ಕಲ್ಪನಾಭಾವದಲ್ಲಿ ತೇಲುವ ಪಡ್ಡೆಗಳು ಸದ್ದುಮಾಡುವ ಬೈಕ್‌ಗಳನ್ನು ಬಳಸಿ ಊರಿಡೀ ಸುತ್ತುವ ಕೆಟ್ಟ ಚಾಳಿಯನ್ನು ಬೆಳೆಸಿಕೊಂಡಿದ್ದಾರೆ. ಅದರಲ್ಲೂ ಶಾಲೆ– ಕಾಲೇಜುಗಳಿರುವ ರಸ್ತೆಗಳಲ್ಲಿ, ನಗರದ ಚರ್ಚ್‌ ರೋಡ್‌ನಲ್ಲಿ ‘ಬೈಕ್‌ ಸೌಂಡ್‌ ಪುಂಡ’ರ ಹಾವಳಿ ಜಾಸ್ತಿ ಆಗಿದೆ. ಯುವಕರೇ ಹೆಚ್ಚಾಗಿ ಈ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇವರ ಕಾಟ ವಿಪರೀತ ಎಂಬಂತಾಗಿದೆ.

‘ಮಫ್ಲರ್‌ ಬದಲಾಯಿಸಿದರೆ ಬೈಕ್‌ ಮೈಲೇಜ್‌ ಕೂಡ ಕಡಿಮೆ ಆಗುತ್ತದೆ. ಹಾಗಿದ್ದರೂ ಕೆಲವರು ಶೋಕಿಗೆ ಮಫ್ಲರ್‌ ಬದಲಾಯಿಸಿಕೊಂಡು ಜನರಿಗೆ ಕಿರಿಕಿರಿ ಮಾಡುತ್ತಾರೆ’ ಎಂದು ಗ್ಯಾರೇಜ್‌ವೊಂದರಲ್ಲಿ ಕೆಲಸ ಮಾಡುವ ಅಬ್ದುಲ್‌ ತಿಳಿಸಿದರು.

ರಾತ್ರಿ ಓಡಾಡುವುದೇ ದುಸ್ತರ

ನಗರದಲ್ಲಿ ರಾತ್ರಿ ವೇಳೆ ಒಬ್ಬೊಬ್ಬರೇ ಓಡಾಡುವುದೇ ದುಸ್ತರವಾಗಿದೆ. ಬೈಕ್‌ನಲ್ಲಿ ಗುಂಪಾಗಿ ಬರುವ ಪುಂಡರು ಹೆದರಿಸಿ ಮೊಬೈಲ್‌, ಪರ್ಸ್‌ ಕಿತ್ತುಕೊಳ್ಳುತ್ತಿದ್ದಾರೆ. ರಾತ್ರಿ ವೇಳೆ ಮದ್ಯದ ನಶೆಯಲ್ಲಿ ಖಾಲಿ ರಸ್ತೆಗಳಲ್ಲಿ ವಿಪರೀತ ವೇಗದಲ್ಲಿ ಬೈಕ್‌ ಚಲಾಯಿಸುತ್ತಾರೆ. ಎದುರಿಗೆ ಬರುವ ಬೈಕ್‌ ಸವಾರರನ್ನು ಗುರಾಯಿಸುವ, ಕಿಚಾಯಿಸುವ ಕೆಲಸವನ್ನೂ ಮಾಡುತ್ತಾರೆ. ಬೈಕ್‌ನಲ್ಲಿ ಬರುವ ಕಿಡಿಗೇಡಿಗಳು ಕ್ಷಣಮಾತ್ರದಲ್ಲಿ ದರೋಡೆ ನಡೆಸಿ ಪರಾರಿಯಾಗುತ್ತಿದ್ದಾರೆ.

ಪೊಲೀಸರೂ ನಾಪತ್ತೆ

ನಗರದ ಪ್ರಮುಖ ವೃತ್ತಗಳ ಬಳಿ ಹಾಗೂ ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಬಹುತೇಕ ಸಮಯದಲ್ಲಿ ಪೊಲೀಸರು, ಸಂಚಾರ ಪೊಲೀಸರು ಇರುವುದಿಲ್ಲ. ಸಂಚಾರ ನಿಯಮ ಉಲ್ಲಂಘನೆಯ ಕ್ಯಾಮೆರಾ ದೃಶ್ಯಾವಳಿಯನ್ನು ಆಧರಿಸಿ ದಂಡದ ರಶೀದಿಯನ್ನು ವಾಹನ ಮಾಲೀಕರ ವಿಳಾಸಕ್ಕೆ ಕಳಿಸುವ ವ್ಯವಸ್ಥೆಯನ್ನು ಕೆಲವು ಸಿಗ್ನಲ್‌ಗಳಲ್ಲಿ ಪಾಲಿಸಲಾಗುತ್ತಿದೆ. ಈ ಕಾರಣಕ್ಕೆ ಸಿಗ್ನಲ್‌ಗಳಲ್ಲಿ ಪೊಲೀಸರು ಇರುವುದಿಲ್ಲ. ಆದರೆ, ಈ ಬಗ್ಗೆ ವಾಹನಗಳ ಸವಾರರು ಕೇರ್‌ ಮಾಡುವುದಿಲ್ಲ. ಪೊಲೀಸರು ಕಾಣದಿದ್ದರೆ ಜನರು ರಾಜಾರೋಷವಾಗಿಯೇ ಸಾಗುತ್ತಿದ್ದಾರೆ.

ಜಿಲ್ಲೆಯ ವಿವಿಧ ಪಟ್ಟಣಗಳು ಹಾಗೂ ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಮೊದಲು ಕಾಣಸಿಗುತ್ತಿದ್ದ ಸಂಚಾರ ಠಾಣೆ ಪೊಲೀಸರು ಈಗೀಗ ಕಾಣಸಿಗುವುದಿಲ್ಲ. ಆದರೆ, ಬಸ್‌, ರೈಲು ನಿಲ್ದಾಣದ ಎದುರು ಕೆಲವು ಕಡೆ ಹಳ್ಳಿಗಳಿಂದ ಬರುವ ಬೈಕ್‌ ಸವಾರರು ಹಾಗೂ ಇನ್ನಿತರ ವಾಹನಗಳ ಮೇಲೆ ನಿಗಾವಹಿಸಿ, ಸಣ್ಣಪುಟ್ಟ ನಿಯಮಗಳ ಉಲ್ಲಂಘನೆಗೂ ದಂಡ ಕಟ್ಟಿಸಿಕೊಳ್ಳುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ’ ಎಂದು ಜಗಳೂರು ತಾಲ್ಲೂಕಿನಿಂದ ಬಂದಿದ್ದ ಬಸಪ್ಪ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT