ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನಲ್ಲಿ ಸಾವಿಲ್ಲದ ಸಂಪತ್ತು ಸಾಹಿತ್ಯ: ಶಾಂತವೀರ ಶ್ರೀ

Last Updated 1 ಫೆಬ್ರುವರಿ 2018, 8:40 IST
ಅಕ್ಷರ ಗಾತ್ರ

ಸೇಡಂ (ದಾಸೋಹಿ ಗಳಂಗಳಪ್ಪ ಪಾಟೀಲ್ ವೇದಿಕೆ): ‘ಜಗತ್ತಿನಲ್ಲಿ ಸಾವಿಲ್ಲದ ಏಕೈಕ ಸಂಪತ್ತು ಎಂದರೆ ಸಾಹಿತ್ಯವಾಗಿದೆ. ಪ್ರಾಚೀನ ಕಾಲದಿಂದಲೂ ಸಹ ಕನ್ನಡ ಸಾಹಿತ್ಯ ಪರಂಪರೆ ಉಳಿದು ಬೆಳೆದುಕೊಂಡು ಬಂದಿದೆ. ಮುಂದೆಯೂ ಸಹ ಕನ್ನಡ ಸಾಹಿತ್ಯ ಪರಂಪರೆಯ ಬೆಳೆಯುತ್ತದೆ’ ಎಂದು ಗುರಮಠಕಲ್ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮೇದಕ ಗ್ರಾಮದ ಅಕ್ಷರಧಾಮದಲ್ಲಿ ಬುಧವಾರ ಚೆನ್ನ ಕೇಶ್ವರ ಉತ್ಸವ ಸಮಿತಿ ಆಯೋಜಿ ಸಿದ್ದ 2ನೇ ಚೆನ್ನಕೇಶ್ವರ ಉತ್ಸವ ಕಲ್ಯಾಣ ಕರ್ನಾಟಕ ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದರು.

‘ಗಡಿಭಾಗದಲ್ಲಿ ಚೆನ್ನಕೇಶ್ವರ ಉತ್ಸವ ಸಮಿತಿಯೂ ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯ. ಜನರು ಇಂತಹ ಮಹತ್ವದ ಕಾರ್ಯಗಳಲ್ಲಿ ಭಾಗವಹಿಸಿ, ಕನ್ನಡ ಭಾಷೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಕನ್ನಡ ಭಾಷೆಯನ್ನು ಪ್ರೀತಿಸಿ, ಅದನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ’ ಎಂದರು.

ನಾಲವಾರದ ಸಿದ್ಧತೋಟೇಂದ್ರ ಸ್ವಾಮೀಜಿ ಮಾತನಾಡಿ, ‘ಕನ್ನಡ ಭಾಷೆ ಭಾವನಾತ್ಮಕತೆಯನ್ನು ಹೊಂದಿದ ಭಾಷೆಯಾಗಿದ್ದು, ಅದು ನಶಿಸಲು ಸಾಧ್ಯವಿಲ್ಲ. ಅನ್ಯಭಾಷೆಗಳ ಮಧ್ಯೆ ಕನ್ನಡ ಭಾಷೆಯ ಬಳಕೆ ಹಾಗೂ ಶಿಕ್ಷಣದ ಮಹತ್ವ ಕಡಿಮೆಯಾಗುತ್ತಿದೆ. ಪಾಲಕರು ಸಹ ತಮ್ಮ ಮಕ್ಕಳಿಗೆ ಕನ್ನಡ ಭಾಷೆಯ ಕುರಿತು ತಿಳಿಹೇಳುವ ಕೆಲಸ ಮಾಡುವ ಅವಶ್ಯಕತೆ ಇದೆ’ ಎಂದು ಹೇಳಿದರು.

ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಜೋಶಿ ಮಾತನಾಡಿ, ‘ಗಡಿನಾಡು ಭಾಗದಲ್ಲಿ ಕನ್ನಡ ಭಾಷೆಯ ತಡೆಗೋಡೆ ನಿರ್ಮಾಣವಾಗದೇ, ಸೇತುವೆ ನಿರ್ಮಿಸುವ ಕೆಲಸವಾಗ ಬೇಕಿದೆ. ಅನ್ಯಭಾಷೆಯನ್ನು ದ್ವೇಷಿಸುವ ಬದಲಾಗಿ, ನಮ್ಮ ಭಾಷೆಯನ್ನು ಗೌರವಿಸಬೇಕಿದೆ. ಕನ್ನಡ ಭಾಷೆ ಜೀವನಾಡಿ ಭಾಷೆಯಾಗಿಸುವ ನಿಟ್ಟಿನಲ್ಲಿ ಪ್ರಯತ್ನವಾಗಬೇಕಿದೆ. ಅಂದಾಗ ಕನ್ನಡ ಭಾಷೆ ಉಳಿದು ಬೆಳೆಯುವ ನಿಟ್ಟಿನಲ್ಲಿ ಸಾಧ್ಯವಾಗುತ್ತದೆ’ ಎಂದರು.

‘ಗಡಿಭಾಗದ ಜನರು ನಿರುದ್ಯೋಗ, ಹಸಿವಿನಿಂದ ಕಂಗಾಲಾಗಿದ್ದು, ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಮೂಲಸೌಲಭ್ಯಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸ ಮಾಡಬೇಕಿದೆ’ ಎಂದು ತಿಳಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಅವರಿಗೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಜೋಶಿ ಕನ್ನಡ ಧ್ವಜವನ್ನು ಹಸ್ತಾಂತರಿಸಿದರು.

ಸಮಿತಿಯ ಅಧ್ಯಕ್ಷ ದಾಮೋದರ ರೆಡ್ಡಿ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ದಿಲೀಪ್ ಆರ್.ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬನ್ನಮ್ಮ ಭೀಮಶಪ್ಪ ನಾಯ್ಕಿನ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶಾರದಮ್ಮ ಜೈಪಾಲರೆಡ್ಡಿ, ಬಸವಂತರೆಡ್ಡಿ, ಕೇಶವರೆಡ್ಡಿ, ಹರ್ಷವರ್ಧನರೆಡ್ಡಿ, ರಾಮಲಿಂಗಪ್ಪ, ಸತೀಶ ಪೂಜಾರಿ, ಮಹಿಪಾಲರೆಡ್ಡಿ, ಗೌಡಪ್ಪಗೌಡ ಮೇದಕ, ಭೀಮರೆಡ್ಡಿ ದೇವಿಡ್ಡಿ, ವೆಂಕಟಪ್ಪಯಂಗನ್, ಬೀಮಶಪ್ಪ ನಾಯ್ಕಿನ್, ಸಿದ್ದಯ್ಯಸ್ವಾಮಿ ನಾಡೆಪಲ್ಲಿ, ಸದಾಶಿವರೆಡ್ಡಿ ಗೋಪನಪಲ್ಲಿ, ಭೀಮಶಪ್ಪ, ನಾಗರಾಜ ಶಕಲಾಸಪಲ್ಲಿ, ತಾಲ್ಲೂಕು ಪಂಚಾಯಿತಿ ಸದಸ್ಯ ರಾಮುಲು ನಾಯಕ, ನರಸಪ್ಪ, ಗೋಪಾಲರೆಡ್ಡಿ ಭಂಕೂರು, ನಿಂಗಪ್ಪ ಗೋನಾಳ, ಸುಭಾಷ ಸಜ್ಜನ್, ಮಧುಸೂದನರೆಡ್ಡಿ ಇದ್ದರು. ಚೆನ್ನಕೇಶ್ವರ ಉತ್ಸವ ಸಮಿತಿಯ ಸಂಚಾಲಕ ಮೊಘಲಪ್ಪ ಯಾನಾಗುಂದಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಗಮನ ಸೆಳೆದ ಅಧ್ಯಕ್ಷರ ಮೆರವಣಿಗೆ

ಸೇಡಂ: ತಾಲ್ಲೂಕಿನ ಮೇದಕ ಗ್ರಾಮದಲ್ಲಿರುವ ಚೆನ್ನಕೇಶ್ವರ ದೇವಸ್ಥಾನದಿಂದ ದಾಸೋಹಿ ಗಳಂಗಪ್ಪ ಪಾಟೀಲ ವೇದಿಕೆವರೆಗೆ ಸಮ್ಮೇಳಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಅವರ ಸಾರೋಟಿನ ಮೆರಣಿಗೆ ಅತ್ಯಂತ ಗಮನ ಸೆಳೆಯಿತು. ಮೆರವಣಿಗೆಯ ಉದ್ದಕ್ಕೂ ಶಾಲಾ ಮಕ್ಕಳಿಂದ ಪಥಸಂಚಲನ ನಡೆಯಿತು.

ಡೊಳ್ಳು ಕುಣಿತದ ನೃತ್ಯ ಹಾಗೂ ಹಲಗೆ ಭಾರಿಸುವಿಕೆ ಗಮನ ಸೆಳೆಯಿತು. ಸುಮಾರು ಒಂದು ಕಿ.ಮೀ.ವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆದು, ವೇದಿಕೆ ತಲುಪಿತು. ವೇದಿಕೆಯ ಸಾರೋಟಿನಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ದಾಮೋದರರೆಡ್ಡಿ ಪಾಟೀಲ, ಪ್ರಭಾಕರ ಜೋಶಿ ಹಾಗೂ ಜಗನ್ನಾಥ ತರನಳ್ಳಿ ಇದ್ದರು.

* * 

ಕನ್ನಡ ಭಾಷೆ ತನ್ನದೇ ಆದ ದೀರ್ಘಕಾಲದ ಲಿಪಿಯನ್ನು ಹೊಂದಿದ್ದು, ಭಾಷಾ ವೈಶಿಷ್ಟತೆಯನ್ನು ಹೊಂದಿದೆ. ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು.
ಪ್ರಭಾಕರ ಜೋಶಿ,
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT