ಬುಧವಾರ, ಜನವರಿ 20, 2021
26 °C
ರಾಜ್ಯ ಕಾರ್ಯಕಾರಿಣಿಯಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್‌ ಸಿಂಗ್‌ ಆರ್ಯ

ಕಾಂಗ್ರೆಸ್‌ ಅಧಿಕಾರಕ್ಕೆ ತರದಂತೆ ಸಂಕಲ್ಪ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಮ್ಮ ಭಗವಂತನಾದ ಡಾ.ಬಿ.ಆರ್. ಅಂಬೇಡ್ಕರ್‌ ಅವರಿಗೆ ಹಲವು ಬಾರಿ ಅವಮಾನ ಮಾಡಿರುವ ಕಾಂಗ್ರೆಸ್‌ ಪಕ್ಷವನ್ನು ಯಾವ ರಾಜ್ಯದಲ್ಲೂ ಅಧಿಕಾರಕ್ಕೆ ತರದಂತೆ ಪರಿಶಿಷ್ಟ ಸಮುದಾಯದವರು ಸಂಕಲ್ಪ ಮಾಡಬೇಕು’ ಎಂದು ಬಿಜೆಪಿ ಎಸ್.ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಲಾಲ್‌ ಸಿಂಗ್‌ ಆರ್ಯ ಕರೆ ನೀಡಿದರು.

ನಗರದಲ್ಲಿ ಬುಧವಾರ ನಡೆದ ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನ ರಚಿಸಿದ ಅಂಬೇಡ್ಕರ್‌ ಅವರನ್ನು ಗೌರವಯುತವಾಗಿ ಅವಿರೋಧವಾಗಿ ಸಂಸತ್ತಿಗೆ ಆಯ್ಕೆ ಮಾಡಬೇಕಾಗಿತ್ತು. ಆದರೆ, ಕಾಂಗ್ರೆಸ್ ನಾಯಕರು ‌ಅವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಬಡವರ ಧ್ವನಿಯನ್ನು ಹತ್ತಿಕ್ಕಿದರು. ದೆಹಲಿಯಲ್ಲಿ ಅಂಬೇಡ್ಕರ್‌ ಅಂತ್ಯಕ್ರಿಯೆ ಮಾಡಲು ಅವಕಾಶ ನೀಡದೆ ಅವಮಾನಿದ್ದರು. ಕಾಂಗ್ರೆಸ್ ಸರ್ಕಾರ ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನೂ ನೀಡಿರಲಿಲ್ಲ. ಅಟಲ್‌ಬಿಹಾರಿ ವಾಜಪೇಯಿ ಅವರ ಮನವಿಗೆ ಸ್ಪಂದಿಸಿ ವಿ.ಪಿ. ಸಿಂಗ್‌ ಸರ್ಕಾರ ಅಂಬೇಡ್ಕರ್‌ಗೆ ಭಾರತ ರತ್ನ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಅಂಬೇಡ್ಕರ್‌ ಸ್ಮಾರಕವನ್ನು ನಿರ್ಮಿಸಿದರು. ಅಂಬೇಡ್ಕರ್‌ಗೆ ಅವಮಾನ ಮಾಡಿದ ಕಾಂಗ್ರೆಸ್‌ ಅನ್ನು ಪರಿಶಿಷ್ಟರು ಧಿಕ್ಕರಿಸಿ ಬಿಜೆಪಿ ಜೊತೆಗೆ ನಿಲ್ಲಬೇಕು’ ಎಂದು ಮನವಿ ಮಾಡಿದರು.

ದೇಶದಲ್ಲಿ 50ಕ್ಕಿಂತಲೂ ಹೆಚ್ಚು ವರ್ಷ ಕಾಂಗ್ರೆಸ್‌ ಆಡಳಿತ ನಡೆಸಿದರೂ ಶೇ 65ರಷ್ಟು ಬಡವರಿದ್ದಾರೆ. ಇವರಲ್ಲಿ ಹೆಚ್ಚಿನವರು ಪರಿಶಿಷ್ಟರೇ ಇದ್ದಾರೆ. ಕಾಂಗ್ರೆಸ್‌ ಬಡವರನ್ನು ಉದ್ಧಾರ ಮಾಡಿಲ್ಲ. ಬದಲಾಗಿ ಮೋಸ ಮಾಡಿದೆ’ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್, ‘ಮಹಾತ್ಮ ಗಾಂಧಿ ಹಾಗೂ ಅಂಬೇಡ್ಕರ್‌ ಹೆಸರು ಬಳಸಿಕೊಂಡು ಕಾಂಗ್ರೆಸ್‌ನವರು ಬದುಕು ಕಟ್ಟಿಕೊಂಡಿದ್ದಾರೆ. ಜೊತೆಗೆ ಅಂಬೇಡ್ಕರ್‌ಗೆ ಅವಮಾನ ಮಾಡುವ ಮೂಲಕ ಎಸ್.ಸಿ, ಎಸ್.ಟಿ ಜನಾಂಗವನ್ನೂ ಅವಮಾನಗೊಳಿಸಿದ್ದಾರೆ. ಮತಬ್ಯಾಂಕ್‌ಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಎಸ್.ಸಿ, ಎಸ್.ಟಿ ಹಾಗೂ ಅಲ್ಪಸಂಖ್ಯಾತರನ್ನು ಶೈಕ್ಷಣಿಕವಾಗಿ ಮುಂದೆ ಬಾರದಂತೆ ನೋಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿ ಬ್ರಾಹ್ಮಣರ ಪಕ್ಷ; ನಗರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಟೀಕಿಸುತ್ತಿದ್ದರು. ಆದರೆ, ಇಂದು ಬಿಜೆಪಿ ಸರ್ವ ಸಮುದಾಯವನ್ನು ಒಳಗೊಂಡಿದೆ. ಹಳ್ಳಿಗಳಲ್ಲೂ ಬಿಜೆಪಿ ಬಲಗೊಂಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 45 ಸಾವಿರ ಸದಸ್ಯರು ಗೆದ್ದಿರುವುದೇ ಇದಕ್ಕೆ ಸಾಕ್ಷಿ. 3,500 ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಕಾರ್ಯಕರ್ತರೇ ಅಧ್ಯಕ್ಷರಾಗಲಿದ್ದಾರೆ’ ಎಂದು ಹೇಳಿದರು.

ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ‘ದಲಿತರು ಬಿಜೆಪಿ ಪರವಾಗಿದ್ದಾರೆ ಎಂಬುದಕ್ಕೆ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳಲ್ಲಿ ನಾವು ಗೆದ್ದಿರುವುದು ಹಾಗೂ ಈಗ ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಜಯ ಸಾಧಿಸಿರುವುದೇ ಸಾಕ್ಷಿ. ಪರಿಶಿಷ್ಟರ ಸಮುದಾಯದವರಿಗೆ ಮೀಸಲಾತಿಯ ಹೊರತುಪಡಿಸಿಯೂ ಅವಕಾಶಗಳನ್ನು ನೀಡುವ ಬಗ್ಗೆ ಪಕ್ಷದ ನಾಯಕರು ಚಿಂತಿಸಬೇಕು. ಆಗ ಪಕ್ಷಕ್ಕೆ ಇನ್ನಷ್ಟು ಶಕ್ತಿ ಬರಲಿದೆ’ ಎಂದು ಹೇಳಿದರು.

ಶಾಸಕ ಎಸ್‌.ಎ. ರವೀಂದ್ರನಾಥ್‌, ‘ಸಮಾಜ ಕಲ್ಯಾಣ ಇಲಾಖೆಗೆ ಅತಿ ಹೆಚ್ಚು ಅನುದಾನ ನೀಡಲಾಗುತ್ತಿದೆ. ಸೌಲಭ್ಯ ಪಡೆದವರೇ ಮತ್ತೆ ಮತ್ತೆ ಪಡೆಯುತ್ತಿದ್ದಾರೆ. ಸರ್ಕಾರದ ಯೋಜನೆಗಳು ಕಟ್ಟಕಡೆಯ ಬಡವರು, ಶೋಷಿತ ಸಮುದಾಯದವರಿಗೆ ತಲುಪಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಶಾಸಕರಾದ ಪ್ರೊ.ಎನ್‌.ಲಿಂಗಣ್ಣ, ಎಸ್‌.ವಿ. ರಾಮಚಂದ್ರ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ.ಮುನಿಕೃಷ್ಣ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಹನಗವಾಡಿ ಹಾಜರಿದ್ದರು. ಮಾಜಿ ಶಾಸಕ ಬಸವರಾಜ ನಾಯಕ ನಿರೂಪಿಸಿದರು. ಪೌರ ಕಾರ್ಮಿಕರಿಗೆ ಸನ್ಮಾನಿಸಲಾಯಿತು.

***

ಲೋಕಸಭಾ ಚುನಾವಣೆಯಲ್ಲಿ ಎಸ್‌.ಸಿ. ಸಮುದಾಯದ ಶೇ 100ರಷ್ಟು ಮತ ಬಿಜೆಪಿಗೆ ಸಿಗುವಂತೆ ರಣನೀತಿ ಸಿದ್ಧಪಡಿಸಬೇಕು. ಕಾಂಗ್ರೆಸ್‌ ದಲಿತ ವಿರೋಧಿ ಪಕ್ಷ ಎಂಬುದನ್ನು ಮನವರಿಕೆ ಮಾಡಿಕೊಡಬೇಕು.
– ಲಾಲ್‌ ಸಿಂಗ್‌ ಆರ್ಯ, ರಾಷ್ಟ್ರೀಯ ಅಧ್ಯಕ್ಷ, ಬಿಜೆಪಿ ಎಸ್.ಸಿ ಮೋರ್ಚಾ

***

ಕಾಂಗ್ರೆಸ್‌ನವರಿಗೆ ಮತ ಪಡೆಯಲು ಮಾತ್ರ ದಲಿತರು ಬೇಕು. ಅಧಿಕಾರ ಹಂಚಿಕೆ ವಿಚಾರ ಬಂದಾಗ ದಲಿತ ನಾಯಕರನ್ನು ತುಳಿಯುತ್ತಾರೆ. ಅವರು ಮೊಸಳೆ ಕಣ್ಣೀರು ಸುರಿಸುತ್ತಿರುವುದು ಎಲ್ಲರಿಗೂ ಗೊತ್ತಾಗಿದೆ.

– ನಳಿನ್‌ಕುಮಾರ್‌ ಕಟೀಲ್‌, ಬಿಜೆಪಿ ರಾಜ್ಯ ಅಧ್ಯಕ್ಷ

***

ಪರಿಶಿಷ್ಟ ಜನರು ಈಗ ಬಿಜೆಪಿ ಪರವಾಗಿದ್ದಾರೆ. ಕಾಂಗ್ರೆಸ್‌ ಮುಕ್ತ ಭಾರತವನ್ನು ನಿರ್ಮಿಸುವಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಬೇಕು.

– ಜಿ.ಎಂ. ಸಿದ್ದೇಶ್ವರ, ಸಂಸದ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು