ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೇ ಸಿಗಲಿದೆ ದಾವಣಗೆರೆ ಪಾಲಿಕೆ ಚುಕ್ಕಾಣಿ: ಸಂಸದ ಸಿದ್ದೇಶ್ವರ ವಿಶ್ವಾಸ

Last Updated 19 ಫೆಬ್ರುವರಿ 2021, 14:49 IST
ಅಕ್ಷರ ಗಾತ್ರ

ದಾವಣಗೆರೆ: ‘ಫೆಬ್ರುವರಿ 24ರಂದು ನಡೆಯಲಿರುವ ಮಹಾನಗರ ಪಾಲಿಕೆಯ ಮೇಯರ್‌ ಚುನಾವಣೆಯಲ್ಲಿ ಬಿಜೆಪಿಗೆ ಜಯ ಲಭಿಸಲಿದ್ದು, ನಾವೇ ಮತ್ತೆ ಪಾಲಿಕೆ ಚುಕ್ಕಾಣಿ ಹಿಡಿಯುತ್ತೇವೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ಶುಕ್ರವಾರ ರೈಲು ನಿಲ್ದಾಣ ಕಾಮಾಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯ 21 ಸದಸ್ಯರೂ ಮೇಯರ್‌ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಫೆಬ್ರುವರಿ 23ರಂದು ರಾತ್ರಿ ಪಕ್ಷದ ಕೋರ್‌ ಕಮಿಟಿಯಲ್ಲಿ ಚರ್ಚಿಸಿ ಯಾರನ್ನು ಮೇಯರ್‌ ಮಾಡಬೇಕು ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.

‘ಎಲ್ಲಾ 21 ಸದಸ್ಯರೂ ನಮ್ಮ ಜೊತೆಗೇ ಇದ್ದಾರೆ. ಮತದಾನದ ದಿನ ಒಂದು ಮತವೂ ಕೈತಪ್ಪುವುದಿಲ್ಲ. ಯಾರೂ ರೆಸಾರ್ಟ್‌ಗೆ ಹೋಗಿಲ್ಲ. ಎಲ್ಲರೂ ಅವರರವರ ಮನೆಯಲ್ಲೇ ಇದ್ದಾರೆ. 21 ಸದಸ್ಯರು, ವಿಧಾನ ಪರಿಷತ್ತಿನ ಏಳು ಸದಸ್ಯರು, ಸಂಸದನಾದ ನಾನು, ಶಾಸಕ ಎಸ್‌.ಎ. ರವೀಂದ್ರನಾಥ್‌ ಸೇರಿ ಒಟ್ಟು 30 ಮತಬಲ ನಮ್ಮ ಬಳಿ ಇದೆ. ಹೀಗಾಗಿ ಬಿಜೆಪಿ ಗೆಲುವು ನಿಶ್ಚಿತ’ ಎಂದು ಹೇಳಿದರು.

‘ಕಾನೂನು ಬದ್ಧವಾಗಿಯೇ ವಿಧಾನ ಪರಿಷತ್‌ ಸದಸ್ಯರ ಹೆಸರನ್ನು ಮಹಾನಗರ ಪಾಲಿಕೆ ಪಟ್ಟಿಯಲ್ಲಿ ಸೇರಿಸಲಾಗಿದೆ. ಕಾಂಗ್ರೆಸ್‌ನವರು ನ್ಯಾಯಾಲಯಕ್ಕೆ ಹೋಗಿದ್ದರೂ ಯಾವುದೇ ತೊಂದರೆ ಆಗುವುದಿಲ್ಲ. ಕಾಂಗ್ರೆಸ್‌ನವರು ಕಳೆದ ಬಾರಿಯಂತೆ ಈ ಬಾರಿಯೂ ಆರೋಪ ಮಾಡುತ್ತಲೇ ಇದ್ದಾರೆ. ಚುನಾವಣೆ ದಿನ ಬಂದು ಕಳೆದ ಬಾರಿಯಂತೆ ಸಭೆ ಬಹಿಷ್ಕರಿಸಿ ಹೋಗುತ್ತಾರೆ. ನಾವು ಆಡಳಿತ ನಡೆಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಗೆ ಕೊಡುಗೆ ನೀಡಲು ಸಿಎಂಗೆ ಮನವಿ

‘ಮಾರ್ಚ್‌ 8ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಜಿಲ್ಲೆಯ ಐದು ಶಾಸಕರ ಜೊತೆಗೆ ಗುರುವಾರ ತೆರಳಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೇವೆ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

‘ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕು. ಕತ್ತಲಗೆರೆ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕಾಲೇಜು ಆರಂಭಿಸಬೇಕು. ದಾವಣಗೆರೆ ಜಿಲ್ಲೆಗೇ ಪ್ರತ್ಯೇಕವಾದ ಹಾಲು ಒಕ್ಕೂಟ ನಿರ್ಮಿಸಬೇಕು ಎಂದು ಮುಖ್ಯಮಂತ್ರಿಯನ್ನು ಕೇಳಿಕೊಂಡಿದ್ದೇವೆ. ಆರ್ಥಿಕ ಸಂಕಷ್ಟ ಇರುವುದರಿಂದ ನಮ್ಮ ಬೇಡಿಕೆ ಎಷ್ಟರ ಮಟ್ಟಿಗೆ ಈಡೇರಲಿದೆ ಎಂಬುದನ್ನು ಕಾದುನೋಡಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT