ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಐಟಿಐ ಕಾಲೇಜಿನ ವಿದ್ಯಾರ್ಥಿಗಳ ರಕ್ತದಾನ ಸೇವೆ

2011ರಿಂದಲೂ ಜೀವ ಉಳಿಸುವ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು
Last Updated 14 ಜೂನ್ 2021, 3:14 IST
ಅಕ್ಷರ ಗಾತ್ರ

ದಾವಣಗೆರೆ:ಕೊರೊನಾ ವಿಷಯವೇ ಮಹತ್ವ ಪಡೆದುಕೊಂಡಿರುವ ಇಂದಿನ ದಿನಗಳಲ್ಲಿ ರಕ್ತದಾನ ಮಾಡುವವರು ಕಡಿಮೆಯಾಗಿದ್ದಾರೆ. ಆದರೆದಾವಣಗೆರೆ ಸರ್ಕಾರಿ ಐಟಿಐ ಕಾಲೇಜಿನ ವಿದ್ಯಾರ್ಥಿಗಳು ಕಾಲೇಜುಗಳು ನಡೆಯದಿದ್ದರೂ ರಕ್ತದಾನ ಮಾಡುವುದನ್ನು ಮರೆತಿಲ್ಲ.

ಯಾವ ವೇಳೆಗೆ ಕರೆ ಮಾಡಿದರೂ ಜನರ ಸಂಕಷ್ಟಕ್ಕೆ ಸ್ಪಂದಿಸುವ ವಿದ್ಯಾರ್ಥಿಗಳ ಕ್ರಿಯಾಶೀಲ ಗುಂಪು ಕಾಲೇಜಿನಲ್ಲಿದೆ. ‘ಓಂ ಸಾಯಿ ಸೋಷಿಯಲ್ ಸರ್ವೀಸ್’ ಹೆಸರಿನ ವಾಟ್ಸ್ಆ್ಯಪ್ ಗುಂಪು ರಚಿಸಿಕೊಂಡು ರೋಗಿಗಳ ನೆರವಿಗೆ ಮುಂದಾಗಿದೆ.

ಈ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಅಧ್ಯಾಪಕರೆಲ್ಲರೂ ರಕ್ತದಾನ ಮಾಡುತ್ತಿದ್ದು, 2011ರಿಂದಲೂ ಈ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಈವರೆಗೆ 1500ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಲಾಗಿದೆ. ಕೋವಿಡ್ ಆರಂಭವಾದಾಗಿನಿಂದ 170 ಕ್ಕೂ ಹೆಚ್ಚು ಬಾರಿ ಹಲವು ವಿದ್ಯಾರ್ಥಿಗಳು ರಕ್ತ ನೀಡುವ ಮೂಲಕ ಅನೇಕ ಜನರ ಪ್ರಾಣ ಉಳಿಸಿದ್ದಾರೆ. 198 ಮಂದಿ ಸದಸ್ಯರು

ರೋಗಿಗಳ ಸಂಬಂಧಿಕರು ಕರೆ ಮಾಡಿದರೆ ಅವರ ರಕ್ತದ ಗುಂಪು ಹಾಗೂ ಮೊಬೈಲ್ ನಂಬರ್‌ಗಳನ್ನು ಸಮೇತ ‘ಓಂ ಸಾಯಿ ಸೋಷಿಯಲ್ ಸರ್ವೀಸ್‌’ ಗುಂಪಿಗೆ ಮಾಹಿತಿ ನೀಡುತ್ತಾರೆ. ಆ ರಕ್ತದ ಗುಂಪಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸ್ಪಂದಿಸಿ ರಕ್ತದಾನ ಮಾಡುತ್ತಾರೆ. ಇತರರಿಗೂ ಪ್ರೇರಣೆಯಾಗುವಂತೆ ಅವರು ರಕ್ತದಾನ ಮಾಡಿದ ಫೋಟೊವನ್ನು ಹಾಕಿ ಅವರನ್ನು ಶ್ಲಾಘಿಸುವ ಕೆಲಸವಾಗುತ್ತಿದೆ.

‘ಈ ಕಾಲೇಜಿನ ವಿದ್ಯಾರ್ಥಿಗಳು ರಕ್ತದಾನ ಮಾಡಿದಾಗ ಯಾವುದೇ ಹಣ ಪಡೆಯುವುದಿಲ್ಲ. ಅವರು ಹೇಳಿದ ಜಾಗಕ್ಕೆ ಹೋಗಿ ರಕ್ತ ಕೊಟ್ಟು ಬರುತ್ತಾರೆ. ಒಂದು ಜೀವದ ಉಳಿವಿಗೆ ಕಾರಣರಾದೆವು ಎಂಬ ಧನ್ಯತೆ ವಿದ್ಯಾರ್ಥಿಗಳದ್ದು’ ಎಂದು ಹೇಳುತ್ತಾರೆ’ ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಮಂಜುನಾಥ್ ಎಚ್.

ರಕ್ತದಾನಕ್ಕೆ ಪ್ರೇರಣೆ:‘1996–97ರಲ್ಲಿ ನನ್ನ ತಾಯಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಆ ವೇಳೆ ಶಸ್ತ್ರಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಆ ವೇಳೆ ಬೇರೆಯವರು ಬಂದು ರಕ್ತದಾನ ಮಾಡಿದರು. ಇದರಿಂದ ನಾನೂ ರಕ್ತದಾನ ಮಾಡಬೇಕು ಎಂದು ಪ್ರೇರಣೆಯಾಯಿತು’ ಎನ್ನುತ್ತಾರೆ ಮಂಜುನಾಥ್.

‘ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿನ ‘ಲೈಫ್‌ಲೈನ್‌’ ಸಂಸ್ಥೆಯ ಸದಸ್ಯತ್ವ ಪಡೆದಿದ್ದು, ಹಲವು ಬಾರಿ ರಕ್ತದಾನ ಮಾಡಿದ್ದಾರೆ. ವಿದ್ಯಾರ್ಥಿಗಳು ಕಾಲೇಜಿನಿಂದ ಪಾಸಾಗಿ ಬೇರೆ ಊರಿಗೆ ಹೋದರೂ ಇಲ್ಲಿಗೆ ಬಂದು ರಕ್ತದಾನ ಮಾಡಿದ್ದಾರೆ’ ಎಂದು ಮಂಜುನಾಥ್ ಹೇಳುತ್ತಾರೆ.

‘ಪ್ರತಿ ವರ್ಷ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ‘ಲೈಫ್‌ಲೈನ್’ ಸಂಸ್ಥೆಯಿಂದ ಸನ್ಮಾನಿಸಲಾಗುತ್ತದೆ. ಕಾಲೇಜಿನಲ್ಲಿ ಪ್ರಾರ್ಥನೆ ವೇಳೆ ರಕ್ತದಾನಿಗಳನ್ನು ಅಭಿನಂದಿಸಲಾಗುತ್ತದೆ. ರಕ್ತ ಬೇಕಾದವರು– ಮೊಬೈಲ್ ಸಂಖ್ಯೆ 9164855564 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT