ಭಾನುವಾರ, ಜೂಲೈ 5, 2020
25 °C
ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆಯಲ್ಲಿ ಡಿಸಿ ಮಹಾಂತೇಶ ಬೀಳಗಿ

ದಾವಣಗೆರೆ | ಜೀವ ಉಳಿಸುವ ರಕ್ಷಕರೇ ರಕ್ತದಾನಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಯಾರದೋ ಪ್ರಾಣ ಉಳಿಸಲು ಕಾರಣರಾಗಿರುವ ರಕ್ತದಾನಿಗಳು ಜೀವ ಉಳಿಸುವ ನಿಜವಾದ ರಕ್ಷಕರು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರಕ್ತಭಂಡಾರ, ಜಿಲ್ಲಾ ಚಿಗಟೇರಿ ಆಸ್ಪತ್ರೆ ವತಿಯಿಂದ ‘ಸುರಕ್ಷಿತ ರಕ್ತ ಜೀವ ರಕ್ಷಕ’, ‘ರಕ್ತ ನೀಡಿ ಮತ್ತು ಪ್ರಪಂಚವನ್ನು ಆರೋಗ್ಯಕರ ಸ್ಥಳವನ್ನಾಗಿಸಿ’ ಎಂಬ ಘೋಷವಾಕ್ಯದಡಿಯಲ್ಲಿ ಮಂಗಳವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಎಲ್ಲಾ ಊರಲ್ಲಿಯೂ ಕೊರೊನಾ ಸೋಂಕು ಕಂಡು ಬರುತ್ತಿದೆ. ಈ ಸಂದರ್ಭದಲ್ಲಿ ನಮ್ಮನ್ನು ನಾವು ಸಂಪೂರ್ಣವಾಗಿ ರಕ್ಷಣೆ ಮಾಡಿಕೊಂಡು ಕೆಲಸ ಮಾಡಬೇಕು. ಯಾರಿಗಾದರೂ ಶೀತ, ಜ್ವರ, ಕೆಮ್ಮು ಉಸಿರಾಟದ ತೊಂದರೆ ಕಂಡುಬಂದಲ್ಲಿ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಲು ಸಲಹೆ ನೀಡಬೇಕು ಎಂದು ತಿಳಿಸಿದರು.

ರಕ್ತಭಂಡಾರದ ವೈದ್ಯಾಧಿಕಾರಿಗಳಾದ ಡಾ. ಡಿ.ಎಚ್. ಗೀತಾ, ‘ರಕ್ತವನ್ನು ಯಾರೂ ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ರಕ್ತ ದೇಹದ ಜೀವನಾಡಿ. ಇಂದೇ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು. ರಕ್ತಕ್ಕೆ ವರ್ಷವಿಡಿ ನಿರಂತರ ಬೇಡಿಕೆ ಇರುತ್ತದೆ.  ಅಪಘಾತಗಳಾದಾಗ, ತುರ್ತು ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ, ಕ್ಯಾನ್ಸರ್ ರೋಗಿಗಳು, ಗರ್ಭಿಣಿಯರು, ಹಿಮೊಫೀಲಿಯಾ, ಸಿಕಲ್‌ಸೆಲ್, ಅನಿಮೀಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೆ ಅವಲಂಬಿಸಿರುತ್ತಾರೆ’ ಎಂದರು.

18ರಿಂದ 60 ವರ್ಷದ ಒಳಗಿನ ಎಲ್ಲರೂ ರಕ್ತದಾನ ಮಾಡಬಹುದು. ಹಿಮೋಗ್ಲೋಬಿನ್ 12.5 ಗ್ರಾಂ. ಗಿಂತ ಜಾಸ್ತಿ ಇರುವವ, 45 ಕೆ.ಜಿ.ಗಿಂತ ಹೆಚ್ಚು ತೂಕ ಇರುವವ ಪುರುಷರು 3 ತಿಂಗಳಿಗೊಮ್ಮೆ, ಮಹಿಳೆಯರು 6 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ಮಂಜುನಾಥ್ ಎಸ್.ಕುರ್ಕಿ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ರಕ್ತದಾನದ ಮೂಲಕ ಇನ್ನೊಬ್ಬರ ಬದುಕು ಬೆಳಗಿಸಬಹುದು’ ಎಂದು ಹೇಳಿದರು.

ರಕ್ತದಾನಿಗಳನ್ನು ಸನ್ಮಾನಿಸಲಾಯಿತು. ಈಗಾಗಲೇ 77 ಬಾರಿ ರಕ್ತದಾನ ಮಾಡಿರುವ ಚೌಕಿಪೇಟೆಯ ಪುಸ್ತಕ ವ್ಯಾಪಾರಿ ಮಹಡಿಮನೆ ಶಿವಕುಮಾರ್ ಸೇರಿ ಹಲವರು ರಕ್ತದಾನ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರ ಸ್ವಾಮಿ, ಚಿಗಟೇರಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕ ಡಾ.ನಾಗರಾಜ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಅಧೀಕ್ಷಕ ಡಾ.ಜೆ.ಬಿ. ನೀಲಕಂಠ, ಜಿಲ್ಲಾ ಏಡ್ಸ್ ಪ್ರತಬಂಧಕ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಕೆ.ಎಚ್. ನಾಗರಾಜ್, ಡಾ. ಮೀನಾಕ್ಷಿ, ಡಾ. ಮುರುಳೀಧರ್ ಅವರೂ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು