ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಮಳಿಗೆ ನಿರ್ಮಿಸಿ ಆದಾಯ ಸಂಗ್ರಹಿಸಿ

ಪಾಲಿಕೆ ಆದಾಯ ಸಂಗ್ರಹಿಸಲು ಹಲವು ಸಾರ್ವಜನಿಕರಿಂದ ಸಲಹೆ
Last Updated 8 ಜನವರಿ 2020, 15:38 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ನಕಲಿ ಟ್ರೇಡ್ ಲೈಸೆನ್ಸ್ ಹಾವಳಿ ತಡೆಗಟ್ಟಬೇಕು, ಸ್ಮಾರ್ಟ್ಸ್ ಸಿಟಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಬೀಡಾಡಿ ಹಂದಿ, ದನಗಳು ಹಾಗೂ ನಾಯಿಗಳನ್ನು ಸ್ಥಳಾಂತರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು...

ಪ್ರಸಕ್ತ ಸಾಲಿನ ನಗರಪಾಲಿಕೆ ಆಯ–ವ್ಯಯ ತಯಾರಿಸಲು ಆದಾಯ ಕ್ರೋಢೀಕರಣ ಮತ್ತು ಸುಧಾರಣೆ ಬಗ್ಗೆ ಬುಧವಾರ ನಡೆದ ಸಭೆಯಲ್ಲಿ ಕೇಳಿ ಬಂದ ಸಲಹೆಗಳು ಇವು.

ಸಾರ್ವಜನಿಕ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜಿ. ಶ್ರೀಕಾಂತ್ ಮಾತನಾಡಿ, ‘ನಗರದಲ್ಲಿ ಟ್ರೇಡ್‌ ಲೈಸೆನ್ಸ್ ವ್ಯವಸ್ಥಿತವಾಗಿ ಆಗಿಲ್ಲ. ಅಧಿಕಾರಿಗಳಿಗೆ ಗೊತ್ತಿದ್ದರೂ ಅವರ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಿಲ್ಲ. ಇಲ್ಲಿ ದೊಡ್ಡ ಮಾಫಿಯಾ ನಡೆದಿದೆ. ತಪ್ಪು ಮಾಡಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಇಲ್ಲದಿದ್ದರೆ ನಾನೇ ದಾಖಲಿಸುತ್ತೇನೆ’ ಎಂದು ಎಚ್ಚರಿಸಿದರು.

‘ವಸತಿ ಮನೆಗಳನ್ನು ಖಾಸಗಿ ಕಚೇರಿ, ಶಾಲೆ, ಕಾನ್ವೆಂಟ್, ಗೋದಾಮು, ಕ್ಲಿನಿಕ್. ಹೋಟೆಲ್, ಖಾನಾವಳಿ, ಆಸ್ಪತ್ರೆ. ಬ್ಯೂಟಿ ಪಾರ್ಲರ್‌ಗಳಿಗೆ ಬಾಡಿಗೆ ನೀಡಿ ಪಾಲಿಕೆ ಕಂದಾಯದಲ್ಲಿ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ವಿಶೇಷ ತಂಡ ರಚಿಸಿ ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರಗತಿಪರ ಹೋರಾಟಗಾರ ಡಿ.ಅಸ್ಲಂ ಖಾನ್ ಮಾತನಾಡಿ, ‘ನಗರದ ದೊಡ್ಡಪೇಟೆಯಲ್ಲಿರುವ ಐನಳ್ಳಿ ಶರಣಪ್ಪ ಆಯುರ್ವೇದಿಕ್ ಆಸ್ಪತ್ರೆಗೆ ಹೆಚ್ಚು ಸಂಖ್ಯೆಯಲ್ಲಿ ರೋಗಿಗಳು ಬರುತ್ತಿದ್ದು, ಈ ಆಸ್ಪತ್ರೆ ಹಾಗೂ ಬಾಷಾನಗರದಲ್ಲಿರುವ ಪ್ರಸೂತಿ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು. ಉಪವಿಭಾಗಾಧಿಕಾರಿ ಕಚೇರಿ ಮುಂದೆ ಸ್ಟೀಲ್ ಬ್ರಿಡ್ಜ್ ನಿರ್ಮಿಸಬೇಕು. ಆನ್‍ಲೈನ್ ಖಾತಾ ಬದಲಾವಣೆ ವ್ಯವಸ್ಥೆ ಮಾಡಬೇಕು. ನಾಲ್ಕು ದಿಕ್ಕಿನಲ್ಲಿ ಕಸ ವಿಲೇವಾರಿ ವ್ಯವಸ್ಥೆ ಮಾಡಬೇಕು’ ಎಂದು ಸಲಹೆ ನೀಡಿದರು.

ನಾಗೇಂದ್ರ ಬಂಡೀಕರ್ ಮಾತನಾಡಿ, ‘ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸಿಮೆಂಟ್ ರಸ್ತೆಗಳು, ಒಳ ಚರಂಡಿ ಮತ್ತು ನೀರಿನ ಸಂಪರ್ಕಗಳನ್ನು ಹಾಳು ಮಾಡಲಾಗುತ್ತಿದೆ. ಇದರಿಂದಾಗಿ ಅನಗತ್ಯ ವೆಚ್ಚಗಳು ಪಾಲಿಕೆಗೆ ಬರುತ್ತದೆ. ಆದ್ದರಿಂದ ರಸ್ತೆಗಳನ್ನು ನಿರ್ಮಾಣ ಮಾಡುವ ಮುನ್ನ ಒಳಚರಂಡಿ ಮತ್ತು ನೀರಿನ ಕಾಮಗಾರಿಗಳನ್ನು ಪೂರ್ಣಗೊಳಿಸಿ ನಂತರ ರಸ್ತೆಗಳನ್ನು ನಿರ್ಮಾಣ ಮಾಡಬೇಕು’ ಎಂದು ಹೇಳಿದರು.

ಅಖಂಡ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಎಸ್.ಜಿ. ಸೋಮಶೇಖರ್ ಮಾತನಾಡಿ, ‘ರಸ್ತೆಯ ಎಡ ಮತ್ತು ಬಲಭಾಗಗಳಲ್ಲಿ ಬಿರುಕುಬಿಟ್ಟಿದ್ದು, ಅಪಘಾತಗಳು ಸಂಭವಿಸುತ್ತಿವೆ. ಇದನ್ನು ಸರಿಪಡಿಸಬೇಕು. ಕೆಲವರು ಪಾಲಿಕೆ 4ರಿಂದ 8 ಪಾಲಿಕೆ ಮಳಿಗೆಗಳನ್ನು ತೆಗೆದುಕೊಂಡು ಬೇರೆಯವರಿಗೆ ಕೊಟ್ಟಿದ್ದು, ಮಳಿಗೆಗಳಲ್ಲಿರುವವರ ಹೆಸರಿಗೆ ಮಾಡಿ ಕೊಡಿ, ಇಲ್ಲವೇ ಹೊಸದಾಗಿ ಟೆಂಡರ್ ಕರೆಯಿರಿ’ ಎಂದು ಸಲಹೆ ನೀಡಿದರು.

ಜೆಡಿಎಸ್ ಮುಖಂಡ ಅಮಾಲ್ಲಾಖಾನ್ ಮಾತನಾಡಿ, ‘ನಗರದ ಜನರಿಗೆ ಕುಡಿಯುವ ನೀರು, ಸ್ವಚ್ಛತೆ ಮತ್ತು ಬೀದಿ ದೀಪಗಳು ಮುಖ್ಯ. ಆದ್ದರಿಂದ ನಗರದ ಎಲ್ಲಾ ವಾರ್ಡ್‍ಗಳಲ್ಲಿ ಇವುಗಳ ಸೌಲಭ್ಯವನ್ನು ನೀಡಬೇಕು. ಬೀದಿದೀಪಗಳ ನಿರ್ವಹಣೆ ಮತ್ತು ದುರಸ್ತಿಗೆ ಸರಿಯಾದ ಕ್ರಮಗಳನ್ನು ಪಾಲಿಕೆಯು ಕೈಗೂಳ್ಳಬೇಕು. ಪಾಲಿಕೆಯ ವ್ಯಾಪ್ತಿಯಲ್ಲಿ ಹಳೆಯ ಕಟ್ಟಡಗಳನ್ನು ಗುರುತಿಸಿ ಆದಾಯದ ಮೂಲಗಳಾಗಿ ಪರಿರ್ವತಿಸಬೇಕು’ಎಂದು ಆಗ್ರಹಿಸಿದರು.

ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ‘ಇಂದಿನ ಸಭೆಯಲ್ಲಿ ಉಪಯುಕ್ತ ಸಲಹೆಗಳನ್ನು ನೀಡಿದ್ದು, ವಾಣಿಜ್ಯ ಮಳಿಗೆಗಳನ್ನು ಕಟ್ಟುವುದು, ಪಾರ್ಕಿಂಗ್ ವ್ಯವಸ್ಥೆ ಮಾಡುವುದು, ತೆರಿಗೆ ಸಂಗ್ರಹಿಸುವುದು ಸೇರಿ ಆದಾಯ ಕ್ರೋಡೀಕರಣ ಕುರಿತು ಸಲಹೆಗಳನ್ನು ನೀಡಿದ್ದು, ಬಜೆಟ್ ಸಿದ್ದಪಡಿಸುವಾಗ ಆದಾಯ ಸುಧಾರಣೆ ಸಲಹೆಗಳನ್ನು ಪರಿಗಣಿಸಲಾಗುವುದು’ ಎಂದರು ತಿಳಿಸಿದರು.

ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ ನಾಯಕ, ಆಡಳಿತ ವಿಭಾಗದ ಉಪ ಆಯುಕ್ತ ಗದಿಗೇಶ್ ಕೆ., ಕಂದಾಯ ವಿಭಾಗದ ಉಪ ಆಯುಕ್ತ ನಾಗರಾಜ್ ಕೆ, ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ ಕುಪ್ಪಾಳಿ, ಲೆಕ್ಕ ಅಧೀಕ್ಷಕ ನಾಮದೇವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT