ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳಲ್ಲೂ ವಿದ್ಯುತ್‌ ಚಿತಾಗಾರ ನಿರ್ಮಿಸಿ

ತಾ.ಪಂ. ‍ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಜುಳಾ ಅಣಬೇರು ಶಿವಮೂರ್ತಿ
Last Updated 19 ನವೆಂಬರ್ 2020, 15:43 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಸ್ಮಶಾನಗಳಿಲ್ಲ. ಗ್ರಾಮಸ್ಥರು ರಸ್ತೆ ಬದಿಯಲ್ಲಿಯೇ ಶವ ಸುಡುವ ಸ್ಥಿತಿ ಇದೆ. ಶವ ಹೂಳಲು ಜಾಗದ ವ್ಯವಸ್ಥೆ ಬೇಕು ಎಂಬ ವಿಷಯ ತಾಲ್ಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು.

ತಾಲ್ಲೂಕುವ್ಯಾಪ್ತಿಯಲ್ಲಿ 172 ಹಳ್ಳಿಗಳಿವೆ. 12 ಹಳ್ಳಿಗಳಿಗೆ ಸ್ಮಶಾನಕ್ಕೆ ಜಾಗ ನೀಡುವುದು ಬಾಕಿ ಇದೆ ಎಂದು ಕಂದಾಯ ಇಲಾಖೆ ಶಿರಸ್ತೇದಾರ್‌ ವಿ.ಪಿ. ಜಗನ್ನಾಥ್‌‌ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದಾಗ, ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಹಳ್ಳಿಗಳಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದೆ ರಸ್ತೆ ಬದಿ ಶವ ಸುಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅದಕ್ಕೆ ದನಿಗೂಡಿಸಿದ ತಾಲ್ಲೂಕು ಪಂಚಾಯಿತಿ ಇಒ ಇ.ಎಂ. ದಾರುಕೇಶ್‌, ‘ಈಚೆಗೆ ಹಳ್ಳಿಯೊಂದರಲ್ಲಿ ಶವ ಸುಡಲು ಜಾಗ ಇಲ್ಲದೆ ಸಂಬಂಧಿಗಳು ಶವ ಇಟ್ಟು ಪ್ರತಿಭಟನೆ ನಡೆಸಿದ ವಿಷಯ ಗಮನಕ್ಕೆ ಬಂದಿದೆ. ಈ ರೀತಿ ಆಗಬಾರದು ಎಲ್ಲರ ಭಾವನೆಗಳನ್ನು ನಾವು ಗೌರವಿಸಬೇಕು. ಸ್ಮಶಾನದ ಇಲ್ಲದ ಹಳ್ಳಿಗಳಿಗೆ ಜಾಗ ನೀಡಲು ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿರಸ್ತೇದಾರ್‌, ‘ಸ್ಮಶಾನ ಇಲ್ಲದೆ ಕಡೆ ಜಾಗ ನೀಡಲು ಖಾಸಗಿ ಜಮೀನು ಮಾಲೀಕರ ಮನವೊಲಿಸಿದರೂ ಅವರು ಒಪುತ್ತಿಲ್ಲ. ಜಮೀನಿಗೆ ಹೆಚ್ಚು ಬೆಲೆ ನೀಡಿದರೂ ಒಪ್ಪುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಆಗ ಇದಕ್ಕೆ ದನಿಗೂಡಿಸಿದ ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಮಂಜುಳಾ ಅಣಬೇರು ಶಿವಮೂರ್ತಿ, ‘ಜಾಗ ಸಿಗುತ್ತಿಲ್ಲ. ಜಾಗ ನೀಡಲು ಮಾಲೀಕರು ಒಪ್ಪುತ್ತಿಲ್ಲ ಎಂದಾದರೆ ನಗರ ಪ್ರದೇಶಗಳಲ್ಲಿ ಇರುವ ವಿದ್ಯುತ್‌ ಚಿತಾಗಾರವನ್ನು ಹಳ್ಳಿಗಳಲ್ಲೂ ನಿರ್ಮಿಸಲು ಕ್ರಮ ಕೈಗೊಳ್ಳಿ’ ಎಂದು ಸಲಹೆ ನೀಡಿದರು.

ವಿದ್ಯುತ್‌ ಚಿತಾಗಾರ ನಿರ್ಮಾಣ ಸಂಬಂಧ ಅನುದಾನ ನೀಡಲು ಸಿದ್ಧ. ಜನರಿಗೆ ಸಮಸ್ಯೆಯಾಗದಂತೆ ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಿ ಎಂದು ಇಒ ಸೂಚಿಸಿದರು.

ತಹಶೀಲ್ದಾರ್‌ ಜೊತೆ ಚರ್ಚಿಸಿ ವ್ಯವಸ್ಥೆ ಮಾಡುವುದಾಗಿ ಶಿರಸ್ತೇದಾರ್‌ ಹೇಳಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬೇಬಿ ಸುನಿತಾ, ‘ಕೊರೊನಾ ಕಾರಣ ಮುಂಜಾಗ್ರತೆ ಕ್ರಮ ಅನುಸರಿಸಿ ವಿದ್ಯಾರ್ಥಿನಿಲಯವನ್ನು ಆರಂಭಿಸಲಾಗಿದೆ. ಎಲ್ಲ ಹಾಸ್ಟೆಲ್‌ಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಮೊದಲಿಗಿಂತ ಶೇ 50ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಕೋವಿಡ್‌ ನೆಗೆಟಿವ್‌ ವರದಿ, ಪೋಷಕರ ಒಪ್ಪಿಗೆ ಪತ್ರ ಹಾಗೂ ಗಂಭೀರ ಕಾಯಿಲೆ ಇಲ್ಲದಿರುವ ಬಗ್ಗೆ ವೈದ್ಯರಿಂದ ಪ್ರಮಾಣಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ಪಶು ಸಂಗೋಪನಾ ಇಲಾಖೆಯ ಜಗದೀಶ್‌, ‘ತಾಲ್ಲೂಕಿನಲ್ಲಿ 12 ಸಾವಿರ ಜಾನುವಾರಿಗೆ ಕಾಲುಬಾಯಿ ರೋಗದ ಲಸಿಕೆ ಹಾಕಲಾಗಿದೆ. ರಾಸುಗಳ ಗರ್ಭಧಾರಣೆ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷೆ ಮೀನಾ ಟಿ. ಶ್ರೀನಿವಾಸ್, ‘ಲಸಿಕೆ ಹಾಕಿಸಲು ಹಳ್ಳಿಗಳಲ್ಲಿ ಪಶುವೈದ್ಯರಿಗೆ ಜನರು ಕಾಯುವ ಪರಿಸ್ಥಿತಿ ಇದೆ’ ಎಂದು ದೂರಿದರು.

ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳಿಗೆ ನೋಟಿಸ್‌ ನೀಡಿ ಎಂದು ಇಒ ಸೂಚಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್‌ ಎಲ್‌.ಡಿ., ‘ತಾಲ್ಲೂಕಿನಲ್ಲಿ ಕೊರೊನಾ ಪ್ರಕರಣಗಳು ಇಳಿಕೆಯಾಗಿವೆ. ಈಗ ಗ್ರಾಮಗಳಲ್ಲೂ ಮನೆಯಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಉಮೇಶ್‌, ತೋಟಗಾರಿಕೆ ಇಲಾಖೆಯ ಶಶಿಕಲಾ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಅಸಮರ್ಪಕ ಅನಿಲ ಸಂಪರ್ಕ ಯೋಜನೆ: ಅಸಮಾಧಾನ

ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಅಡುಗೆ ಅನಿಲ ಸಂಪರ್ಕ ಯೋಜನೆಯಲ್ಲಿ ನಗರ ಪ್ರದೇಶ ಸೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಹಲವೆಡೆ ಎಲ್‌ಪಿಜಿ ಅನಿಲ ಸಂಪರ್ಕ ಗುರಿ ಮುಟ್ಟಿಲ್ಲ ಎಂಬ ವಿಷಯ ಚರ್ಚೆಯಾಯಿತು.

ಪ್ರಾದೇಶಿಕ ಅರಣ್ಯಾಧಿಕಾರಿ ಚಂದ್ರಶೇಖರ ಎಚ್‌.ಎಸ್‌., ‘ದಾವಣಗೆರೆ ಉತ್ತರ, ದಕ್ಷಿಣ, ಮಾಯಕೊಂಡದಲ್ಲಿ ಹಲವು ಅನಿಲ ಸಂಪರ್ಕ ನೀಡುವುದು ಬಾಕಿ ಇದೆ’ ಎಂದರು.

ಸರ್ಕಾರ ಹಲವು ಯೋಜನೆ ಜಾರಿ ಮಾಡಿದ್ದರೂ ಇನ್ನೂ ಸಮರ್ಪಕವಾಗಿ ಸೌಲಭ್ಯ ವಿತರಣೆಯಾಗದಿರುವುದು ವಿಷಾದನೀಯ ಎಂದ ಇಒ ದಾರುಕೇಶ್, ಶೀಘ್ರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಕಾಲೇಜುಗಳಲ್ಲಿ ಕೋವಿಡ್‌ ಪರೀಕ್ಷೆ:

ಕಾಲೇಜು ಆರಂಭವಾದ ಕಾರಣ ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ ವರದಿ ಕೇಳಲಾಗಿದೆ. ಈ ಕಾರಣ ಕಾಲೇಜುಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ತೆರಳಿ ಪರೀಕ್ಷೆ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮೀನಾ ಟಿ. ಶ್ರೀನಿವಾಸ್‌ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದತಾಲ್ಲೂಕು ಆರೋಗ್ಯಾಧಿಕಾರಿ‌, ‘ಈಗಾಗಲೇ ಬೇಡಿಕೆ ಸಲ್ಲಿಸಿದ ಕಾರಣ ಹಲವು ಕಾಲೇಜುಗಳಿಗೆ ಹೋಗಿ ಪರೀಕ್ಷೆ ಮಾಡಲಾಗಿದೆ. ಅಲ್ಲದೇ ಗ್ರಾಮೀಣ ಪ್ರದೇಶದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ’ ಎಂದರು.

21ರಿಂದ ಸಂತಾನಶಕ್ತಿ ಹರಣ ಶಿಬಿರ

ಲಿಂಗಾನುಪಾತ ತಡೆಗೆ ಹಾಗೂ ಮಹಿಳೆಯರ ಮರಣ ಪ್ರಮಾಣ ತಗ್ಗಿಸಲು ಆರೋಗ್ಯ ಇಲಾಖೆಯಿಂದ ನ.21ರಿಂದ ಡಿ. 4ರ ವರೆಗೆ ತಾಲ್ಲೂಕು ಮಟ್ಟದ ನೋ ಸ್ಕಾಲ್‌ಪೆಲ್‌ ವ್ಯಾಸೆಕ್ಟಮಿ ಶಿಬಿರ ಆಯೋಜಿಸಲಾಗಿದೆ ಎಂದು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ತಿಳಿಸಿದರು.

ಶಸ್ತಚಿಕಿತ್ಸೆ ಮಾಡಿಸಿಕೊಂಡವರಿಗೆ ₹ 1,100 ಪ್ರೋತ್ಸಾಹಧನ ನೀಡಲಾಗುವುದು ಮಾಹಿತಿಗೆ 9481585392, 8277512016 ಸಂಪರ್ಕಿಸಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT