ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಅಗತ್ಯ: ಭಗವಂತ ಖೂಬಾ

ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ; ಆನ್‌ಲೈನ್‌ ಮಾರುಕಟ್ಟೆ ಸೃಷ್ಟಿಸಿಕೊಳ್ಳಿ: ಕೇಂದ್ರ ಸಚಿವ ಭಗವಂತ ಖೂಬಾ
Published 24 ಡಿಸೆಂಬರ್ 2023, 7:32 IST
Last Updated 24 ಡಿಸೆಂಬರ್ 2023, 7:32 IST
ಅಕ್ಷರ ಗಾತ್ರ

ದಾವಣಗೆರೆ: ‘ಬೇರೆ ಬೇರೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಕೃಷಿ ಕ್ಷೇತ್ರದಲ್ಲಿಯೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವುದು ಇಂದಿನ ಅಗತ್ಯವಾಗಿದೆ’ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಅಭಿಪ್ರಾಯಪಟ್ಟರು.

ನಗರದ ಎಂ.ಬಿ.ಎ. ಮೈದಾನದಲ್ಲಿ ನಡೆಯುತ್ತಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದಲ್ಲಿ ಶನಿವಾರ ನಡೆದ ‘ಕೃಷಿ ಮತ್ತು ಕೈಗಾರಿಕಾ ಗೋಷ್ಠಿ’ಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಹಿರಿಯರು ಕೃಷಿ ಪ್ರಥಮ, ಉದ್ಯಮ ದ್ವಿತೀಯ ಎಂದಿದ್ದರು, ಅದು ಈಗಲೂ ಪ್ರಸ್ತುತವಾಗಿದೆ. ಕೃಷಿ ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಈಚೆಗೆ ಕೃಷಿ ಕ್ಷೇತ್ರ ಲಾಭದಾಯಕವಲ್ಲ ಎಂಬ ಮನೋಭಾವ ಬೆಳೆಯುತ್ತಿರುವುದು ಆತಂಕಕಾರಿಯಾಗಿದೆ’ ಎಂದರು.

‘ದೇಶದ ಜನಸಂಖ್ಯೆ 30–40 ಕೋಟಿ ಇದ್ದಾಗ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಇದೀಗ ಜನಸಂಖ್ಯೆ 140 ಕೋಟಿಗೆ ಏರಿಕೆಯಾಗಿದ್ದರೂ, ಆಹಾರ ಪದಾರ್ಥಗಳನ್ನು ರಫ್ತು ಮಾಡುತ್ತಿದ್ದೇವೆ. 50 ವರ್ಷಗಳಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಹೊಂದಿದೆ’ ಎಂದು ತಿಳಿಸಿದರು.

‘ಹಾಲು ಉತ್ಪಾದನೆಯಲ್ಲಿ ದೇಶವು ಮೊದಲ ಸ್ಥಾನದಲ್ಲಿದೆ. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ರೈತರು ವಿಜ್ಞಾನಿಗಳಾಗುವ ಜೊತೆಗೆ ವ್ಯಾಪಾರಿಗಳೂ ಆಗಬೇಕು. ತಾವು ಬೆಳೆದ ಆಹಾರ ಪದಾರ್ಥಗಳನ್ನು ಡಿಜಿಟಲ್‌ ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್‌ ಮೂಲಕ ಹೇಗೆ ಮಾರಾಟ ಮಾಡಬೇಕು ಎಂಬುದನ್ನು ಅರಿಯಬೇಕು’ ಎಂದರು.

‘ಕೇಂದ್ರ ಸರ್ಕಾರವು ರೈತರಿಗೆ ಸರಳ ಬಡ್ಡಿದರದಲ್ಲಿ ಸಾಲವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿದೆ. ದೇಶವು ಇದೀಗ 5ನೇ ಬೃಹತ್‌ ಆರ್ಥಿಕತೆಯ ರಾಷ್ಟ್ರವಾಗಿದ್ದು, ಇನ್ನು 25 ವರ್ಷಗಳಲ್ಲಿ ವಿಶ್ವದಲ್ಲೇ ಅತ್ಯಂತ ಸದೃಢ ದೇಶವಾಗಿ ಹೊರಹೊಮ್ಮಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಡವರಿಗೆ ಉಚಿತವಾಗಿ ಅಕ್ಕಿ ಕೊಡುವ ಯೋಜನೆಯನ್ನು ಯಾವ ಸರ್ಕಾರ ಬಂದರೂ ನಿಲ್ಲಿಸಲಾಗುವುದಿಲ್ಲ. ಅನ್ನದಾತರಿಗೆ ನೀರು, ಗುಣಮಟ್ಟದ ವಿದ್ಯುತ್ ನೀಡಿದರೆ ಲಾಭದಾಯಕ ಕೃಷಿ ಕೈಗೊಳ್ಳಲು ಸಾಧ್ಯವಾಗುತ್ತದೆ. ಈ ಅಧಿವೇಶನದಲ್ಲಿ ಆ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ತಿಳಿಸಿದರು.

‘ಕೇಂದ್ರ ಸರ್ಕಾರವು ಕೋಲ್ಡ್‌ ಸ್ಟೋರೇಜ್‌ಗಳನ್ನು ಹೆಚ್ಚಾಗಿ ಆರಂಭಿಸಬೇಕು. ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆಗಳಿಗೆ ಪ್ರತೀ ಬಾರಿಯೂ ರೋಗಗಳು ತಗುಲಿದ್ದು, ಕೃಷಿ ತಜ್ಞರು, ಸಂಶೋಧಕರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

‘ವಿದೇಶದ ವಿಜ್ಞಾನಿಗಳು ರಚಿಸಿರುವ ಇಲ್ಲಿನ ಪಠ್ಯವನ್ನು ಬದಲಾಯಿಸುವ ಅಗತ್ಯವಾಗಿದೆ. ದೇಶದ ಮಣ್ಣಿನ ಗುಣಕ್ಕೆ ಅನುಗುಣವಾಗಿ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ಪುನರ್‌ ರಚಿಸಬೇಕು. ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ಹೆಚ್ಚಿನ ಲಾಭ ಸಾಧ್ಯ’ ಎಂದು ನೈಸರ್ಗಿಕ ಕೃಷಿ ತಜ್ಞ ಚಂದ್ರಶೇಖರ ನಾರಣಾಪುರ ತಿಳಿಸಿದರು.

‘ದೇಶದ ಸಣ್ಣ ಹಾಗೂ ಅತೀ ಸಣ್ಣ ರೈತರನ್ನು ಸಾಂಸ್ಥಿಕ ರಚನೆಯಡಿ ಒಗ್ಗೂಡಿಸಬೇಕು. ಸರ್ಕಾರದ ವಿವಿಧ ಯೋಜನೆಗಳನ್ನು ರೈತರು ವೈಯಕ್ತಿಕವಾಗಿ ಪಡೆಯದೇ ಸಂಘಗಳ ಮೂಲಕ ಪಡೆದರೆ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ’ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಎಸ್‌.ಆಲೂರು ಅಭಿಪ್ರಾಯಪಟ್ಟರು.

ಉದ್ಯಮಿ ಬಿ.ಸಿ.ಉಮಾಪತಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್‌.ನವೀನ್, ಎಸ್‌. ರುದ್ರೇಗೌಡ, ವಿಶ್ರಾಂತ ಕುಲಪತಿ ಎಸ್‌.ಬಿ.ದಂಡಿನ್‌, ಕೆಳದಿ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆರ್‌.ಸಿ.ಜಗದೀಶ್‌, ಪ್ರಗತಿಪರ ರೈತ ಏಕಾಂತಯ್ಯ, ಉದ್ಯಮಿಗಳಾದ ರಮೇಶ್‌ ಆಲಗೌಡ ಪಾಟೀಲ್, ವಿಶ್ವನಾಥ ಬಿ.ಪಾಟೀಲ್, ಮಹಾಸಭಾದ ಕಾರ್ಯದರ್ಶಿ ಚಿದಾನಂದ ಮಠದ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ಐಗೂರು ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

‘ಶೈಕ್ಷಣಿಕ ಸಂಸ್ಥೆಗಳ ಪ್ರಗತಿ ಶ್ಲಾಘನೀಯ’

‘ವೀರಶೈವ ಲಿಂಗಾಯತ ಸಮುದಾಯದ ಶೈಕ್ಷಣಿಕ ಸಂಸ್ಥೆಗಳ ಪ್ರಗತಿ ಶ್ಲಾಘನೀಯವಾದದ್ದು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಬಿ.ಡಿ.ಕುಂಬಾರ್ ಶ್ಲಾಘಿಸಿದರು. ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದ ಅಂಗವಾಗಿ ಎಸ್‌.ನಿಜಲಿಂಗಪ್ಪ ವೇದಿಕೆಯಲ್ಲಿ ನಡೆದ ‘ಶೈಕ್ಷಣಿಕ ಅಧಿವೇಶನ’ದಲ್ಲಿ ಅವರು ಉಪನ್ಯಾಸ ನೀಡಿದರು. ‘ಬೆಳಗಾವಿಯ ಕೆ.ಎಲ್‌.ಇ. ವಿಶ್ವವಿದ್ಯಾಲಯ ದಾವಣಗೆರೆಯ ಬಾಪೂಜಿ ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ದಕ ಕಲಬುರಗಿಯಲ್ಲಿ ಶರಣಬಸವೇಶ್ವರ ತುಮಕೂರಿನ ಸಿದ್ಧಗಂಗಾ ಸುತ್ತೂರು ದೇಶಿಕೇಂದ್ರ ತರಳಬಾಳು ಶಿಕ್ಷಣ ಸಂಸ್ಥೆಗಳು ಜ್ಞಾನ ದಾಸೋಹದ ಮೂಲಕ ಹೆಸರುವಾಸಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದರು. ‘ವಿದ್ಯಾ ಸಂಪತ್ತನ್ನು ದೋಚಲು ಯಾರಿದಂಲೂ ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು’ ಎಂದು ಹೇಳಿದರು. ‘ವಿದ್ಯಾರ್ಥಿಗಳನ್ನು ಶಾಲಾ ಕಾಲೇಜಿಗೆ ಸೇರಿಸಿದರೆ ಪಾಲಕರ ಕರ್ತವ್ಯ ಅಷ್ಟಕ್ಕೇ ಮುಗಿಯುವುದಿಲ್ಲ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸಮುದಾಯದ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಗೌರವಿಸಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ.ಗುಡಸಿ ತಿಳಿಸಿದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ವಿ.ಎಸ್‌.ಹಲಸೆ ಶಾಸಕರಾದ ಶರಣಗೌಡ ಕಂದಕೂರ ಜಿ.ಎಸ್.ಪಾಟೀಲ್ ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಪರಣ್ಣ ಈಶ್ವರಪ್ಪ ಮುನವಳ್ಳಿ ಜಿಲ್ಲಾ ಘಟಕದ ಸದಸ್ಯ ಕೆ.ಜಿ.ಶಿವಕುಮಾರ್ ನಿವೃತ್ತ ಎಂಜಿನಿಯರ್ ಬಾದಾಮಿ ಮಲ್ಲಿಕಾರ್ಜುನಪ್ಪ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT