ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾಸ್ಟ್ಯಾಗ್‌ ವೇಗಕ್ಕೆ ನಗದು ಅಡ್ಡಗಾಲು

ಹೆಬ್ಬಾಳು ಟೋಲ್‌ ಪ್ಲಾಜಾದಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ವಾಹನ
Last Updated 17 ಜನವರಿ 2020, 10:43 IST
ಅಕ್ಷರ ಗಾತ್ರ

ದಾವಣಗೆರೆ: ‘ಫಾಸ್ಟ್ಯಾಗ್‌’ ಲೇನ್‌ಗಳಲ್ಲಿ ಮಂದಗತಿಯಲ್ಲಿ ಸಾಗುವ ವಾಹನಗಳು. ನಗದು ಪಾವತಿ ಲೇನ್‌ಗಳಲ್ಲಿ ವಾಹನಗಳ ಸರತಿ ಸಾಲು. ಆಗಾಗ ವಾಹನ ಮಾಲೀಕರ ಮತ್ತು ಟೋಲ್‌ ಸಿಬ್ಬಂದಿ ನಡುವೆ ವಾಗ್ವಾದ. ಅತ್ಯಾಧುನಿಕ ಸ್ಕ್ಯಾನರ್‌–ಕ್ಯಾಮೆರಾ ಅಳವಡಿಕೆಯ ಗಡಿಬಿಡಿ...

ಇದು ತಾಲ್ಲೂಕಿನ ಹೆಬ್ಬಾಳು ಟೋಲ್‌ ಪ್ಲಾಜಾದಲ್ಲಿ ಗುರುವಾರ ಕಂಡುಬಂದ ದೃಶ್ಯಗಳು.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ‘ಫಾಸ್ಟ್ಯಾಗ್‌’ ಅಳವಡಿಸಿಕೊಳ್ಳಲು ನೀಡಿದ್ದ ಗಡವು ಮಂಗಳವಾರಕ್ಕೆ (ಜ. 14) ಮುಗಿದಿದೆ. ಬುಧವಾರದಿಂದ ಎರಡು ಮಾರ್ಗಗಳ ಒಟ್ಟು 12 ಲೇನ್‌ಗಳ ಪೈಕಿ ಒಂದು ಮಾರ್ಗದಲ್ಲಿ ತಲಾ ನಾಲ್ಕು ಲೇನ್‌ಗಳಲ್ಲಿ ‘ಫಾಸ್ಟ್ಯಾಗ್‌’ ಕಡ್ಡಾಯಗೊಳಿಸಲಾಗಿದೆ. ಒಂದು ಲೇನ್‌ನಲ್ಲಿ ಮಾತ್ರ ನಗದು ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಒಂದು ಲೇನ್‌ ಅನ್ನು ವಿಐಪಿ/ಆಂಬುಲೆನ್ಸ್‌ಗೆ ಮೀಸಲಿಡಲಾಗಿದೆ.

ಸ್ಕ್ಯಾನಿಂಗ್‌ ವಿಳಂಬ ಹಾಗೂ ನಗದು ವಾಹನದವರೂ ಬರುತ್ತಿರುವುದರಿಂದ ಫಾಸ್ಟ್ಯಾಗ್‌ ಲೇನ್‌ಗಳಲ್ಲೂ ಮಂದಗತಿಯಲ್ಲಿ ವಾಹನ ಸಾಗುತ್ತಿರುವುದು ಕಂಡುಬಂತು. ಬಸ್‌, ಲಾರಿಯಂತಹ ಕೆಲ ದೊಡ್ಡ ವಾಹನಗಳ ಫಾಸ್ಟ್ಯಾಗ್‌ ತಕ್ಷಣ ಸ್ಕ್ಯಾನ್‌ ಆಗದೇ ಇದ್ದಾಗ ಸಿಬ್ಬಂದಿ ಮಾನವಚಾಲಿತ ಯಂತ್ರದ ಮೂಲಕ ಸ್ಕ್ಯಾನಿಂಗ್‌ ಮಾಡಿ ವಾಹನಗಳನ್ನು ಮುಂದಕ್ಕೆ ಬಿಡುತ್ತಿದ್ದರು. ನಗದು ಪಾವತಿ ಲೇನ್‌ನಲ್ಲಿ ಹಲವು ವಾಹನಗಳು ಸಾಲುಗಟ್ಟಿ ನಿಂತಿದ್ದವು. ದಟ್ಟಣೆ ಕಡಿಮೆ ಮಾಡಲು ಟೋಲ್‌ ಸಿಬ್ಬಂದಿ ಸಾಲಿನಲ್ಲಿ ನಿಂತ ವಾಹನಗಳ ಬಳಿಯೇ ಬಂದು ಶುಲ್ಕ ಪಡೆದು ರಸೀದಿ ನೀಡುತ್ತಿದ್ದರು.

‘ಸದ್ಯ ಫಾಸ್ಟ್ಯಾಗ್‌ ಲೇನ್‌ನಲ್ಲಿ ವಾಹನ ಬಂದು ಸ್ಕ್ಯಾನರ್‌ ಕೆಳಗೆ ನಿಲ್ಲುತ್ತಿದ್ದಂತೆ ಗೇಟ್‌ ತೆರೆದುಕೊಳ್ಳುತ್ತಿದೆ. 10 ಸೆಕೆಂಡ್‌ಗಳಲ್ಲಿ ಒಂದು ವಾಹನ ದಾಟಿ ಹೋಗಬಹುದಾಗಿದೆ. ಆದರೆ, ಫಾಸ್ಟ್ಯಾಗ್‌ ಲೇನ್‌ನಲ್ಲಿ ನಗದು ಪಾವತಿಸುವ ವಾಹನದವರೂ ಬರುತ್ತಿದ್ದಾರೆ. ದುಪಟ್ಟು ಹಣ ನೀಡಲು ತಕರಾರು ಮಾಡುತ್ತಾರೆ. ಇದರಿಂದಾಗಿ ಫಾಸ್ಟ್ಯಾಗ್‌ ಹೊಂದಿರುವ ವಾಹನಗಳ ಸಂಚಾರವೂ ವಿಳಂಬವಾಗುತ್ತಿದೆ’ ಎಂದು ಟೋಲ್‌ ಪ್ಲಾಜಾದ ವ್ಯವಸ್ಥಾಪಕ ಅಜಯ್‌ ಸಿಂಗ್‌, ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದರು.

12 ಲೇನ್‌ಗಳಲ್ಲೂ ಅತ್ಯಾಧುನಿಕ ಸ್ಕ್ಯಾನರ್‌, ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ವಿಐಪಿ ವಾಹನ ಹಾಗೂ ಆಂಬುಲೆನ್ಸ್‌ಗಳಿಗೂ ಸರ್ಕಾರ ಫಾಸ್ಟ್ಯಾಗ್‌ ನೀಡಲಿದೆ. ಅತ್ಯಾಧುನಿಕ ಸ್ಕ್ಯಾನರ್‌ಗಳು ಪೂರ್ಣಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ಮೇಲೆ ವಾಹನಗಳು ಎರಡು ಮೀಟರ್‌ ದೂರದಲ್ಲಿರುವಾಗಲೇ ಫಾಸ್ಟ್ಯಾಗ್‌ನಿಂದ ಹಣ ಕಡಿತಗೊಂಡು ಗೇಟ್‌ ತೆರೆದುಕೊಳ್ಳಲಿದೆ. ಫಾಸ್ಟ್ಯಾಗ್‌ನಲ್ಲಿ ಹಣ ಇಲ್ಲದಿದ್ದರೆ ಡಿಜಿಟಲ್‌ ಫಲಕದಲ್ಲಿ ‘ಬ್ಲ್ಯಾಕ್‌ಲೀಸ್ಟ್‌’ ಎಂದು ತೋರಿಸುತ್ತದೆ. ಬಳಿಕ ಹಣ ಪಾವತಿಸಿ ಅವರು ತೆರಳಬೇಕಾಗುತ್ತದೆ ಎಂದು ತಾಂತ್ರಿಕ ಸಿಬ್ಬಂದಿ ಮಹಾಂತೇಶ ಮಾಹಿತಿ ನೀಡಿದರು.

‘2 ದಿನಗಳಲ್ಲಿ ವೇಗ ಪಡೆಯಲಿದೆ’

₹ 1.50 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸ್ಕ್ಯಾನರ್‌, ಕ್ಯಾಮೆರಾ ಅಳವಡಿಸಲಾಗುತ್ತಿದೆ. ಈಗಾಗಲೇ ಹೋಗುವ ಹಾಗೂ ಬರುವ ತಲಾ ಮೂರು ಲೇನ್‌ಗಳಲ್ಲಿ ಗುರುವಾರ ಮಧ್ಯಾಹ್ನದಿಂದಲೇ ವಾಹನ ಬಿಡಲು ಆರಂಭಿಸಿದ್ದೇವೆ. ವಾಹನವನ್ನು ನಿಲ್ಲಿಸಬೇಕಾಗಿಲ್ಲ. ನಿಧಾನಕ್ಕೆ ಬರುತ್ತಿದ್ದಂತೆ ಸ್ಕ್ಯಾನ್‌ ಆಗಿ ಗೇಟ್‌ ತೆರೆದುಕೊಳ್ಳುತ್ತಿದೆ’ ಎಂದು ಹೆಬ್ಬಾಳು ಟೋಲ್‌ ಪ್ಲಾಜಾದ ಸ್ಥಳೀಯ ವ್ಯವಸ್ಥಾಪಕ ಟಿ. ಉಮಾಕಾಂತ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ನವೆಂಬರ್‌ 1ರಿಂದಲೇ ನಗದು ಲೇನ್‌ಗಳಲ್ಲಿ ಸಾಗುವ ವಾಹನಗಳಿಗೆ ದಿನಾಲೂ ‘ಫಾಸ್ಟ್ಯಾಗ್‌’ ಕಡ್ಡಾಯಗೊಳಿಸುತ್ತಿರುವ ಬಗ್ಗೆ ಕರಪತ್ರಗಳನ್ನು ಹಂಚುತ್ತಿದ್ದೇವೆ. ಹೀಗಿದ್ದರೂ ಕೆಲವು ಜನ ಫಾಸ್ಟ್ಯಾಗ್‌ ಮಾಡಿಸದೇ ‘ಜಾಣ ದಡ್ಡತನ’ ಪ್ರದರ್ಶಿಸುತ್ತಿದ್ದಾರೆ. ಟೋಲ್‌ ಕೇಂದ್ರದಲ್ಲಿ ಬುಧವಾರ ಒಟ್ಟು 9,397 ವಾಹನಗಳು ಸಾಗಿದ್ದು, 5,386 (ಶೇ 57.31) ವಾಹನಗಳು ಫಾಸ್ಟ್ಯಾಗ್‌ ಲೇನ್‌ನಲ್ಲಿ ಸಾಗಿವೆ’ ಎಂದು ಅವರು ತಿಳಿಸಿದರು.

‘ದಿನಾಲೂ ಸರಾಸರಿ 1,200 ವಿಐಪಿ ವಾಹನಗಳು ಸಾಗುತ್ತಿವೆ. ಇದರಲ್ಲಿ ಬೆರಳೆಣಿಕೆಯಷ್ಟೇ ನಿಜವಾದ ವಿಐಪಿಗಳಿರುವ ವಾಹನಗಳಾಗಿರುತ್ತವೆ. ಶಾಸಕರು ತಮ್ಮ ಬೆಂಬಲಿಗರು, ಸಂಬಂಧಿಕರಿಗೂ ವಿಐಪಿ ಪಾಸ್‌ಗಳನ್ನು ಕೊಡುತ್ತಿದ್ದರು. ಈಗ ಫಾಸ್ಟ್ಯಾಗ್‌ ಜಾರಿಗೊಳಿಸಿರುವುದರಿಂದ ಅರ್ಹ ವಾಹನಗಳಿಗಷ್ಟೇ ವಿಐಪಿ ಪಾಸ್‌ ಸಿಗಲಿದೆ’ ಎಂದೂ ಅವರು ಅಭಿಪ್ರಾಯಪಟ್ಟರು.

ಬೀದಿ ದೀಪಕ್ಕೆ ಮನವಿ

ಟೋಲ್‌ ಕೇಂದ್ರ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಸಮರ್ಪಕವಾಗಿ ಇಲ್ಲದಿರುವುದರಿಂದ ಅಪಘಾತಗಳು, ಕಳವು ಪ್ರಕರಣಗಳು ನಡೆಯುತ್ತಿವೆ. ಇನ್ನಷ್ಟು ಬೀದಿ ದೀಪಗಳನ್ನು ಅಳವಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಟೋಲ್‌ ಕೇಂದ್ರದವರು ಸ್ಪಂದಿಸಿಲ್ಲ ಎನ್ನುತ್ತಾರೆ ಹೆಬ್ಬಾಳು ಗ್ರಾ.ಪಂ. ಸದಸ್ಯನರೇಂದ್ರ ಬಾಬು.

ಮೊದಲು ಟೋಲ್‌ ಪ್ಲಾಜಾಗಳಲ್ಲಿ ಕನಿಷ್ಠ 15–20 ನಿಮಿಷ ಕಾಯಬೇಕಾಗುತ್ತಿತ್ತು. ಫಾಸ್ಟ್ಯಾಗ್‌ ಜಾರಿಗೊಳಿಸಿದ್ದರಿಂದ ಬಂದ ತಕ್ಷಣವೇ ಹೋಗಲು ಸಾಧ್ಯವಾಗುತ್ತಿದೆ. ಈ ವ್ಯವಸ್ಥೆ ಸೂಪರ್‌ ಆಗಿದೆ ಎನ್ನುವುದು ಉತ್ತರ ಪ್ರದೇಶದ ಲಾರಿ ಚಾಲಕ ಹಂಸಪಾಲ್ ಅವರ ಮಾತು.

ಮೊದಲು ನಗದು ಶುಲ್ಕ ಪಾವತಿಸುತ್ತಿದ್ದರಿಂದ ಚಿಲ್ಲರೆ ವಾಪಸ್‌ ಪಡೆಯಲು ವಿಳಂಬವಾಗುತ್ತಿತ್ತು. ಫಾಸ್ಟ್ಯಾಗ್‌ನಿಂದಾಗಿ ಕಾಯುವುದು ತಪ್ಪಿದೆ. ಈ ವ್ಯವಸ್ಥೆಯಿಂದ ಬಹಳ ಅನುಕೂಲವಾಗಿದೆ ಎಂದು ಹೇಳುತ್ತಾರೆ. ಚಿತ್ರದುರ್ಗದ ಕಾಸಿಂ.

ಬೆಂಗಳೂರಿನಿಂದ ಬೆಳಿಗ್ಗೆ ಹೊರಟು ಬಂದೆ. ಫಾಸ್ಟ್ಯಾಗ್‌ ಲೇನ್‌ ಮಾಡಿದ್ದರಿಂದ ಬೇಗನೆ ಬರಲು ಸಾಧ್ಯವಾಯಿತು. ಯಾವ ಟೋಲ್‌ ಪ್ಲಾಜಾದಲ್ಲೂ ಸ್ಕ್ಯಾನಿಂಗ್‌ ಸಮಸ್ಯೆಯಾಗಿಲ್ಲ ಎನ್ನುವುದು ಬೆಂಗಳೂರಿನ ಕಾರಿನ ಮಾಲೀಕ ಷರೀಫ್‌ ಅಭಿಪ್ರಾಯ.

ಎಲ್ಲಾ ಲೇನ್‌ಗಳನ್ನೂ ಫಾಸ್ಟ್ಯಾಗ್‌ ಆಗಿ ಮಾರ್ಪಡಿಸಲು ಹೆದ್ದಾರಿ ಪ್ರಾಧಿಕಾರ ಉದ್ದೇಶಿಸಿದೆ. ಪ್ರಾಧಿಕಾರದ ನಿರ್ದೇಶನದಂತೆ ನಗದು ಪಾವತಿ ಲೇನ್‌ನಲ್ಲಿ ರಿಟರ್ನ್‌ ಶುಲ್ಕ ಪಡೆಯುವುದನ್ನು ನಿಲ್ಲಿಸಿದ್ದೇವೆ ಎಂದು ಹೆಬ್ಬಾಳು ಟೋಲ್ ಪ್ಲಾಜಾದ ವ್ಯವಸ್ಥಾಪಕ ಟಿ. ಉಮಾಕಾಂತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT