ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸ್ವೆಹಳ್ಳಿ: ಕಂಬಳಿ ಹುಳು ಕಾಟಕ್ಕೆ ಜನ ಹೈರಾಣು

ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಮಸ್ಯೆ
Last Updated 28 ಆಗಸ್ಟ್ 2022, 2:49 IST
ಅಕ್ಷರ ಗಾತ್ರ

ಸಾಸ್ವೆಹಳ್ಳಿ: ಸತತವಾಗಿ ಸುರಿಯುತ್ತಿರುವ ಮಳೆಗೆ ಹೋಬಳಿ ವ್ಯಾಪ್ತಿಯ ಕ್ಯಾಸಿನಕೆರೆ, ಹುಣಸಘಟ್ಟ, ತ್ಯಾಗದಕಟ್ಟೆ, ಕರಡಿ ಕ್ಯಾಂಪ್, ಚಿಲಾಪುರ ತಾಂಡಾಗಳಲ್ಲಿ ಎರಡು ವಾರಗಳಿಂದ ಕಪ್ಪು ಕಂಬಳಿ ಹುಳುಗಳ ಕಾಟ ಹೆಚ್ಚಿದ್ದು, ಜನರು ಹೈರಾಣಾಗಿದ್ದಾರೆ.

ಕಪ್ಪು, ಕೆಂಪು ಹೆಂಚು, ಸಿಮೆಂಟ್‌ ಶೀಟ್‌, ತಗಡಿನ ಮನೆ, ಆರ್‌ಸಿಸಿ ಮನೆಗಳ ಸೂರುಗಳಲ್ಲಿ ಕಂಬಳಿ ಹುಳುಗಳು ಗುಂಪು ಗುಂಪಾಗಿ ಮೆತ್ತಿಕೊಂಡಿವೆ. ಪರಿಣಾಮವಾಗಿ ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ನಿದ್ದೆ ಮಾಡದಂತಾಗಿದೆ.

‘ಹುಳುಗಳು ಮಕ್ಕಳ ಮೈಮೇಲೆಲ್ಲಾ ಹರಿದಾಡುವುದರಿಂದ ಅರ್ಧ ನಿದ್ದೆಯಿಂದ ಎದ್ದು ಅಳುತ್ತವೆ’ ಎಂದು ಚಿಲಾಪುರ ತಾಂಡಾ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಭೀಮಣಿಬಾಯಿ ತಿಳಿಸಿದರು.

‘ಕಂಬಳಿಹುಳುಗಳ ಜೊತೆಗೆ ಟ್ರೈನ್ ಹುಳುಗಳೂ ಮನೆಯ ಸುತ್ತಮುತ್ತ, ಒಳಗೆಲ್ಲ ಹರಿದಾಡುತ್ತಿವೆ. ಕುಡಿಯುವ ನೀರಿನ ಕೊಳಗ, ಅಡುಗೆ ಪಾತ್ರೆಗಳಲ್ಲೂ ಕಾಣಿಸಿಕೊಂಡಿವೆ. ಮಕ್ಕಳನ್ನು ಕಾಯುವುದೇ ಕೆಲಸವಾಗಿದೆ’ ಎನ್ನುತ್ತಾರೆ ಹುಣಸಘಟ್ಟ ಗ್ರಾಮದ ಗೌರಮ್ಮ.

ಕೆಲವರು ಕಂಬಳಿಹುಳುಗಳನ್ನು ಕಸಬರಿಗೆಯಿಂದ ಗುಡಿಸಿ ತಿಪ್ಪೆ, ಚರಂಡಿಗಳಿಗೆ ಹಾಕಿದರೆ, ಮತ್ತೆ ಕೆಲವರು ರಾಸಾಯನಿಕ ಔಷಧ ಸಿಂಪಡಿಸುತ್ತಿದ್ದಾರೆ. ಇನ್ನೂ ಕೆಲವರು ಮೂಢನಂಬಿಕೆಗೆ ಶರಣಾಗಿ ಗ್ರಾಮದ ಶಕ್ತಿದೇವತೆಗಳ ಮೊರೆಹೋಗಿದ್ದಾರೆ. ಮನೆಯ ಮೇಲೆ ಸಾಸಿವೆಕಾಳು ಎರಚಿದರೆ, ಕಳ್ಳಿ ಕಡಿದು ಹಾಕಿದರೆ ಹುಳು ನಿಯಂತ್ರಣವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಗೌರಿ ಹಬ್ಬದ ಸಂದರ್ಭದಲ್ಲಿ ಕಂಡುಬರುವ ಹುಳುಗಳು ಗೌರಮ್ಮನ ಕರಿಮಣಿ ಇದ್ದಂತೆ. ಇವುಗಳಿಗೆ ತೊಂದರೆ ಕೊಡಬಾರದು. ಹಬ್ಬದ ನಂತರ ಕಡಿಮೆಯಾಗುತ್ತವೆ ಎಂಬ ನಂಬಿಕೆಯೂ ಇದೆ.

****

ಕಂಬಳಿ ಹುಳುಗಳ ನಿಯಂತ್ರಣಕ್ಕೆ ಸಾಂಪ್ರದಾಯಿಕ ಪದ್ಧತಿ ಅನುಸರಿಸುವುದು ಉತ್ತಮ. ಪ್ರಾರಂಭಿಕ ಹಂತದಲ್ಲಿಯೇ ನಿಯಂತ್ರಿಸಬೇಕು. ಮನೆಗಳಲ್ಲಿ ರಾಸಾಯನಿಕ ಬಳುಸುವ ಮುನ್ನ ತಜ್ಞರ ಸಲಹೆ ಪಡೆಯಬೇಕು.

-ಕೆಂಚಪ್ಪ ಬಂತಿ, ತಾಲ್ಲೂಕು ವೈದ್ಯಾಧಿಕಾರಿ

****

ಔಷಧ ಸಿಂಪಡಣೆ ಮುನ್ನ ಎಚ್ಚರ ಅಗತ್ಯ

ಕಂಬಳಿ ಹುಳಗಳ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡುವ ಮೊದಲು ಎಚ್ಚರಿಕೆ ವಹಿಸಬೇಕು. ಔಷಧದಿಂದ ಅಪಾಯ ಜಾಸ್ತಿ. ಆದರ ಬದಲು ಹುಳುಗಳ ಮೊಟ್ಟೆ ಇರುವುದನ್ನು ಗಮನಿಸಿ ಅಲ್ಲಿ ಬೇವಿನ ಎಣ್ಣೆ ಸಿಂಪಡಿಸಬೇಕು. ಕೆಲವರು ಗೋಮೂತ್ರ, ಎಕ್ಕೆ ಎಲೆ, ಸುಣ್ಣ ಇತರ ಸಾಮಾಗ್ರಿಗಳನ್ನು ಬಳಸುತ್ತಾರೆ. ಮತ್ತೆ ಕೆಲವರು ಕಳ್ಳಿ ಹಾಕುತ್ತಾರೆ. ಇದರ ಉಪಯೋಗ ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಹುಳುಗಳು ಗುಂಪಾಗಿ ಇರುವುದರಿಂದ ಒಟ್ಟುಗೂಡಿಸಿ ಹೊರಗಡೆ ಬೆಂಕಿ ಹಾಕಬಹುದು ಅಥವಾ ರಾಸಾಯನಿಕ ಬಳಸಿ ನಾಶ ಮಾಡಬಹುದು ಎಂದು ಸಾಸ್ವೆಹಳ್ಳಿ ಕೃಷಿ ಅಧಿಕಾರಿ ಶಶಧರ್ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT