ಭಾನುವಾರ, ಆಗಸ್ಟ್ 14, 2022
20 °C
ನ್ಯಾಮತಿ ತಾಲ್ಲೂಕು: ಪರಿಶಿಷ್ಟರಿಗಿಲ್ಲ ಸ್ಮಶಾನ ಜಾಗೆ

ಹೆಸರಿಗಷ್ಟೇ ಮಸಣ; ದಾರಿ ಬಲು ದೂರ

ಡಿ.ಎಂ.ಹಾಲಾರಾಧ್ಯ Updated:

ಅಕ್ಷರ ಗಾತ್ರ : | |

Prajavani

ನ್ಯಾಮತಿ: ತಾಲ್ಲೂಕಿನ ಬಹುತೇಕ ಗ್ರಾಮಗಳಿಗೆ ಸರ್ಕಾರದ ಗೋಮಾಳ ಒಳಗೊಂಡಂತೆ ಸ್ಮಶಾನಕ್ಕೆ ಜಾಗ ನಿಗದಿಯಾಗಿದೆ. ಆದರೆ ಕೆಲವು ಗ್ರಾಮಗಳಲ್ಲಿ ನಿಗದಿಯಾಗಿರುವ ಜಾಗ ದೂರ ಇರುವುದು ಶವಸಂಸ್ಕಾರಕ್ಕೆ ತೊಡಕಾಗಿದೆ.

ಸ್ಮಶಾನಕ್ಕೆ ನಿಗದಿಪಡಿಸಿದ ಜಾಗದಲ್ಲಿ ಉಳುಮೆ ಮಾಡಿರುವ ನಿದರ್ಶನಗಳು ಇವೆ. ತಾಲ್ಲೂಕಿನಲ್ಲಿ ಎರಡು ಗ್ರಾಮಗಳನ್ನು ಹೊರತುಪಡಿಸಿದರೆ ಉಳಿದವುಗಳಿಗೆ ಸ್ಮಶಾನ ಸೌಲಭ್ಯ ಕಲ್ಪಿಸಿದ್ದರೂ ಗಿಡಗಂಟಿಗಳು ಬೆಳೆದಿದ್ದು, ಅಂತ್ಯಸಂಸ್ಕಾರಕ್ಕೆ ಬರುವವರು ಹಿಡಿಶಾಪ ಹಾಕುವಂತಾಗಿದೆ.

ತಾಲ್ಲೂಕಿನ 17 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲ್ಲಿ75 ಗ್ರಾಮಗಳು ಇದ್ದು, ಅವುಗಳಲ್ಲಿ 16 ಕಂದಾಯರಹಿತ ಗ್ರಾಮಗಳಿವೆ. ಉಳಿದ 59 ಹಳ್ಳಿಗಳಲ್ಲಿ ಬೆಳಗುತ್ತಿ ಹೋಬಳಿಯ ಲಕ್ಕಿನಕೊಪ್ಪ ಮತ್ತು ರಾಮೇಶ್ವರ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಿಲ್ಲ.

‘ಮಾಚಗೊಂಡನಹಳ್ಳಿಯಲ್ಲಿ 2.22 ಎಕರೆ, ಮಾದನಬಾವಿಯಲ್ಲಿ 2.07 ಎಕರೆ, ದೊಡ್ಡೇರಿಯಲ್ಲಿ 2 ಎಕರೆ ಜಾಗ ಮಂಜೂರಾತಿಗಾಗಿ ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಸಾಲಬಾಳು ಗ್ರಾಮದಲ್ಲಿ 1 ಎಕರೆಗೆ ಪ್ರಸ್ತಾವ ಸಲ್ಲಿಸುವಂತೆ ಗ್ರಾಮ ಪಂಚಾಯಿತಿಗೆ  ಸೂಚನೆ ನೀಡಲಾಗಿದೆ. ಕೆಲವು ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ, ಮುಸ್ಲಿಂ ಸ್ಮಶಾನ, ಹಿಂದೂ ರುದ್ರಭೂಮಿಗಳಿಗೆ ಹಾಗೂ ಸಾರ್ವತ್ರಿಕ ಸ್ಮಶಾನಕ್ಕೆ ಪ್ರತ್ಯೇಕವಾಗಿ ಜಾಗ ಗುರುತಿಸಲಾಗಿದೆ’ ಎಂದು ತಹಶೀಲ್ದಾರ್ ಎಂ. ರೇಣುಕಾ
ತಿಳಿಸಿದ್ದಾರೆ.

ನ್ಯಾಮತಿ ಪಟ್ಟಣದಲ್ಲಿ 3.36 ಎಕರೆ ಹಿಂದೂ ರುದ್ರಭೂಮಿ ಮತ್ತು 5.12 ಎಕರೆಯಲ್ಲಿ ಮುಸ್ಲಿಮರ ಖಬರ್‌ಸ್ಥಾನ ಮತ್ತು ಈದ್ಗಾಗೆ ಜಾಗ ಗುರುತಿಸಲಾಗಿದೆ. ಹಿಂದೂ ರುದ್ರಭೂಮಿ ಅಭಿವೃದ್ಧಿ ಕಾಮಗಾರಿ ನಾಮಕಾವಸ್ತೆ ನಡೆದಿದ್ದು, ಅಂತ್ಯಸಂಸ್ಕಾರಕ್ಕೆ ಬರುವವರು ಪಟ್ಟಣ ಪಂಚಾಯಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ರಾಮೇಶ್ವರ ಗ್ರಾಮದಲ್ಲಿ ಸ್ಮಶಾನಕ್ಕೆ ನಿಗದಿಪಡಿಸಿರುವ ಜಾಗ ಗ್ರಾಮದಿಂದ ಅಂದಾಜು 4 ಕಿ.ಮೀ. ದೂರವಿದೆ. ಪರಿಶಿಷ್ಟರಿಗೆ ಮೀಸಲಿರುವ ಸ್ಮಶಾನದ ಜಾಗದ ಬಗ್ಗೆ ಗೊಂದಲ ಇರುವುದರಿಂದ ಅಂತ್ಯಸಂಸ್ಕಾರಗಳು ಕಾಲುವೆಗಳ ದಡದಲ್ಲೇ ನಡೆಯುತ್ತಿವೆ. ಉಳ್ಳವರು ತಮ್ಮ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಿದ್ದಾರೆ. ರಾಮೇಶ್ವರ, ಯರಗನಾಳ್, ದೊಡ್ಡೇರಿ, ಕುರುವ ಮತ್ತಿತರೆ ಗ್ರಾಮಗಳಲ್ಲಿ ಪರಿಶಿಷ್ಟರಿಗೆ ಸ್ಮಶಾನ ಭೂಮಿ ಇಲ್ಲ’ ಎಂದು ಡಿಎಸ್‌ಎಸ್ (ಅಂಬೇಡ್ಕರ್ ವಾದ) ಅಧ್ಯಕ್ಷ ಬೆಳಗುತ್ತಿ ಎ.ಕೆ. ರಂಗನಾಥ ಮತ್ತು ಕೊರಮ ಸಮುದಾಯದ ಮುಖಂಡ ಕುರುವ ನಂಜುಂಡಪ್ಪ
ಹೇಳುತ್ತಾರೆ.

‘ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಒತ್ತುವರಿ ಮಾಡಿ ಉಳುಮೆ ಮಾಡುತ್ತಿರುವ ಜಾಗ ತೆರವುಗೊಳಿಸಿ ಸ್ಮಶಾನ ಜಾಗವನ್ನು ಮಂಜೂರು ಮಾಡಬೇಕು. ಅಲ್ಲೆಲ್ಲ ಮೂಲಸೌಲಭ್ಯ ಒದಗಿಸಿ ಅಭಿವೃದ್ಧಿಪಡಿಸುವ ಕಡೆ ಸರ್ಕಾರ ಗಮನಹರಿಸಬೇಕು’ ಎಂಬುದು ರೈತ ಮುಖಂಡ ರಾಮೇಶ್ವರ ಚಂದ್ರೇಗೌಡರ ಆಗ್ರಹ.

...

ತಾಲ್ಲೂಕಿನ ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಶಕದಿಂದ ಪಾಳು ಬಿದ್ದಿದ್ದ ನಾಲ್ಕು ಎಕರೆ ಸ್ಮಶಾನ ಜಾಗವನ್ನು ವರ್ಗ 2 ಅನುದಾನ ಹಾಗೂ ವೈಯಕ್ತಿಕ ಖರ್ಚಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

-ರಾಮು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಚೀಲೂರು

....

ಜಂಗಮರ ಭೂಮಿಯೇ ಸ್ಮಶಾನಕ್ಕೆ ಆಸರೆ

ತಾಲ್ಲೂಕಿನ ಯರಗನಾಳು ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದೇ, ಜಂಗಮರ ತೋಟದಲ್ಲೇ ಗ್ರಾಮಸ್ಥರು ಮೃತರ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ. ಮಳೆ ಸುರಿದರೆ ಅಂತ್ಯಕ್ರಿಯೆ ಜಾಗಕ್ಕೇ ನೀರು ಹರಿದು ಸಮಸ್ಯೆ ಉಂಟಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.