ಬುಧವಾರ, ಅಕ್ಟೋಬರ್ 21, 2020
22 °C
ಭದ್ರತೆ, ಸ್ವಚ್ಛತಾ ಸಿಬ್ಬಂದಿ ಕಡಿತ l ವರ್ತಕರು ಹಮಾಲಿಗಳಿಗೆ ಆತಂಕ

ಎಪಿಎಂಸಿಗಳಿಗೆ ‘ಸೆಸ್’ ಕಡಿತದ ಬಿಸಿ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎಪಿಎಂಸಿ ತಿದ್ದುಪಡಿ ಕಾಯ್ದೆ ಹಲವು ತಲ್ಲಣಗಳನ್ನು ಸೃಷ್ಟಿಸಿದೆ. ಜಿಲ್ಲೆಯ ಚನ್ನಗಿರಿ ಎಪಿಎಂಸಿ ಬಿಟ್ಟರೆ ಉಳಿದ ಕಡೆಗಳಲ್ಲಿ ಭದ್ರತಾ, ಸ್ವಚ್ಛತಾ ಸಿಬ್ಬಂದಿ ಸೇರಿ ಹಲವರು ಕೆಲಸ ಕಳೆದುಕೊಂಡಿದ್ದಾರೆ. ಇದನ್ನೇ ನಂಬಿಕೊಂಡಿರುವ ವರ್ತಕರು, ಹಮಾಲಿಗಳಿಗೆ ನಡುಕ ಶುರುವಾಗಿದೆ. 

ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೂರು ತಿದ್ದುಪಡಿ ಕಾಯ್ದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಿತ್ತು. ಇದರ ವಿರುದ್ಧ ಹಲವು ಹೋರಾಟಗಳು ನಡೆದವು. ವಿಧಾನಪರಿಷತ್ತಿನಲ್ಲೂ ಮಂಡನೆಯಾಗದೇ ಎಪಿಎಂಸಿ ತಿದ್ದುಪಡಿ ಮಸೂದೆಗೆ ರಾಜ್ಯ ಸರ್ಕಾರ ಮತ್ತೆ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ. ಇದು ಏನೇ ಇರಲಿ, ಕಾಯ್ದೆ ತಿದ್ದುಪಡಿ ಎಪಿಎಂಸಿಗಳ ಸ್ವಾತಂತ್ರ್ಯ ಕಸಿದುಕೊಂಡಿದೆ ಎಂಬುದು ಹಲವರ ಆರೋಪ.

ಕಾಯ್ದೆ ತಿದ್ದುಪಡಿಗೂ ಮೊದಲು ಮಾರುಕಟ್ಟೆಯ ಹೊರಗೆ ಹಾಗೂ ಒಳಗೆ ಮಾರುಕಟ್ಟೆ ಶುಲ್ಕ (ಸೆಸ್) ಸಂಗ್ರಹಿಸುವ ಅಧಿಕಾರ ಎಪಿಎಂಸಿಗಳಿಗಿತ್ತು. ಆದರೆ ಈಗ ಎಪಿಎಂಸಿ ಒಳಗಡೆ ಮಾರಾಟವಾಗುವ ಉತ್ಪನ್ನಗಳಿಗಷ್ಟೇ ಸೆಸ್ ಸಂಗ್ರಹಿಸಬಹುದು. ವರ್ತಕರು ರೈತರ ಜಮೀನಿನಲ್ಲಿಯೇ ಬೆಳೆ ನೋಡಿ ಮುಂಗಡ ಹಣ ಕೊಟ್ಟು ಉತ್ಪನ್ನಗಳನ್ನು ಖರೀದಿಸುವ ಇಂದಿನ ದಿನಗಳಲ್ಲಿ ಮಾರುಕಟ್ಟೆಗೆ ರೈತರು ಬರುವುದು ಅನುಮಾನವೇ. ದಾವಣಗೆರೆ ಎಪಿಎಂಸಿಯಲ್ಲಿ ಶೇ 70ರಷ್ಟು ವಹಿವಾಟು ಮಾರುಕಟ್ಟೆಯ ಹೊರಗೆ ನಡೆಯುತ್ತಿದೆ. ಹೀಗಾಗಿ ಸೆಸ್‌ ಸಂಗ್ರಹದ ಪ್ರಮಾಣ ಇಳಿದಿದ್ದರಿಂದ ನಿರ್ವಹಣೆ ಕಷ್ಟವಾಗಿದೆ.

ಕಾಯ್ದೆ ತಿದ್ದುಪಡಿಗೆ ಮುನ್ನ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮುನ್ನ ಶೇ 1.50 (₹100ಕ್ಕೆ ಒಂದು ರೂಪಾಯಿ ಐವತ್ತು ಪೈಸೆ)ಯಷ್ಟು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ ಮಾರುಕಟ್ಟೆ ಸಮಿತಿಗೆ ಲಭ್ಯವಾಗುತ್ತಿದ್ದ 59 ಪೈಸೆಯಲ್ಲಿ ರೈತರಿಗೆ ಮೂಲಸೌಲಭ್ಯ, ಗೋದಾಮು ವ್ಯವಸ್ಥೆ, ಎಪಿಎಂಸಿ ಪ್ರಾಂಗಣದ‌ಲ್ಲಿ ಕಾರ್ಯನಿರ್ವಹಿಸುವ ಹಮಾಲರಿಗೆ ವಸತಿ ಯೋಜನೆ, ಆರೋಗ್ಯ ವಿಮೆ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು.

ಅಲ್ಲದೇ ರೈತಭವನ, ಒಣಗಿಸುವ ಹರಾಜುಕಟ್ಟೆ, ಗ್ರಾಮೀಣ ಗೋದಾಮುಗಳು, ಸಂತೆ ಮಾರುಕಟ್ಟೆ ನಿರ್ಮಾಣ, ನೀರಿನ ತೊಟ್ಟಿಗಳು, ಗ್ರಾಮೀಣ ಕಣಗಳು, ರೈತರಿಗೆ ಅಡಮಾನ ಸಾಲ ಯೋಜನೆ, ರೈತ ಸಂಜೀವಿನಿ ಹಾಗೂ ಅಪಘಾತ ವಿಮಾ ಯೋಜನೆಗಳನ್ನು ಎಪಿಎಂಸಿ ಜಾರಿ ಮಾಡುತ್ತಿತ್ತು. 

ತಿದ್ದುಪಡಿಯ ನಂತರ: ಕೃಷಿ ಉತ್ಪನ್ನ ಮಾರುಕಟ್ಟೆಗಳು ಶೇ 0.35 (₹100ರಲ್ಲಿ 35 ಪೈಸೆ) ರಷ್ಟು ಸೆಸ್ ಸಂಗ್ರಹಿಸಲು ಮಾತ್ರ ಅವಕಾಶವಿದ್ದು, ಅದರಲ್ಲಿ ಎಪಿಎಂಸಿ ನಿರ್ವಹಣೆಗೆ ಸಿಗುವುದು ಕೇವಲ 14 ಪೈಸೆ ಅಷ್ಟೇ. ಅಂದರೆ ಶೇ 10ಕ್ಕಿಂತಲೂ ಕಡಿಮೆಯಾಗಿದೆ. ಎಪಿಎಂಸಿ ವರಮಾನವು ಕಡಿಮೆಯಾಗಿದೆ.

‘ದಾವಣಗೆರೆ ಎಪಿಎಂಸಿಯಲ್ಲಿ ಈಗಾಗಲೇ ಭದ್ರತೆ ಹಾಗೂ ಸ್ವಚ್ಛತಾ ಸಿಬ್ಬಂದಿಯನ್ನು ಕಡಿತಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಚೇರಿ ಸಿಬ್ಬಂದಿಗೂ ಇದು ಅನ್ವಯವಾಗಬಹುದು‘ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಕೆ.ಸಿ. ದೊರೆಸ್ವಾಮಿ.  

ಚೆಕ್‌ಪೋಸ್ಟ್‌ಗಳು ಬಂದ್, ಸಿಬ್ಬಂದಿಯೂ ಇಲ್ಲ

ಹರಿಹರ: ಪಟ್ಟಣದ 5 ಚೆಕ್‌ಪೋಸ್ಟ್‌ಗಳಲ್ಲಿ ಸೆಸ್‌ ಸಂಗ್ರಹಿಸಲಾಗುತ್ತಿದ್ದು, ಈಗ ಇವುಗಳನ್ನು ಮುಚ್ಚಲಾಗಿದ್ದು, ಅಲ್ಲಿನ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಭತ್ತ ಹಾಗೂ ಮೆಕ್ಕೆಜೋಳ ಇಲ್ಲಿ ಮುಖ್ಯ ಬೆಳೆಯಾಗಿದ್ದು, ಈ ಹಿಂದೆ ರೈಸ್‌ಮಿಲ್ ವರ್ತಕರಿಂದ  ₹3.36 ಕೋಟಿ
ಸೆಸ್ ಸಂಗ್ರಹವಾಗುತ್ತಿತ್ತು. ರೈಸ್‌ಮಿಲ್ ಮಾಲೀಕರಿಗೆ ವಿನಾಯಿತಿ ನೀಡಿರುವುದರಿಂದ ₹1 ಕೋಟಿಗೆ ಇಳಿದಿದೆ.

‘ಹೊಸ ನೀತಿಯಿಂದ ರೈತರು ಭವಿಷ್ಯದಲ್ಲಿ ಸಂಕಷ್ಟ ಕಾಲ ಎದುರಿಸುವ ಜತೆಗೆ ಬಹುರಾಷ್ಟ್ರೀಯ ಕಂಪನಿಗಳು ನಿಗದಿ ಪಡಿಸಿದ ಬೆಲೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಅನಿವಾರ್ಯತೆಯನ್ನು ತಂದೊಡ್ಡುವ ಅಪಾಯವಿದೆ‘ ಎನ್ನುತ್ತಾರೆ ಎಪಿಎಂಸಿ ನಿರ್ದೇಶಕ ಜಿ. ಮಂಜುನಾಥ ಪಟೇಲ್‍.

ಹಮಾಲರು, ಗುತ್ತಿಗೆದಾರರಿಗೆ ಇಲ್ಲದ ಭದ್ರತೆ

ನ್ಯಾಮತಿ: ಇಲ್ಲಿನ ಉಪ ಮಾರುಕಟ್ಟೆಗೆ ಹೊನ್ನಾಳಿ ಎಪಿಎಂಸಿಯಿಂದಲೇ ನೌಕರರನ್ನು ನಿಯೋಜಿಸಲಾಗಿದೆ.

ಸೆಸ್, ಟೆಂಡರ್ ಮಾರ್ಕೆಟ್‌ನಿಂದ ಸಂಗ್ರಹವಾಗುವ ಶುಲ್ಕ, ಬಾಡಿಗೆ ಹಣದಿಂದ ಎಪಿಎಂಸಿ ಉಪ ಮಾರುಕಟ್ಟೆ
ಯನ್ನು ನಿರ್ವಹಣೆ ಮಾಡಬಹುದು. ತಿದ್ದುಪಡಿಯಿಂದ ವರ್ತಕರಿಗೆ, ರೈತರಿಗೆ ಹಾಗೂ ಮಾರುಕಟ್ಟೆಗೆ ತೊಂದರೆ ಆಗುವುದಿಲ್ಲ. ಹಮಾಲರು, ಗುತ್ತಿಗೆ ನೌಕರರು ತೊಂದರೆ ಅನುಭವಿಸಬೇಕಾಗುತ್ತದೆ‘ ಎಂದು ವರ್ತಕರ ಖಾಸಗಿ ಲೆಕ್ಕಪರಿಶೋಧಕ ಎನ್.ಡಿ. ಮಲ್ಲಿಕಾರ್ಜುನ ಹೇಳುತ್ತಾರೆ.

ಖರ್ಚು ಜಾಸ್ತಿ, ಆದಾಯ ಕಡಿಮೆ

ಜಗಳೂರು: ಮೂರು ದಶಕಗಳ ಹಿಂದೆಯೇ ಪಟ್ಟಣದ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಣವಾಗಿದ್ದರೂ ಸಕ್ರಿಯ ವಹಿವಾಟು ಆರಂಭಿಸಿರುವುದು ಐದು ವರ್ಷಗಳಿಂದ. ವಿಶಾಲ ಪ್ರಾಂಗಣದಲ್ಲಿ ಸುವ್ಯವಸ್ಥಿತ ಕಚೇರಿ, ವೇ ಬ್ರಿಡ್ಜ್ ಮತ್ತು ಗೋದಾಮುಗಳು ಸೇರಿ ಎಲ್ಲಾ ವ್ಯವಸ್ಥೆಗಳಿವೆ. ಇಲ್ಲಿನ ಭದ್ರತಾ ಸಿಬ್ಬಂದಿ, ವಿದ್ಯುತ್ ಹಾಗೂ ವಾಹನದ ಖರ್ಚು ಸೇರಿ ಪ್ರತಿ ತಿಂಗಳು ₹1.50 ಲಕ್ಷಕ್ಕೂ ಹೆಚ್ಚು ಖರ್ಚು ಬರುತ್ತಿದೆ. ಆದರೆ ಆದಾಯ ₹1ಲಕ್ಷ ಮಾತ್ರ ಇದ್ದು, ಮಾರುಕಟ್ಟೆ ಮತ್ತಷ್ಟು ನಷ್ಟ್ಕಕೆ ಸಿಲುಕುವ ಸಾಧ್ಯತೆ ಇದೆ.

‘ನಮ್ಮ ಕಚೇರಿಯಲ್ಲಿ ತಿಂಗಳಿಗೆ ₹1.5 ಲಕ್ಷ ವೆಚ್ಚ ತಗಲುತ್ತಿದೆ. ಆದಾಯ ₹1 ಲಕ್ಷ ಇದೆ. ಆದಾಯ ನಿಯಮಿತ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿರುವುದರಿಂದ ಆದಾಯ ಹೆಚ್ಚಳ ಸಾಧ್ಯವಾಗಿಲ್ಲ’ ಎಂದು ಎಪಿಎಂಸಿ ಕಾರ್ಯದರ್ಶಿ ಯೋಗರಾಜ್ ಹೇಳುತ್ತಾರೆ.

ನಿರ್ವಹಣೆ ಕಷ್ಟ

ಹೊನ್ನಾಳಿ: ಮಾರುಕಟ್ಟೆ ಪ್ರಾಂಗಣದ ಹೊರಗೆ ನಡೆಯುವ ವ್ಯವಹಾರಕ್ಕೆ ಮಾರುಕಟ್ಟೆ ಶುಲ್ಕ ಸಂಗ್ರಹ ಕಡಿಮೆಯಾಗಿರುವುದರಿಂದ ನಿರ್ವಹಣೆ ಕಷ್ಟವಾಗಿದೆ.

ರೈತರು ಮಾರುಕಟ್ಟೆ ಪ್ರಾಂಗಣಕ್ಕೆ ತಮ್ಮ ಹುಟ್ಟುವಳಿಗಳನ್ನು ತಂದು ಮಾರಾಟ ಮಾಡುವುದರಿಂದ ಸ್ಪರ್ಧಾತ್ಮಕ ಬೆಲೆಯ ಜೊತೆಗೆ ನಿಖರ ತೂಕ, ಆನ್‍ಲೈನ್ ಪೇಮೆಂಟ್ ಸಿಗುತ್ತದೆ. ಆದರೆ ಹೊರಗೆ ಮಾರಾಟ ಮಾಡಿದರೆ ಮಾರುಕಟ್ಟೆ ಪ್ರಾಂಗಣದಲ್ಲಿ ಇದನ್ನೇ ನಂಬಿಕೊಂಡಿರುವ ವರ್ತಕರು, ಹಮಾಲರು, ಚಕ್ಕಡಿಯವರ ಜೀವನಕ್ಕೆ ಮಾರಕವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.