ಭಾನುವಾರ, ಜನವರಿ 19, 2020
28 °C
ಹರಜಾತ್ರೆಯ ಮಹಿಳಾ ಸಮಾವೇಶ

ಆರತಿಗೊಬ್ಬಳು, ಕೀರ್ತಿಗೊಬ್ಬ ಘೋಷವಾಕ್ಯ ಬದಲಾಯಿಸಿ: ಸಿರಿಗೆರೆ ಶ್ರೀ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಆರತಿಗೊಬ್ಬಳು ಮಗಳು ಕೀರ್ತಿಗೊಬ್ಬ ಮಗ ಎಂಬ ಘೋಷವಾಕ್ಯ ಸರ್ಕಾರದಲ್ಲಿದೆ. ಮೊದಲು ಅದನ್ನು ಬದಲಾಯಿಸಿ. ಅಕ್ಕಮಹಾದೇವಿ ಕೀರ್ತಿ ತಂದಿಲ್ವ, ಕಿತ್ತೂರು ರಾಣಿ ಚನ್ನಮ್ಮ ಕೀರ್ತಿ ತಂದಿಲ್ವ ಎಂದು ಸಿರಿಗೆರೆ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪ್ರಶ್ನಿಸಿದರು.

ಹರಿಹರದಲ್ಲಿ ನಡೆಯುತ್ತಿರುವ ಹರಜಾತ್ರೆಯ ಎರಡನೇ ದಿನ ಬುಧವಾರ ನಡೆದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಗಂಡುಮಕ್ಕಳು ಬರೀ ಆಸ್ತಿಗಾಗಿ ಬಡಿದಾಡುತ್ತಿರುತ್ತಾರೆ. ಆಸರೆ ನೀಡಲು ಹೆಣ್ಣುಮಕ್ಕಳೇ ಬೇಕು. ಹಾಗಾಗಿ ನೀವು ಬೇಕಿದ್ದರೆ ಆಸ್ತಿಗೊಬ್ಬ ಮಗ, ಆಸರೆಗೊಬ್ಬ ಮಗಳು ಎಂದು ವಾಕ್ಯ ರಚಿಸಿ ಬೋರ್ಡ್‌ ಹಾಕಿಸಿ ಎಂದು ಸಲಹೆ ನೀಡಿದರು.

‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಎಂಬುದೆಲ್ಲ ಔಪಚಾರಿಕ ಮಾತುಗಳು. ವ್ಯವಹಾರದಲ್ಲಿ, ಕೌಟುಂಬಿಕ ಜೀವನದಲ್ಲಿ ಇದೆಲ್ಲ ಕಾಣುತ್ತಿಲ್ಲ. ಮನೆಯಲ್ಲಿ ನಡೆಯುವ ಎಲ್ಲ ದುರ್ಘಟನೆಗಳಿಗೆ ಮೊನ್ನೆ ಮೊನ್ನೆ ಬಂದ ಸೊಸೆಯೇ ಕಾರಣ ಎನ್ನುವ ಕೆಟ್ಟ ಮನಸ್ಥಿತಿ, ಒಳ್ಳೆಯ ಕಾರ್ಯದಿಂದ ವಿಧವೆಯರನ್ನು ಹೊರಗಿಡುವ ಪದ್ಧತಿ ಎಲ್ಲರ ಮನೆಯಲ್ಲಿದೆ. ಈ ಮೌಢ್ಯಗಳಿಂದ ಹೊರುವುದೇ ಹರಜಾತ್ರೆಯ ಯಶಸ್ಸು ಎಂದು ಹೇಳಿದರು.

‘ಮದುವೆಯಾಗುವ ಸಂದರ್ಭದಲ್ಲಿ ಮುತ್ತೈದೆಯರಿಂದ ಆಶೀರ್ವಾದ ಪಡೆಯುವ ಕ್ರಮ ಇದೆ. ಅದಿರಲಿ. ಜತೆಗೆ ವಿಧವೆಯರಿಂದಲೂ ಆಶೀರ್ವಾದ ಪಡೆಯಿರಿ. ತನಗೆ ಬಂದ ನೋವು ಸಂಕಟ ನಿಮಗೆ ಬಾರದಿರಲಿ ಎಂದು ಆಕೆ ಮಾತ್ರ ಹೃದಯದಿಂದ ಹಾರೈಸಬಲ್ಲಳು’ ಎಂದರು.

ಗುರು ಎಷ್ಟೇ ದೊಡ್ಡವನಾದರೂ ಉಪನಿಷತ್ತು ಮೂರನೇ ಸ್ಥಾನ ಕೊಟ್ಟಿದೆ. ತಾಯಿಗೆ, ತಂದೆಗೆ ಮೊದಲೆರಡು ಸ್ಥಾನಕೊಟ್ಟಿದೆ. ಅದನ್ನು ಮರೆಯಬಾರದು. ದೇವರನ್ನು ಪೂಜಿಸದಿದ್ದರೂ ಪರವಾಗಿಲ್ಲ. ತಾಯಿಯನ್ನು ಚೆನ್ನಾಗಿ ಕಾಣಿರಿ ಎಂದರು.

ಹೆಣ್ಣು, ಹೊನ್ನು, ಮಣ್ಣು ಈ ಮೂರನ್ನು ಮಾಯೆ ಎಂದು ಕರೆಯಲಾಗಿದೆ. ಇವು ಮಾಯೆಯಲ್ಲ ಮನದ ಮುಂದಣ ಆಸೆಯೇ ಮಾಯೆ ಎಂದು ಅಲ್ಲಮ ಪ್ರಭು ಹೇಳಿದ್ದನ್ನು ಮರೆಯಬೇಡಿ. ಅಂಧಶ್ರದ್ಧೆಗಳ ವಿರುದ್ಧ ಸೆಣಸಾಡಿ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ‘ ಹೆಣ್ಣು ಮತ್ತು ಗಂಡು ಸಮಾಜದ ಎರಡು ಕಣ್ಣುಗಳು ಇದ್ದಂಗೆ. ಇದರಲ್ಲಿ ಇದರಲ್ಲಿ ಉಚ್ಛ, ನೀಚ ಎಂಬುದಿಲ್ಲ. ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಮನು ಹೇಳಿದ್ದಕ್ಕೆ ವಿರುದ್ಧವಾಗಿ ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲ ಮಹಿಳೆಯರಿಗೆ ಸರಿ ಸಮಾನ ಅವಕಾಶ ನೀಡಿದವರು ಬಸವಣ್ಣ’ ಎಂದು ಶ್ಲಾಘಿಸಿದರು.

ಹೆಣ್ಣು ಮಗು ಜನಿಸೋದು ಬೇಡ ಎಂದು ಇವತ್ತಿಗೂ ಬಹುತೇಕ ಮನೆಗಳಲ್ಲಿ ಬಯಸುತ್ತಾರೆ. ಅಕ್ಕ ಎಲ್ಲ ಕಟ್ಟಳೆಗಳನ್ನು, ಉಟ್ಟ ಬಟ್ಟೆಯನ್ನು ತೊರದು ಮನೆ ಬಿಟ್ಟು ನಡೆದವಳು. ಅಂಥ ವೀರ ವಿರಾಗಿನಿ ಅಕ್ಕನ ವಚನಗಳ ಸ್ಫೂರ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಯಶಸ್ವಿಯಾಗುತ್ತದೆ ಎಂದರು.

ಭಾರತೀಯ ಸಂಸ್ಕೃತಿ, ಸಂಸ್ಕಾರ, ಧರ್ಮ ಮರೆಯಬಾರದು. ಒಳ್ಳೆಯ ಕಾರ್ಯದಲ್ಲಿ ಹೆಣ್ಣುಮಕ್ಕಳು ಭಾಗಿಯಾಗಬೇಕು. ಹೆಣ್ಣು ಮಕ್ಕಳಿಂದ ನಮ್ಮ ಸಂಸ್ಕೃತಿ ಉಳಿದಿದೆ ಎಂಬುದನ್ನು ಮರೆಯಬಾರದು. ಆದರೆ ಈಚೆಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದೇವೆ ಎಂದು ವಿಷಾದಿಸಿದರು.

ಅತ್ಯಾಚಾರ, ಅನ್ಯಾಯಗಳಿಂದ ನಾವು ನಮ್ಮನ್ನು ರಕ್ಷಿಸುವುದುನ್ನು ಕಲಿಯಬೇಕು ಎಂದು ಸಲಹೆ ನೀಡಿದರು.

ವಚನಾನಂದ ಸ್ವಾಮೀಜಿ, ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಹಗರಿಬೊಮ್ಮನಹಳ್ಳಿ ಮಹಾಂತ ಸ್ವಾಮೀಜಿ, ಮಂಗಳೂರು ರಾಮಕೃಷ್ಣ ಆಶ್ರಮದ ಏಕಗಮ್ಯಾನಂದ ಸ್ವಾಮೀಜಿ, ಯೋಗೀಶ್ವರಿ ತಾಯಿ, ಕಂಚಿಕೆರೆ ಸುಶೀಲಮ್ಮ, ಡಿವೈಎಸ್‌ಪಿ ಅಶ್ವಿನಿ ಕಂಚಿಕೆರೆ, ಡಾ.ಶಶಿಕಲಾ ಕೃಷ್ಣಮೂರ್ತಿ, ವಸಂತ ಹುಲ್ಲತ್ತಿ, ನಾಗರತ್ನಮ್ಮ ಭಾವಿಕಟ್ಟೆ, ಸಂಯುಕ್ತ ಶಿವಾನಂದ ಪಾಟೀಲ, ಡಾ. ಮಧು ಪಾಟೀಲ ಶಾಂತಾ ಹುಲುಮನಿ, ರಾಜೇಶ್ವರಿ ಪಾಟೀಲ, ಡಾ. ಉಷಾ ವೀರಾಪುರ, ನೀಲಮ್ಮ ಹುಸಮನಿ, ಬಸಮ್ಮ
ಹನುಮಂತ ಆರ್‌. ನಿರಾಣಿ, ಸಿ.ಆರ್. ಬಳ್ಳಾರಿ, ಪೂರ್ಣಿಮಾ ಶಿವಾನಂದ ಬೆನ್ನೂರು ಅವರೂ ಇದ್ದರು.

ಸಂಕ್ರಾಂತಿ ಪ್ರಯುಕ್ತ ವೇದಿಕೆಯಲ್ಲಿ ಎಳ್ಳು ಬೆಲ್ಲ ಹಂಚಲಾಯಿತು.

‘ಹೆಣ್ಣು ಮಕ್ಕಳ ಕೆಲಸಕ್ಕೆ ಗೌರವ ಕೊಡಿ’

‘ಹೆಣ್ಣುಮಕ್ಕಳ ಕೆಲಸಕ್ಕೆ ಗೌರವ ಕೊಡಲ್ಲ. ಅಡುಗೆ ಮಾಡುವುದು ದೊಡ್ಡ ಕೆಲಸನಾ ಎಂದು ಪ್ರತಿ ಮನೆಯಲ್ಲಿ ಗಂಡಸರು ಪ್ರಶ್ನಿಸುತ್ತಾರೆ. ನಾವು ಕೆಲಸ ಮಾಡುವುದು ಯಾರಿಗೂ ಗೊತ್ತಾಗಲ್ಲ. ಆದರೆ ನಾವು ಕೆಲಸ ಮಾಡಿಲ್ಲ ಅಂದರೆ ಯಾರೂ ಜೀವಿಸಲು ಸಾಧ್ಯವಿಲ್ಲ’ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದರು.

‘ಮನೆಯೊಳಗೆ ಮತ್ತು ಹೊರಗೆ ನಾವು ಸಾವಿರ ಕೆಲಸ ಮಾಡುತ್ತೇವೆ. ಅದು ಗೊತ್ತಾಗುತ್ತಿಲ್ಲ. ಮನೆಯ ಕೆಲಸಗಳ ಜತೆಗೆ ಸಾಮಾಜಿಕ ಚಟುವಟಿಕೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಪ್ರೀತಿ, ವಿಶ್ವಾಸ, ಸಭ್ಯತೆಯಿಂದ ಶಾಂತಿ ಮತ್ತು ಸಂಘಟಿತರಾಗಿ ಕೆಲಸ ಮಾಡೋಣ’ ಎಂದು ತಿಳಿಸಿದರು.

‘ಹೆಣ್ಣು ಮಗು ಜನಿಸಿದರೆ ಹೆಮ್ಮೆ ಪಡಿ’

ಹೆಣ್ಣು ಮಗು ಜನಿಸಿದರೆ ಈಗಲೂ ಅಯ್ಯಿ ಅನ್ನುತ್ತಾರೆ. ಹಾಗನ್ನದೆ ಹೆಮ್ಮೆ ಪಡಿ. ಪುರುಷನಿಗೆ ಸ್ತ್ರೀ ಮಾಯೆ ಎಂಬುದು ಹೌದಾದರೆ ಸ್ತ್ರೀಗೆ ಪುರುಷ ಕೂಡ ಮಾಯೆ ಎಂದು ತಿಳಿಯಿರಿ’ ಎಂದು ಬೀದರ ಬಸವಗಿರಿ ಬಸವ ಸೇವಾ ಪ್ರತಿಷ್ಠಾನ ಅಕ್ಕ ಅನ್ನಪೂರ್ಣ ಹೇಳಿದರು.

‘ಆಲದ ಮರಕ್ಕೆ ನೂಲು ಸುತ್ತಿದರೆ, ಹಾವಿಗೆ ಹಾಲು ಎರೆದರೆ, ಸಂಕಷ್ಟಿ ಮಾಡಿದರೆ, ವರಮಹಲಕ್ಷ್ಮೀ ಪೂಜೆ ಮಾಡಿದರೆ ಯಾರ ಆಯಸ್ಸೂ ವೃದ್ಧಿಯಾಗುವುದಿಲ್ಲ. ಇಂಥ ಮೌಢ್ಯಗಳಿಂದ ಮಹಿಳೆಯರು ಹೊರಬನ್ನಿ’ ಎಂದು ತಿಳಿಸಿದರು.

ಸಣ್ಣ ಸಣ್ಣ ಸಮಸ್ಯೆಗಳಿಗೆ ಅಳುತ್ತಾ ಕೂರಬೇಡಿ. ಆತ್ಮವಿಶ್ವಾಸ, ಚಾರಿತ್ರ್ಯ ಇಟ್ಟುಕೊಂಡು ಕಾಯಕ ಮಾಡಿ ಎಂದು ಸಲಹೆ ನೀಡಿದರು.

‘ಅಕ್ಕನ ವಿಜಯೋತ್ಸವ ಅಂದರೆ ಆಗಿನ ಅಧಿಕಾರಶಾಹಿ, ರಾಜ್ಯಶಾಹಿ, ಪುರೋಹಿತಶಾಹಿ ವಿರುದ್ಧ ಶರಣರು ಗಳಿಸಿ ವಿಜಯ ಎಂಬುದಾಗಿ ಆಚರಿಸೋಣ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು