ಗುರುವಾರ , ಸೆಪ್ಟೆಂಬರ್ 16, 2021
29 °C

ಬ್ಯಾಂಕ್‌ ಅಧಿಕಾರಿ ಸೋಗಿನಲ್ಲಿ ಭತ್ತದ ವ್ಯಾಪಾರಿಗೆ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಭತ್ತದ ವ್ಯಾಪಾರಿಯೊಬ್ಬರಿಗೆ ಆನ್‌ಲೈನ್ ಮೂಲಕ ₹ 1 ಲಕ್ಷ ವಂಚಿಸಲಾಗಿದೆ.

ಸರಸ್ವತಿ ನಗರದ ಬಿ. ವೆಂಕಟೇಶ್ವರ ರಾವ್ ವಂಚನೆಗೊಳಗಾದ ವ್ಯಾಪಾರಿ. ಹನುಮಾನ ಟ್ರೇಡರ್ಸ್‌ ಮಾಲೀಕರಾಗಿರುವ ಅವರು ಭತ್ತದ ವ್ಯಾಪಾರ ನಡೆಸುತ್ತಿದ್ದರು. ದೈನಂದಿನ ವ್ಯವಹಾರಕ್ಕಾಗಿ ಹದಡಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಮಂಗಳವಾರ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿದ್ದು, ಕೆನರಾ ಬ್ಯಾಂಕ್ ಅಧಿಕಾರಿ ಎಂದು ಪರಿಚಯಮಾಡಿಕೊಂಡಿದ್ದರು. ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗುತ್ತಿದೆ. ಕಾರ್ಡ್‌ ಅಪ್‌ಡೇಟ್ ರಿನಿವಲ್ ಮಾಡಲು ಕಾರ್ಡ್‌ ನಂಬರ್ ಕೇಳಿದ್ದರು. ಅವರ ಮಾತು ನಂಬಿ ನಂಬರ್‌, ಒಟಿಪಿ ನಂಬರ್‌ ಕೊಟ್ಟಿದ್ದಾರೆ. ಖಾತೆಯಲ್ಲಿದ್ದ ₹ 1 ಲಕ್ಷ ಕಡಿತಗೊಂಡಿದೆ. ಸಿಇಎನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೃಷಿ ಯಂತ್ರೋಪಕರಣ ಕಳವು

ದಾವಣಗೆರೆ: ತಾಲ್ಲೂಕಿನ ವಡ್ಡನಹಳ್ಳಿಯಲ್ಲಿ ಜಮೀನಿನ ತೋಟದ ಮನೆಯಲ್ಲಿದ್ದ ₹ 51 ಸಾವಿರ ಮೌಲ್ಯದ ಕೃಷಿ ಯಂತ್ರೋಪಕರಣಗಳು ಕಳವಾಗಿವೆ.

ವಡ್ಡನಹಳ್ಳಿ ಎಸ್.ಆರ್. ಶಿವಕುಮಾರ ಅವರ ಜಮೀನಿನ ತೋಟದ ಮನೆಯಲ್ಲಿ 5 ಎಚ್.ಪಿ. ಮೋಟರ್ ಪಂಪ್, ಅಡಿಕೆ ಗಿಡಕ್ಕೆ ಔಷಧ ಹೊಡೆಯುವ ಎರಡು ಪವರ್ ಸ್ಪ್ರೇಯರ್, ಎರಡು ಶಾಪ್ ಲಿಂಕ್, ಟ್ರಾಕ್ಟರ್‌ನ ಮಲ್ ಚಿಂಗ್ ಕಟ್ಟರಿನ ಜಾಯಿಂಟ್, 5 ಎಚ್.ಪಿ ನೀರು ಎತ್ತುವ ಪಂಪ್ ಕಳವಾಗಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋಲಾರ್‌ ಪ್ಲೇಟ್‌ ಕಳವು

ಜಗಳೂರು: ಹೊಸಕೆರೆ ಪ್ರೌಢಶಾಲೆಯಲ್ಲಿ ಅಳವಡಿಸಿದ್ದ ಎರಡು ಸೋಲಾರ್‌ ಪ್ಲೇಟ್‌ಗಳನ್ನು ಕಳವು ಮಾಡಲಾಗಿದೆ.

ಎನ್‌ಜಿಒ ಸಂಸ್ಥೆ ಕೊಡುಗೆಯಾಗಿದ್ದ ಈ ಪ್ಲೇಟ್‌ಗಳ ಮೌಲ್ಯ ₹ 13 ಸಾವಿರ ಆಗಿದೆ. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ತಿಪ್ಪೇಸ್ವಾಮಿ ನೀಡಿದ ದೂರಿನಂತೆ ಜಗಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹ 1.39 ಲಕ್ಷ ಮೌಲ್ಯದ ಸೊತ್ತು ಕಳವು

ದಾವಣಗೆರೆ: ಕೆ.ಬಿ. ಬಡಾವಣೆಯಲ್ಲಿರುವ ಮೊಬೈಲ್ ಅಂಗಡಿಯಿಂದ ₹ 1.39 ಲಕ್ಷ ಮೌಲ್ಯದ ಸೊತ್ತು ಕಳವು ಮಾಡಲಾಗಿದೆ.

ಕೀಮಾರಾಮ್‌ ಅವರು ಮಾತಾಜಿ ಎಂಬ ಮೊಬೈಲ್‌ ಅಂಗಡಿ ನಡೆಸುತ್ತಿದ್ದು, ರಾತ್ರಿ ಅಂಗಡಿಗೆ ಬಾಗಿಲು ಹಾಕಿ ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಅಂಗಡಿಯ ಕಬ್ಬಿಣದ ರಾಡ್‌ ಕೊಯ್ದು, ಪಿಒಪಿ ಮುರಿದು ಒಳ ನುಗ್ಗಿದ್ದಾರೆ. 10 ವಿವಿಧ ಕಂಪನಿಗಳ ಮೊಬೈಲ್‌ ಫೋನ್‌ಗಳು, ಡಿವಿಆರ್‌ ಮಾನಿಟರ್‌, ನಾಲ್ಕು ಸಿಸಿಟಿವಿ ಕ್ಯಾಮೆರಾ ಕಳವು ಮಾಡಿದ್ದಾರೆ. ಕೆಟಿಜೆನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಸ್ಪತ್ರೆಯಲ್ಲಿ ಅಪರಿಚಿತ ವ್ಯಕ್ತಿ ಸಾವು

ನ್ಯಾಮತಿ: ತಾಲ್ಲೂಕಿನ ಮಾದನಬಾವಿ ಗ್ರಾಮದ ಬಸ್‍ಸ್ಟಾಂಡ್‍ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸುಮಾರು 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯು ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಳೆದ ಸೋಮವಾರ ಮೃತಪಟ್ಟಿದ್ದಾರೆ. ಅವರು ಧರಿಸಿರುವ ಆಕಾಶ ನೀಲಿ ಅಂಗಿಯ ಮೇಲೆ ‘ಸ್ವಾಮಿ ವಿವೇಕಾನಂದ ಸ್ಕೂಲ್‌, ಶಿವಮೊಗ್ಗ, ನಾಲೆಡ್ಜ್‌ ಆಫ್‌ ಪವರ್‌’ ಎನ್ನುವ ಲೋಗೊ ಇದೆ. ಈ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಸಮೀಪದ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ನ್ಯಾಮತಿ ಪೊಲೀಸರು ಕೋರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.