ಭಾನುವಾರ, ಸೆಪ್ಟೆಂಬರ್ 19, 2021
26 °C

₹ 200 ದಾಟಿದ ಕೋಳಿ ಮಾಂಸ ದರ, ಬಿಸಿಲು ಏರಿದಂತೆ ಕಡಿಮೆಯಾದ ಕೋಳಿ ಪೂರೈಕೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋಳಿ ಮಾಂಸ ಪ್ರಿಯರಿಗೆ ಬಿಸಿಲಿಗಿಂತಲೂ ಹೆಚ್ಚು ಬಿಸಿಯನ್ನು ಮಾಂಸದ ಬೆಲೆ ಮುಟ್ಟಿಸಿದೆ. ಮಂಗಳವಾರ ಮಾಂಸದ ದರ ಒಂದು ಕೆ.ಜಿ.ಗೆ ₹ 210ಕ್ಕೇರಿದೆ. ಒಂದು ತಿಂಗಳ ಹಿಂದೆ ₹ 150ರ ಆಸುಪಾಸಿನಲ್ಲಿದ್ದ ದರ ಈಗ ಒಮ್ಮೆಲೇ ₹200 ದಾಟಿದೆ.

ಚರ್ಮರಹಿತ ಕೋಳಿ ಮಾಂಸದ ದರ ಕೆ.ಜಿ.ಗೆ ₹ 230 ಆಗಿದ್ದು, ಹುಂಡಿಕೋಳಿಗೆ ಅಂದರೆ ಇಡಿಕೋಳಿಗೆ ಕೆ.ಜಿ.ಗೆ ₹ 155ರಂತೆ ಮಾರಾಟವಾಗುತ್ತಿದೆ.

‘ಕೋಳಿ ಸಾಕುವ ಫಾರ್ಮ್‌ ತಂಪು ಪ್ರದೇಶಗಳಲ್ಲಿ ಇದ್ದರೆ ಕೋಳಿಗಳು ಬದುಕುತ್ತವೆ. ಇಲ್ಲದೇ ಇದ್ದರೆ ಈ ಸೆಕೆಗೆ ಸಾಯುತ್ತವೆ. ಕೋಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಕೋಳಿ ಪೂರೈಕೆ ಕಡಿಮೆಯಾದಾಗ ಸಹಜವಾಗಿಯೇ ಬೆಲೆ ಏರಿಕೆಯಾಗುತ್ತದೆ’ ಎಂದು ಕೋಳಿ ಮಾರಾಟಗಾರರಾದ ಕಿರಣ್‌, ಫಯಾಜ್‌ ತಿಳಿಸಿದರು.

ಜತೆಗೆ ಅಲ್ಲಲ್ಲಿ ಜಾತ್ರೆಗಳು ನಡೆಯುತ್ತಿರುವು ದರಿಂದ ಕೋಳಿಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಮೇ ದಾಟಿ ಮಳೆಗಾಲ ಆರಂಭಗೊಳ್ಳುವವರೆಗೆ ದರ ಹೆಚ್ಚಿರುತ್ತದೆ. ಮಳೆಗಾಲ ಆರಂಭಗೊಂಡಾಗ ಕೋಳಿ ದರವೂ ಇಳಿಯತ್ತದೆ ಎಂದು ವಿವರಿಸಿದರು.

ಸಾಕಣೆದಾರರಿಗೆ ಲಾಭವಿಲ್ಲ: ಕೋಳಿಗೆ ₹ 150 ಇದ್ದರೂ ₹ 200 ದಾಟಿದರೂ ಅದರ ಪ್ರಯೋಜನ ಕೋಳಿ ಸಾಕಣೆದಾರರಿಗೆ ಸಿಗುವುದಿಲ್ಲ. ಈಗ ಕೋಳಿ ಸಾಕುವ ರೈತರಿಗೆ ಒಂದು ಕೆ.ಜಿ.ಗೆ ₹ 90 ಮಾತ್ರ ಸಿಗುತ್ತಿದೆ. ವೆಂಕೋಬ್‌, ವೆಂಕಟೇಶ್ವರ, ಕೊರಿಯನ್ ಪಾಂಗ್ ಪಾಂಡ್, ಗೋದ್ರೆಜ್, ಸುಗುಣ, ಐಬಿ ಮತ್ತಿತರ ಬಹುರಾಷ್ಟ್ರೀಯ ಕಂಪನಿಗಳು ಸಾಕಣೆದಾರರಿಗೆ ದರ ನಿಗದಿ ಮಾಡುತ್ತವೆ, ಇದರಿಂದಾಗಿ ಲಾಭವು ಆ ಕಂಪನಿಗಳಿಗೆ ಮತ್ತು ಮಧ್ಯವರ್ತಿ ಮಾರಾಟಗಾರರಿಗೆ ಮಾತ್ರ ಆಗುತ್ತಿದೆ ಎಂದು ಮಧ್ಯ ಕರ್ನಾಟಕ ಕೋಳಿ ಸಾಕಾಣಿಕೆದಾರರ ಹಾಗೂ ಮಾರಾಟಗಾರರ ಸಹಕಾರ ಸಂಘದ ನಿರ್ದೇಶಕ ಮಲ್ಲಾಪುರ ಒ. ದೇವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

30 ಗ್ರಾಂನ ಒಂದು ಕೋಳಿ ಮರಿಗೆ ಎರಡು ತಿಂಗಳ ಹಿಂದೆ ₹ 25 ಇತ್ತು. ಅದು ಈಗ ₹ 48ಕ್ಕೆ ಏರಿದೆ. ಅದನ್ನು ಸಾಕಲು ಹಾಕುವ ಸೋಯಾ ಹಿಂಡಿ ಕೆ.ಜಿ.ಗೆ ಎರಡು ₹ 30ರಿಂದ ಒಮ್ಮೆಲೆ ₹ 52ಕ್ಕೆ ಏರಿದೆ. ಹೀಗಾಗಿ ಕೋಳಿ ಸಾಕುವ ವೆಚ್ಚ ಹೆಚ್ಚಾಗಿದೆ. ಆದರೆ, ರೈತರಿಗೆ ಸಿಗುವ ದರ ಹೆಚ್ಚಾಗಿಲ್ಲ. ಮಾರುಕಟ್ಟೆಯಲ್ಲಿ ಗ್ರಾಹಕರು ಕೊಡುವ ದರ ಮಾತ್ರ ಹೆಚ್ಚಾಗಿದೆ ಎಂದು ಅಳಲು ತೋಡಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು