ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭೆ ಅನಾವರಣಕ್ಕೆ ಚಿಗುರು ಉತ್ತಮ ವೇದಿಕೆ

ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್
Last Updated 22 ನವೆಂಬರ್ 2020, 5:16 IST
ಅಕ್ಷರ ಗಾತ್ರ

ದಾವಣಗೆರೆ: ಪ್ರತಿವರ್ಷ ಶಾಲೆಗಳಲ್ಲಿ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳಿಂದಾಗಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಸಿಗುತ್ತಿತ್ತು. ಈ ವರ್ಷ ಕೊರೊನಾ ಸೋಂಕಿನಿಂದಾಗಿ ಅವಕಾಶವಿಲ್ಲದಂತಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ‘ಚಿಗುರು’ ಕಾರ್ಯಕ್ರಮ ಏರ್ಪಡಿಸುವ ಮೂಲಕ ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುವಂಪು ಕನ್ನಡ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ‘ಚಿಗುರು’ ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿ ಮಕ್ಕಳಲ್ಲೂ ವಿಶೇಷತೆ ಇರುತ್ತದೆ. ಅಂತಹ ಪ್ರತಿಭೆಗಳನ್ನ ಬಾಲ್ಯದಲ್ಲಿಯೇ ಗುರುತಿಸಿ ಪ್ರೋತ್ಸಾಹಿಸಿದರೆ ಮುಂದೆ ಆ ಮಕ್ಕಳು ಸಮಾಜದ ಸ್ವತ್ತಾಗುತ್ತವೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಟಿವಿ ವಾಹಿನಿಗಳಲ್ಲಿ ಬರುವ ರಿಯಾಲಿಟಿ ಶೋಗಳಲ್ಲಿ ಅದ್ಬುತ ಪ್ರತಿಭೆಗಳು ಅನಾವರಣಗೊಳ್ಳುತ್ತಿವೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಂಜುನಾಥ ಕುರ್ಕಿ, ‘ನಮ್ಮ ಸಾಂಸ್ಕೃತಿಕ ಸಂಪತ್ತು ಜನಪದ ಕಲೆಗಳಲ್ಲಿದೆ. ಸಾಮಾಜಿಕ ಕಳಕಳಿಯನ್ನು ಇಂದಿನ ಮಕ್ಕಳಲ್ಲಿ ಬಿತ್ತಬೇಕಾಗಿದೆ. ಇತ್ತೀಚೆಗೆ ಪುಟ್ಟ ಮಕ್ಕಳಿಬ್ಬರು ಮಹಿಳೆಯೊಬ್ಬರ ಪ್ರಾಣ ಉಳಿಸಿರುವುದು ಮಕ್ಕಳು ಜವಾಬ್ದಾರಿಯುತ ಪ್ರಜೆಗಳಾಗುತ್ತಿರುವುದರ ಸಂಕೇತ. ಆ ಸಾಹಸಿ ಮಕ್ಕಳನ್ನು ಸಾಹಿತ್ಯ ಪರಿಷತ್ತು ಗೌರವಿಸುತ್ತಿದೆ ಎಂದರು.

ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ದಾವಣಗೆರೆ ಹೆಸರಾಂತ ನಾಟಕಕಾರರು, ಕಲಾವಿದರ ತವರೂರು. ಇಂತಹ ಕಾರ್ಯಕ್ರಮಗಳನ್ನು ಒಂದು ದಿನ ಮಾಡಿದರೆ ಸಾಲದು. ಕನಿಷ್ಠ ಮೂರು ದಿನಗಳ ಕಾಲ ಮಾಡಿದರೆ ಹೆಚ್ಚು ಮಕ್ಕಳಿಗೆ ಅವಕಾಶ ಸಿಗುತ್ತದೆ’ ಎಂದು ಹೇಳಿದರು.

ಮಕ್ಕಳು ವಾದ್ಯ ಸಂಗೀತ, ಜನಪದ ಗೀತೆಗಳು, ಸುಗಮ ಸಂಗೀತ, ಶಾಸ್ತ್ರೀಯ ನೃತ್ಯ, ಯಕ್ಷಗಾನ ಮೂಡಲಪಾಯ, ಏಕಪಾತ್ರಾಭಿನಯ ಕಾರ್ಯಕ್ರಮ ನಡೆಸಿಕೊಟ್ಟರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ರವೀಂದ್ರ ಅರಳಗುಪ್ಪಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ದಿಳ್ಯಪ್ಪ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಅವರೂ ಇದ್ದರು.

ಮಹಿಳೆಯ ಪ್ರಾಣ ಉಳಿಸಿದ ಮಕ್ಕಳಿಗೆ ಸನ್ಮಾನ

ಕೆಲವು ದಿನಗಳ ಹಿಂದೆ ಆವರಗೆರೆ ಉತ್ತಮಚಂದ್ ನಗರದಲ್ಲಿ ಅಂಗಡಿ ಮಾಲಕಿಯೊಬ್ಬರು ನೇಣು ಹಾಕಿಕೊಂಡು ಸಾಯಲು ಹೊರಟಿದ್ದರು. ಅದೇ ಹೊತ್ತಿಗೆ ಅಂಗಡಿಗೆ ಗುಪ್ತಚರ ಇಲಾಖೆಯ ಎಎಸ್‌ಐ ವೆಂಕಟೇಶ್‌ ರೆಡ್ಡಿ–ಲಕ್ಷ್ಮೀ ದಂಪತಿಯ ಮಗ ಸುಶಾಂತ್‌ ಚಾಕಲೇಟ್‌ಗಾಗಿ ಬಂದಿದ್ದ. ನೇಣು ಹಾಕಿಕೊಂಡಿರುವುದನ್ನು ಕಂಡು ಭಯಗೊಂಡು ಕಿರುಚಿದ್ದಲ್ಲದೇ ಅಕ್ಕ ಪ್ರಣೀತಾ ರೆಡ್ಡಿಯನ್ನು ಕರೆ ತಂದಿದ್ದಾನೆ. ಅದೇ ಹೊತ್ತಿಗೆ ಮಹಿಳೆಯ ಮಕ್ಕಳಿಬ್ಬರು ಕೂಡ ಸದ್ದಿಗೆ ಎದ್ದು ಬಂದಿದ್ದಾರೆ. ಎಲ್ಲರೂ ಸೇರಿ ಮಹಿಳೆಯನ್ನು ನೇಣು ಕುಣಿಕೆಯಿಂದ ಇಳಿಸಿದ್ದಾರೆ. ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಹಿಳೆ ಈಗ ಚೇತರಿಸಿಕೊಂಡಿದ್ದಾರೆ.

ಮಹಿಳೆಯ ಪ್ರಾಣ ಉಳಿಸಲು ಕಾರಣರಾದ ಸುಶಾಂತ್‌ ರೆಡ್ಡಿ ಮತ್ತು ಪ್ರಣೀತಾ ರೆಡ್ಡಿಯನ್ನು ಚಿಗುರು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT