ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ ಕೊಟ್ಟುಬಿಡಿ ಎಂದು ಕಣ್ಣೀರಿಟ್ಟ ಪೌರ ಕಾರ್ಮಿಕರು

ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಭೇಟಿ
Last Updated 15 ನವೆಂಬರ್ 2022, 4:32 IST
ಅಕ್ಷರ ಗಾತ್ರ

ಜಗಳೂರು: ‘12 ವರ್ಷಗಳಿಂದ ಪಟ್ಟಣದಲ್ಲಿ ಚರಂಡಿಗಳನ್ನು ಕ್ಲೀನ್ ಮಾಡಿದ್ದೀವಿ. ನಸುಕಲ್ಲೇ ಎದ್ದು ರಸ್ತೆಗಳನ್ನು ಗುಡಿಸುತ್ತೇವೆ. ಮನೆಮನೆಗೆ ತೆರಳಿ ಕಸ ಸಂಗ್ರಹಿಸ್ತೇವೆ. ಆದರೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಮ್ಮನ್ನು ಕಾಯಂಗೊಳಿಸಿಲ್ಲ. ಸಂಬಳವನ್ನೂ ಕೊಟ್ಟಿಲ್ಲ’ ಎಂದು‌ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅವರ ಎದುರು 10 ದಿನಗೂಲಿ ಪೌರಕಾರ್ಮಿಕರು ಸೋಮವಾರ ಕಣ್ಣೀರು ಹಾಕಿದರು.

ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಅವರು ಸೋಮವಾರ ಭೇಟಿ ನೀಡಿ ದಿನಗೂಲಿಗಳ ಸಮಸ್ಯೆಗಳನ್ನು ಆಲಿಸಿದ ಸಂದರ್ಭದಲ್ಲಿ ಈ ದೃಶ್ಯ ಕಂಡು
ಬಂತು.

‘12 ವರ್ಷಗಳಿಂದ ಸಂಬಳ ಇಲ್ಲದೆ ಕೆಲಸ ಮಾಡುತ್ತಿದ್ದೇವೆ. ಮನೆ–ಮನೆ ಕಸ ಸಂಗ್ರಹಕ್ಕೆ ಹೋದಾಗ ಅವರು ಕೊಡುವ ₹ 15– ₹ 20 ಪಡೆದು ಕಡುಕಷ್ಟದಲ್ಲಿ ಜೀವನ ನಡೆಸುತ್ತೇವೆ. ಕೇಳಿದರೆ, ಸುಮ್ಮನೇ ಕೆಲಸ ಮಾಡಿದರೆ ಸರಿ, ಇಲ್ಲದಿದ್ದರೆ ಕೆಲಸದಿಂದ ಕಿತ್ತು ಹಾಕುತ್ತೇನೆ’ ಎಂದು ಆರೋಗ್ಯ ನಿರೀಕ್ಷಕ ಖಿಫಾಯತ್ ಗದರಿಸುತ್ತಾರೆ’ ಎಂದು ಕಾರ್ಮಿಕರಾದ ಗೀತಮ್ಮ, ತಿಪ್ಪಮ್ಮ, ರೇಣುಕಮ್ಮ, ಮಹಾಲಕ್ಷ್ಮೀ, ಕರಿಬಸಮ್ಮ, ವೀರೇಶ್ ಬಾಬು, ಬಸಮ್ಮ ಅಳಲು
ತೋಡಿಕೊಂಡರು.

‘ಪಟ್ಟಣ ಪಂಚಾಯಿತಿಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕುಟುಂಬದವರನ್ನೇ ಪ್ರತಿ ಮನೆಗೆ 3-4 ಜನರಂತೆ ಪೌರಕಾರ್ಮಿಕರ ಹುದ್ದೆಗಳಿಗೆ ಅಕ್ರಮವಾಗಿ ನೇಮಕ ಮಾಡಿಕೊಂಡಿದ್ದಾರೆ. 12 ವರ್ಷಗಳಿಂದ ಸಂಬಳ ಇಲ್ಲದೇ ಕೆಲಸ ಮಾಡಿದ ನಮಗೆ ತೀವ್ರ ಅನ್ಯಾಯ ಮಾಡಿದ್ದಾರೆ. ಕೆಲಸವನ್ನು ಕಾಯಂ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ನಮ್ಮ ಹೆಸರನ್ನು ಉದ್ದೇಶಪೂರ್ವಕವಾಗಿ ಹಾಜರಾತಿ ಪುಸ್ತಕ ಸೇರಿ ಯಾವುದೇ ದಾಖಲೆಯಲ್ಲೂ ನಮೂದಿಸುತ್ತಿಲ್ಲ. 12 ವರ್ಷಗಳಿಂದ ಇಲ್ಲೇ ಇರುವ ಆರೋಗ್ಯ ನಿರೀಕ್ಷಕ ಖಿಫಾಯತ್ ನಮಗೆ ಭಾರಿ ಅನ್ಯಾಯ ಮಾಡುತ್ತಿದ್ದಾರೆ’ ಎಂದ ದಿನಗೂಲಿ ಕಾರ್ಮಿಕರು ‘ನಮ್ಮ ಸಮಸ್ಯೆ ಕೇಳುವವರೇ ಇಲ್ಲ. ದಯವಿಟ್ಟು ವಿಷ ಕೊಟ್ಟುಬಿಡಿ, ಇಲ್ಲೇ ಜೀವ ಬಿಟ್ಟುಬಿಡುತ್ತೇವೆ’ ಎಂದು ಕಣ್ಣೀರು ಹಾಕಿದರು.

‘ಹಾಗೆಲ್ಲ ವಿಷ ಕುಡಿಯುವ ಮಾತನಾಡುವುದು ಸರಿಯಲ್ಲ. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಎಲ್ಲ ತಾರತಮ್ಯಗಳನ್ನು ಕೊನೆಗಾಣಿಸಿ, ನ್ಯಾಯ ಕೊಡಿಸಲಾಗುತ್ತದೆ’ ಎಂದು ಶಿವಣ್ಣ ಭರವಸೆ
ನೀಡಿದರು.

ತಹಶೀಲ್ದಾರ್ ಸಂತೋಷ್ ಕುಮಾರ್, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ವರಪ್ಪ, ತಾಲ್ಲೂಕು ಪಂಚಾಯಿತಿ ಇಒ ಚಂದ್ರಶೇಖರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗರಾಜ್ ಇದ್ದರು.

.......

ಸಂಬಳ ನೀಡದ್ದಕ್ಕೆ ತರಾಟೆ

‘ಪ್ರಧಾನ ಮಂತ್ರಿಗಳು ಪೌರಕಾರ್ಮಿಕರ ಬಗ್ಗೆ ಕಾಳಜಿ ಹೊಂದಿದ್ದು, ಸಾಕಷ್ಟು ಸವಲತ್ತು ಕಲ್ಪಿಸಿದ್ದಾರೆ. 11 ವರ್ಷಗಳ ಹಿಂದೆಯೇ ದಿನಗೂಲಿ ಪೌರಕಾರ್ಮಿಕರಿಗೆ ಸಂಬಳ ನೀಡುವಂತೆ ಜಿಲ್ಲಾಧಿಕಾರಿಗಳ ಆದೇಶ ಇದೆ. ನೀವು ಏಕೆ ಸಂಬಳ ಕೊಟ್ಟಿಲ್ಲ’ ಎಂದು ಆರೋಗ್ಯ ನಿರೀಕ್ಷಕ ಖಿಫಾಯತ್ ಹಾಗೂ ಮುಖ್ಯಾಧಿಕಾರಿ ಲೋಕ್ಯಾ ನಾಯ್ಕ ಅವರನ್ನುಅಧ್ಯಕ್ಷ ಎಂ. ಶಿವಣ್ಣ ಪ್ರಶ್ನಿಸಿದರು. ‘12 ವರ್ಷಗಳಿಂದ ನೀನು ಇಲ್ಲೇ ಬೀಡುಬಿಟ್ಟಿದ್ದೀಯಾ. ಕಾರ್ಮಿಕರಿಗೆ ನ್ಯಾಯಯುತ ಸವಲತ್ತು ನೀಡದೇ ಸತಾಯಿಸಿದರೆ ನಿನ್ನನ್ನು ಸೇವೆಯಿಂದ ಅಮಾನತು ಮಾಡಬೇಕಾಗುತ್ತದೆ’ ಎಂದುಖಿಫಾಯತ್ ಅವರಿಗೆ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT