ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ‘ಶಕ್ತಿ’ಗೆ ಸಿಗದ ಬೆಂಬಲ: ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್‌ ಕಳವಳ

Last Updated 10 ಡಿಸೆಂಬರ್ 2018, 11:58 IST
ಅಕ್ಷರ ಗಾತ್ರ

ದಾವಣಗೆರೆ: ‘ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರೂಪಿಸಿದ ‘ಶಕ್ತಿ’ ಕಾರ್ಯಕ್ರಮಕ್ಕೆ ಸ್ಥಳೀಯ ನಾಯಕರು ಸ್ಪಂದಿಸದೇ ಇರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಸದಸ್ಯತ್ವ ನೋಂದಣಿಯಾಗಿಲ್ಲ’ ಎಂದು ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್‌ ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಶಕ್ತಿ’ ಕಾರ್ಯಕ್ರಮದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ರಾಜಕೀಯ ಭೂಪಟವನ್ನು ಬದಲಾಯಿಸುವ ಶಕ್ತಿ ದಾವಣಗೆರೆಗೆ ಇದೆ. 2013ರಲ್ಲಿ ಕಾಂಗ್ರೆಸ್‌ ಸರ್ಕಾರ ರಚಿಸುವಲ್ಲಿ ಜಿಲ್ಲೆ ಗಣನೀಯ ಕೊಡುಗೆ ನೀಡಿತ್ತು. ಆದರೆ, ‘ಶಕ್ತಿ’ ಕಾರ್ಯಕ್ರಮದ ಬಗ್ಗೆ ಇಲ್ಲಿನ ನಾಯಕರು ನಿರಾಸಕ್ತಿ ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

‘ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 4,729 ಸದಸ್ಯತ್ವ ನೋಂದಣಿಯಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 442 ಮಾತ್ರ ನೋಂದಣಿಯಾಗಿದೆ. ಪ್ರತಿ ಬೂತ್‌ನಲ್ಲಿ ಕನಿಷ್ಠ 20 ಸದಸ್ಯತ್ವ ನೋಂದಣಿ ಮಾಡುವ ಗುರಿ ಹೊಂದಲಾಗಿದೆ. ಪಕ್ಷದಲ್ಲಿ 19 ಘಟಕಗಳಿದ್ದರೂ ಅವುಗಳಿಂದ ಅಗತ್ಯ ಸ್ಪಂದನೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘2019ರ ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಇರುವುದರಿಂದ ಕಾರ್ಯಕರ್ತರು ಹೆಚ್ಚು ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಯುವ ಘಟಕ ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ‘ಶಕ್ತಿ ಕಾರ್ಯಕ್ರಮದ ಸದಸ್ಯತ್ವ ನೋಂದಣಿಗೆ ನವೆಂಬರ್‌ 31 ಕೊನೆಯ ದಿನವಾಗಿತ್ತು. ನಿರೀಕ್ಷಿತ ಪ್ರಮಾಣದಲ್ಲಿ ನೋಂದಣಿ ಆಗದಿರುವುದರಿಂದ ಡಿಸೆಂಬರ್‌ 15ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ. ಬಾಕಿ ಉಳಿದ ಐದು ದಿನಗಳಲ್ಲಿ ನಾಯಕರು ಹಾಗೂ ಕಾರ್ಯಕರ್ತರು ಪ್ರತಿ ಬೂತ್‌ನಲ್ಲಿ 40ರಿಂದ 50 ಜನರ ಹೆಸರನ್ನು ನೋಂದಣಿ ಮಾಡಿಸಬೇಕು’ ಎಂದು ಸಲಹೆ ನೀಡಿದರು.

‘ದಾವಣಗೆರೆ ನಗರದ 41 ವಾರ್ಡ್‌ಗಳಲ್ಲಿ ಪಾಲಿಕೆ ಸದಸ್ಯರು ಕೂಡಲೇ ಸಭೆ ಕರೆದು ಈ ಬಗ್ಗೆ ಚರ್ಚಿಸಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಆಗುವಂತೆ ನೋಡಿಕೊಳ್ಳಬೇಕು. ಬೇರು ಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಲು ನೋಂದಣಿಗೆ ಒತ್ತು ನೀಡಬೇಕು’ ಎಂದು ಮನವಿ ಮಾಡಿದರು.

ಮೇಯರ್ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಚಮನ್‌ ಸಾಬ್‌, ಜಿಲ್ಲಾ ಉಸ್ತುವಾರಿ ಬಲ್ಕಿಶ್‌ ಬಾನು, ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌, ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಯೂಬ್‌ ಪೈಲ್ವಾನ್‌, ವೀರಭದ್ರಪ್ಪ, ನಾಗರಾಜ ಹಾಗೂ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT