ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಶಿವನಹಳ್ಳಿ ರಮೇಶ್‌ ಬಿಜೆಪಿ ಸೇರ್ಪಡೆ

Published 12 ಏಪ್ರಿಲ್ 2024, 5:32 IST
Last Updated 12 ಏಪ್ರಿಲ್ 2024, 5:32 IST
ಅಕ್ಷರ ಗಾತ್ರ

ದಾವಣಗೆರೆ: ಕಾಂಗ್ರೆಸ್‌ ಮುಖಂಡ ಶಿವನಹಳ್ಳಿ ರಮೇಶ್‌ ಅವರು ಗುರುವಾರ ಬಿಜೆಪಿಗೆ ಸೇರ್ಪಡೆಯಾದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ಸೇರ್ಪಡೆಯಾಗಿರುವುದರಿಂದ ಬಿಜೆಪಿಗೆ ಕೊಂಚ ಲಾಭವಾಗಿದ್ದರೆ ಕಾಂಗ್ರೆಸ್‌ಗೆ ನಷ್ಟವಾಗುವ ಲಕ್ಷಣ ಇದೆ ಎಂದು ವಿಶ್ಲೇಷಿಸಲಾಗಿದೆ.

ಬುಧವಾರ ರಾತ್ರಿ ಕಾಂಗ್ರೆಸ್‌ ನಾಯಕರೊಂದಿಗಿನ ಸುದೀರ್ಘ ಚರ್ಚೆ ಬಳಿಕವೂ ಅವರು ಬಿಜೆಪಿಗೆ ಸೇರ್ಪಡೆಯಾಗಿರುವುದು ಕಾಂಗ್ರೆಸ್‌ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಾಜಿ ನಗರಸಭಾ ಅಧ್ಯಕ್ಷರಾಗಿದ್ದ ಶಿವನಹಳ್ಳಿ ರಮೇಶ್ ಅವರು ಎರಡು ಬಾರಿ ಮಹಾನಗರ ಪಾಲಿಕೆ ಸದಸ್ಯರಾಗಿದ್ದರು.

‘ಪ್ರಧಾನಿ ಮೋದಿ ಅವರ ಕಾರ್ಯವೈಖರಿಗೆ ಮೆಚ್ಚಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಕೆಲಸ ಮಾಡಲು ಇದೊಂದು ಅವಕಾಶ ಎಂದು ಭಾವಿಸುತ್ತೇನೆ. ನರೇಂದ್ರ ಮೋದಿಯ ನೇತೃತ್ವದ ಬಿಜೆಪಿ ಪ್ರಣಾಳಿಕೆ 2047ರ ಮುನ್ನೋಟ ಇದೆ. ದೇಶದ ಭವಿಷ್ಯ, ಮುಂದಿನ ಪೀಳಿಗೆಗೆಯನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ಸಿದ್ಧಪಡಿಸಲಾಗಿದೆ. ಇದನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಭವಿಷ್ಯದ ಪ್ರಣಾಳಿಕೆ ಬೆಂಬಲಿಸುವುದು ನನ್ನ ಕರ್ತವ್ಯ ಎಂದು ಭಾವಿಸಿ ಸೇರಿದ್ದೇನೆ‘ ಎಂದು ಶಿವನಹಳ್ಳಿ ರಮೇಶ್‌ ಹೇಳಿದರು.

’ಮೊದಲಿನಿಂದಲೂ ಶಿವನಹಳ್ಳಿ ಗ್ರಾಮಸ್ಥರು ಬಿಜೆಪಿ ಪರ ಇದ್ದರು. ಈಗ ರಮೇಶ್‌ ಅವರ ಸೇರ್ಪಡೆಯಿಂದ ಮತ್ತಷ್ಟು ಬಲ ಬಂದಂತಾಗಿದೆ. ಹಿಂದೆ ಕೆಲವರು ಪರೋಕ್ಷವಾಗಿ ಪಕ್ಷದ ಪರ ಕೆಲಸ ಮಾಡುತ್ತಿದ್ದರು. ಇನ್ನು ಮುಂದೆ ಪ್ರತ್ಯಕ್ಷವಾಗಿ ಕೆಲಸ ಮಾಡಲಿದ್ದಾರೆ‘ ಎಂದು ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ್‌ ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್‌ ನಾಗಪ್ಪ, ಮುಖಂಡರಾದ ಎ.ಎಚ್‌. ಶಿವಯೋಗಿಸ್ವಾಮಿ, ಯಶವಂತರಾವ್‌ ಜಾಧವ್‌, ಲೋಕಿಕೆರೆ ನಾಗರಾಜ್‌, ವೀರೇಶ್‌ ಹನಗವಾಡಿ, ಬಿ.ಜಿ. ಅಜಯಕುಮಾರ್‌, ರೇಖಾ ಸುರೇಶ್‌, ಧನಂಜಯ ಕಡ್ಲೆಬಾಳ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT