ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮ್ಮನ ಮದುವೆಗೆ ಒಪ್ಪಿಗೆ, ಅಣ್ಣನ ಮದುವೆಗೆ ತಡೆ

Last Updated 20 ಮೇ 2021, 3:33 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿಯ ಹಾಲುವರ್ತಿ ಗ್ರಾಮದಲ್ಲಿ ಬಾಲಕಿಯೊಂದಿಗೆ ನಿಶ್ಚಯವಾಗಿದ್ದ ಮದುವೆಯನ್ನು ಅಧಿಕಾರಿಗಳು ತಡೆದರು.

ಗ್ರಾಮದ ಯುವಕನೊಂದಿಗೆ ಹೊನ್ನಾಳಿ ತಾಲ್ಲೂಕಿನ ಗ್ರಾಮವೊಂದರ ಬಾಲಕಿಯೊಬ್ಬಳ ವಿವಾಹವನ್ನು ಮೇ 20ರಂದು ವರನ ಸ್ವಗೃಹದಲ್ಲಿ ನಡೆಸಲು ಸಿದ್ಧತೆ ನಡೆದಿತ್ತು. ಮಕ್ಕಳ ಸಹಾಯವಾಣಿಗೆ ದೂರು ಬಂದಿದ್ದು, ಅಧಿಕಾರಿಗಳು ಎರಡು ತಂಡಗಳಲ್ಲಿ ಧಾವಿಸಿ ಮದುವೆ ನಿಲ್ಲಿಸಿದ್ದಾರೆ.

ಮಕ್ಕಳ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕ ಕೊಟ್ರೇಶ್.ಟಿ.ಎಂ, ಕ್ಷೇತ್ರ ಕಾರ್ಯಕರ್ತ ಮಂಜುನಾಥ ಡಿ., ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಆರ್. ಧರಣಿಕುಮಾರ್, ಚಾಲಕರಾದ ಕುಮಾರ, ಹೆಬ್ಬಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೌಭಾಗ್ಯ ಲಕ್ಷ್ಮಿ, ಬಿಲ್ ಕಲೆಕ್ಟರ್‌ ಮುತ್ತೇಶ, ಅಜ್ಜಯ್ಯ ಅವರು ಯುವಕನ ಮನೆಗೆ ಹೊರಟಿದ್ದಾರೆ.

ಮಕ್ಕಳ ಸಹಾಯವಾಣಿ ಉಪಕೇಂದ್ರದ ಕ್ಷೇತ್ರ ಕಾರ್ಯಕರ್ತರಾದ ಸುಜಾತ.ಎಂ. ಗ್ರಾಮ ಪಂಚಾಯಿತಿ ಅಧ್ಯಕ್ಷ ದಯಾನಂದ, ಸದಸ್ಯರಾದ ಜಯಣ್ಣ ‌ಅವರನ್ನೊಳಗೊಂಡ ತಂಡ ಬಾಲಕಿಯ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಬಾಲಕಿಗೆ 17 ವರ್ಷ 2 ತಿಂಗಳುಗಳಾಗಿರುವುದು ತಿಳಿದಿದೆ.

ಅಣ್ಣ ಹಾಗೂ ತಮ್ಮಂದಿರ ಮದುವೆ ಒಂದೇ ದಿನ ನಿಗದಿಯಾಗಿತ್ತು. ತಮ್ಮ ಮದುವೆಯಾಗುವ ವಧುವಿನ ವಯಸ್ಸು 20 ದಾಟಿದ್ದು, ಮದುವೆಗೆ ಅಡೆತಡೆಯಾಗಲಿಲ್ಲ. ಆದರೆ ಅಣ್ಣ ಮದುವೆಯಾಗಬೇಕಿದ್ದ ವಧುವಿನ ವಯಸ್ಸು ಕಡಿಮೆ ಇತ್ತು.

ಯುವಕನಿಗೆ ಹಾಗೂ ಬಾಲಕಿಯ ಪೋಷಕರಿಗೆ ಬಾಲ್ಯವಿವಾಹದ ಬಗ್ಗೆ ಅರಿವು ಮೂಡಿಸಿ ಮುಚ್ಚಳಿಕೆ ಪತ್ರ ಪಡೆದು ಅಣ್ಣನ ಮದುವೆಗೆ ಬ್ರೇಕ್ ಹಾಕಿದ್ದಾರೆ.

ಗಂಡು, ಹೆಣ್ಣು ಎರಡೂ ಕಡೆಯವರಿಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಶುಕ್ರವಾರ ಹಾಜರಾಗಲು ಆದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT