ಮಂಗಳವಾರ, ಏಪ್ರಿಲ್ 13, 2021
32 °C
‘ಜಲಶಕ್ತಿ’ ಯೋಜನಾ ಅನುಷ್ಠಾನ ಸಭೆಯಲ್ಲಿ ಜಿಲ್ಲಾಧಿಕಾರಿ

ಜಲ ಮೂಲ ಉಳಿಸಲು ಕಟಿಬದ್ಧರಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಮ್ಮಲ್ಲಿನ ಸಾಂಪ್ರದಾಯಿಕ ಜಲ ಮೂಲಗಳನ್ನು ಸಂರಕ್ಷಿಸದಿರುವ ಕಾರಣ ಇಂದು ಕುಡಿಯುವ ನೀರಿಗೂ ಬರ ಬಂದಿದ್ದು, ಮುಂದಿನ ದಿನಗಳಾಲ್ಲಾದರೂ ಸಾಂಪ್ರಾದಾಯಿಕ ಜಲ ಮೂಲಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡೋಣ’ ಎಂದು ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ ಸಲಹೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ‘ಜಲಶಕ್ತಿ’ ಯೋಜನಾ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ನೀರು ಉಳಿಸುವಿಕೆ, ನೀರು ಇಂಗಿಸುವಿಕೆ, ಮಳೆ ನೀರು ಸಂಗ್ರಹ, ಜಲ ಪೂರಣ ಇವು ಆದ್ಯತೆಯ ವಿಷಯಗಳಾಗಿವೆ. ಅಧಿಕಾರಿಗಳು ತಮ್ಮ ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಮಳೆ ನೀರು ಸಂಗ್ರಹ ವಿಧಾನ ಅಳವಡಿಸಿಕೊಳ್ಳಲು ಹಾಗೂ ಅಗತ್ಯ ಗಿಡ ಮರ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.

‘ಪ್ರಕೃತಿ ಹೀಗೇ ಮುನಿದರೆ ದುರಂತದ ದಿನಗಳು ದೂರವಿಲ್ಲ. ನೀರಿನ ವಿಚಾರ ನಮ್ಮ ಬದ್ದತೆಯಾಗಲಿ. ಈಗಾಗಲೇ ಕೆಲವು ದೇಶಗಳು ನೀರಿನ ವಿಚಾರದಲ್ಲಿ ಎಂತಹ ದುರ್ಬರ ದಿನಗಳನ್ನು ಎಣಿಸುತ್ತಿದ್ದಾರೆಂಬ ನಿದರ್ಶನಗಳು ನಮ್ಮ ಮುಂದೆ ಇವೆ. ಔಷಧಿಯಂತೆ ನೀರು ಸೇವಿಸಬೇಕಾಗಿದೆ. ಅಂತಹ ದಿನಗಳು ಬರುವ ಮುಂಚೆಯೇ ಎಚ್ಚತ್ತೆಕೊಳ್ಳಬೇಕು’ ಎಂದರು.

‌ಜಿಲ್ಲೆಯಲ್ಲಿ 205 ಕೆರೆಗಳಿದ್ದು, ಅವುಗಳ ರಕ್ಷಣೆ, ಸಂರಕ್ಷಣೆ ನೀರು ಹರಿಯುವ ಕಾಲುವೆಗಳ ಸ್ವಚ್ಚತೆ, ಹೂಳು ತೆಗೆಯುವ ಬಗೆಗೆ ಕ್ರಿಯಾ ಯೋಜನೆ ತಯಾರಿಸಿ ಜುಲೈ 23 ರೊಳಗೆ ಸಲ್ಲಿಸಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಾಡ ಕಚೇರಿ, ಪಂಚಾಯಿತಿ ಕಚೇರಿಗಳಲ್ಲಿ ಮಳೆ ನೀರು ಸಂಗ್ರಹಿಸಿ ಆರಂಭಿಸಿ ನೀರಿನ ಸಂರಕ್ಷಣೆಗೆ ಮುಂದಾಗಿ ಇನ್ನೊಂದು ವಾರದೊಳಗಾಗಿ ತಮ್ಮ ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಮಾಹಿತಿಯನ್ನು ಸಲ್ಲಿಸಬೇಕು ಎಂದು ತಾಕೀತು ಮಾಡಿದರು.

ಡಿಡಿಪಿಐ ಪರಮೇಶ್ವರಪ್ಪ, ‘ಇಲಾಖೆ ವತಿಯಿಂದ ಶಾಲೆಗಳಲ್ಲಿ ಈಗಾಗಲೇ 22 ಸಾವಿರ ಗಿಡಗಳನ್ನು ನೆಡಲಾಗಿದೆ. 42 ಸಾವಿರ ಸಸಿಗಳಿಗೆ ಅರಣ್ಯ ಇಲಾಖೆಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದರು.

ಡಿಸಿಎಫ್ ಚಂದ್ರಶೇಖರ್ ನಾಯಕ್, ‘ಸಾಕಷ್ಟು ಅರಣ್ಯ ಗಿಡಗಳು ಲಭ್ಯವಿದ್ದು, ಗಿಡಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಎಚ್. ಬಸವರಾಜೇಂದ್ರ, ‘ನರೇಗಾ ಯೋಜನೆಯಡಿ ಗ್ರಾಮೀಣ ಭಾಗಗಳ ಕೆರೆಗಳ ಅಭಿವೃದ್ದಿಗೆ ಹೊಲದ ಬದು, ಚೆಕ್ ಡ್ಯಾಂ, ಕೃಷಿ ಹೊಂಡ ಮುಂತಾದವುಗಳನ್ನು ಕೈಗೊಂಡು ನೀರು ಇಂಗಿಸುವ ಕಾರ್ಯ ಮಾಡಬೇಕಿದೆ. ಕೆರೆಗಳ ಪುನರುಜ್ಜೀವನ, ಮಳೆ ನೀರು ಸಂಗ್ರಹ ಕಾರ್ಯಕ್ರಮ ಕೈಗೊಳ್ಳಬೇಕು’ ಎಂದರು.

ಯೋಜನೆಯ ಕುರಿತು ಹೆಚ್ಚಿನ ಅರಿವು ಮೂಡಿಸಲು ಗ್ರಾ.ಪಂ ಮಟ್ಟದಲ್ಲಿ ಗೋಡೆ ಚಿತ್ರಬರಹ, ಪೋಸ್ಟರ್‍ಗಳು, ಜಾಥಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಕೇಂದ್ರ ಸರ್ಕಾರದ ಜಲಶಕ್ತಿ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ವಿಶಾಲ್ ಪ್ರತಾಪ್ ಸಿಂಗ್, ‘ಜಲ ಸಂರಕ್ಷಣೆ ಕುರಿತು ವಿಶ್ವಸಂಸ್ಥೆ ಜೊತೆ ಭಾರತ ದೇಶವು ಬದ್ಧತೆ ಹೊಂದಿದ್ದು, ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಜಲಾಮೃತ ಅಭಿಯಾನದಡಿ ಆಂದೋಲನದ ರೀತಿಯಲ್ಲಿ ಜಲ ಸಂರಕ್ಷಣೆ ಕಾರ್ಯ ನಡೆಯಲಿದೆ. ಜಿಲ್ಲೆಯು ಟಾಪ್ 20ನೇ ಸ್ಥಾನದಲ್ಲಿದೆ. ಇನ್ನೂ ಉತ್ತಮ ಸಾಧನೆ ಮಾಡಬೇಕು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ‘ಮುಂದಿನ ದಿನಗಳಲ್ಲಿ ನೀರಿನ ವಾಟರ್ ಟೇಬಲ್ ಮಟ್ಟ ಕಡಿಮೆಯಾಗುತ್ತಿದ್ದು, ಇದರ ಮರು ಪೂರಣಕ್ಕಾಗಿ ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಎಲ್ಲಾ ಅಧಿಕಾರಿಗಳು ಮಳೆ ನೀರು ಸಂಗ್ರಹ ಆರಂಭಿಸಬೇಕು’ ಎಂದು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ವಿಜ್ಞಾನಿ ಡಾ.ಡೇವಿತ್ ರಾಜ್, ಡಿಎಚ್‍ಒ ಡಾ. ರಾಘವೇಂದ್ರಸ್ವಾಮಿ, ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್ ಬೊಮ್ಮನ್ನರ್, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ದೂಡಾ ಆಯುಕ್ತ ಆದಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು