ಶನಿವಾರ, ಫೆಬ್ರವರಿ 29, 2020
19 °C
ಟ್ರಕ್‌ ಅಪಘಾತ: ಮಾಲೀಕನಿಗೆ ₹ 15 ಸಾವಿರ ಪರಿಹಾರ ಕೊಡಿಸಿದ ಗ್ರಾಹಕರ ವೇದಿಕೆ

₹2.05 ಲಕ್ಷ ನಷ್ಟ ಭರಿಸಲು ಆದೇಶ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ದಾವಣಗೆರೆ: ವಿಮಾ ಪಾಲಿಸಿ ಚಾಲ್ತಿಯಲ್ಲಿದ್ದರೂ ಅಪಘಾತದಿಂದ ವಾಹನಕ್ಕಾದ ನಷ್ಟವನ್ನು ಭರಿಸಲು ಸತಾಯಿಸುತ್ತಿದ್ದ ಚೋಲಮಂಡಲಂ ಎಂ.ಎಸ್‌. ಜನರಲ್‌ ಇನ್ಶೂರನ್ಸ್‌ ಕಂಪನಿಗೆ ಜಿಲ್ಲಾ ಗ್ರಾಹಕರ ವಾಜ್ಯಗಳ ಪರಿಹಾರ ವೇದಿಕೆ ಚಾಟಿಏಟು ನೀಡಿದೆ. ಅಪಘಾತವಾದ ದಿನದಿಂದ ಶೇ 9 ಬಡ್ಡಿಯನ್ನೂ ಸೇರಿಸಿ ₹2.05 ಲಕ್ಷವನ್ನು ವಾಹನ ಮಾಲೀಕರಿಗೆ ಪಾವತಿಸಬೇಕು ಎಂದು ವೇದಿಕೆಯು ಆದೇಶಿಸಿದೆ.

ವಾಹನ ಮಾಲೀಕರಾದ ಶಿವಮೊಗ್ಗದ ನವುಲೆಯ ಎಸ್‌.ಆರ್‌. ರಮೇಶ್‌ ಅವರಿಗೆ ಮಾನಸಿಕ ಹಿಂಸೆ ಕೊಟ್ಟಿರುವುದಕ್ಕೆ ₹10 ಸಾವಿರ ಹಾಗೂ ದಾವೆಗೆ ಮಾಡಿದ ವೆಚ್ಚ ಭರಿಸಲು ₹5,000ವನ್ನು ಪರಿಹಾರ ರೂಪದಲ್ಲಿ 45 ದಿನಗಳ ಒಳಗೆ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ ಹಾಗೂ ಸದಸ್ಯೆ ಜ್ಯೋತಿ ರಾದೇಶ್‌ ಜಂಬಗಿ ಒಳಗೊಂಡ ಪೀಠವು ನಿರ್ದೇಶನ ನೀಡಿದೆ.

ಪ್ರಕರಣದ ವಿವರ: ರಮೇಶ್‌ ಅವರು ಟಾಟಾ ಕಂಪನಿಯ 407 ಟ್ರಕ್‌ಗೆ ಚೋಲಮಂಡಲಂ ಎಂ.ಎಸ್‌. ಜನರಲ್‌ ಇನ್ಶೂರನ್ಸ್‌ ಕಂಪನಿಯಿಂದ 2017ರ ಮೇ 3ರಿಂದ ಒಂದು ವರ್ಷದ ಅವಧಿಗೆ ವಾಹನ ವಿಮೆ ಮಾಡಿಸಿದ್ದರು. 2018ರ ಫೆಬ್ರುವರಿ 7ರಂದು ಗೋಪಗೊಂಡನಹಳ್ಳಿ ಬಳಿ ಹೊನ್ನಾಳಿ–ಶಿವಮೊಗ್ಗ ರಸ್ತೆಯಲ್ಲಿ ಟೈರ್‌ ಸ್ಫೋಟಗೊಂಡು, ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನ ನಜ್ಜುಗುಜ್ಜಾಗಿತ್ತು.

ಈ ಬಗ್ಗೆ ವಿಮಾ ಕಂಪನಿಗೆ ಮಾಹಿತಿ ನೀಡಿದ್ದ ರಮೇಶ್‌ ಅವರು, ಅಪಘಾತದಿಂದ ₹6,14,620 ನಷ್ಟವಾಗಿದೆ ಎಂದು ಅಂದಾಜು ಪಟ್ಟಿ ತಯಾರಿಸಿ, ನಷ್ಟ ಭರಿಸಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ವಿಮಾ ಕಂಪನಿಯು ಇಂಡಿಪೆಂಡೆಂಟ್‌ ಸರ್ವೆಯರ್‌ ಮೂಲಕ ಪರಿಶೀಲನೆ ನಡೆಸಿದಾಗ, ₹3,45,499 ನಷ್ಟವಾಗಿದೆ ಎಂದು ಆತ ವರದಿ ನೀಡಿದ್ದ. ಇದರ ನಡುವೆ ವಿಮಾ ಕಂಪನಿಯು ವಾಹನದ ಅವಶೇಷಗಳನ್ನು ಮಾರಾಟ ಮಾಡಿ ಬಂದ ₹45 ಸಾವಿರವನ್ನು ಮಾಲೀಕರಿಗೆ ನೀಡಿತ್ತು. ಆದರೆ, ವಾಹನದ ಪರವಾನಗಿಯ ಮೂಲಪ್ರತಿಯನ್ನು ನೀಡಲಿಲ್ಲ ಎಂಬ ಕಾರಣ ನೀಡಿ ಬಾಕಿ ಹಣವನ್ನು ಕೊಡಲು ತಕರಾರು ತೆಗೆದಿತ್ತು. ಹೀಗಾಗಿ ರಮೇಶ್‌ ಅವರು 2019ರ ಮೇ 29ರಂದು ಗ್ರಾಹಕರ ವೇದಿಕೆಯ ಮೆಟ್ಟಿಲನ್ನೇರಿದ್ದರು.

ವಿಮಾ ಕಂಪನಿಯ ದಾವಣಗೆರೆ ಕಚೇರಿ ಹಾಗೂ ಚೆನ್ನೈನ ಪ್ರಧಾನ ಕಚೇರಿಯನ್ನು ಪ್ರತಿವಾದಿಗಳನ್ನಾಗಿ ಮಾಡಿದ್ದರು. ಅರ್ಜಿದಾರರ ಪರ ವಕೀಲ ಕೆ.ಎನ್‌. ರಾಘವೇಂದ್ರ ಅವರು, ತಮ್ಮ ಕಕ್ಷಿದಾರನಿಗೆ ಆಗಿರುವ ನಷ್ಟವನ್ನು ವಿಮಾ ಕಂಪನಿ ಭರಿಸಿಕೊಡಬೇಕು ಎಂದು ವಾದ ಮಂಡಿಸಿದ್ದರು.

ಇದಕ್ಕೆ ಪ್ರತಿಯಾಗಿ ಕಂಪನಿಯ ವಕೀಲರು, ‘ಅಪಘಾತ ನಡೆದ ಸಮಯದಲ್ಲಿ ವಾಹನದ ವಿಮಾ ಮೊತ್ತವು ₹2.50 ಲಕ್ಷ ಮಾತ್ರ ಇತ್ತು. ಅಪಘಾತದ ಬಗ್ಗೆ ಮಾಹಿತಿ ಬಂದ ಬಳಿಕ ಕಂಪನಿಯು ಸರ್ವೇಯರ್‌ ಮೂಲಕ ಪರಿಶೀಲನೆ ನಡೆಸಿ ವಾಹನಕ್ಕಾದ ನಷ್ಟದ ವರದಿಯನ್ನು ತರಿಸಿಕೊಳ್ಳಲಾಗಿದೆ. ಆದರೆ, ಅರ್ಜಿದಾರರು ವಾಹನದ ಪರವಾನಗಿಯ ಮೂಲಪ್ರತಿಯನ್ನು ಇದುವರೆಗೂ ನೀಡಿಲ್ಲ. ಹೀಗಾಗಿ ನಿಯಮಾನುಸಾರ ಪರಿಹಾರ ಕೊಟ್ಟಿಲ್ಲ. ನಮ್ಮಿಂದ ಸೇವಾಲೋಪವಾಗಿಲ್ಲ’ ಎಂದು ವಾದ ಮಂಡಿಸಿದ್ದರು.

ಆದರೆ, ದಾಖಲೆಗಳನ್ನು ಪರಿಶೀಲಿಸಿದ ಗ್ರಾಹಕರ ವೇದಿಕೆಯು, ‘ಪಾಲಿಸಿ ಚಾಲ್ತಿಯಲ್ಲಿರುವುದರಿಂದ ವಿಮಾ ಮೊತ್ತ ₹2.50 ಲಕ್ಷ ಅನ್ನು ಪಾವತಿಸುವುದು ಕಂಪನಿಯ ಜವಾಬ್ದಾರಿ. ಬಾಕಿ ಉಳಿದಿರುವ ₹2.05 ಲಕ್ಷವನ್ನು ಪಾವತಿಸದೆ ಇರುವುದರಿಂದ ಸೇವಾಲೋಪವಾಗಿದೆ. ಹೀಗಾಗಿ ಪ್ರತಿವಾದಿಗಳು ವಾಹನ ಮಾಲೀಕರಿಗೆ ಪರಿಹಾರ ನೀಡಬೇಕು’ ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)