ಭಾನುವಾರ, ಜೂನ್ 13, 2021
21 °C
ಒಬ್ಬರಿಂದ ಮನೆಯ ಎಲ್ಲ ಸದಸ್ಯರಿಗೆ ಹರಡುತ್ತಿದೆ ಸೋಂಕು

ಹೋಂ ಐಸೊಲೇಶನ್‌ನಿಂದಲೂ ಕೊರೊನಾ ಹೆಚ್ಚಳ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆಸ್ಪತ್ರೆಗಳಲ್ಲಿ ಬೆಡ್‌ ಭರ್ತಿಯಾಗುವುದನ್ನು ತಪ್ಪಿಸಲು ಸೋಂಕು ಇದ್ದು, ಗಂಭೀರ ಪರಿಸ್ಥಿತಿ ಇಲ್ಲದವರನ್ನು ಮನೆಯಲ್ಲೇ ಇರಲು ಹೇಳಿ ಕಳುಹಿಸಲಾಗುತ್ತಿದೆ. ಆದರೆ ಐಸೊಲೇಶನ್‌ ಪರಿಣಾಮಕಾರಿ ಯಾಗದೇ ಮನೆ ಮಂದಿಗೆಲ್ಲ ಸೋಂಕು ಹರಡುತ್ತಿದೆ.

ಹೋಂ ಐಸೊಲೇಶನ್‌ ಅಂದರೆ ಮನೆಯಲ್ಲಿ ಎಲ್ಲರ ಜತೆಗೆ ಇರುವುದಲ್ಲ. ಪ್ರತ್ಯೇಕ ಕೊಠಡಿಯಲ್ಲಿ ಎಲ್ಲರ ಸಂಪರ್ಕದಿಂದ ದೂರವಾಗಿ ಉಳಿಯಬೇಕು. ಆದರೆ ಹೋಂ ಐಸೊಲೇಶನ್‌ನಲ್ಲಿ ಇರುವವರು ಈ ನಿಯಮ ಪಾಲನೆ ಮಾಡದೇ ಎಲ್ಲೆಂದ ರಲ್ಲಿ ಅಡ್ಡಾಡುತ್ತಿದ್ದಾರೆ. ಇದರಿಂದ ಅವರ ಸಂಪರ್ಕಿತರಿಗೆಲ್ಲ ಸೋಂಕು ಬರುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಜೆ.ಎಚ್‌. ಪಟೇಲ್‌ ಬಡಾವಣೆ, ಬಾಡ ಕ್ರಾಸ್‌ ಸಹಿತ ವಿವಿಧೆಡೆ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಮಾಡಲಾಗಿದೆ. ಆದರೆ ಗಂಭೀರ ಸಮಸ್ಯೆ ಇಲ್ಲದ ಸೋಂಕಿತರು ಕೋವಿಡ್ ಕೇರ್‌ ಸೆಂಟರ್‌ಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಡ್‌ಗಾಗಿ ಪರದಾಟ: ಬೆಡ್‌ ಸಿಗದೇ ಅಲೆದಾಡುವವರ ಗೋಳು ನಿತ್ಯ ಮುಂದುವರಿದಿದೆ. ಯಾವುದೇ ಆಸ್ಪತ್ರೆಗಳಿಗೆ ಹೋದರೂ ಬೆಡ್‌ ಸಿಗುತ್ತಿಲ್ಲ. ಬೇತೂರು ರಸ್ತೆ ನಿವಾಸಿ ರತ್ನಮ್ಮ ಎಂಬುವರು ಬೆಡ್‌ ಇಲ್ಲದೇ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಮುಂದೆ ಕಲ್ಲಿನ ಮೇಲೆ ಮಲಗಿದ್ದರು. ‘ಬೆಡ್‌ ಇಲ್ಲ. ಮಾತ್ರೆ ಬರೆದುಕೊಡುತ್ತೇನೆ. ಮನೆಗೆ ಹೋಗಿ ಎಂದು ಡಾಕ್ಟ್ರು ಹೇಳಿದ್ದಾರೆ. ಆ ಚೀಟಿ ತರಲು ಮಗಳು ಹೋಗಿದ್ದಾಳೆ. ನನಗೆ ಕುಳಿತುಕೊಳ್ಳಲೂ ಆಗದೇ ಮಲಗಿದ್ದೇನೆ’ ಎಂದು ರತ್ನಮ್ಮ ಪರಿಸ್ಥಿತಿಯನ್ನು ವಿವರಿಸಿದರು.

ಇಂಥ ಘಟನೆಗಳು ನಿತ್ಯ ನಡೆಯುತ್ತಿವೆ. ಆಟೊ, ಆಂಬುಲೆನ್ಸ್‌ಗಳಲ್ಲಿ ಬಂದು ಖಾಸಗಿ ಆಸ್ಪತ್ರೆಗಳ ಮುಂದೆ ಕಾಯುತ್ತಿರುವ ದೃಶ್ಯಗಳು ಕಂಡುಬರುತ್ತಿವೆ.

‘ನಮ್ಮಲ್ಲಿ ಬೆಡ್‌ ಕೊರತೆ ಇಲ್ಲ. ಗಂಭೀರ ಕಾಯಿಲೆಗಳಿರುವವರಿಗೆ ಬೆಡ್‌ ಸಿಗುತ್ತಿದೆ. ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಇದೆಯೇ ಇಲ್ಲವೇ ಎಂಬುದನ್ನು ನೋಡಲು ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯ ಆಮ್ಲಜನಕ ಬೆಡ್‌ಗಳಿವೆ. ಆಮ್ಲಜನಕದ ಕೊರತೆ ಕೂಡ ಇಲ್ಲ’ ಎಂದು ಮಹಾಂತೇಶ ಬೀಳಗಿ ಸ್ಪಷ್ಟಪಡಿಸಿದ್ದಾರೆ.

ರೆಮ್‌ಡಿಸಿವಿರ್ ಕೊರತೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಲ್ಲಿ ಅವಶ್ಯ ಇರುವವರಿಗೆ ವೈದ್ಯರು ರೆಮ್‌ಡಿಸಿವಿರ್ ಶಿಫಾರಸು ಮಾಡಿದರೂ ಇಂಜೆಕ್ಷನ್‌ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಜಯನಗರದ ಫಕ್ರುದ್ದೀನ್‌, ಸಿ.ಜಿ. ಆಸ್ಪತ್ರೆಯಲ್ಲಿ ದಾಖಲಾಗಿರುವ ಮೋಹನ್‌ ಸಹಿತ ಹಲವು ರೋಗಿಗಳು ರೆಮ್‌ಡಿಸಿವಿರ್‌ ಸಿಗದೇ ಒದ್ದಾಡುತ್ತಿದ್ದಾರೆ ಎಂದು ಅವರ ಸಂಬಂಧಿಗಳು ಮಾಹಿತಿ ನೀಡಿದ್ದಾರೆ.

ಲಸಿಕೆಗೆ ಮುಂದುವರಿದ ಬೇಡಿಕೆ

ಕೊರೊನಾ ಲಸಿಕೆ ಹಾಕಲು ಜನರು ಉತ್ಸುಕರಾಗಿದ್ದರೂ ಬೇಡಿಕೆಗೆ ಸರಿಯಾಗಿ ಲಸಿಕೆ ಪೂರೈಕೆಯಾಗುತ್ತಿಲ್ಲ. ಎರಡನೇ ಡೋಸ್‌ ಪಡೆಯುವವರಿಗೆ ಮಾತ್ರ ಈಗ ಅವಕಾಶ ನೀಡಲಾಗಿದೆ. ಆದರೆ ಎರಡನೇ ಡೋಸ್‌ ಕೂಡ ಬೇಕಾದಷ್ಟು ಇಲ್ಲದೇ ಜನ ವಾಪಸಾಗುತ್ತಿದ್ದಾರೆ.

ಪ್ರತಿದಿನ ಇಂತಿಷ್ಟೇ ಎಂದು ಟೋಕನ್‌ ನೀಡಿ ಲಸಿಕೆ ವಿತರಣೆ ಮಾಡಲಾ ಗುತ್ತಿದೆ. ಈ ಟೋಕನ್‌ ಪಡೆಯಲು ಜನರು ಯಾವುದೇ ಅಂತರ ಇಲ್ಲದೇ ಮುಗಿಬೀಳುತ್ತಿದ್ದಾರೆ.

‘ಬೇಡಿಕೆಯಷ್ಟು ಲಸಿಕೆ ಪೂರೈಸಲು ಸರ್ಕಾರದ ಜತೆಗೆ ನಿರಂತರ ಸಂಪರ್ಕದ ಲ್ಲಿದ್ದೇವೆ. 18 ವರ್ಷದ ಮೇಲಿನವರಿಗೂ ಲಸಿಕೆ ನೀಡುವ ಬಗ್ಗೆ ಸರ್ಕಾರದ ಜತೆ ಮಾತುಕತೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು