ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ’ ಮುಳ್ಳಿಗೆ ಬದುಕಿನ ಬಂಡಿಯೇ ಪಂಕ್ಚರ್‌

ಸರಕು ಸಾಗಾಣಿಕೆ ವಾಹನ ಸಂಚಾರ ಬಂದ್‌: ನಿತ್ಯ ₹ 40 ಲಕ್ಷ ನಷ್ಟ
Last Updated 24 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕಿನ ಭೀತಿಯ ಪರಿಣಾಮ ಸರಕು ಸಾಗಾಣಿಕೆ ವಾಹನಗಳ ವಹಿವಾಟು ನೆಲಕಚ್ಚಿದೆ. ಲಾರಿ, ಮಿನಿ ಲಾರಿಗಳ ಮಾಲೀಕರು ಹಾಗೂ ಚಾಲಕರ ಬದುಕಿನ ಬಂಡಿಯ ಚಕ್ರಗಳನ್ನು ‘ಕೊರೊನಾ ಮುಳ್ಳು’ ಪಂಕ್ಚರ್‌ ಮಾಡಿದೆ.

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರವು ರಾಜ್ಯದಾದ್ಯಂತ ‘ಲಾಕ್‌ಡೌನ್‌’ ಮಾಡಿರುವುದಕ್ಕೆ ಬೆಂಬಲ ಸೂಚಿಸಿ ಲಾರಿಗಳ ಸಂಚಾರವನ್ನು ಬಂದ್‌ ಮಾಡಿರುವ ಮಾಲೀಕರು ಹಾಗೂ ಚಾಲಕರಿಗೆ ಜೀವನ ನಡೆಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.

ನಗರದ ಆರ್‌.ಎಂ.ಸಿ. ಲಿಂಕ್‌ ರಸ್ತೆ, ಪುಷ್ಪಾಂಜಲಿ ಟಾಕೀಸ್‌ ರಸ್ತೆಯಲ್ಲಿ ಲಾರಿ ಹಾಗೂ ಮಿನಿ ಲಾರಿಗಳು ಸಾಲುಗಟ್ಟಿ ನಿಂತಿವೆ. ‘ಯುಗಾದಿ’ ಅಮಾವಾಸ್ಯೆಯಾಗಿದ್ದರಿಂದ ಮಂಗಳವಾರ ನಿರ್ಬಂಧದ ನಡುವೆಯೂ ಕೆಲ ಲಾರಿಗಳ ಮಾಲೀಕರು ಹಾಗೂ ಚಾಲಕರು ಇಲ್ಲಿಗೆ ಬಂದು ತಮ್ಮ ವಾಹನಗಳನ್ನು ತೊಳೆದು ಪೂಜೆ ಸಲ್ಲಿಸಿ ಮನೆಗೆ ಮರಳುತ್ತಿದ್ದ ದೃಶ್ಯ ಕಂಡುಬಂತು.

‘ಕೊರೊನಾ ಭೀತಿಯಿಂದಾಗಿ ಸರಕುಗಳನ್ನು ಸಾಗಿಸಲು ಯಾರೂ ಆಹ್ವಾನ ನೀಡುತ್ತಿಲ್ಲ. ಹತ್ತು ದಿನಗಳಿಂದ ದುಡಿಮೆಯೇ ಇಲ್ಲದಂತಾಗಿದೆ. ದೇಶದ ಎಲ್ಲಾ ಉದ್ಯಮಗಳಿಗೂ ಈಗ ಕಷ್ಟ ಕಾಲ ಬಂದಿದೆ’ ಎಂದು ನಗರದ ಮಿನಿ ಲಾರಿ ಚಾಲಕ ಮೃತ್ಯುಂಜಯ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಯುಗಾದಿ ಅಮಾವಾಸ್ಯೆಯಾಗಿದ್ದರಿಂದ ಗಾಡಿ ಪೂಜೆ ಮಾಡೋಣ ಎಂದು ಬಂದಿದ್ದೇನೆ. ದಾವಣಗೆರೆ ಸುರಕ್ಷಿತ ತಾಣವಾಗಿದೆ. ನಾವು ಹೊರ ರಾಜ್ಯಗಳಿಗೆ ತೆರಳಿ ಸೋಂಕು ಅಂಟಿಸಿಕೊಂಡು ಬರುವುದಕ್ಕಿಂತ ಆರೋಗ್ಯ ಕಾಪಾಡಿಕೊಳ್ಳುವ ದೃಷ್ಟಿಯಿಂದ ಮನೆಯಲ್ಲೇ ಇರುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

‘ಸುಮಾರು ಒಂದು ತಿಂಗಳಿಂದ ಹೊರ ರಾಜ್ಯಗಳಿಗೆ ಸರಕು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಈಗ ಜಿಲ್ಲೆಯಲ್ಲೂ ಸಂಚರಿಸಲು ನಿರ್ಬಂಧ ಹೇರಲಾಗಿದೆ. ಇನ್ನೂ ಎಷ್ಟು ದಿನಗಳ ಕಾಲ ಹೀಗೆ ಕಳೆಯಬೇಕೋ? ಸಾಲ ಮಾಡಿ ಖರೀದಿಸಿದ ವಾಹನಕ್ಕೆ ಪ್ರತಿ ತಿಂಗಳು ₹ 25 ಸಾವಿರ ಕಂತು ಕಟ್ಟಬೇಕಾಗಿದೆ. ಇದಕ್ಕೆ ಹಣವನ್ನು ಹೇಗೆ ಹೊಂದಿಸಬೇಕು ಎಂಬ ಚಿಂತೆ ಕಾಡುತ್ತಿದೆ’ ಎಂದು ಐಷರ್‌ ಮಿನಿ ಲಾರಿಯ ಮಾಲೀಕ ಬಸವರಾಜ್‌ ಆತಂಕ ವ್ಯಕ್ತಪಡಿಸಿದರು.

ದಾವಣಗೆರೆಯ ಗೂಡ್‌ಶೆಡ್‌ನಲ್ಲಿ 150ಕ್ಕೂ ಹೆಚ್ಚು ಮಿನಿ ಲಾರಿಗಳಿವೆ. ಹಣ್ಣು, ಶೇಂಗಾ, ಮನೆಗಳ ಸಾಮಗ್ರಿಗಳನ್ನು ಹೆಚ್ಚಾಗಿ ಸಾಗಿಸುತ್ತಿದ್ದ ಇವು ಈಗ ಸ್ತಬ್ಧವಾಗಿ ನಿಂತಿವೆ.

ದಿನಕ್ಕೆ ₹ 40 ಲಕ್ಷ ನಷ್ಟ

‘ಜಿಲ್ಲೆಯಲ್ಲಿ ಸುಮಾರು 2,500 ಲಾರಿಗಳಿವೆ. ಗೊಬ್ಬರ, ಮೆಕ್ಕೆಜೋಳ, ಅಕ್ಕಿ ಸೇರಿ ಹಲವು ಸಾಮಗ್ರಿಗಳನ್ನು ಹೊರ ರಾಜ್ಯಗಳಿಗೆ ಸಾಗಿಸಲಾಗುತ್ತಿತ್ತು. 20 ದಿನಗಳಿಂದ ಹೊರ ರಾಜ್ಯಗಳಿಗೆ ಹೋಗಲು ಆಗುತ್ತಿಲ್ಲ. ಚಾಲಕರೂ ಭಯ ಪಡುತ್ತಿದ್ದಾರೆ. ಹೊರಗಡೆ ಹೋದರೂ ಊಟ, ನೀರು ಸಿಗುತ್ತದೆ ಎಂಬ ಖಾತ್ರಿ ಇಲ್ಲ. ಹೀಗಾಗಿ ಲಾರಿಗಳ ಸಂಚಾರವನ್ನು ನಿಲ್ಲಿಸಿದ್ದೇವೆ. ಇದರಿಂದ ಪ್ರತಿ ದಿನ ಜಿಲ್ಲೆಯಲ್ಲಿ ಅಂದಾಜು ₹ 40 ಲಕ್ಷದಿಂದ ₹ 50 ಲಕ್ಷ ನಷ್ಟವಾಗುತ್ತಿದೆ’ ಎಂದು ದಾವಣಗೆರೆ ಲೋಕಲ್‌ ಮತ್ತು ಗೂಡ್ಸ್‌ ಶೆಡ್‌ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ. ದಾದಾಪೀರ್‌ ತಿಳಿಸಿದರು.

‘ಸಾಲದ ಕಂತು ಪಾವತಿಸುವಂತೆ ಬ್ಯಾಂಕ್‌ನವರು ನೋಟಿಸ್‌ ನೀಡುತ್ತಿದ್ದಾರೆ. ಲಾರಿ ಜಪ್ತಿ ಮಾಡಲು ಮುಂದಾದರೆ, ಚಾಲಕರು ಹಣ ಗಳಿಸಲು ಹೊರಗಡೆ ಹೋಗುತ್ತಾರೆ. ಅದರಿಂದ ಕೊರೊನಾ ಸೋಂಕನ್ನು ನಮ್ಮ ಊರಿಗೂ ತಂದಂತಾಗುತ್ತದೆ. ವಹಿವಾಟು ನಡೆಯದೇ ಇರುವುದರಿಂದ ಸಾಲಕ ಕಂತು ಕಟ್ಟಲು ಎರಡು ತಿಂಗಳ ಕಾಲಾವಕಾಶ ನೀಡಬೇಕು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ನಗರಕ್ಕೆ ಬಂದ ಗೊಬ್ಬರದ ವ್ಯಾಗನ್‌

‘ಬಾತಿಯ ಗೂಡ್ಸ್‌ಶೆಡ್‌ಗೆ ರಸಗೊಬ್ಬರ ಹೇರಿಕೊಂಡು ಎರಡು ಗೂಡ್ಸ್‌ ರೈಲಿನ ವ್ಯಾಗನ್‌ಗಳು ಬಂದಿವೆ. ಸುಮಾರು 300 ಲೋಡ್‌ ಗೊಬ್ಬರ ಇದೆ. ಸಂಚಾರ ನಿರ್ಬಂಧ ಹೇರಿರುವುದರಿಂದ ಗೋದಾಮಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಗೊಬ್ಬರವನ್ನು ಗೋದಾಮಿಗೆ ಸಾಗಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ’ ಎಂದು ಎಂ. ದಾದಾಪೀರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT