ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ 9 ಆಗುತ್ತಿದ್ದಂತೆ ಟೆನ್ಶನ್‌ ಆರಂಭ: ಡಾ. ನಟರಾಜ್‌

ಕ್ವಾರಂಟೈನ್‌ ಕೇಂದ್ರಗಳ ಜವಾಬ್ದಾರಿ
Last Updated 19 ಜೂನ್ 2020, 7:19 IST
ಅಕ್ಷರ ಗಾತ್ರ

ದಾವಣಗೆರೆ: ‘ರಾತ್ರಿ 9 ಆಗುತ್ತಿದ್ದಂತೆ ಟೆನ್ಶನ್‌ ಶುರುವಾಗುತ್ತಿತ್ತು. ಯಾಕೆಂದರೆ ಆನಂತರವೇ ಯಾರಿಗೆ ಕೊರೊನಾ ಸೋಂಕು ಬಂದಿದೆ ಎಂಬ ಮಾಹಿತಿ ಜಿಲ್ಲಾಡಳಿತಕ್ಕೆ ಬರುತ್ತಿತ್ತು. ಎಷ್ಟಿದೆಯೋ, ಎಲ್ಲಿದೆಯೋ ಎಂಬುದೇ ಚಿಂತೆಗೆ ಕಾರಣವಾಗುತ್ತಿತ್ತು. ಮಾಹಿತಿ ಬಂದ ಮೇಲೆ ಕೊರೊನಾ ಸೋಂಕಿತರನ್ನು, ಅವರ ಸಂಪರ್ಕಿತರನ್ನು ಕರೆ ತರುವ ಕೆಲಸ ಆರಂಭವಾಗುತ್ತಿತ್ತು’.

ಆಸ್ಪತ್ರೆಗೆ, ಲಾಡ್ಜ್‌ಗಳಿಗೆ ಶಂಕಿತರನ್ನು, ಸೋಂಕಿತರನ್ನು ಕರೆ ತರುವ ಜವಾಬ್ದಾರಿ ಹೊತ್ತ ವಾರಿಯರ್‌ ಡಾ.ನಟರಾಜ್‌ ‘ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ..’ ಎಂಬಂತೆ ರಾತ್ರಿ ಕಾರ್ಯಾಚರಣೆಯನ್ನು ವಿವರಿಸಿದರು.

‘ವಿದೇಶದಿಂದ ಬಂದ ಮೂರು ಪ್ರಕರಣಗಳ ಬಳಿಕ ಜಿಲ್ಲೆಯಲ್ಲಿ ಬೇರೆ ಪ್ರಕರಣ ಲಾಕ್‌ಡೌನ್‌ ಆರಂಭದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಜಿಲ್ಲೆಯ 523 ಪ್ರಕರಣಗಳು ಬರುವ ಸಾಧ್ಯತೆ ಇದೆ ಎಂಬ ಅಂದಾಜು ಮಾಹಿತಿಯನ್ನು ಬೆಂಗಳೂರಿನಿಂದ ನೀಡಲಾಗಿತ್ತು. ಅಷ್ಟು ಪ್ರಕರಣ ಬಂದರೆ ನಿರ್ವಹಿಸಲು ಎಷ್ಟು ಸಿಬ್ಬಂದಿ ಬೇಕು? ಏನೆಲ್ಲ ಪರಿಕರ ಬೇಕು? ಯಾರಿಗೆ ಯಾವ ಜವಾಬ್ದಾರಿ? ಎಂದೆಲ್ಲ ಒಂದು ಯೋಜನೆ (ಕಾಂಟಿಂಗೆನ್ಸಿ ಪ್ಲಾನ್‌) ತಯಾರಿಸಬೇಕಿತ್ತು. ಜಿಲ್ಲಾಧಿಕಾರಿ, ಎಡಿಸಿ, ಸಿಇಒ ಮಾರ್ಗದರ್ಶನದಲ್ಲಿ ಆ ಜವಾಬ್ದಾರಿಯನ್ನು ನನಗೆ ನೀಡಿದ್ದರು. ಆನಂತರ ಏಪ್ರಿಲ್‌ ಕೊನೆಗೆ ಪ್ರಕರಣಗಳು ಕಾಣಿಸಿಕೊಳ್ಳತೊಡಗಿದಾಗ ಕ್ವಾರಂಟೈನ್‌ ಸೆಂಟರ್‌ಗಳ ಜವಾಬ್ದಾರಿಯನ್ನು ಸಿಇಒ ಅವರ ಮೇಲ್ವಿಚಾರಣೆಯಲ್ಲಿ ನನಗೆ ಮತ್ತು ಡಾ. ಗಂಗಾಧರ್‌ಗೆ ನೀಡಿದರು. ಬಳಿಕ ಗಂಗಾಧರ್‌ಗೆ ಬೇರೆ ಜವಾಬ್ದಾರಿ ವಹಿಸಲಾಯಿತು’ ಎಂದು ಮಾಹಿತಿ ನೀಡಿದರು.

ಕ್ವಾರಂಟೈನ್‌ ಸೆಂಟರ್‌ಗಳಿಗೆ ಜನರನ್ನು ನಮ್ಮ ಜತೆ ಡಾ. ರಾಘವನ್‌ ಇರುತ್ತಿದ್ದರು. ಡಾ. ವೆಂಕಟೇಶ್‌, ನವೀನ್‌, ಲೋಕೇಶ್‌ ಮತ್ತಿತರರು ಇದ್ದ ನಮ್ಮ ತಂಡ ರಾತ್ರಿ ಕೆಲಸ ಮಾಡುತ್ತಿತ್ತು. ಕ್ವಾರಂಟೈನ್‌ ಮಾಡಿದವರಿಗೆ ಔಷಧ, ಊಟೋಪಚಾರ ನೋಡಿಕೊಳ್ಳಬೇಕಿತ್ತು. ನಮಗೆ ಅನನುಕೂಲ ಆಗದಿರಲು ಅಗತ್ಯ ಆದೇಶಗಳನ್ನು ಎಡಿಸಿ ಹೊರಡಿಸುತ್ತಿದ್ದರು. ಅಗತ್ಯ ಇರುವ ಲಾಡ್ಜ್‌ಗಳನ್ನು ಪಾಲಿಕೆ ಆಯುಕ್ತರು ಬಿಡಿಸಿಕೊಡುತ್ತಿದ್ದರು. ಬಿಸಿಎಂ ಹಾಸ್ಟೆಲ್‌ಗಳನ್ನು ಅಧೀಕ್ಷಕ ಗಂಗಪ್ಪ ಬಿಡಿಸಿಕೊಡುತ್ತಿದ್ದರು ಎಂದು ತಿಳಿಸಿದರು.

ಹೆತ್ತವರಿಗೆ ಸೋಂಕಿದ್ದು, ಮಕ್ಕಳಿಗಿಲ್ಲದ, ಮಕ್ಕಳಿಗೆ ಸೋಂಕಿದ್ದು, ಹೆತ್ತವರಿಗಿಲ್ಲದ ಪ್ರಕರಣಗಳನ್ನು ನಿಭಾಯಿಸುವುದು ಬಹಳ ಕಷ್ಟ. ಡಾ.ರುದ್ರಸ್ವಾಮಿ ಒಂದು ಅಂಗಡಿಯನ್ನು ತೆರೆಸಿ ಬ್ರೆಡ್‌ ಬಿಸ್ಕೆಟ್‌ ಒದಗಿಸುತ್ತಿದ್ದರು. ನಿರ್ಮಿತಿ ಕೇಂದ್ರದ ರವಿ ಅವರೂ ಸಹಾಯ ಮಾಡುತ್ತಿದ್ದರು ಎಂದು ನೆನಪಿಸಿಕೊಂಡರು.

‘ಎಲ್ಲ ಇಲಾಖೆಯವರು ಪರಸ್ಪರ ಸಹಕಾರದಿಂದ, ಒಗ್ಗಟ್ಟಿನಿಂದ, ಒಂದು ಕುಟುಂಬದಂತೆ ಕೆಲಸ ಮಾಡಲು ಕೊರೊನಾ ಕಾರಣವಾಯಿತು. ಎಲ್ಲರೂ ಸ್ನೇಹಿತರಾಗಲು ನೆಪವಾಯಿತು’ ಎಂದರು.

‘ಮಕ್ಕಳಂತೆ ಪರಿಗಣಿಸಿ ಎಂದಿದ್ದ ಡಿಸಿ’
‘ನಿಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಕಾಯಿಲೆ ಬಂದರೆ ಹೇಗೆ ನೋಡಿಕೊಳ್ಳುತ್ತೀರೋ ಹಾಗೇ ಇತರರನ್ನೂ ಪರಿಗಣಿಸಿ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆರಂಭದಲ್ಲಿಯೇ ನಮಗೆ ಸ್ಫೂರ್ತಿ ತುಂಬಿದರು. ಅದಂತೆಯೇ ಕೆಲಸ ಮಾಡುತ್ತಿದ್ದೇವೆ’ ಎಂದು ಡಾ. ನಟರಾಜ್‌ ತಿಳಿಸಿದರು.

‘ಮನೆಯಲ್ಲಿ ಪತ್ನಿ, ದ್ವಿತೀಯ ಪಿಯು ಓದುವ ಮಗಳು ಇದ್ದಾರೆ. ಅವರ ಸಹಕಾರ ಇದ್ದಿದ್ದರಿಂದ ಕೆಲಸ ಮಾಡಲು ಸಾಧ್ಯವಾಯಿತು. ಡಾ.ರಾಘವನ್‌, ಡಾ. ಗಂಗಾಧರ್‌ ಮತ್ತು ನಾನು ಏಪ್ರಿಲ್‌ ಕೊನೆಯಿಂದ ಇಲ್ಲಿಯವರೆಗೆ ವಾರಕ್ಕೆ ಒಂದೋ, ಎರಡು ಬಾರಿ ಹೋಗಿ ಬರುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಜನರ ದೃಷ್ಟಿ ಬದಲಾಗಲಿ’
ಕೊರೊನಾ ಬಂದವರನ್ನು, ಸಂಪರ್ಕದಲ್ಲಿದ್ದು, ನೆಗೆಟಿವ್‌ ಬಂದವರನ್ನು ಸಮಾಜ ನೋಡುವ ದೃಷ್ಟಿ ಬದಲಾಗಬೇಕು. ಕೊರೊನಾ ಎಂಬುದು ನಮ್ಮ ಜತೆ ಇರುವ ಇತರ ಕಾಯಿಲೆಗಳಂತೆ ಒಂದು ಎಂದು ತಿಳಿದುಕೊಳ್ಳಬೇಕು. ಕೊರೊನಾ ಅಂದರೆ ಮರಣ ಎಂದಾಗಲಿ, ಅಪರಾಧ ಎಂದಾಗಲಿ ತಿಳಿಯಬಾರದು. ಅದೊಂದು ಸಾಮಾನ್ಯ ಕಾಯಿಲೆ ಎಂಬುದು ಎಲ್ಲರಿಗೂ ಮನವರಿಕೆಯಾಗಬೇಕು ಎಂದು ಡಾ. ನಟರಾಜ್‌ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT