ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಭಯಬೇಡ, ಎಚ್ಚರವಿರಲಿ: ಎನ್.ಕೆ. ಲಿಂಗರಾಜೇಂದ್ರ

ಕೊರೊನಾ ಗೆದ್ದ ವೈದ್ಯಾಧಿಕಾರಿ
Last Updated 19 ಸೆಪ್ಟೆಂಬರ್ 2020, 4:03 IST
ಅಕ್ಷರ ಗಾತ್ರ

ನ್ಯಾಮತಿ:ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಗುಣಮುಖರಾಗಿ ಬಂದವರಲ್ಲಿ ಸಾವನ್ನೇ ಗೆದ್ದು ಬಂದ ಸಂತಸವಿದೆ.

ಕೊರೊನಾ ಸೋಂಕು ವೈದ್ಯರು, ದಾದಿಯರು, ವಾರಿಯರ್ಸ್, ಪೊಲೀಸರನ್ನು ಬಿಟ್ಟಿಲ್ಲ. ಅವರಲ್ಲಿ ಹೆಚ್ಚಿನ ಜನರು ಆತ್ಮವಿಶ್ವಾಸದಿಂದ ಕೋವಿಡ್‌ ಎದುರಿಸಿ ಗುಣಮುಖರಾಗಿ ಬಂದಿದ್ದಾರೆ.

ತಾಲ್ಲೂಕಿನ ಫಲವನಹಳ್ಳಿ ಗ್ರಾಮದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಎನ್.ಕೆ. ಲಿಂಗರಾಜೇಂದ್ರ ಅವರು ಕೋವಿಡ್‌ನಿಂದ ಶುಕ್ರವಾರ ಗುಣಮುಖರಾಗಿದ್ದು, ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಇದೊಂದು ಶೀತ ಸಂಬಂಧಿ ಕಾಯಿಲೆ. ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲದಿರುವುದು, ಸಮಾಜದಲ್ಲಿ ಈ ಕಾಯಿಲೆಯ ಬಗ್ಗೆ ಇರುವ ಭಯ, ಸಮಾಜದಲ್ಲಿ ರೋಗಿಗಳನ್ನು ನೋಡುವ ರೀತಿ, ಈ ಎಲ್ಲಾ ಆಂಶಗಳು ರೋಗಿಯ ಮನೋಸ್ಥೈರ್ಯ ಕಸಿದುಕೊಂಡು, ಭಯದಿಂದಲೇ ಕೆಲವರು ಮೃತಪಟ್ಟಿದ್ದಾರೆ ಎಂಬುದು ನನ್ನ ಅನಿಸಿಕೆ.

‘ನಾನು ಆಯುಷ್ ವೈದ್ಯನಾಗಿರುವುದರಿಂದ ಮನೋಸ್ಥೈರ್ಯ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚ್ಯವನ್‌ ಪ್ರಾಶ್‌, ಕಷಾಯ ಸೇವನೆ, ಬಿಸಿಯಾದ ಆಹಾರ ಸೇವನೆ, ದಿನಕ್ಕೆ ಮೂರು ಬಾರಿ ಕಡ್ಡಾಯವಾಗಿ ಸ್ಟೀಮ್ (ಆವಿ) ತೆಗೆದುಕೊಳ್ಳುವುದು, ಬಿಸಿ ನೀರು ಸೇವನೆ, ಪ್ರಾಣಾಯಾಮ, ಇಷ್ಟ ದೇವರ ಧ್ಯಾನ ಮಾಡುವುದನ್ನು ರೂಢಿಸಿಕೊಂಡಿದ್ದೆ. ಸಕಾರಾತ್ಮಕ ಚಿಂತನೆ ಇದ್ದ ಕಾರಣ ಬೇಗ ಗುಣಮುಖನಾಗಿದ್ದೇನೆ. ಪ್ರತಿಯೊಬ್ಬರೂ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮನಸ್ಸು ಮಾಡಿದರೆ ಕೊರೊನಾ ಹಿಮ್ಮೆಟ್ಟಿಸಬಹುದು ಎಂದರು.

‘ಆರಂಭದಲ್ಲಿ ಆತಂಕಗೊಂಡ ನನಗೆ, ಪತ್ನಿ ಡಾ. ಸ್ಮಿತಾ, ಮಗಳು ವೈಸಿರಿ, ಮಗ ಗುರುರಾಜ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಶಂಕರಗೌಡ, ಡಾ. ಸದಾಶಿವ, ಡಾ. ಸಾಲಿಮಠ, ಡಾ. ರೇವ್ಯಾನಾಯ್ಕ, ಮಿತ್ರ ದತ್ತಾತ್ರೇಯ ಅವರು ಕೊಟ್ಟ ಧೈರ್ಯ ಮರಳಿ ಜನರ ಸೇವೆಗೆ ಬರುವಂತೆ ಮಾಡಿದೆ’ ಎಂದರು. ಆರೋಗ್ಯ ಸಲಹೆ ಪಡೆಯಲು ಅವರ ಸಂಪರ್ಕ: (7892747694).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT