ಶುಕ್ರವಾರ, ಅಕ್ಟೋಬರ್ 2, 2020
21 °C
ಕೊರೊನಾ ಸೋಂಕಿನ ಎರಡೆರಡು ಚಿಕಿತ್ಸೆ ಬಗ್ಗೆ ಡಾ. ರಾಘವನ್‌ ವಿವರ

ದಾವಣಗೆರೆ | ಚಿಕಿತ್ಸೆ ಶೀಘ್ರಕ್ಕೆ ಆರ್‌ಎಟಿ ವ್ಯವಸ್ಥೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ರ‍್ಯಾಪಿಡ್‌ ಟೆಸ್ಟ್‌ ಮಾಡಿಸಿ ಅದು ನೆಗೆಟಿವ್ ಎಂದು ಬಂದರೂ ಸಂಶಯದಿಂದ ಇನ್ನೊಂದು ಟೆಸ್ಟ್‌ ಮಾಡಿಸುತ್ತಿದ್ದಾರೆ. ಇದರಿಂದ ಜನರಿಗೆ ಗೊಂದಲವಾಗುತ್ತಿದೆ’ ಎಂದು ಜನರು ಆರೋಪಿಸಿದರೆ, ‘ರೋಗಿಗಳಿಗೆ ತಕ್ಷಣಕ್ಕೆ ಚಿಕಿತ್ಸೆ ನೀಡಲು ರ‍್ಯಾಪಿಡ್‌ ಆಂಟಿಜೆನ್‌ ಟೆಸ್ಟ್‌ ಅಗತ್ಯ’ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

‘ಕೊರೊನಾ ಅಂದರೆ ಜನ ಹೆದರಿಕೊಂಡಿದ್ದಾರೆ. ಈ ಹೆದರಿಕೆಯ ಲಾಭ ಪಡೆಯಲು ಎರಡೆರಡು ಟೆಸ್ಟ್‌ಗಳನ್ನು ಮಾಡಲಾಗುತ್ತಿದೆ. ನನ್ನ ಸ್ನೇಹಿತರೊಬ್ಬರು ಅಲ್ಲಿ ರ‍್ಯಾಪಿಡ್‌ ಟೆಸ್ಟ್‌ ಮಾಡಿದರು. ನೆಗೆಟಿವ್ ಬಂತು. ಆಮೇಲೆ ಇನ್ನೊಂದು ಟೆಸ್ಟ್‌ ಮಾಡಿದಾಗ ಪಾಸಿಟಿವ್ ಬಂತು. ಇಂಥ ಹಲವು ಉದಾಹರಣೆಗಳಿವೆ. ಸರಿಯಾದ ವರದಿ ಬರುವ ಟೆಸ್ಟ್‌ ಅನ್ನೇ ಮಾಡೋದು ಬಿಟ್ಟು ಎರಡೆರಡು ಟೆಸ್ಟ್‌  ಯಾಕೆ ಮಾಡಬೇಕು’ ಎನ್ನುವುದು ಕರ್ನಾಟಕ ಯುವಶಕ್ತಿ ವೇದಿಕೆಯ ರಾಜ್ಯಾಧ್ಯಕ್ಷ ಜಿ. ಮಲ್ಲೇಶ್‌ ಅವರ ಪ್ರಶ್ನೆ.

ಸರ್ಕಾರಿ ಆಸ್ಪತ್ರೆಯಲ್ಲಿ ಆಗಿದ್ದರಿಂದ ಖರ್ಚು ಆಗಲಿಲ್ಲ. ಖಾಸಗಿ ಆಸ್ಪತ್ರೆಯವರಾದರೆ ಎರಡೆರಡು ಟೆಸ್ಟ್‌ಗೆ ಎರಡೆರಡು ಬಿಲ್ ಆಗುತ್ತಿತ್ತು. ಇದು ಖಾಸಗಿಯವರಿಗೆ ದುಡ್ಡು ಮಾಡಲು ತಂದಂತೆ ಕಾಣುತ್ತದೆ ಎನ್ನುವುದು ಅವರ ಆರೋಪ.

ಶೀಘ್ರ ಚಿಕಿತ್ಸೆ: ಕ್ಯಾನ್ಸರ್‌ ಸಹಿತ ವಿವಿಧ ರೋಗಗಳಿಂದ ಬಳಲುವವರು ಬರುತ್ತಾರೆ. ಆಗ ಆರ್‌ಎಟಿ (ರ‍್ಯಾಪಿಡ್‌ ಆಂಟಿಜೆನ್‌ ಟೆಸ್ಟ್‌) ಮಾಡಿದರೆ ಕೊರೊನಾ ಇದೆಯಾ ಇಲ್ಲವಾ ಎಂಬುದು 15 ನಿಮಿಷದಿಂದ ಅರ್ಧಗಂಟೆಯೊಳಗೆ ಗೊತ್ತಾಗಿ ಬಿಡುತ್ತದೆ. ಆರ್‌ಟಿ–ಪಿಸಿಆರ್‌ (ರಿಯಲ್‌ ಟ್ರಾನ್‌ಸ್ಕ್ರಿಪ್ಶನ್‌–ಪಾಲಿಮೆರಸ್‌ ಚೈನ್‌ ರಿಯಾಕ್ಷನ್‌) ಟೆಸ್ಟ್‌ ಮಾಡಿಸಿದರೆ ಸಮಯ ಹೆಚ್ಚು ಹಿಡಿಯುತ್ತದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್‌ ಸ್ಪಷ್ಟಪಡಿಸಿದ್ದಾರೆ.

ರ‍್ಯಾಪಿಡ್‌ ಟೆಸ್ಟ್‌ ಮಾಡಿದ 15 ನಿಮಿಷದ ನಂತರ ಕಂಟ್ರೋಲ್‌ ಸೂಚಿಸುವ ರೆಡ್‌ಲೈನ್‌ ಬರುತ್ತದೆ. ಬಳಿಕ ಟೆಸ್ಟ್ ಎಂದು ಸೂಚಿಸುವ ಎರಡನೇ ರೆಡ್‌ಲೈನ್ ಬಂದರೆ ಅದು ಪಾಸಿಟಿವ್‌ ಆಗಿರುತ್ತದೆ. ಮೊದಲನೇ ಲೈನ್‌ ಅಷ್ಟೇ ಬಂದು ಎರಡನೆಯದ್ದು ಬಾರದೇ ಇದ್ದರೆ ನೆಗೆಟಿವ್ ಆಗಿರುತ್ತದೆ. ಪಾಸಿಟಿವ್‌ ಬಂದರೆ ಮತ್ತೆ ಪರೀಕ್ಷೆ ಮಾಡಬೇಕಿಲ್ಲ. ಅದು ಪಾಸಿಟಿವ್‌ ಆಗಿಯೇ ಇರುತ್ತದೆ. ನೆಗೆಟಿವ್‌ ಬಂದಾಗ, ರೋಗ ಲಕ್ಷಣಗಳೂ ಇಲ್ಲದೇ ಇದ್ದರೆ ಅದು ನೆಗೆಟಿವ್‌. ಆದರೆ ಶೀತ, ಜ್ವರ, ಕೆಮ್ಮು, ಗಂಟಲು ಕೆರೆತ ಮುಂತಾದ ಲಕ್ಷಣಗಳು ಇದ್ದೂ ನೆಗೆಟಿವ್‌ ಬಂದರೆ ಆಗ ಆರ್‌ಟಿ–ಪಿಸಿಆರ್‌ ಮಾಡಬೇಕಾಗುತ್ತದೆ. ನೇಸಲ್‌ ಸ್ವ್ಯಾಬ್‌ ಮತ್ತು ಥ್ರಾಟ್‌ ಸ್ವ್ಯಾಬ್‌ ತೆಗೆಯಬೇಕಾಗುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ವಿವರ ನೀಡಿದರು.

‘ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇರುವವರು, ಸಂಪರ್ಕ ಇಲ್ಲದೇ ಇದ್ದರೂ ಕೊರೊನಾ ಸೋಂಕು ಇರಬಹುದು ಎಂಬ ಸಂಶಯ ಇರುವವರಿಗೆ ರ‍್ಯಾಪಿಡ್‌ ಟೆಸ್ಟ್‌ ಮಾಡಿಸುತ್ತೇವೆ. ಪಾಸಿಟಿವ್‌ ಬಂದಿರುವ ವರದಿಗಳು ಶೇ 100 ಸರಿ ಇರುತ್ತದೆ. ನೆಗೆಟಿವ್‌ ಬಂದಿರುವುದರಲ್ಲಿ ಶೇ 95ಕ್ಕೂ ಅಧಿಕ ಸರಿ ಇರುತ್ತದೆ. ಹಾಗಾಗಿ ಸುಮ್ಮನೆ ಆರ್‌ಟಿ–ಪಿಸಿಆರ್‌ ಟೆಸ್ಟ್‌ ಮಾಡೋದು ತಪ್ಪುತ್ತದೆ’ ಎಂಬುದು ಅವರ ಸಮಜಾಯಿಷಿ.

ಅಲ್ಲದೇ ದಿನಕ್ಕೆ ಸಾವಿರ ಆರ್‌ಎಟಿ, ಮುನ್ನೂರರಷ್ಟು ಆರ್‌ಟಿ–ಪಿಸಿಆರ್‌ ಮಾಡಬೇಕು ಎಂದು ಸರ್ಕಾರದ ನಿಯಮವೇ ಇದೆ. ಆ ಪ್ರಮಾಣದಲ್ಲೇ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

‘ರ‍್ಯಾ‍ಪಿಡ್‌ ಟೆಸ್ಟ್‌ ಉಪಯೋಗಕ್ಕೆ ಬರಲಿಲ್ಲ’
‘ನನ್ನ ತಂದೆಗೆ 70 ವರ್ಷ. ಅವರಿಗೆ ಶ್ವಾಸಕೋಶದ ಸಮಸ್ಯೆ ಇತ್ತು. ಅದಕ್ಕಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ರ‍್ಯಾಪಿಡ್‌ ಆಂಟಿಜೆನ್‌ ಟೆಸ್ಟ್‌ ಮಾಡಿಸಿದೆವು. ಎರಡೆರಡು ಬಾರಿ ಮಾಡಿದಾಗಲೂ ಕೋವಿಡ್‌ ನೆಗೆಟಿವ್‌ ಬಂದಿತ್ತು. ಅಲ್ಲಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋದರೆ ಈ ರಿಪೋರ್ಟ್ ಆಗುವುದಿಲ್ಲ. ನಮ್ಮಲ್ಲಿ ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸುತ್ತೇವೆ. ಅದರ ವರದಿ ಬಂದ ಬಳಿಕ ಚಿಕಿತ್ಸೆ ನೀಡುತ್ತೇವೆ ಎಂದು ಆಸ್ಪತ್ರೆಯವರು ತಿಳಿಸಿದರು. ನಾವು ಅಲ್ಲಿ ಟೆಸ್ಟ್‌ ಮಾಡಿಸದೇ ಸಿಜಿ ಆಸ್ಪತ್ರೆಗೆ ಮತ್ತೆ ಬಂದೆವು. ಆರ್‌ಟಿಪಿಸಿಆರ್‌ ಟೆಸ್ಟ್‌ ಮಾಡಿಸಿದೆವು. ಎರಡು ದಿನ ಬಿಟ್ಟು ಅದು ಪಾಸಿಟಿವ್‌ ಎಂದು ವರದಿ ಬಂತು’ ಎಂದು ದಾವಣಗೆರೆಯ ಹಾಲೇಶ್‌ ಸಮಸ್ಯೆ ವಿವರಿಸಿದರು.

ಇಷ್ಟಾಗುವಾಗ ಒಂದು ವಾರ ಕಳೆದಿತ್ತು. ತಂದೆಗೆ ಶ್ವಾಸಕೋಶದ ಸಮಸ್ಯೆ ಜಾಸ್ತಿಯಾಗಿತ್ತು. ಸಿಜಿ ಆಸ್ಪತ್ರೆಯಲ್ಲೇ ದಾಖಲು ಮಾಡಿಸಿದೆವು. ಒಳ್ಳೆಯ ಚಿಕಿತ್ಸೆ ಸಿಕ್ಕಿತು. ಈಗ ಆರಮವಾಗಿದ್ದಾರೆ. ಮೊದಲೇ ಆರ್‌ಟಿ ಪಿಸಿಆರ್‌ ಟೆಸ್ಟ್‌ ಮಾಡಿಸಿದರೆ ಚಿಕಿತ್ಸೆ ತಡವಾಗುವುದು ತಪ್ಪುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು