ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ: ಸ್ಥಾನ ಹೆಚ್ಚಿಸಿಕೊಂಡ ಬಿಜೆಪಿ

ಚುನಾವಣೆಯಿಂದ ಚುನಾವಣೆಗೆ ಸ್ಥಾನ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್‌
Last Updated 23 ಮೇ 2022, 3:16 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಚುನಾವಣೆಯಿಂದ ಚುನಾವಣೆಗೆ ಕಾಂಗ್ರೆಸ್‌ ಸ್ಥಾನ ಕಳೆದುಕೊಳ್ಳುತ್ತಾ ಸಾಗಿದೆ. ಬಿಜೆಪಿ ಪ್ರಬಲವಾಗುತ್ತಾ ಹೋಗಿದೆ. ಅದಕ್ಕೆ ಈಗ ನಡೆದ ಉಪಚುನಾವಣೆಯೂ ಸಾಕ್ಷಿಯಾಗಿದೆ.

ಮೂರು ವರ್ಷಗಳ ಕೆಳಗೆ ಪಾಲಿಕೆಗೆ ಚುನಾವಣೆ ನಡೆದಾಗ ಕಾಂಗ್ರೆಸ್‌ 22 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ 17 ಸ್ಥಾನಕ್ಕೆ ಸೀಮಿತವಾಗಿತ್ತು. ಒಂದು ವಾರ್ಡ್‌ನಲ್ಲಿ ಜೆಡಿಎಸ್‌ ಗೆದ್ದಿದ್ದರೆ, 5 ಕಡೆ ಪಕ್ಷೇತರರು ಗೆದ್ದಿದ್ದರು. ಬಳಿಕ ಪಕ್ಷೇತರರಲ್ಲಿ ಒಬ್ಬರು ಕಾಂಗ್ರೆಸ್‌ ಕಡೆ ಹೋದರೆ, ನಾಲ್ವರು ಬಿಜೆಪಿಯನ್ನು ಬೆಂಬಲಿಸಿದ್ದರು. ಮೊದಲ ಮೇಯರ್‌ ಚುನಾವಣೆ ಸಂದರ್ಭದಲ್ಲಿ ಅಧಿಕಾರ ಹಿಡಿಯಬೇಕು ಎಂದು ಎರಡೂ ಪಕ್ಷಗಳು ತಂತ್ರಗಾರಿಕೆ ನಡೆಸುತ್ತಿರುವಾಗಲೇ ಕಾಂಗ್ರೆಸ್‌ನ ಮೂವರು ಸದಸ್ಯರು ಗೈರಾಗಿದ್ದರು. ಅದರಲ್ಲಿ ಜೆ.ಎನ್‌. ಶ್ರೀನಿವಾಸ್‌ ಮತ್ತು ಅವರ ಪತ್ನಿ ಶ್ವೇತಾ ಕೂಡ ಸೇರಿದ್ದರು. ಈ ಇಬ್ಬರು ಕಾಂಗ್ರೆಸ್‌ನಲ್ಲೇ ಉಳಿದರೆ ಭಾರತ್‌ ಕಾಲೊನಿಯ ಯಶೋದಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದರು.

ಎರಡನೇ ವರ್ಷದ ಮೇಯರ್‌ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ನ ಮೇಯರ್‌ ಅಭ್ಯರ್ಥಿ ದೇವರಮನಿ ಶಿವಕುಮಾರ್‌ ಅವರೇ ಬಿಜೆಪಿಗೆ ಹೋಗಿದ್ದರಿಂದ ಕಾಂಗ್ರೆಸ್‌ ಕೈಚೆಲ್ಲಿತು. ಎರಡು ಸ್ಥಾನಗಳಿಗೆ ಬಳಿಕ ನಡೆದ ಚುನಾವಣೆಯಲ್ಲಿ ತಲಾ ಒಂದು ಸ್ಥಾನ ಬಿಜೆಪಿ, ಕಾಂಗ್ರೆಸ್‌ ಗಳಿಸಿತಾದರೂ ಕಾಂಗ್ರೆಸ್‌ನ ಸಂಖ್ಯೆ 22ರಿಂದ 21ಕ್ಕೆ ಇಳಿಯಿತು. ಮೂರನೇ ವರ್ಷದ ಮೇಯರ್‌ ಚುನಾವಣೆ ಸಂದರ್ಭದಲ್ಲಿ ರಾಜಕೀಯ ವಿಪ್ಲವಗಳು ಜೋರಾಗಿ ನಡೆಯಲಿಲ್ಲ. ಆದರೆ ಬಳಿಕ ಶ್ರೀನಿವಾಸ್‌ ಮತ್ತು ಶ್ವೇತಾ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ಎದುರಾಯಿತು. ಇದೀಗ ಆ ಎರಡೂ ಸ್ಥಾನಗಳು ಬಿಜೆಪಿ ಪಾಲಾಗಿವೆ. ಕಾಂಗ್ರೆಸ್‌ನ ಸ್ಥಾನ 19ಕ್ಕೆ ಇಳಿದಿದೆ. ಬಿಜೆಪಿ 20ಕ್ಕೇರಿದೆ. ಮುಂದಿನ ವರ್ಷ ಮೇಯರ್‌ ಚುನಾವಣೆ ಬಿಜೆಪಿಗೆ ಇನ್ನಷ್ಟು ಸುಲಭವಾಗಲಿದೆ.

ಕೈಕೊಟ್ಟ ಲೆಕ್ಕಾಚಾರ: ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋಗಿರುವ ಜೆ.ಎನ್. ಶ್ರೀನಿವಾಸ್‌ ಮತ್ತು ಶ್ವೇತಾ ಅವರನ್ನು ಸೋಲಿಸಲೇಬೇಕು ಎಂದು ಕಾಂಗ್ರೆಸ್‌ನ ನಾಯಕರು ಲೆಕ್ಕಾಚಾರ ಹಾಕಿದ್ದರು. ಅದಕ್ಕಾಗಿ 37ನೇ ವಾರ್ಡ್‌ ಕೆ.ಇ.ಬಿ. ಕಾಲೊನಿಯಲ್ಲಿ ಈ ಭಾಗದ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಸಿದ್ಧಗಂಗಾದ ಸ್ಥಾಪಕರ ಕುಟುಂಬದ ಸದಸ್ಯರಾದ ರೇಖಾರಾಣಿ ಅವರನ್ನೇ ನಿಲ್ಲಿಸಿದ್ದರು. ಆರಂಭದಲ್ಲಿ ಅವರು ಚುನಾವಣೆಗೆ ಸ್ಪರ್ಧಿಸಲು ಒಪ್ಪದೇ ಇದ್ದಾಗ ಶಾಮನೂರು ಕುಟುಂಬದವರೇ ಒತ್ತಡ ಹಾಕಿ ನಿಲ್ಲಿಸಿದರು. ಬಳಿಕ ಪ್ರಭಾ ಮಲ್ಲಿಕಾರ್ಜುನ ಅವರು ಪ್ರಚಾರದ ಮುಂಚೂಣಿಯಲ್ಲಿ ನಿಂತಿದ್ದರು.

ಎಸ್‌.ಎಸ್‌. ಭಗತ್‌ಸಿಂಗ್‌ ನಗರ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ರಾಜಕೀಯದಲ್ಲಿ ಪಳಗಿರುವ ಹುಲ್ಲುಮನಿ ಗಣೇಶ್‌ ಅವರನ್ನು ನಿಲ್ಲಿಸಿದ್ದರು. ಎಸ್‌.ಎಸ್‌. ಮಲ್ಲಿಕಾರ್ಜುನ ಸಹಿತ ಕಾಂಗ್ರೆಸ್‌ನ ಮುಂಚೂಣಿ ನಾಯಕರು ಪ್ರಚಾರಕ್ಕೆ ಇಳಿದಿದ್ದರು. ಆದರೆ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ಪಾಲಿಕೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ದುರ್ಬಲಗೊಳ್ಳುತ್ತಾ ಸಾಗಿದೆ. ಸಂಸದ ಜಿ.ಎಂ. ಸಿದ್ದೇಶ್ವರ ಅವರ ನೇತೃತ್ವದಲ್ಲಿ ಬಿಜೆಪಿ ಪ್ರಬಲವಾಗುತ್ತಾ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT