ಸೋಮವಾರ, ಏಪ್ರಿಲ್ 6, 2020
19 °C
ಮಾರ್ಚ್ 31ರವೆರೆಗೆ ಮದುವೆಗಳಿಗೆ ಬುಕಿಂಗ್ ಇಲ್ಲ

ಮದುವೆಗೂ ಕೋವಿಡ್–19 ಎಫೆಕ್ಟ್: ನಿರೀಕ್ಷಿಸಿದಷ್ಟು ಬಾರದ ಜನ

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್–19 ಭೀತಿಯಿಂದಾಗಿ ಮದುವೆ, ನಾಮಕರಣ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಭಾಗವಹಿಸಲು ಜನರು ಉತ್ಸಾಹ ಕಳೆದುಕೊಂಡಿದ್ದಾರೆ. ಭಾನುವಾರ ವಿವಿಧ ಕಲ್ಯಾಣ ಮಂಟಪಗಳಲ್ಲಿ ನಡೆದ ಮದುವೆಗಳಲ್ಲಿ ಜನರು ಭಾಗವಹಿಸಿದ್ದರೂ ನಿರೀಕ್ಷಿಸಿದಷ್ಟು ಇರಲಿಲ್ಲ.

ಹೆಚ್ಚಿನ ಜನರು ಸೇರುವ ಸಭೆ ಸಮಾರಂಭಗಳನ್ನು ರದ್ದುಗೊಳಿಸಬೇಕು ಎಂದು ಸರ್ಕಾರ ಆದೇಶ ನೀಡುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಜನರು ಮದುವೆ ಹಾಗೂ ಶುಭಕಾರ್ಯಗಳಿಗೆ ಹೋಗಲು ಆಸಕ್ತಿ ಕಳೆದುಕೊಂಡಿದ್ದಾರೆ. ಕೆಲವರು ಛತ್ರದಲ್ಲಿ ಕಾಯ್ದಿರಿಸಿದ್ದ ನಾಮಕರಣ ಸಮಾರಂಭವನ್ನು ರದ್ದುಗೊಳಿಸಿ, ತಂತಮ್ಮ ಮನೆಗಳಲ್ಲೇ ಸರಳವಾಗಿ ಕಾರ್ಯಕ್ರಮವಾಗಿ ಆಯೋಜಿಸಲು ತೀರ್ಮಾನಿಸಿದ್ದಾರೆ.

ಭಾನುವಾರ ಮದುವೆಗೆ ಶುಭ ದಿವಸ. ಇದರಿಂದಾಗಿ ಬಹುತೇಕ ಕಲ್ಯಾಣ ಮಂಟಪಗಳಲ್ಲಿ ಮದುವೆ ನಡೆದರೂ ಅವರ ಕುಟುಂಬಸ್ಥರು, ನೆಂಟರು ಬಿಟ್ಟರೆ ಬೇರೆಯವರು ಅಷ್ಟಾಗಿ ಹಾಜರಾಗಿರಲಿಲ್ಲ. ಕೆಲವರು ಬಂದರೂ ಸ್ವಲ್ಪ ಸಮಯ ಇದ್ದು, ಶುಭ ಹಾರೈಸಿ ಹೊರಡುತ್ತಿದ್ದ ದೃಶ್ಯಗಳು ಕಂಡುಬಂದವು.

ಶ್ರೀಮತಿ ರಾಜನಹಳ್ಳಿ ಭಾಗ್ಯಲಕ್ಷ್ಮಮ್ಮ ಧರ್ಮಪ್ರಕಾಶ ರಾಮಶೆಟ್ಟಿ ಧರ್ಮಶಾಲಾದ ಮೂರು ಛತ್ರಗಳು, ದೇವರಾಜ ಅರಸ್ ಬಡಾವಣೆಯ ಬೀರಲಿಂಗೇಶ್ವರ ಸಮುದಾಯ ಭವನ, ಶಿವಪಾರ್ವತಿ ಕಲ್ಯಾಣ ಮಂಟಪ ಹಾಗೂ ಶ್ರೀಕೃಷ್ಣ ಸಭಾಭವನ ಟ್ರಸ್ಟ್ ಮುಂತಾದ ಕಡೆಗಳಲ್ಲಿ ನಡೆದ ಮದುವೆಗಳಲ್ಲಿ ನಿರೀಕ್ಷಿಸಿದ ಮಟ್ಟಿಗೆ ಜನರು ಬಂದಿರಲಿಲ್ಲ ಎಂದು ಅಲ್ಲಿ ಪಾಲ್ಗೊಂಡಿದ್ದವರು ಮಾಹಿತಿ ನೀಡಿದರು.

ಊಟ ವಾಪಸ್‌: ಬಹುತೇಕ ಕಲ್ಯಾಣ ಮಂಟಪಗಳಲ್ಲಿ ಹೆಚ್ಚಿನ ಜನರು ಮದುವೆಗೆ ಬರುತ್ತಾರೆ ಎಂದು ಅಂದಾಜಿಸಿ ಅಡುಗೆ ಮಾಡಿಸಿದ್ದರು. ಆದರೆ ನಿರೀಕ್ಷಿತ ಮಟ್ಟದಲ್ಲಿ ಜನರು ಬಾರದೇ ಇದ್ದುದರಿಂದ ಊಟವನ್ನು ವಾಪಸ್ ತೆಗೆದುಕೊಂಡು ಹೋದ ನಿದರ್ಶನವೂ ಕಂಡುಬಂತು. ಕೆಲವರು ಇಂತಿಷ್ಟೇ ಎಂದು ಅಂದಾಜಿಸಿ ಅಡುಗೆ ಮಾಡಿಸಿದ್ದರು.

ಬಡವರಿಗೆ ವರದಾನವಾದ ಆದೇಶ: ‘ಗ್ರಾಮೀಣ ಪ್ರದೇಶದ ಬಹುತೇಕ ಬಡವರಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಲು ಆಗುವುದಿಲ್ಲ. ಕೋವಿಡ್ ಭೀತಿಯಿಂದಾಗಿ ಕಲ್ಯಾಣ ಮಂಟಪಗಳಿಗೆ ಜನರು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಕಲ್ಯಾಣ ಮಂಟಪದ ಬಾಡಿಗೆ ಬಿಟ್ಟು ಊಟದ ಖರ್ಚು ಸ್ವಲ್ಪ ಉಳಿಯುತ್ತದೆ’ ಎಂಬುದು ಗೌರಿಪುರದ ಅಣ್ಣಪ್ಪಸ್ವಾಮಿ ಅವರ ಅಭಿಪ್ರಾಯ.

‘ಧರ್ಮಪ್ರವರ್ತ ರಾಜನಹಳ್ಳಿ ಹನುಮಂತಪ್ಪನವರ ಧರ್ಮಶಾಲಾದಲ್ಲಿ ಸೋಮವಾರ ಮದುವೆ ನಿಶ್ಚಯವಾಗಿದ್ದು, 500 ಜನರನ್ನು ಆಹ್ವಾನಿಸಿದ್ದೆವು. ಆದರೆ ಈ ರೋಗದ ಭೀತಿಯಿಂದಾಗಿ ವರನ ಕಡೆಯಿಂದ 50 ಹಾಗೂ ವಧುವಿನ ಕಡೆಯಿಂದ 50 ಮಾತ್ರ ಬರುವುದಾಗಿ ಹೇಳಿದ್ದಾರೆ. ಆದ್ದರಿಂದ 100 ಜನರಿಗೆ ಮಾತ್ರ ಅನ್ನ ಸಾಂಬಾರ್ ಮಾಡಿಸಿದ್ದೇವೆ. ಸಿಹಿತಿಂಡಿಯನ್ನು ಬೇರೆ ಕಡೆಯಿಂದ ಕೊಂಡುಕೊಳ್ಳುತ್ತೇವೆ’ ಎಂದು ಅವರು ಹೇಳಿದರು.

‘ಜನರ ಹಿತದೃಷ್ಟಿಯಿಂದ ಸರ್ಕಾರ ಒಳ್ಳೆಯ ಆದೇಶ ಮಾಡಿದೆ. ಇದನ್ನು ಪ್ರತಿಯೊಬ್ಬರೂ ಪಾಲಿಸಲೇಬೇಕು. ಇದರಿಂದ ನಮಗೆ ಒಳ್ಳೆಯದೇ ಆಯಿತು’ ಎಂಬುದು ವಧುವಿನ ಚಿಕ್ಕಪ್ಪ ಅಣ್ಣಪ್ಪಸ್ವಾಮಿ ಅವರ ಅಭಿಪ್ರಾಯ.

‘1200 ಮಂದಿಗೆ ಅಡುಗೆ ಮಾಡಿಸಿದ್ದೆವು. ನಾವು ಅಂದಾಜು ಮಾಡಿದ್ದಕ್ಕಿಂತ ಶೇ 40ರಷ್ಟು ಮಂದಿ ಮದುವೆಗೆ ಬಂದಿರಲಿಲ್ಲ. ಇದರಿಂದಾಗಿ ಊಟ ಉಳಿದಿದೆ’ ಎಂದು ಬೀರಲಿಂಗೇಶ್ವರ ಸಮುದಾಯ ಭವನದಲ್ಲಿ ನಡೆದ ಮದುವೆಗೆ ಬಂದಿದ್ದ ದಿದ್ದಿಗೆ ಗ್ರಾಮದ ಗುರುಮೂರ್ತಿ ಡಿ.ಎಂ. ಮಾಹಿತಿ ನೀಡಿದರು.

‘ನಾವು 350 ಜನರಿಗೆ ಮದುವೆ ಆಹ್ವಾನ ನೀಡಿದ್ದೇವೆ. ಆದರೆ ಸುಮಾರು 125 ಮಂದಿ ಮಾತ್ರ ಪಾಲ್ಗೊಂಡಿದ್ದರು. ಜನರ ಭಾವನೆಗಳು, ಸಂಬಂಧಗಳ ಬಗ್ಗೆ ನಾವು ಅಂದುಕೊಂಡಂತೆ ಇರುವುದಿಲ್ಲ. ಯಾರನ್ನೂ ಬರಬೇಡಿ ಎಂದು ಹೇಳಿಲ್ಲ. ಊಟ ವ್ಯರ್ಥವಾಗುವುದು ಬೇಡ ಎಂಬ ಉದ್ದೇಶದಿಂದ ಗ್ರಾಮಕ್ಕೆ ಹೋಗಿ ಅಕ್ಕಪಕ್ಕದವರಿಗೆ ಹೋಗಿ ಊಟ ನೀಡುತ್ತೇವೆ’ ಎನ್ನುತ್ತಾರೆ ರಾಜನಹಳ್ಳಿ ಧರ್ಮಶಾಲಾದಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡಿದ್ದ ವಧುವಿನ ಚಿಕ್ಕಪ್ಪ ಉಮಾಪತಿ ಮಾಹಿತಿ ನೀಡಿದರು.

‘ನಗರದಲ್ಲಿ 41 ಕಲ್ಯಾಣ ಮಂಟಪಗಳು ಇವೆ. ಯಾವುದಾದರೂ ಕಾರ್ಯಕ್ರಮ ಮಾಡಬೇಕಾದರೆ ಜಿಲ್ಲಾಡಳಿತದ ಅನುಮತಿ ಪಡೆದು ಬರಬೇಕು. ಆಗ ಮಾತ್ರ ನಾವು ಅನುಮತಿ ನೀಡುತ್ತೇವೆ. ಸಮಾರಂಭಗಳಲ್ಲಿ ಜನರನ್ನು ಆದಷ್ಟು ಕಡಿಮೆ ಮಾಡಿ ಎಂದು ಎಲ್ಲರಿಗೂ ಹೇಳುತ್ತಿದ್ದೇವೆ. ಈಗ ನಡೆಯುತ್ತಿರುವ ಮದುವೆಗಳು ಆರು ತಿಂಗಳ ಹಿಂದೆಯೇ ಬುಕ್ ಆಗಿವೆ. ಈಗ ನಾವು ಯಾವುದೇ ಬುಕ್ಕಿಂಗ್ ತೆಗೆದುಕೊಳ್ಳುತ್ತಿಲ್ಲ’ ಎನ್ನುತ್ತಾರೆ ಮ್ಯಾನೇಜರ್ ಕರಿಬಸಪ್ಪ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು