ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯ ಬಾಷಾನಗರ, ಜಾಲಿನಗರದ ಕೋವಿಡ್‌ ಪ್ರಕರಣ ನಿಗೂಢ

ಸೋಂಕಿನ ‘ಗುಟ್ಟು’ ಬಿಟ್ಟುಕೊಡದ ರೋಗಿಗಳು
Last Updated 1 ಮೇ 2020, 19:45 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಕೇವಲ 48 ಗಂಟೆಗಳಲ್ಲಿ ಎಂಟು ಜನರಿಗೆ ಕೋವಿಡ್‌–19 ರೋಗ ಇರುವುದು ಬೆಳಕಿಗೆ ಬಂದಿದ್ದು, ಇವರಿಗೆ ಹೇಗೆ ಕೊರೊನಾ ಸೋಂಕು ತಲುಗಿತು ಎಂಬುದು ಇನ್ನೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಒಂದು ತಿಂಗಳಿಂದ ಕೋವಿಡ್‌–19 ಪ್ರಕರಣ ಪತ್ತೆಯಾಗದೇ ‘ಹಸಿರು ವಲಯ’ಕ್ಕೆ ಹೋಗಿದ್ದ ದಾವಣಗೆರೆ ಜಿಲ್ಲೆಯಲ್ಲಿ ಕೇವಲ ಮೂರು ದಿನಗಳಲ್ಲಿ ಎಂಟು ಹೊಸ ಪ್ರಕರಣಗಳು ಕಾಣಿಸಿಕೊಳ್ಳುವ ಮೂಲಕ ‘ಕಿತ್ತಳೆ ವಲಯ’ಕ್ಕೆ ತಲುಪಿದೆ.

ಬಾಷಾನಗರ ಹಾಗೂ ಜಾಲಿನಗರದಲ್ಲಿ ತಲಾ ಒಂದು ಕುಟುಂಬದಲ್ಲಿ ಕಾಣಿಸಿಕೊಂಡಿರುವ ಕೋವಿಡ್‌–19 ರೋಗದ ಮೂಲ ನಿಗೂಢವಾಗಿದೆ. ರೋಗಿಗಳು ತಮ್ಮ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಸೋಂಕಿತರು ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಪೊಲೀಸರು ಒಳಗೆ ಹೋಗಿ ವಿಚಾರಣೆ ನಡೆಸಲು ಸಾಧ್ಯವಾಗುತ್ತಿಲ್ಲ. ಇದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಬಾಷಾನಗರ ಆರೋಗ್ಯ ಕೇಂದ್ರದ ಸ್ಟಾಫ್‌ ನರ್ಸ್‌ (ಪಿ–533)ಯಲ್ಲಿ ಸೋಂಕು ಇರುವುದು ಬುಧವಾರ ಬೆಳಿಗ್ಗೆ ದೃಢಪಟ್ಟಿತ್ತು. ಇದೀಗ ಆಕೆಯ 16 ವರ್ಷದ ಮಗನಲ್ಲೂ ಕೊರೊನಾ ವೈರಸ್‌ ಇರುವುದು ಖಚಿತವಾಗಿದೆ.

ತೀವ್ರ ಉಸಿರಾಟದ ಸಮಸ್ಯೆ (SARI) ಎದುರಿಸುತ್ತಿರುವ ಜಾಲಿನಗರದ ವೃದ್ಧನಿಗೆ (ಪಿ–556) ಈ ಸೋಂಕು ತಗುಲಿರುವುದು ಬುಧವಾರ ರಾತ್ರಿ ದೃಢಪಟ್ಟಿತ್ತು. ಅವರ ಮಗ, ಮೂವರು ಸೊಸೆ ಹಾಗೂ ಒಂದು ವರ್ಷದ ಮೊಮ್ಮಗನಿಗೂ ರೋಗ ಇರುವುದು ಪತ್ತೆಯಾಗಿದೆ. ಸೋಂಕಿನ ಕೊಂಡಿ ಇನ್ನೂ ಎಲ್ಲೆಲ್ಲಿ ವ್ಯಾಪಿಸಿದೆಯೋ ಎಂಬ ಆತಂಕ ಕಾಡುತ್ತಿದೆ.

ಈ ಎರಡೂ ಕುಟುಂಬಗಳಲ್ಲಿ ಹೇಗೆ ಸೋಂಕು ಹರಡಿತು ಎಂಬುದನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಪತ್ತೆ ಮಾಡಲು ಯತ್ನಿಸುತ್ತಿದ್ದಾರೆ. ಆದರೆ, ರೋಗಿಗಳು ಸೋಂಕಿನ ಮೂಲದ ‘ಗುಟ್ಟು’ ಬಿಟ್ಟುಕೊಡುತ್ತಿಲ್ಲ ಎನ್ನಲಾಗಿದೆ.

‘ಬಾಷಾನಗರ ಹಾಗೂ ಜಾಲಿನಗರ ರೋಗಿಗಳ ಸೋಂಕಿನ ಮೂಲ ಪತ್ತೆ ಮಾಡುವ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜೊತೆಯೂ ಚರ್ಚಿಸಿದ್ದೇವೆ. ಯಾವ ಯಾವ ಬಗೆಗಳಲ್ಲಿ ಸಾಧ್ಯವೋ ಸೋಂಕಿತರನ್ನು ವಿಚಾರಣೆಗೊಳಪಡಿಸಿ, ಅವರ ಮನವೊಲಿಸಿ ಸೋಂಕಿನ ಮೂಲವನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

‘ಸೋಂಕಿತ ಸ್ಟಾಫ್‌ ನರ್ಸ್‌ನ ಮಗನ ಬಳಿ ಮೊಬೈಲ್‌ ಇತ್ತು. ಆತ ಎಲ್ಲೆಲ್ಲಿಗೆ ಹೋಗಿ ಬಂದಿದ್ದಾನೆ ಎಂಬ ಬಗ್ಗೆ ಮೊಬೈಲ್‌ನ ಸಿಡಿಆರ್‌ ವಿಶ್ಲೇಷಣೆ ಮಾಡಿಸುತ್ತಿದ್ದೇವೆ. ಮಗನಿಂದ ತಾಯಿಗೆ ಸೋಂಕು ಬಂತೋ ಅಥವಾ ತಾಯಿಯಿಂದ ಮಗನಿಗೆ ಸೋಂಕು ಹರಡಿತೋ ಎಂಬುದನ್ನು ಪತ್ತೆ ಮಾಡುತ್ತಿದ್ದೇವೆ. ಸೋಂಕಿನ ಮೂಲ ಪತ್ತೆ ಮಾಡಲು ಇನ್ನಷ್ಟು ಸಮಯ ಬೇಕಾಗಲಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಈ ಎರಡೂ ಕುಟುಂಬಗಳಲ್ಲಿ ಯಾವ ಸದಸ್ಯ ಮೊದಲು ಸೋಂಕು ಅಂಟಿಸಿಕೊಂಡು ಬಂದಿದ್ದಾನೆ? ಹೊರ ರಾಜ್ಯಕ್ಕೆ ತೆರಳಿದ್ದರೇ? ರಾಜ್ಯದ ಕೆಂಪು ವಲಯದ ಜಿಲ್ಲೆಗಳಿಗೆ ಪ್ರಯಾಣ ಮಾಡಿದ್ದರೇ? ಕುಟುಂಬದ ಯಾವ ಸದಸ್ಯರೂ ಹೊರ ಜಿಲ್ಲೆಗಳಿಗೆ ಪ್ರಯಾಣ ಮಾಡದೆಯೂ ಸೋಂಕು ತಗುಲಿತೇ ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಸವಾಲು ಜಿಲ್ಲಾಡಳಿತಕ್ಕಿದೆ. ಸೋಂಕಿತರ ಬಗ್ಗೆ ಈಗಾಗಲೇ ಜಿಲ್ಲೆಯಲ್ಲಿ ಹರಡಿರುವ ವದಂತಿಗಳಿಗೆ ತೆರೆ ಎಳೆಯಬೇಕಾಗಿದೆ.

ಬಾಣಂತಿ, ಹಸುಗೂಸಿಗಿಲ್ಲ ಸೋಂಕು

ಸೋಂಕಿತ ಸ್ಟಾಫ್‌ ನರ್ಸ್‌ ಏಪ್ರಿಲ್‌ 23ರಂದು ಬಾಷಾನಗರದ ಆರೋಗ್ಯ ಕೇಂದ್ರದಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ಮಾಡಿಸಿದ್ದರು. ಆಕೆಯೊಂದಿಗೆ ಸಂಪರ್ಕ ಹೊಂದಿದ್ದ ಬಾಣಂತಿ, ಹಸುಗೂಸು, ಪತಿ ಸೇರಿ 10 ಜನರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇವರ‍್ಯಾರಲ್ಲೂ ಕೊರೊನಾ ಸೋಂಕು ಇಲ್ಲ ಎಂದು ವರದಿ ಬಂದಿರುವುದು ನೆಮ್ಮದಿ ತಂದಿದೆ.

ನರ್ಸ್‌ ಕೆಲಸ ಮಾಡುತ್ತಿದ್ದ ಆರೋಗ್ಯ ಕೇಂದ್ರದ 16 ಸಿಬ್ಬಂದಿಯ ಮಾದರಿಗಳನ್ನೂ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇವರ ಪೈಕಿ 15 ಜನರಿಗೆ ನೆಗೆಟಿವ್‌ ಎಂದು ಬಂದಿದೆ. ವೈದ್ಯರೊಬ್ಬರ ಮಾದರಿಯನ್ನು ಮತ್ತೊಮ್ಮೆ ಸಂಗ್ರಹಿಸಿ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.ನರ್ಸ್‌ನ ಪತಿ ಹಾಗೂ ಕಿರಿಯ ಮಗನಿಗೂ ನೆಗೆಟಿವ್‌ ಎಂಬ ವರದಿ ಬಂದಿದೆ ಎಂದು ಮೂಲಗಳು ತಿಳಿಸಿವೆ.

ವೃದ್ಧನ ಕುಟುಂಬದ ಮೂವರಿಗಿಲ್ಲ ಸೋಂಕು

ಸೋಂಕಿತ ವೃದ್ಧನ ಕುಟುಂಬದಲ್ಲಿ ಒಟ್ಟು 10 ಜನ ಸದಸ್ಯರಿದ್ದರು. ವೃದ್ಧನೂ ಸೇರಿ ಈಗ ಒಟ್ಟು ಆರು ಜನರಿಗೆ ಕೋವಿಡ್‌–19 ರೋಗ ಇರುವುದು ದೃಢಪಟ್ಟಿದೆ. ಕುಟುಂಬದ ಮೂವರು ಸದಸ್ಯರಿಗೆ ‘ಕೊರೊನಾ ನೆಗೆಟಿವ್‌’ ಎಂದು ವರದಿ ಬಂದಿದೆ. ಇನ್ನೊಬ್ಬ ಮಗನ ವರದಿಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT