ಗುರುವಾರ , ಜೂನ್ 24, 2021
29 °C

ಕೋವಿಡ್-19: ಒತ್ತಡಕ್ಕೆ ಸುಸ್ತಾಗಿ ಹೋಗುತ್ತೇವೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

‘ಕೊರೊನಾ ಬಗ್ಗೆ ಆರಂಭದಲ್ಲಿ ಭಯ ಇತ್ತು. ಈಗ ಅಂಥ ಭಯವಿಲ್ಲ. ಆದರೆ ತೀವ್ರ ಒತ್ತಡದಿಂದಾಗಿ ಸುಸ್ತಾಗಿ ಹೋಗುತ್ತೇವೆ’ ಎಂದು ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಶುಶ್ರೂಷಕರಾಗಿ ಕೆಲಸ ಮಾಡುತ್ತಿರುವ ಕೊರೊನಾ ವಾರಿಯರ್‌ ಉಮಾಪತಿ ತಿಳಿಸಿದ್ದಾರೆ.

23 ವರ್ಷಗಳಿಂದ ಶುಶ್ರೂಷಕರಾಗಿರುವ ಅದರಲ್ಲಿ 15 ವರ್ಷಗಳಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಉಮಾಪತಿ ಅವರು ಕಳೆದ ವರ್ಷ ಕೊರೊನಾ ಸೋಂಕು ಹರಡಿದ ಬಳಿಕ ಕೊರೊನಾ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಒಂದನೇ ಅಲೆ ಬಂದಾಗ ರೋಗ ಏನು ಎಂಬುದು ಸ್ಪಷ್ಟ ಇಲ್ಲದೆಯೇ ಚಿಕಿತ್ಸೆ ನೀಡಬೇಕಿತ್ತು. ಹಾಗಾಗಿ ಎಲ್ಲರಿಗೂ ಆತಂಕ ಇತ್ತು. ಈಗ ಎರಡನೇ ಅಲೆ ಬಂದಿದೆ. ಸೋಂಕು ಏನು ಎಂಬುದು ಗೊತ್ತಾಗಿರುವುದರಿಂದ ಆತಂಕ ಕಡಿಮೆಯಾಗಿದೆ. ಆದರೆ ಒಮ್ಮೆ ಪಿಪಿಇ ಕಿಟ್‌ ಹಾಕಿದ ಮೇಲೆ ಆರೂವರೆ–ಏಳುಗಂಟೆ ತೆಗೆಯದೇ ಕೆಲಸ ಮಾಡಬೇಕು. ನೀರು ಕುಡಿಯದೇ, ಶೌಚಾಲಯಕ್ಕೂ ಹೋಗದೇ ಕೆಲಸ ಮಾಡುವುದು ಸುಲಭವಲ್ಲ’ ಎಂದು ‘ಪ್ರಜಾವಾಣಿ’ಗೆ ವಿವರ ನೀಡಿದರು.

‘ಈಗ ಒಂದೇ ಸಮನೆ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದರಿಂದ ಎಷ್ಟು ಬೆಡ್‌ಗಳಿವೆ. ಭರ್ತಿಯಾದ ಬೆಡ್‌ಗಳು ಯಾವಾಗ ಖಾಲಿ ಆಗುತ್ತವೆ. ಮುಂತಾದ ಮಾಹಿತಿಗಳನ್ನು ಮೇಲಧಿಕಾರಿಗಳಿಗೆ ನಿರಂತರ ತಿಳಿಸುತ್ತಾ ಇರಬೇಕಾಗುತ್ತದೆ. ಬೆಡ್‌ಗಾಗಿ ಜನ ಕಾಯುತ್ತಿರುವುದನ್ನು ಕಂಡಾಗ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೆ’ ಎಂದು ಹೇಳಿದರು.

‘ನನಗೀಗ 54 ವರ್ಷ. ನನ್ನ ಜತೆ ಕೆಲಸ ಮಾಡುವವರಿಗೆಲ್ಲ ಕೊರೊನಾ ಸೋಂಕು ಬಂತು. ನಾನು ಆರು ಬಾರಿ ಟೆಸ್ಟ್‌ ಮಾಡಿಸಿದೆ. ಪಾಸಿಟಿವ್‌ ಬಂದಿಲ್ಲ. ಸ್ವಲ್ಪ ಬಿ.ಪಿ. ಇದೆ. ಬೇರೇನು ಆರೋಗ್ಯ ಸಮಸ್ಯೆಯಾಗಿಲ್ಲ. 22 ವರ್ಷ ಮಾಡಿದ ಕೆಲಸಕ್ಕೂ ಕಳೆದ ಒಂದು ವರ್ಷದಿಂದ ಮಾಡಿದ ಕೆಲಸಕ್ಕೂ ಅಜಗಜ ವ್ಯತ್ಯಾಸ ಇದೆ’ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು