ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮೈಮೇಲೆ ದೇವಿ ಇದ್ದಾಳೆ ಲಸಿಕೆ ಬೇಡ ಅಂದ ಅಜ್ಜಿಗೂ ಲಸಿಕೆ!

Last Updated 30 ನವೆಂಬರ್ 2021, 5:16 IST
ಅಕ್ಷರ ಗಾತ್ರ

ದಾವಣಗೆರೆ: ಮೈಮೇಲೆ ದೇವಿ ಬಂದಿದ್ದಾಳೆ ಎಂದು ಲಸಿಕೆ ಹಾಕಿಸದೇ ಆರೋಗ್ಯ ಸಿಬ್ಬಂದಿಯನ್ನು ವಾಪಸ್‌ ಕಳುಹಿಸಿದ್ದ ಅಜ್ಜಿಗೆ ಅಧಿಕಾರಿಗಳು ಸೋಮವಾರ ಹರಸಾಹಸ ಮಾಡಿ ಲಸಿಕೆ ಹಾಕಿದ್ದಾರೆ.

ತಾಲ್ಲೂಕಿನ ಕೈದಾಳೆಯ ವೃದ್ಧೆ ಲಲಿತಮ್ಮ (70) ಮೈಮೇಲೆ ಕುಕ್ಕುವಾಡೇಶ್ವರಿ ಬಂದಿದ್ದಾಳೆ ಎಂದು ಜಡೆ ಎಳೆದುಕೊಂಡು ಅಬ್ಬರಿಸಿ ಆರೋಗ್ಯ ಸಿಬ್ಬಂದಿಯನ್ನು ಭಾನುವಾರ ವಾಪಸ್‌ ಕಳುಹಿಸಿದ್ದರು. ತಹಶೀಲ್ದಾರ್ ಬಿ.ಎನ್. ಗಿರೀಶ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಐ.ಸಿ. ವಿದ್ಯಾವತಿ, ಆರೋಗ್ಯಾಧಿಕಾರಿ ಡಾ.ಧನಂಜಯ ತಂಡವು ಆ ಮನೆಗೆ ಸೋಮವಾರ ಹೋಯಿತು. ಅಜ್ಜಿಯ ಮೈಮೇಲೆ ದೇವಿ ಬಂದಿದ್ದಾಳೆ ಅಂದರೂ ತಾಳ್ಮೆಯಿಂದ ಎಲ್ಲ ಕಥೆ ಕೇಳಿ, ಮನವೊಲಿಸಿ ಲಸಿಕೆ ಹಾಕಿದ್ದಾರೆ.

‘ನಿನ್ನ ಗುರಿ ಗೆಲ್ತೀನೋ.. ಗೆಲ್ತೇನೋ.. ನಿನ್ನ ಗುರಿ ನಾನು ಗೆಲ್ತೀನೋ.. ನಿನ್ನ ನಾನು ಉಡಿಗೆ ಹಾಕ್ಕೊಳ್ತಿನೋ... ಬೆಳಕಾಗಿ ನಿನಗೆ ನಿಲ್ತೀನೋ.. ನಿನ್ನ ಗುರಿಗೆ ನಾನಾ ಬಾಣ ಹೊಡೆಯದಿದ್ದರೆ ಕುಕ್ಕುವಾಡೇಶ್ವರಿನೇ ಅಲ್ಲ. ನಾನು ಮಗಳ ಮನೆಗಿದ್ದೀನೋ.. ಬಾರೋ ಮಗನೇ.. ನೀನು ನನಗೆ ಗಜ್ಗುಗದ ಪಪ್ಪಾ ತಂದಿದ್ದೀಯಾ ಮಗನೇ?’ ಎಂದೆಲ್ಲ ಅಜ್ಜಿ ಹೇಳಿದೆ.

ತಾಳ್ಮೆ ಕಳೆದುಕೊಳ್ಳದ ತಹಶೀಲ್ದಾರ್ ಗಿರೀಶ, ‘ನಿನ್ನೆ ರಾತ್ರಿ ದೇವಿ ನನ್ನ ಕನಸಲ್ಲಿ ಬಂದು ನನ್ನ ಮಗಳಿಗೆ ಲಸಿಕೆ ಹಾಕಿಸು, ಆಕೆ ನೂರು ವರ್ಷ ಬಾಳಬೇಕು ಎಂದು ಹೇಳಿದ್ದಾಳೆ. ದೇವಿ ಹೇಳಿದಂತೆ ದೇವಿ ಮಗಳಿಗೆ ನಾವು ಲಸಿಕೆ ಹಾಕಬೇಕಮ್ಮಾ’ ಎಂದು ಹೇಳಿ ಮನೆಯ ಬಳಿಗೆ ಕರೆದುಕೊಂಡು ಹೋದರು. ಅಲ್ಲಿ ಅಜ್ಜಿಯ ಮೈಮೇಲೆ ‘ದೇವಿ’ ಇದ್ದಂತೆಯೇ ಅಧಿಕಾರಿಗಳು ಲಸಿಕೆ ನೀಡಿದ್ದಾರೆ.

ಕಬ್ಬಿನ ಗದ್ದೆಯಲ್ಲಿ ಅಡಗಿದ್ದ ಮೂವರು: ಲಸಿಕೆ ಹಾಕಿಸಿಕೊಳ್ಳದೇ ಕೈದಾಳೆಯಲ್ಲಿ ಕರಿಯಪ್ಪ, ಮಲ್ಲಿಕಾರ್ಜನ, ಮಸಿಯಪ್ಪ ಎಂಬ ಮೂವರು ಕಬ್ಬಿನ ಗದ್ದೆಯಲ್ಲಿದ್ದರು. ಅವರನ್ನು ಹುಡುಕಿ ಲಸಿಕೆ ಹಾಕಲಾಯಿತು. ಮತ್ತೊಬ್ಬರು ಕಬ್ಬಿನ ಗದ್ದೆಯಲ್ಲೇ ಓಡಿ ತಪ್ಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT