ಶುಕ್ರವಾರ, ಜೂನ್ 25, 2021
29 °C
ದಾವಣಗೆರೆ ಜಿಲ್ಲೆಯಲ್ಲಿ ಏರಿಕೆ ಕಂಡ ಸಕ್ರಿಯ ಪ್ರಕರಣಗಳು

ದಾವಣಗೆರೆ: ಹೊರ ಜಿಲ್ಲೆ ರೋಗಿಗಳ ದಾಂಗುಡಿ, ಸ್ಥಳೀಯರಿಗೆ ತಾಕಲಾಟ

ಡಿ.ಕೆ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಜಿಲ್ಲೆಯಲ್ಲಿ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ 3,123 ಸಕ್ರಿಯ ಪ್ರಕರಣಗಳು ಬಂದಿದ್ದವು. 3,200 ಸಕ್ರಿಯ ಪ್ರಕರಣಗಳು ಬಂದರೂ ನಮ್ಮಲ್ಲಿ ಅಗತ್ಯ ಸೌಲಭ್ಯಗಳಿವೆ’.

–ಮಧ್ಯ ಕರ್ನಾಟಕದ ದಾವಣಗೆರೆಯ ವೈದ್ಯಾಧಿಕಾರಿ ಅವರ ವಿಶ್ವಾಸದ ನುಡಿ ಇದು. ಜಿಲ್ಲೆಯ ಜನರು ರೋಗ ಬಂದರೆ ಚಿಕಿತ್ಸೆಗಾಗಿ ಬೆಂಗಳೂರು, ಮಣಿಪಾಲ್‌ಗೆ ಹೋಗುತ್ತಿದ್ದರು. ಈಗ ಅಲ್ಲಿಯವರೇ ಇಲ್ಲಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊರ ಜಿಲ್ಲೆಯ 50ಕ್ಕೂ ಹೆಚ್ಚು ಮಂದಿ ದಾವಣಗೆರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಬೆಡ್‌ಗಳು ಹಾಗೂ ವೆಂಟಿಲೇಟರ್‌ಗಳು ಖಾಲಿ ಇವೆ ಎಂದು ಅಧಿಕಾರಿಗಳು ಲೆಕ್ಕ ತೋರಿಸಿದರೂ ಜಿಲ್ಲೆಯ ಬಡವರಿಗೆ ಅವುಗಳು ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಜಿಲ್ಲೆಯಲ್ಲಿ ಕೋವಿಡ್ ಅನ್ನು ಸಮರ್ಥವಾಗಿ ನಿಭಾಯಿಸಲು ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ಹೆಚ್ಚು ಪ್ರಕರಣಗಳು ಇದ್ದ ಸಮಯದಲ್ಲೇ ನಿಭಾಯಿಸಿದ್ದು, ಇನ್ನಷ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಪ್ರಕರಣಗಳು ಹೆಚ್ಚಾದರೂ ಆಮ್ಲಜನಕ ಸೌಲಭ್ಯವುಳ್ಳ ಬೆಡ್, ಐಸಿಯು, ವೆಂಟಿಲೇಟರ್, ಮಾನವ ಸಂಪನ್ಮೂಲ, ಔಷಧಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಲು ಎಲ್ಲ ಹಾಸ್ಟೆಲ್‌ಗಳು, ಕಲ್ಯಾಣ ಮಂಟಪಗಳನ್ನು ಬಳಸಿಕೊಂಡು ಬೆಡ್‌ಗಳನ್ನು ವ್ಯವಸ್ಥೆ ಮಾಡುವ ಕೆಲಸ ಜಾರಿಯಲ್ಲಿದೆ.

ತಾಲ್ಲೂಕಿಗೊಂದು ಬಿಎಲ್ಎಸ್ ವಾಹನ: 

ಪ್ರತಿ ತಾಲ್ಲೂಕು ಕೇಂದ್ರದಲ್ಲಿ 108 ಆಂಬುಲೆನ್ಸ್ ಜೊತೆಗೆ ಜಿಲ್ಲಾ ಆಸ್ಪತ್ರೆಯಲ್ಲಿ 1 ಎಎಲ್‌ಎಸ್‌, 1 ಬಿಎಲ್‌ಎಸ್‌ (ಬೇಸಿಕ್ ಲೈಫ್ ಸಪೋರ್ಟ್) ಸೇರಿ 7 ಆ್ಯಂಬುಲೆನ್ಸ್‌ಗಳು ಇದ್ದು, ಕೋವಿಡ್‌ನಿಂದ ಮೃತಪಟ್ಟವರ ಶವವನ್ನು ಉಚಿತವಾಗಿ ಸಾಗಿಸಲು ಈಗಾಗಲೇ ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ವಾಹನಗಳು ಹಾಗೂ ಮಹಾನಗರ ಪಾಲಿಕೆಯಿಂದ ಒಂದು ‘ಮುಕ್ತಿವಾಹನ’ ಲಭ್ಯವಿವೆ.

ಆಮ್ಲಜನಕ ಸಾಲುತ್ತಿಲ್ಲ:

‘ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ 6,000 ಲೀಟರ್ ಸಾಮರ್ಥ್ಯದ ಆಮ್ಲಜನಕ ಸಂಗ್ರಹ ವ್ಯವಸ್ಥೆ ಇದ್ದು, ಈ ಹಿಂದೆ ಒಂದೂವರೆ ದಿವಸ ಬರುತ್ತಿತ್ತು. ಈಗ ಒಂದೇ ದಿನಕ್ಕೆ ಖಾಲಿಯಾಗುತ್ತಿದೆ. ಖಾಸಗಿ ಆಸ್ಪತ್ರೆಗಳಿಗೂ ಸೇರಿ ದಿನಕ್ಕೆ 10 ಟನ್ ಆಮ್ಲಜಕ ಬೇಕಾಗುತ್ತದೆ. 13 ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್‌ ನಿರ್ಮಿಸಲು ಜಿಲ್ಲಾಡಳಿತದಿಂದ ಪ್ರಸ್ತಾವ ಸಲ್ಲಿಸಲಾಗಿದೆ. ಅದು ಅನುಮೋದನೆಯಾಗುವ ನಿರೀಕ್ಷೆಯಲ್ಲಿ ಇದೆ’ ಎಂಬುದು ಅಧಿಕಾರಿಗಳ ಹೇಳಿಕೆ. 

15 ವೆಂಟಿಲೇಟರ್ ಬಳಕೆಯಾಗುತ್ತಿಲ್ಲ:

‘ಜಿಲ್ಲೆಯ ಒಟ್ಟು 8 ಕೋವಿಡ್ ಆಸ್ಪತ್ರೆಗಳಲ್ಲಿ 78 ವೆಂಟಿಲೇಟರ್‌ಗಳಿವೆ. ಚಿಗಟೇರಿ ಆಸ್ಪತ್ರೆಯಲ್ಲೇ 41 ಇದ್ದು, ಅವುಗಳಲ್ಲಿ 20 ವೆಂಟಿಲೇಟರ್‌ಗಳನ್ನು ಕೋವಿಡ್‍ ಪೀಡಿತರಿಗಾಗಿ ಬಳಸಲಾಗುತ್ತಿದೆ. ಇನ್ನೂ 15 ವೆಂಟಿಲೇಟರ್‌ಗಳನ್ನು ಸಿಬ್ಬಂದಿ ಕೊರತೆಯಿಂದಾಗಿ ಬಳಸಲು ಸಾಧ್ಯವಾಗಿಲ್ಲ. ಇತ್ತೀಚೆಗೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ’ವೆಂಟಿಲೇಟರ್ ಇದ್ದರೂ ಯಾಕೆ ಬಳಕೆಯಾಗುತ್ತಿಲ್ಲ‘ ಎಂದು ತರಾಟೆಗೆ ತೆಗೆದುಕೊಂಡಿದ್ದರು. ‘ತಜ್ಞ ವೈದ್ಯರ ನೇಮಕ ಮಾಡಿ ಇವುಗಳನ್ನು ಬಳಸಲಾಗುತ್ತದೆ’ ಎಂದು ಅಧಿಕಾರಿಗಳು ಸಮುಜಾಯಿಷಿ ನೀಡಿದರು.

ಶೇ 43ರಷ್ಟು ಲಸಿಕೆ

ಜಿಲ್ಲೆಯಲ್ಲಿ ಒಟ್ಟು 17.94 ಜನಸಂಖ್ಯೆ ಇದ್ದು,ಈಗ ಬರುತ್ತಿರುವ ಲಸಿಕೆಗಳು ಸಾಲುತ್ತಿಲ್ಲ. ‘ಜಿಲ್ಲೆಯಲ್ಲಿ ಈವರೆಗೆ 45 ವರ್ಷ ಮೇಲ್ಪಟ್ಟ 1,53,130 ಜನರಿಗೆ ಮೊದಲ ಡೋಸ್, 25,571 ಜನರಿಗೆ ಎರಡನೇ ಡೋಸ್ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದೆ. ಈವರೆಗೆ ಒಟ್ಟು 1.84 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆ ಹಾಗೂ 22,620 ಡೋಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಕೆ ಮಾಡಲಾಗಿದೆ. ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 2,18,049 ಮಂದಿ ಲಸಿಕೆ ಪಡೆದಿದ್ದು, ಶೇ 43ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದರು.

ಮೂಲೆಗೆ ಸೇರಿದ 5 ವೆಂಟಿಲೇಟರ್

ಜಗಳೂರು: ಪಟ್ಟಣದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆಗಳನ್ನು ಕೋವಿಡ್ ಕೇಂದ್ರವಾಗಿ ಮಾರ್ಪಡಿಸಲಾಗಿದೆ. ಆಮ್ಲಜನಕದ ಸೌಲಭ್ಯವಿರುವ ಹಾಸಿಗೆಗಳಲ್ಲಿ 25 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

100 ಹಾಸಿಗೆಯ ಆಸ್ಪತ್ರೆಯಲ್ಲಿ 5 ವೆಂಟಿಲೇಟರ್‌ಗಳು ಇದ್ದರೂ ಸಿಬ್ಬಂದಿಯ ಕೊರತೆಯಿಂದ  ಕಾರ್ಯನಿರ್ವಹಿಸುತ್ತಿಲ್ಲ. ಸರ್ಕಾರದಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸರಬರಾಜಾರಾಗಿರುವ ವೆಂಟಿಲೇಟರ್‌ಗಳು ಮೂಲೆ ಸೇರಿವೆ.

17 ರೋಗಿಗಳಿಗೆ ಏಕಕಾಲಕ್ಕೆ ಸತತ 24 ತಾಸು ಚಿಕಿತ್ಸೆ ನೀಡುವಷ್ಟು ಮಾತ್ರ ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳು ಇದ್ದು, 30 ಸಿಲಿಂಡರ್‌ಗಳ ದಾಸ್ತಾನು ಇದೆ. ಇದಕ್ಕಿಂತ ಹೆಚ್ಚು ರೋಗಿಗಳಿಗೆ ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆ ನೀಡಲು ಸಾಧ್ಯವಿಲ್ಲ.

‘ಈಗಾಗಲೇ ಜಿಲ್ಲಾಧಿಕಾರಿಗೆ ಹೆಚ್ಚುವರಿ 30 ಆಮ್ಲಜನಕ ಸಿಲಿಂಡರ್ ಪೂರೈಸುವಂತೆ ಮನವಿ ಮಾಡಿದ್ದು, ಒಂದೆರೆಡು ದಿನಗಳಲ್ಲಿ ಬರುಯತ್ತದೆ’ ಎಂದು ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ನೀರಜ್ ತಿಳಿಸಿದ್ದಾರೆ.

ಹೊನ್ನಾಳಿ ಆಸ್ಪತ್ರೆಯಲ್ಲಿವೆ 6 ವೆಂಟಿಲೇಟರ್‌ಗಳು

ಹೊನ್ನಾಳಿ: ‘ಆಸ್ಪತ್ರೆಯಲ್ಲಿ ಪ್ರಸ್ತುತ ನೂರು ಬೆಡ್‌ಗಳು ಇದ್ದು, ಕೋವಿಡ್ ರೋಗಿಗಳಿಗೆ 50 ಆಮ್ಮಜನಕ ಬೆಡ್‍ಗಳ ವ್ಯವಸ್ಥೆ ಮಾಡಲಾಗಿದೆ. 6 ವೆಂಟಿಲೇಟರ್ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಡಾ. ಚಂದ್ರಪ್ಪ ಮಾಹಿತಿ ನೀಡಿದರು. ‘ಕೋವಿಡೇತರ ರೋಗಿಗಳಿಗೆ, ಸರ್ಜರಿ ಮತ್ತು ಸಿಸೇರಿಯನ್ ಸೆಕ್ಷನ್ ಮತ್ತು ಎಮರ್ಜೆನ್ಸಿ ಚಿಕಿತ್ಸೆಗಳನ್ನು ಎಂದಿನಂತೆ ನೀಡಲಾಗುತ್ತಿದೆ. ಇವುಗಳನ್ನು ಹೊರತುಪಡಿಸಿ ಇತರೆ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ’ ಎಂದು ಡಾ. ಚಂದ್ರಪ್ಪ ಮಾಹಿತಿ ನೀಡಿದ್ದಾರೆ.

ನ್ಯಾಮತಿಯಲ್ಲಿ ಕೊರೊನಾಗೆ ಚಿಕಿತ್ಸೆ ಇಲ್ಲ

ನ್ಯಾಮತಿ: ಪಟ್ಟಣದ ತಾಲ್ಲೂಕು ಸಮುದಾಯ ಆಸ್ಪತ್ರೆಯಲ್ಲಿ 30 ಬೆಡ್‌ಗಳಿದ್ದರೂ ಇಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಲಭ್ಯವಿಲ್ಲ.

‘ಹೋಮ್‌ ಐಸೋಲೇಷನ್‌ ಸೌಲಭ್ಯ ಇಲ್ಲದವರನ್ನು ಮಾದನಬಾವಿ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಲಾಗುವುದು. ಇತರ ತುರ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಆಮ್ಲಜನಕ ಸೌಲಭ್ಯ ಇರುವ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಇಲ್ಲಿನ ಸಮುದಾಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರೇಣುಕಾನಂದ ಮೆಣಸಿನಕಾಯಿ ತಿಳಿಸಿದರು.

ಆಮ್ಲಜನಕ ಪೂರೈಕೆಗೆ ವೈದ್ಯಾಧಿಕಾರಿಗಳ ಕಸರತ್ತು

ಹರಪನಹಳ್ಳಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಬರುವ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಕೊರತೆಯಾಗುವ ಆಮ್ಲಜನಕ ಪೂರೈಕೆಗೆ ವೈದ್ಯಾಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.

100 ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಕೇಂದ್ರ ತೆರೆಯಲಾಗಿದೆ. 40 ಬೆಡ್‌ಗಳ ವ್ಯವಸ್ಥೆಯಿದ್ದು, ಎಲ್ಲವೂ ಭರ್ತಿಯಾಗಿವೆ. ಬೆಂಗಳೂರು ಸೇರಿ ವಿವಿಧೆಡೆಯಿಂದ 10 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಕೋವಿಡ್ ವಾರ್ಡ್‌ನಲ್ಲಿ 2 ವೆಂಟಿಲೇಟರ್ ವ್ಯವಸ್ಥೆಯಿದ್ದು, 3 ಹೊಸ ವೆಂಟಿಲೇಟರ್ ಅನ್ನು ಸರ್ಕಾರ ಕೊಟ್ಟಿದ್ದರೂ ಅದನ್ನು ಬಳಸಿಲ್ಲ.

‘ಕೋವಿಡ್ ಅಲ್ಲದೇ ತುರ್ತು ಚಿಕಿತ್ಸೆ ವಾರ್ಡ್‌ಗಳಲ್ಲಿ 4 ಆಮ್ಲಜನಕ ಇರಿಸಲಾಗಿದೆ, ಸೋಂಕಿತರಿಗೆ ಐಸಿಯು, ಕೇಂದ್ರದಲ್ಲಿ ಸಿಬ್ಬಂದಿ ಚಿಕಿತ್ಸೆ ನೀಡುತ್ತಾರೆ’ ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಿವಕುಮಾರ್ ಹೇಳುತ್ತಾರೆ.

17 ಆಮ್ಲಜನಕ ಸಿಲಿಂಡರ್‌ಗಳ ದಾಸ್ತಾನು

ಚನ್ನಗಿರಿ: ‘ಪಟ್ಟಣದ ಸರ್ಕಾರಿ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ 50 ಹಾಸಿಗೆಗಳಿಗೆ ಆಮ್ಲಜನಕದ ಸೌಲಭ್ಯ ಕಲ್ಪಿಸಲಾಗಿದೆ. ಉಸಿರಾಟದ ಸಮಸ್ಯೆ ಇರುವ ರೋಗಿಗಳಿಗೆ 17 ಸಿಲಿಂಡರ್‌ಗಳನ್ನು ದಾಸ್ತಾನು ಮಾಡಲಾಗಿದೆ. ಪ್ರಸ್ತುತ ಇಲ್ಲಿ ಆಮ್ಲಜನಕದ ಸಮಸ್ಯೆ ಇಲ್ಲ’ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಗಿರಿ ತಿಳಿಸಿದ್ದಾರೆ.

‘ಕೋವಿಡೇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಈ ಕೇಂದ್ರದಲ್ಲಿ 50 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಉಳಿದ ರೋಗಿಗಳಿಗೆ ಕೆರೆಬಿಳಚಿ, ಸಂತೇಬೆನ್ನೂರು, ತಾವರೆಕೆರೆ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಭು ಹೇಳಿದರು.

ಹರಿಹರದಲ್ಲಿವೆ 50 ಆಮ್ಲಜನಕ ಸೌಲಭ್ಯದ ಹಾಸಿಗೆ

ಹರಿಹರ: ತಾಲ್ಲೂಕಿನಲ್ಲಿ ಕೋವಿಡ್‍ ಸೋಂಕಿತರ ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ 50 ಹಾಸಿಗೆ ಹಾಗೂ ಗುತ್ತೂರು ಸಮೀಪದ ಬಿಸಿಎಂ ಹಾಸ್ಟೆಲ್‍ನಲ್ಲಿ ಕೋವಿಡ್‍ ಕೇರ್‍ ಸೆಂಟರ್‍ ಸ್ಥಾಪಿಸಲಾಗಿದೆ.

‘ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್‍ ಸೋಂಕಿತರಿಗೆ ಆಮ್ಲಜನಕ ಸೌಲಭ್ಯವುಳ್ಳ 50 ಹಾಸಿಗೆ ಮೀಸಲಿರಿಸಲಾಗಿದೆ ಹಾಗೂ ಹೆರಿಗೆ ಸೇರಿ ಇತರೆ ಕಾಯಿಲೆಗಳ ಚಿಕಿತ್ಸೆಗೆ 50 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ’ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಲ್‍. ಹನುಮನಾಯಕ್‍ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್‍ ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು