ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಸಮರ್ಥವಾಗಿ ಎದುರಿಸಲು ಸಿದ್ಧ

ಕೊರೊನಾ ವಾರಿಯರ್ಸ್‌ ಸನ್ಮಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಆತ್ಮವಿಶ್ವಾಸದ ನುಡಿ
Last Updated 11 ಜುಲೈ 2020, 15:46 IST
ಅಕ್ಷರ ಗಾತ್ರ

ದಾವಣಗೆರೆ: ‘ಜಿಲ್ಲೆಯಲ್ಲಿ ಎಷ್ಟೇ ಕೊರೊನಾ ಪ್ರಕರಣ ಬಂದರೂ ಸಮರ್ಥವಾಗಿ ನಿಭಾಯಿಸುತ್ತೇವೆ. ಯಾವುದಕ್ಕೂ ಜಗ್ಗುವುದಿಲ್ಲ. ಜಿಲ್ಲೆಯಲ್ಲಿ ವೈದ್ಯರ ತಂಡವಲ್ಲ. ದಂಡೇ ಇದೆ. ಮೂಲ ಸೌಕರ್ಯದಲ್ಲಿ ವ್ಯವಸ್ಥಿತವಾಗಿ ಸಿದ್ಧರಿದ್ದೇವೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಮತ್ತು ಚಿಗಟೇರಿ ಜಿಲ್ಲಾ ಆಸ್ಪತ್ರೆಯಿಂದ ಶನಿವಾರ ಕೊರೊನಾ ವಾರಿಯರ್‌ಗಳಾದ‌ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಿ ಮಾತನಾಡಿದರು.

ಹಂತ ಹಂತವಾಗಿ, ವ್ಯವಸ್ಥಿತವಾಗಿ ವೈದ್ಯಕೀಯ ತಂಡವನ್ನು ಸಜ್ಜುಗೊಳಿಸುವ ಮೂಲಕ ಜಿಲ್ಲಾ ಆಸ್ಪತ್ರೆಯಲ್ಲಿ ಮೂಲ ಸೌಕರ್ಯ ಒದಗಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗಂಭೀರ ಪ್ರಕರಣಗಳನ್ನೂ ನಿಭಾಯಿಸಿ, ಸೋಂಕಿತರನ್ನು ಗುಣಮುಖರನ್ನಾಗಿ ಮನೆಗೆ ಕಳುಹಿಸಲಾಗಿದೆ ಎಂದ ಅವರು, ‘ಬದುಕನ್ನು ಸವಾಲಾಗಿ ಸ್ವೀಕರಿಸಿ, ವೈಯಕ್ತಿಕ ಬದುಕು ಪಣಕ್ಕಿಟ್ಟು, ಜೀವ ಲೆಕ್ಕಿಸದೇ ಕೊರೊನಾ ಸಂದರ್ಭದಲ್ಲಿ ಹೋರಾಡಿದ ಎಲ್ಲರಿಗೂ ಅಭಾರಿ’ ಎಂದು ಕೃತಜ್ಞತೆ ಸಲ್ಲಿಸಿದರು.

‘ವೈದ್ಯರು ಮತ್ತು ಸಿಬ್ಬಂದಿಗೆ ಸಾರ್ವಜನಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇವೆ. ನಿಮ್ಮನ್ನು ಹುರಿದುಂಬಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ನಿಮ್ಮ ಸೇವೆ ಸ್ಮರಿಸಲು ಶಬ್ದಗಳೇ ಇಲ್ಲ’ ಎಂದರು.

‘ಮೊದ ಮೊದಲು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾದಾಗ ಎಲ್ಲರಲ್ಲೂ ಮಂಕು ಕವಿದಿತ್ತು. ದಿನ ನಿತ್ಯದ ಕಾರ್ಯದಲ್ಲಿ ನನ್ನ ಮುಖದಲ್ಲಿ ಕಾಂತಿ ಇಲ್ಲದ್ದನ್ನು ಗಮನಿಸಿದ ಜಿಲ್ಲಾಡಳಿತದ ನಮ್ಮ ತಂಡ 20 ಅಲ್ಲ 200 ಕೇಸ್ ಬರಲಿ ಸರ್ ನಾವು ನಿಭಾಯಿಸುತ್ತೇವೆ. ನೀವು ಮೊದಲಿನ ರೀತಿ ನಮ್ಮೆಲ್ಲರನ್ನು ಹುರಿದುಂಬಿಸಿಕೊಂಡು ಹೋಗಬೇಕು’ ಎಂದು ನನ್ನ ಜೊತೆ ನಿಂತರು ಎಂದು ಸ್ಮರಿಸಿದರು.

‘ಜಿಲ್ಲೆ ರಾಜ್ಯದ ಹೃದಯಭಾಗದಲ್ಲಿದೆ. ಇಲ್ಲಿಗೆ ಅನೇಕ ರೆಫರ್ ಕೇಸ್‌ಗಳು ಬರುತ್ತವೆ. ಇದುವರೆಗೂ 13 ಸಾವಿರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಹಂತ ಹಂತವಾಗಿ ಪರೀಕ್ಷೆಗೆ ಕಳುಹಿಸಿದ ಫಲಿತಾಂಶ ಬರುತ್ತಿದ್ದು, ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಯಾರೊಬ್ಬರೂ ಆತಂಕ ಪಡಬೇಕಿಲ್ಲ’ ಎಂದು ಮನವಿ ಮಾಡಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ್, ‘ಕೊರೊನಾ ಎಷ್ಟು ದಿನ ಇರುತ್ತದೆಯೋ ತಿಳಿದಿಲ್ಲ. ಕರ್ತವ್ಯದಲ್ಲಿರುವವರಿಗೆ ಪ್ರೋತ್ಸಾಹಿಸಲು ಸನ್ಮಾನ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಹಾಗೂ ಅರೆ ಸರ್ಕಾರಿ ವೈದ್ಯರು ಸೇರಿ 850 ಜನರು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಹತೋಟಿಗೆ ತಂದು ಜಯಿಸುತ್ತೇವೆ ಎಂಬ ವಿಶ್ವಾಸವಿದೆ’ ಎಂದರು.

ವೈದ್ಯರು ಮತ್ತು ಅರೆಕಾಲಿಕ ವೈದ್ಯಕೀಯ ಸಿಬ್ಬಂದಿಗೆ ಪ್ರಶಂಶಾ ಪತ್ರ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಎಎಸ್‌ಪಿ ರಾಜೀವ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಡಾ. ರವಿ, ಡಾ. ಸುರೇಂದ್ರ, ಡಾ.ಕಾಳಪ್ಪ, ಡಾ. ಸುಭಾಶ್‍ಚಂದ್ರ, ಎಸ್‍ಎಸ್‍ಐಎಂಎಸ್ ಪ್ರಾಂಶುಪಾಲ ಡಾ. ಪ್ರಸಾದ್ ಸೇರಿ ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT