ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಬೆಳೆ ಸಮೀಕ್ಷೆ ಉದಾರವಾಗಿರಲಿ: ಕೃಷಿ ಸಚಿವ ಎನ್. ಚಲುವನಾರಾಯಣಸ್ವಾಮಿ

Published 23 ನವೆಂಬರ್ 2023, 5:56 IST
Last Updated 23 ನವೆಂಬರ್ 2023, 5:56 IST
ಅಕ್ಷರ ಗಾತ್ರ

ದಾವಣಗೆರೆ: ಬೆಳೆ ಸಮೀಕ್ಷೆ ಮಾಡುವಾಗ ಅಧಿಕಾರಿಗಳು ಲೆಕ್ಕಾಚಾರ ಹಾಕಬಾರದು. ಉದಾರ ಮನಸ್ಸಿನಿಂದ ಸಮೀಕ್ಷೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಕೃಷಿ ಸಚಿವ ಎನ್. ಚಲುವನಾರಾಯಣಸ್ವಾಮಿ ಅಧಿಕಾರಿಗಳಿಗೆ ಸಲಹೆ ನೀಡಿದರು.

ದಾವಣಗೆರೆ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆ ಕೃಷಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಪೂರ್ವ ಮುಂಗಾರು ಸಮಯದಲ್ಲಿ ಹೆಚ್ಚಿನ ಮಳೆಯಿಂದಾಗಿ ಹೆಚ್ಚಾಗಿ ಭತ್ತದ ಬೆಳೆ ಹಾನಿಯಾಗಿದ್ದು, ಅಧಿಕಾರಿಗಳು ಬೆಳೆ ಸಮೀಕ್ಷೆ ಮಾಡಿದ ವೇಳೆ ಚನ್ನಗಿರಿ ತಾಲ್ಲೂಕಿನಲ್ಲಿ ನೀರಾವರಿ ಆಶ್ರಿತ ಇದ್ದರೂ ಮಳೆಯಾಶ್ರಿತ ಎಂದು ನಮೂದಿಸಿದ್ದಾರೆ. ಒಂದು ಎಕರೆ ನಷ್ಟವಾಗಿದ್ದರೂ 10 ಗುಂಟೆ ಎಂದು ನಮೂದಿಸಿರುವುದರಿಂದ ಕೆಲವು ರೈತರಿಗೆ ಕಡಿಮೆ ಪರಿಹಾರ ಬಂದಿದೆ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ್ ವಿ.ಶಿವಗಂಗಾ ಆಗ್ರಹಿಸಿದರು.

‘ಈ ಕುರಿತು ಪರಿಶೀಲಿಸಿ; ಎಂದು ಆಯುಕ್ತರಿಗೆ ಸಚಿವರು ಸೂಚಿಸಿದರು.

ಕೃಷಿ ವಿಜ್ಞಾನಿಗಳನ್ನು ಬಳಸಿಕೊಳ್ಳಿ:

ಭತ್ತ, ಮೆಕ್ಕೆಜೋಳ, ರಾಗಿ ಹಾಗೂ ಇನ್ನಿತರೆ ಬೆಳೆಗಳನ್ನು ಕಡಿಮೆ ಅವಧಿಯಲ್ಲಿ ಮತ್ತು ಕಡಿಮೆ ತೇವಾಂಶ, ನೀರು ಬಳಕೆ ಮತ್ತು ಕನಿಷ್ಠ ನಿರ್ವಹಣೆ ಮಾಡುವ ಮೂಲಕ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಬರಗಾಲದಲ್ಲಿಯು ಮಿತ ನೀರಿನ ಬಳಕೆ ಮೂಲಕ ಆಹಾರ ಧಾನ್ಯಗಳನ್ನು ಉತ್ಪಾದನೆ ಮಾಡಲು ಸಂಶೋಧನೆ ಕೈಗೊಳ್ಳಲು ಕೃಷಿ ವಿಶ್ವವಿದ್ಯಾನಿಲಯಗಳ ವಿಜ್ಞಾನಿಗಳ ಸೇವೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಕೃಷಿ ವಿಜ್ಞಾನಿಗಳನ್ನು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದರು.

ಖರೀದಿ ಕೇಂದ್ರ ತೆರೆಯಲು ಸೂಚನೆ:

ಈಗಾಗಲೇ ಮೆಕ್ಕೆಜೋಳ, ಭತ್ತ ಕಟಾವಿಗೆ ಬಂದಿದ್ದು ರೈತರ ಮನೆ ಬಾಗಿಲಿಗೆ ಖರೀದಿದಾರರು ಬಂದು ಖರೀದಿಸುತ್ತಿದ್ದಾರೆ. ಆದರೆ ಖರೀದಿ ಮಾಡಿ ರೈತರಿಗೆ ಹಣ ನೀಡದೆ ಮೋಸ ಮಾಡುವ ಸಾಧ್ಯತೆ ಇದ್ದು, ಇದಕ್ಕೆ ಬಿಗಿ ಕ್ರಮ ಕೈಗೊಳ್ಳಲು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ ಪ್ರಸ್ತಾಪಿಸಿದರು.

ಕೂಡಲೇ ರಾಗಿ, ಭತ್ತ  ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.

‘ಜಿಲ್ಲೆಯಲ್ಲಿ ತೊಗರಿ ಬೆಳೆಯನ್ನು ಅಂತರ ಬೆಳೆಯಾಗಿ ಅಭಿವೃದ್ಧಿಪಡಿಸಿದ್ದು, ನಾಟಿ ಮಾಡುವುದರಿಂದ ಇಳುವರಿ ಜಾಸ್ತಿಯಾಗಿದೆ. ಚಲ್ಲು ಭತ್ತ, ಯಾಂತ್ರೀಕೃತ ಪದ್ಧತಿ ಜಾರಿಗೊಳಿಸಿದ್ದು, ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬರುತ್ತಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಭತ್ತದ ಇಳುವರಿ ರಾಜ್ಯದಲ್ಲಿಯೇ ಹೆಚ್ಚು ಇದೆ. ಹೆಚ್ಚಿನ ತಾಂತ್ರಿಕತೆ ಅಳವಡಿಸಿಕೊಳ್ಳುವ ಮೂಲಕ ರೈತರಿಗೆ ಅನುಕೂಲವಾಗಲು ಹೊಸ ಹೊಸ ಸಂಶೋಧನೆಗಳಿಗೆ ಮುಂದಾಗಬೇಕು’ ಸಚಿವರು ಸೂಚಿಸಿದರು.

ಕೃಷಿ ಅಧಿಕಾರಿಗಳು ಕಚೇರಿಯಲ್ಲಿರದೇ ರೈತರ ತಾಕುಗಳಿಗೆ ಭೇಟಿ ನೀಡುವ ಮೂಲಕ ತಾಂತ್ರಿಕ ಸಲಹೆಗಳನ್ನು ರೈತರಿಗೆ ಮುಟ್ಟಿಸಬೇಕೆಂದರು.

ವಿಮೆಯಲ್ಲಿ ಸಿಂಹಪಾಲು ಹಾವೇರಿಗೆ:

‘ಬೆಳೆ ವಿಮೆ ಪರಿಹಾರವನ್ನು ಪಡೆಯುವ ಜಿಲ್ಲೆಯಲ್ಲಿ ಹಾವೇರಿ ಮೊದಲ ಜಿಲ್ಲೆಯಾಗಿದ್ದು ಸಿಂಹಪಾಲು ಈ ಜಿಲ್ಲೆಯದ್ದು, ಇರುತ್ತದೆ. ಇದೇ ರೀತಿ ಇತರೆ ಜಿಲ್ಲೆಯವರು ಸಹ ಬೆಳೆ ವಿಮೆ ಮಾಡಿಸುವ ಮೂಲಕ ರೈತರಿಗೆ ಹೆಚ್ಚು ಅನುಕೂಲ ಮಾಡಿಕೊಡಬೇಕು. ಈಗ ಬಿಡುಗಡೆಯಾಗಿರುವ ಬೆಳೆ ವಿಮೆ ಪರಿಹಾರ ₹ 523 ಕೋಟಿಯಲ್ಲಿ ಹಾವೇರಿಗೆ ₹126 ಕೋಟಿ ಬಂದಿದೆ’ ಎಂದರು.

‘ಫಸಲ್ ಬಿಮಾ ಯೋಜನೆಯ ಪರಿಹಾರ ಮಾರ್ಗಸೂಚಿಯನ್ನು ಮುಂದಿನ ವರ್ಷ ಪರಿಷ್ಕರಣೆ ಮಾಡಲು ಉದ್ದೇಶಿಸಲಾಗಿದೆ. ಈ ವರ್ಷದ ಪರಿಹಾರ ಈ ಹಿಂದಿನ ಮಾರ್ಗಸೂಚಿಯಂತೆ ಇರುತ್ತದೆ. ಐದು ವರ್ಷಗಳ ಸರಾಸರಿ ಇಳುವರಿಯನ್ನು ಲೆಕ್ಕಹಾಕುವುದರಿಂದ ಈ ಭಾಗದ ರೈತರಿಗೆ ಪರಿಹಾರ ಕಡಿಮೆಯಾಗಲಿದೆ’ ಎಂದರು.

ಕೃಷಿ ಇಲಾಖೆ ಹೆಚ್ಚುವರಿ ನಿರ್ದೇಶಕ ವಿ.ಜಿ. ಪಾಟೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳ ಕೃಷಿ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT