ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ವಿಚ್ಛೇದನವಾಗಿದ್ದ ಹೆತ್ತವರನ್ನು ಒಂದು ಮಾಡಿದ ಮಗಳು

ಕೊನೆಗೂ ಒಂದೇ ಮನೆ ಸೇರಿದ 8 ವರ್ಷಗಳಿಂದ ದೂರವಿದ್ದ ದಂಪತಿ
Last Updated 26 ಜೂನ್ 2022, 4:21 IST
ಅಕ್ಷರ ಗಾತ್ರ

ದಾವಣಗೆರೆ: ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ಅನೇಕ ಜೋಡಿಗಳು ಪ್ರಕರಣ ಇತ್ಯರ್ಥಕ್ಕೆ ಮೊದಲೇ ಮತ್ತೆ ಒಂದಾಗಿರುವ ನಿದರ್ಶನಗಳಿವೆ. ಆದರೆ, ಇಲ್ಲಿ ವಿಚ್ಛೇದನವಾಗಿ ಎರಡು ವರ್ಷಗಳ ಬಳಿಕ ದಂಪತಿ ಮತ್ತೆ ಒಂದಾಗಿದ್ದಾರೆ. ಎಂಟು ವರ್ಷಗಳಿಂದ ದೂರವಿದ್ದ ತಂದೆ–ತಾಯಿಯನ್ನು ಒಂದು ಮಾಡುವಲ್ಲಿ ಮಗಳು ಯಶಸ್ವಿಯಾಗಿದ್ದಾಳೆ.

2007ರಲ್ಲಿ ಮದುವೆಯಾಗಿದ್ದ ದಂಪತಿ 2014ರವರೆಗೆ ಒಟ್ಟಿಗೆ ಸಂಸಾರ ನಡೆಸಿದ್ದರು. ಇವರಿಗೆ ಒಬ್ಬ ಮಗಳೂ ಹುಟ್ಟಿದ್ದಳು. 2014ರಲ್ಲಿ ವರದಕ್ಷಿಣೆ ಕಿರುಕುಳ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪತಿ ಮತ್ತು ಇತರ ಮೂವರ ಮೇಲೆ ಮಹಿಳೆ ದೂರು ನೀಡಿದ್ದರು. ಇದೇ ಸಂದರ್ಭದಲ್ಲಿ ವಿವಾಹ ವಿಚ್ಛೇದನಕ್ಕೆ ಪತಿ ಅರ್ಜಿ ಸಲ್ಲಿಸಿದ್ದರು. ಅದರಂತೆ 2020ರಲ್ಲಿ ಕಾನೂನು ಪ್ರಕಾರ ವಿಚ್ಛೇದನ ನಡೆದಿತ್ತು. ಪರಿಹಾರವಾಗಿ ಪತಿಯು ತನ್ನ ಜಮೀನಿನಲ್ಲಿ ಅರ್ಧ ಎಕರೆಯನ್ನು ಮಹಿಳೆಗೆ ನೀಡಬೇಕಿತ್ತು.

ಈ ದಂಪತಿಯ ಮಗಳಿಗೆ ಈಗ 13 ವರ್ಷ. ತಾಯಿಯ ಜತೆಗೆ ಇದ್ದಳು. ತಂದೆ ಬೇಕು ಎಂದು ಹಠ ಮಾಡುತ್ತಿದ್ದಳು. ಅವಳ ಒತ್ತಾಯದ ಪ್ರೀತಿಗೆ ಮಣಿದು, ಮಹಿಳೆಯೇ ತಮ್ಮ ವಿಚ್ಛೇದಿತ ಪತಿಯನ್ನು ಸಂಪರ್ಕಿಸಿದ್ದಾರೆ. ವಕೀಲ ಎಲ್‌.ಎಚ್‌. ಅರುಣಕುಮಾರ್‌ ಅವರ ಬಳಿಯೂ ತಮ್ಮ ದುಗುಡವನ್ನು ಹೇಳಿದ್ದಾರೆ. ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. 2ನೇ ಹೆಚ್ಚುವರಿ ನ್ಯಾಯಾಧೀಶರಾದ ನಿವೇದಿತಾ ಟಿ.ಎಂ. ಅವರು ಹೆಣ್ಣುಮಗಳ ತಂದೆ–ತಾಯಿ ಇಬ್ಬರನ್ನೂ ನ್ಯಾಯಾಲಯಕ್ಕೆ ಕರೆಸಿ ಮಾತುಕತೆ ನಡೆಸಿದ್ದಾರೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಜೇಶ್ವರಿ ಹೆಗಡೆ, ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಪ್ರೀತಿ ಎಸ್‌. ಜೋಷಿ, ಎರಡನೇ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶರಾದ ನಿವೇದಿತಾ ಟಿ.ಎಂ., ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಪ್ರವೀಣ್‌ ನಾಯಕ್‌ ಅವರ ನೇತೃತ್ವದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಈ ಜೋಡಿಯನ್ನು ಮತ್ತೆ ಒಂದು ಮಾಡಲಾಗಿದೆ.

ಕಾನೂನು ಪ್ರಕಾರ ಇವರು ಮತ್ತೆ ಮದುವೆಯಾಗಿ ನೋಂದಣಿ ಮಾಡಿಕೊಳ್ಳಬೇಕಿದ್ದು, ಸೋಮವಾರ ಇಬ್ಬರ ಮದುವೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT