ಮಂಗಳವಾರ, ಮೇ 18, 2021
29 °C
ಹೆದ್ದಾರಿಯ ಆಯಕಟ್ಟಿನ ಸ್ಥಳದಲ್ಲೂ ಸಂಚಾರ ಇಲ್ಲಿ ಸುಗಮ ಅಲ್ಲ

ಪಾರ್ಕಿಂಗ್‌ಗೆ ಜಾಗವಿಲ್ಲ, ಫುಟ್‌ಪಾತೇ ಎಲ್ಲ

ಡಿ.ಕೆ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಿಷ್ಕಿಂಧೆಯಾದ ರಸ್ತೆಗಳು, ಪಾರ್ಕಿಂಗ್‍ಗಳಾದ ಫುಟ್‍ಪಾತ್‍ಗಳು, ರಸ್ತೆಯಲ್ಲಿ ಸಂಚರಿಸುವ ಜನ. ರಸ್ತೆಯಲ್ಲೇ ವಾಹನಗಳ ನಿಲುಗಡೆ.

-ಸ್ಮಾರ್ಟ್‍ಸಿಟಿಯಾಗುತ್ತಿರುವ ದಾವಣಗೆರೆಯಲ್ಲಿ ಕಂಡುಬರುವ ಸಮಸ್ಯೆಗಳಿವು.

ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಬೆಣ್ಣೆದೋಸೆ ನಗರಿಯಲ್ಲಿ ಅದಕ್ಕೆ ತಕ್ಕಂತೆ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಮೇ ತಿಂಗಳ ವೇಳೆಗೆ 4.57 ಲಕ್ಷ ದ್ವಿಚಕ್ರ ವಾಹನಗಳು, 17.771 ತ್ರಿಚಕ್ರ ವಾಹನಗಳು, 50,520 ನಾಲ್ಕು ಚಕ್ರದ ವಾಹನಗಳು ನಗರದಲ್ಲಿ ಸಂಚರಿಸುತ್ತಿವೆ. ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ತಕ್ಕಂತೆ ಪಾರ್ಕಿಂಗ್ ಮಾಡಲು ಸ್ಥಳವಿಲ್ಲದಿರುವುದೇ ಸಮಸ್ಯೆಗೆ ಕಾರಣ.

ನಗರದ 24 ಕಡೆ ಏಕಮುಖ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಆದರೂ ಪಾರ್ಕಿಂಗ್ ಸಮಸ್ಯೆ ಬಗೆಹರಿದಿಲ್ಲ. ನೀವು ಹಳೇ ದಾವಣಗೆರೆಯ ಕಡೆಗೆ ಒಮ್ಮೆ ಹೋದರೆ ಸಾಕು. ವಾಪಸ್ ಬರಲು ಹರಸಾಹಸ ಪಡಬೇಕು. ವಾಹನಗಳ ಪಾರ್ಕಿಂಗ್ ಮಾಡಲು ಸ್ಥಳ ಹುಡುಕಬೇಕಾಗುತ್ತದೆ. ಕೊನೆಗೆ ಎಲ್ಲಾದರೂ ಜಾಗ ಹುಡುಕಿ ಪಾರ್ಕಿಂಗ್ ಮಾಡುವುದರೊಳಗೆ ಸಾಕುಸಾಕಾಗಿ ಹೋಗುತ್ತದೆ. ಹಬ್ಬ ಹರಿದಿನಗಳಲ್ಲಿ ವಾಹನಗಳು ಹಾಗಿರಲಿ, ಜನರೂ ನಡೆದುಕೊಂಡು ಹೋಗಲು ಪ್ರಯಾಸ ಪಡಬೇಕಾಗುತ್ತದೆ.

ನಗರದ ಬಹುತೇಕ ಅಂಗಡಿಗಳು, ಖಾಸಗಿ ಕಟ್ಟಡಗಳು ರಸ್ತೆಗೆ ಹೊಂದಿಕೊಂಡಂತೆ ಇವೆ. ಕೆಲವು ಖಾಸಗಿ ಕಟ್ಟಡಗಳು ತಮ್ಮದೇ ಆದ ಪಾರ್ಕಿಂಗ್ ಜಾಗ ಹೊಂದಿದ್ದು, ಅವರ ಉದ್ಯೋಗಿಗಳಿಗೆ ಮಾತ್ರ ಪಾರ್ಕಿಂಗ್‍ಗೆ ಅವಕಾಶ ಕಲ್ಪಿಸಿರುವುದರಿಂದ ಸಾರ್ವಜನಿಕರು ಈ ಜಾಗದಲ್ಲಿ ಪಾರ್ಕ್ ಮಾಡುವ ಹಾಗಿಲ್ಲ. ಸಣ್ಣ–ಪುಟ್ಟ ಅಂಗಡಿಗಳಿಗೆ ಸ್ವಂತ ಪಾರ್ಕಿಂಗ್ ಜಾಗ ಇಲ್ಲ. ಇದರಿಂದಾಗಿ ಅಲ್ಲಿಗೆ ಬರುವ ಗ್ರಾಹಕರು ರಸ್ತೆಯಲ್ಲೇ ಪಾರ್ಕ್ ಮಾಡುತ್ತಾರೆ. ಇದರಿಂದಾಗಿ ಜನರು ಸಂಚರಿಸಲು ತೊಂದರೆಯಾಗುತ್ತಿದೆ.

ನೋ ಪಾರ್ಕಿಂಗ್ ಜಾಗದಲ್ಲಿ ಜಾಗದಲ್ಲಿ ನಿಲ್ಲಿಸಿದರೆ ಟೋಯಿಂಗ್ ವಾಹನ ಬಂದು ಎತ್ತಿ ಹಾಕಿಕೊಂಡು ಹೋಗುವ ನಿದರ್ಶನಗಳು ಕಾಣಸಿಗುತ್ತವೆ. ಹೊಸ ಸಂಚಾರ ಕಾಯ್ದೆ ಬಂದ ಮೇಲೆ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿದವರಿಗೆ ₹53 ಸಾವಿರಕ್ಕೂ ಹೆಚ್ಚು ದಂಡ ವಿಧಿಸಲಾಗಿದೆ.

ರಾಜ್ಯದ ಮಧ್ಯ ಭಾಗದಲ್ಲಿರುವ ದಾವಣಗೆರೆಯಲ್ಲಿ ಪಿ.ಬಿ. ರಸ್ತೆಯ ಸ್ಥಿತಿ ಹೇಳತೀರದು. ಈ ರಸ್ತೆಯು ಪುಣೆಯಿಂದ ರಾಜಧಾನಿ ಬೆಂಗಳೂರುವರೆಗೂ ಸಂಪರ್ಕ ಕಲ್ಪಿಸುವುದರಿಂದ ವಾಹನ ದಟ್ಟಣೆ ಹೆಚ್ಚು. ರಸ್ತೆಯ ಮಧ್ಯೆ ವಾಹನಗಳನ್ನು ನಿಲ್ಲಿಸಿದರೆ ಈ ರಸ್ತೆಯಲ್ಲಿ ಸಂಚರಿಸುವವರ ಪಾಡು ಹೇಳತೀರದು. ಹಳೆಯ ಬಸ್ ನಿಲ್ದಾಣದ ಬಳಿ ಎಲ್ಲೆಂದರಲ್ಲಿ ಆಟೊ, ಖಾಸಗಿ ಬಸ್‍ಗಳು ನಿಂತಿರುತ್ತವೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡ ಸುಗಮ ಸಂಚಾರ ಸಂಚಾರ ಕಷ್ಟವಾಗುತ್ತದೆ.

ರೈಲ್ವೆ, ಬಸ್‌ ನಿಲ್ದಾಣಗಳಲ್ಲಿ ಶೆಲ್ಟರ್ ಇಲ್ಲ:
ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡಿದರೆ ವಾಹನಗಳ ರಕ್ಷಣೆಗಾಗಿ ಶೆಲ್ಟರ್ ಇಲ್ಲದೇ ಬಿಸಿಲಿನಲ್ಲಿ ಒಣಗಬೇಕು. ಮಳೆಯಲ್ಲಿ ನೆನೆಯಬೇಕು. ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಎರಡು ಮರಗಳನ್ನು ಬಿಟ್ಟರೆ ಅಲ್ಲಿಯೂ ವಾಹನಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಅಲ್ಲದೇ ದಾರಿಯಲ್ಲೇ ಪಾರ್ಕಿಂಗ್ ಮಾಡುತ್ತಿದ್ದು, ಜನರು ಸಂಚರಿಸಲು ತೊಂದರೆಯಾಗುತ್ತಿದೆ.

ಹಲವೆಡೆ ಕಾಮಗಾರಿ ನೆಪದಲ್ಲಿ ಫುಟ್‌ಪಾತ್‌ಗಳನ್ನು ಅಗೆದಿದ್ದು, ಪಾರ್ಕಿಂಗ್ ಮಾಡಲು ಜಾಗವಿಲ್ಲದೇ ರಸ್ತೆಯಲ್ಲಿ ನಿಲ್ಲಿಸುವಂತಾಗಿದೆ. ನಗರದ ನಿಟುವಳ್ಳಿ ಮುಖ್ಯರಸ್ತೆಯಲ್ಲಿ ವಾರದ ಹಿಂದೆ ರಸ್ತೆ ಅಗೆದು ಹಾಗೆಯೇ ಬಿಟ್ಟಿದ್ದು, ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವ ಪರಿಸ್ಥಿತಿ ಬಂದಿದೆ. ನಗರದಲ್ಲಿ ವಾಹನದಟ್ಟಣೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಜನರ ಒತ್ತಾಯ.

 

12 ಸ್ಥಳಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್

ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ 12 ಸ್ಥಳಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್ ನಿರ್ಮಿಸಲು ದಾವಣಗೆರೆ ಸ್ಮಾರ್ಟ್‌ ಲಿಮಿಟೆಡ್‌ ನಿರ್ಧರಿಸಿದೆ.

‘ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಒಪ್ಪಿಗೆಯ ಮೇರೆಗೆ ಸ್ಥಳಗಳನ್ನು ಗುರುತಿಸಿದ್ದು, ಇದರಲ್ಲಿ ಡಿಸ್ಪ್ಲೇ ಬೋರ್ಡ್, ಸರ್ವೇಲೆನ್ಸ್ ಕ್ಯಾಮೆರಾ, ಕ್ಯಾಂಟಿಲಿವರ್ಸ್‌ ಇರುತ್ತವೆ. ವಾಹನಗಳನ್ನು ಸೂಕ್ತ ಸ್ಥಳಗಳಲ್ಲಿ ನಿಲ್ಲಿಸುವ ಉದ್ದೇಶದಿಂದ ಥರ್ಮೊಪ್ಲಾಸ್ಟಿಕ್ ಪೇಂಟ್ಸ್‌ ಮೂಲಕ ಗುರುತು ಮಾಡಲಾಗುವುದು’ ಎನ್ನುತ್ತಾರೆ ದಾವಣಗೆರೆ ಸ್ಮಾರ್ಟ್‌ ಸಿಟಿ ಲಿಮಿಟೆಟ್‌ನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ.

ಆ್ಯಂಡ್ರಾಯ್ಡ್‌ ಡಿವೈಸ್‌ ಅನ್ನು ಒದಗಿಸಿದ್ದು, ಈ ಮೂಲಕ ಪಾರ್ಕಿಂಗ್ ಜಾಗದಲ್ಲಿ ಸ್ಥಳಾವಕಾಶ ಲಭ್ಯವಿದೆಯೋ ಇಲ್ಲವೋ ಎಂದು ತಿಳಿಯಬಹುದು. ಅಲ್ಲದೇ ಪಾರ್ಕಿಂಗ್ ಸ್ಥಳವನ್ನು ಮುಂಗಡವಾಗಿ ಈ ಆ್ಯಪ್‌ನಿಂದ ಬುಕ್‌ ಮಾಡಬಹುದು ಎನ್ನುತ್ತಾರೆ.

‘₹95,81,000 ವೆಚ್ಚದಲ್ಲಿ ಈ ಸ್ಮಾರ್ಟ್‌ ಪಾರ್ಕಿಂಗ್ ನಿರ್ಮಿತಗೊಳ್ಳಲಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ಎರಡು ತಿಂಗಳಲ್ಲಿ ಕಾಮಗಾರಿ ಮುಗಿಯಲಿದ್ದು, ದರವನ್ನು ನಿಗದಿಪಡಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲಾಗುವುದು’ ಎಂದು ಹೇಳುತ್ತಾರೆ.

 

ಎಲ್ಲೆಲ್ಲಿ ಸ್ಮಾರ್ಟ್‌ ಪಾರ್ಕಿಂಗ್

lಅಶೋಕ ರಸ್ತೆ

lಮೆಡಿಕಲ್ ಕಾಲೇಜು ರಸ್ತೆ

lಜಯದೇವ ವೃತ್ತದಿಂದ ಅಂಬೇಡ್ಕರ್ ವೃತ್ತ

lಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಎವಿಕೆ ರಸ್ತೆ

lಎವಿಕೆ ಕಾಲೇಜು ರಸ್ತೆ

lಐಟಿಐ ಕಾಲೇಜು ವೃತ್ತದಿಂದ ಗಾಂಧಿ ಸರ್ಕಲ್

lಪಿ.ಜೆ. ಬಡಾವಣೆಯಿಂದ ಹಳೇ ಕೋರ್ಟ್ ರಸ್ತೆ

lಜಯದೇವ ಸರ್ಕಲ್‌ನಿಂದ ಪಿಬಿ ರಸ್ತೆ

lಯುಬಿಟಿಡಿ ಬಾಯ್ಸ್‌ ಹಾಸ್ಟೆಲ್ ರೋಡ್‌

lಗುಂಡಿ ಸರ್ಕಲ್ ನಿಂದ ನರ್ಸಿಂಗ್ ಹೋಮ್‌

lಮಂಡಿಪೇಟೆ ಮುಖ್ಯ ರಸ್ತೆ

 

ಪಾರ್ಕಿಂಗ್ ವ್ಯವಸ್ಥೆ ತುಂಬಾ ಅಧ್ವಾನವಾಗಿದೆ. ಆ ಕಡೆಯಿಂದ ಒಂದು ಗಾಡಿ ಬಂದರೆ ಈ ಕಡೆಯಿಂದ ಮತ್ತೊಂದು ಹೋಗಲು ಆಗುವುದಿಲ್ಲ. ಜನರು ನಡೆದುಕೊಂಡು ಹೋಗುವುದೇ ಸಮಸ್ಯೆಯಾಗಿದೆ.>
-ಮೂರ್ತಿ, ಎಂ.ಜಿ. ರಸ್ತೆಯ ನಿವಾಸಿ

ಪಾರ್ಕಿಂಗ್ ವ್ಯವಸ್ಥೆ ಸರಿಯಿಲ್ಲ. ತುಂಬಾ ಸಮಸ್ಯೆ ಇದೆ. ಇದೊಂದು ವ್ಯಾಪಾರ ಕೇಂದ್ರವಾಗಿರುವುರದಿಂದ ಹೆಚ್ಚಾಗಿ ವಾಹನಗಳು ಇಲ್ಲಿಗೆ ಬರುತ್ತವೆ. ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
-ವಿನಾಯಕ, ಹಳೇ ದಾವಣಗೆರೆ ನಿವಾಸಿ

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪಾರ್ಕಿಂಗ್‌ ಸ್ಥಳದಲ್ಲಿ ಸುರಕ್ಷತೆ ಇಲ್ಲ. ನೆರಳು ಇಲ್ಲ. ಕೆಲವೇ ವಾಹನಗಳಿಗೆ ಮಾತ್ರ ಶೆಲ್ಟರ್‌ ಇದೆ.
ಪರಮೇಶ್, ದುಗ್ಗಮ್ಮನ ಪೇಟೆ ನಿವಾಸಿ

ನಗರದಲ್ಲಿ ಪಾರ್ಕಿಂಗ್‌ಗೆ ಇನ್ನಷ್ಟು ಸ್ಥಳಗಳನ್ನು ಗುರುತಿಸಬೇಕೆಂಬ ಪ್ರಸ್ತಾವ ಇದೆ. ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು. ಸ್ಮಾರ್ಟ್‌ ಪಾರ್ಕಿಂಗ್‌ಗೆ ಜಾಗ ಗುರುತಿಸಿ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ಗೆ ನೀಡಲಾಗಿದೆ.
- ಹನುಮಂತರಾಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು