ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | 27 ದಿನಗಳ ಕುತೂಹಲಕ್ಕೆ ಇಂದು ತೆರೆ

ಲೋಕಸಭೆ ಚುನಾವಣೆ; ಮೂವರ ನಡುವೆ ಪೈಪೋಟಿ l ಮಧ್ಯಾಹ್ನದೊಳಗೆ ಫಲಿತಾಂಶ ಸಾಧ್ಯತೆ
ಬಸವರಾಜು ಡಿ.ಕೆ.
Published 4 ಜೂನ್ 2024, 4:39 IST
Last Updated 4 ಜೂನ್ 2024, 4:39 IST
ಅಕ್ಷರ ಗಾತ್ರ

ದಾವಣಗೆರೆ: ತೀವ್ರ ಕುತೂಹಲ ಕೆರಳಿಸಿರುವ, ಲೋಕಸಭೆ ಚುನಾವಣೆಯ ಫಲಿತಾಂಶ ಮಂಗಳವಾರ (ಜೂನ್ 4) ಹೊರಬೀಳಲಿದೆ.

ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಿದ್ದು, ‘ವಿಜಯಮಾಲೆ’ ಯಾರ ಕೊರಳಿಗೆ ಬೀಳಲಿದೆ ಎಂಬ 27 ದಿನಗಳ ಕಾಯುವಿಕೆಗೆ ಮಧ್ಯಾಹ್ನದ ವೇಳೆಗೆ ತೆರೆ ಬೀಳಲಿದೆ. ರಾಜ್ಯದಲ್ಲಿ ಎರಡನೇ ಹಂತ, ರಾಷ್ಟ್ರಮಟ್ಟದಲ್ಲಿ 3ನೇ ಹಂತದಲ್ಲಿ ಮೇ 7ರಂದು ಕ್ಷೇತ್ರದ ಚುನಾವಣೆ ನಡೆದಿತ್ತು.

ಸತತ 4ನೇ ಬಾರಿ ಗೆದ್ದು ದಾಖಲೆ ಬರೆದಿದ್ದ ಬಿಜೆಪಿಯ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಬದಲಿಗೆ, ಇದೇ ಮೊದಲ ಬಾರಿಗೆ ಪತ್ನಿ ಗಾಯತ್ರಿ ಸಿದ್ದೇಶ್ವರ ಸ್ಪರ್ಧಿಸಿದ್ದು, ಬಿಜೆಪಿಯ ಸತತ ಗೆಲುವಿನ ದಾಖಲೆ ಬರೆಯಲಿದ್ದಾರೋ ಅಥವಾ  ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ‘ಅದೃಷ್ಟ’ ಒಲಿಯಲಿದೆಯೇ ಎಂಬ ಕುತೂಹಲತೀವ್ರಗೊಂಡಿದೆ.

ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಪೈಪೋಟಿ ಇದ್ದು, ಇಬ್ಬರಲ್ಲಿ ಯಾರು ಗೆದ್ದರೂ ಕ್ಷೇತ್ರದ ಮತದಾರರು ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಸಂಸದೆಯನ್ನಾಗಿ ಪಡೆಯಲಿದ್ದಾರೆ.

ಮೂವರ ನಡುವೆ ಪೈಪೋಟಿ: ಚುನಾವಣಾ ಕಣದಲ್ಲಿ 30 ಅಭ್ಯರ್ಥಿಗಳು ಇದ್ದರೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಯೇ ನೇರ ಸ್ಪರ್ಧೆ ನಡೆದಿದ್ದು, ಪಕ್ಷೇತರ ಅಭ್ಯರ್ಥಿ, ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ಪೈಪೋಟಿ ನೀಡಿದ್ದಾರೆಯೇ ಎಂಬುದೂ ಸ್ಪಷ್ಟವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅಲೆ ಹಾಗೂ ಪತಿಯ ಅಭಿವೃದ್ಧಿ ಕಾರ್ಯ ನೆಚ್ಚಿಕೊಂಡು ಗೆಲ್ಲುವ ವಿಶ್ವಾಸದೊಂದಿಗೆ ಗಾಯತ್ರಿ ಸಿದ್ದೇಶ್ವರ ಬಿರುಸಿನ ಪ್ರಚಾರ ನಡೆಸಿದ್ದರು.

ಕ್ಷೇತ್ರ ವ್ಯಾಪ್ತಿಯಲ್ಲಿ 6 ಜನ ಸ್ವಪಕ್ಷೀಯ ಶಾಸಕರಲ್ಲದೆ, ಒಬ್ಬ ಪಕ್ಷೇತರ ಶಾಸಕಿಯ ಬೆಂಬಲ ಹಾಗೂ ಪತಿ ಎಸ್.ಎಸ್‌. ಮಲ್ಲಿಕಾರ್ಜುನ್ ಹಾಗೂ ಮಾವ ಶಾಮನೂರು ಶಿವಶಂಕರಪ್ಪ ಅವರ ವರ್ಚಸ್ಸಿನ ಬಲದೊಂದಿಗೆ ಗೆಲುವಿನ ವಿಶ್ವಾಸ ಇಟ್ಟುಕೊಂಡಿರುವ ಕಾಂಗ್ರೆಸ್‌ನ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸ್ಪರ್ಧಿಸಿದ್ದಾರೆ.

ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ ಕುಮಾರ್ ಎಷ್ಟು ಮತಗಳನ್ನು ಪಡೆಯಲಿದ್ದಾರೆ ಎಂಬುದೂ ಕ್ಷೇತ್ರದಾದ್ಯಂತ ತೀವ್ರ ಚರ್ಚಿತ ವಿಷಯವಾಗಿದೆ.

ಕ್ಷೇತ್ರದಲ್ಲಿ ಈ ಬಾರಿ ನಡೆದಿರುವುದು 13ನೇ ಚುನಾವಣೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ 6 ಬಾರಿ ಗೆಲುವು ಹಂಚಿಕೊಂಡಿದ್ದು, ಪ್ರಮುಖ ಪಕ್ಷಗಳಿಂದ ಮಹಿಳೆ ಯರಿಬ್ಬರು ಸ್ಪರ್ಧಿಸಿರುವ ಪ್ರಸಕ್ತ ಚುನಾವಣೆಯಲ್ಲಿ ಇಬ್ಬರಲ್ಲಿ ಯಾರೇ ಗೆದ್ದರೂ ಪಕ್ಷಕ್ಕೆ ಮೇಲುಗೈ ಆಗಲಿದೆ.‌

ಚುನಾವಣೆ ಪೂರ್ವದಲ್ಲಿ ಟಿಕೆಟ್ ಯಾರಿಗೆ ಸಿಗುತ್ತದೆ ಎಂಬ ಕೂತೂಹಲವಿತ್ತು. ಸಂಸದ ಸಿದ್ದೇಶ್ವರ ಬದಲಿಗೆ ಪತ್ನಿ ಗಾಯತ್ರಿ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದ್ದು ಅಚ್ಚರಿಗೆ ಕಾರಣವಾಗಿತ್ತು. ಬಿಜೆಪಿ ಮಹಿಳೆಯೊಬ್ಬರಿಗೆ ಟಿಕೆಟ್ ಘೋಷಿಸುತ್ತಿದ್ದಂತೆಯೇ  ಕಾಂಗ್ರೆಸ್‌ ಸಹ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿತು.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಜಿ.ಬಿ. ವಿನಯ್‌ಕುಮಾರ್ ನಿರೀಕ್ಷೆ ಹುಸಿಯಾಗಿ, ಬಂಡೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.

ದಾವಣಗೆರೆ ವಿ.ವಿ.ಯಲ್ಲಿ ಮತ ಎಣಿಕೆಗೆ ಸಕಲ ಸಿದ್ಧತೆ

ದಾವಣಗೆರೆ: ಲೋಕಸಭೆ ಚುನಾವಣೆಯ ಮತ ಎಣಿಕೆ ದಾವಣಗೆರೆ ವಿಶ್ವವಿದ್ಯಾಲಯದ ಹೊಸ ಸಮಾಜ ವಿಜ್ಞಾನ ಕಟ್ಟಡದಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಮತ ಎಣಿಕೆ ಕೇಂದ್ರದ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ವಿದ್ಯುನ್ಮಾನ ಮತಯಂತ್ರಗಳನ್ನು ಇಟ್ಟಿರುವ ಭದ್ರತಾ ಕೊಠಡಿಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸೋಮವಾರ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮತದಾನ ಕೇಂದ್ರದ ಸುತ್ತ 83 ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಿದ್ದು, ವೆಬ್‌ ಕ್ಯಾಸ್ಟಿಂಗ್ ಮೂಲಕ ಚಲನವಲನ ವೀಕ್ಷಿಸಲಾಗುತ್ತಿದೆ.

‘ಮಂಗಳವಾರ ಬೆಳಿಗ್ಗೆ 6.30ಕ್ಕೆ ವಿವಿಧ ಪಕ್ಷಗಳ ಏಜೆಂಟರ ಎದುರು ಭದ್ರತಾ ಕೊಠಡಿಗಳನ್ನು ತೆರೆಯಲಿದ್ದು, ವಿದ್ಯುನ್ಮಾನ ಮತ ಯಂತ್ರಗಳು ಹಾಗೂ ವಿ.ವಿ. ಪ್ಯಾಟ್ ಯಂತ್ರಗಳನ್ನು ಪರಿಶೀಲಿಸಿದ ಬಳಿಕ ಬೆಳಿಗ್ಗೆ 8ಕ್ಕೆ ಮತ ಎಣಿಕೆಯನ್ನು ಆರಂಭಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾಹಿತಿ ನೀಡಿದರು.

‘ಕ್ಷೇತ್ರದಲ್ಲಿ 1,946 ಮತಗಟ್ಟೆಗಳಿದ್ದು ಕನಿಷ್ಠ 16 ಹಾಗೂ ಗರಿಷ್ಠ 19 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಪ್ರತಿ ಎಣಿಕೆ ಟೇಬಲ್‍ನಲ್ಲಿ ಎಣಿಕೆ ವೀಕ್ಷಕರು, ಎಣಿಕೆ ಸಹಾಯಕರು, ಮೈಕ್ರೋ ಅಬ್ಸವರ್‌ಗಳು ಕಾರ್ಯ ನಿರ್ವಹಿಸುವರು. ಅಂಚೆ ಮತ ಎಣಿಕೆಗೆ 12 ಟೇಬಲ್‍ಗಳನ್ನು ಹಾಕಲಾಗಿದ್ದು, ಸೇವಾ ಮತದಾರರ ಮತ ಎಣಿಕೆಗೆ ಒಂದು ಟೇಬಲ್‍ನಲ್ಲಿ ಎಣಿಕೆ ನಡೆಯಲಿದೆ. ಪ್ರತಿ ಸುತ್ತಿನ ಎಣಿಕೆ ಮುಕ್ತಾಯವಾದ ನಂತರ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಫಲಿತಾಂಶ ಪ್ರಚಾರಪಡಿಸಲಾಗುತ್ತದೆ’ ಎಂದರು.  

‘8 ಮತಗಟ್ಟೆಗಳಿಗೂ ಒಂದೊಂದು ಸ್ಟ್ರಾಂಗ್ ರೂಂ ಇದ್ದು, ಅದರ ಪಕ್ಕದಲ್ಲಿಯೇ ಎಣಿಕೆಗೆ ಸಿದ್ಧತೆ ಮಾಡಲಾಗಿದೆ. ಪ್ರತಿ ಸುತ್ತಿನಲ್ಲೂ 14 ಇವಿಎಂಗಳ ಮತ ಎಣಿಕೆ ನಡೆಯಲಿದ್ದು, 8 ವಿಧಾನಸಭಾ ಕ್ಷೇತ್ರ ಸೇರಿ 112 ಟೇಬಲ್‌ಗಳು ಇದ್ದು, ಒಂದೊಂದು ಸುತ್ತಿನಲ್ಲೂ 112 ಮತಯಂತ್ರಗಳ ಎಣಿಕೆ ನಡೆಯಲಿದೆ.

‘ಪಾರದರ್ಶಕ ಮತ ಎಣಿಕೆ ಉದ್ದೇಶದಿಂದ ಎಲ್ಲಾ ಎಣಿಕೆ ಕೇಂದ್ರಗಳಲ್ಲೂ ವೆಬ್‌ಕ್ಯಾಸ್ಟ್ ಮಾಡಿಸಿದ್ದು, ವೀಕ್ಷಕರು ವಿದ್ಯುನ್ಮಾನ ಮತಯಂತ್ರಗಳ ಚಲನವಲನ ವೀಕ್ಷಿಸಲು ಅನುಕೂಲವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT