ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಟೈಲರ್ಸ್ ಕಲ್ಯಾಣ ಮಂಡಳಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

Last Updated 8 ಜೂನ್ 2020, 13:58 IST
ಅಕ್ಷರ ಗಾತ್ರ

ದಾವಣಗೆರೆ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ಟೈಲರ್ಸ್ ಕಲ್ಯಾಣ ಮಂಡಳಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೆ.ಜಿ. ಯಲ್ಲಪ್ಪ ನೇತೃತ್ವದಲ್ಲಿ ಸಂಘದ ಸದಸ್ಯರು ಜಯದೇವ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

‘ರಾಜ್ಯದಾದ್ಯಂತ ಟೈಲರ್ ವೃತ್ತಿ ಮಾಡುವವರು ಅಸಂಘಟಿತ ವಲಯದವರಾಗಿದ್ದು, ಯಾವುದೇ ಸೌಲಭ್ಯಗಳಿಲ್ಲದೇ ಬಳಲುತ್ತಿದ್ದಾರೆ. ಇಂದು ಟೈಲರ್ ವೃತ್ತಿಯಲ್ಲಿ ತೊಡಗಿರುವವರಲ್ಲಿ ಬಹುತೇಕ ಮಹಿಳೆಯರೇ ಇದ್ದಾರೆ. ಮನೆಗಳಲ್ಲಿ ಹಾಗೂ ಶಾಪ್‌ಗಳಲ್ಲಿ ಬಟ್ಟೆ ಹೊಲೆಯುವ ಕಾಯಕದಲ್ಲಿ ತೊಡಗಿದ್ದಾರೆ. ಕಾರ್ಮಿಕರ ಕಾಯ್ದೆ ಅನ್ವಯಿಸದೇ ಇರುವ ಸಣ್ಣ ಸಣ್ಣ ಗಾರ್ಮೆಂಟ್ಸ್ ಘಟಕಗಳಲ್ಲಿ ಟೈಲರಿಂಗ್ ಮಾಡುವವರು ನಮ್ಮ ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟಿದ್ದಾರೆ’ ಎಂದು ಪ್ರತಿಭಟನಕಾರರು ಹೇಳಿದರು.

ಕೇರಳದಲ್ಲಿ ಟೈಲರ್‌ಗಳ ಕಲ್ಯಾಣ ಮಂಡಳಿಗಳು ಜಾರಿಯಲ್ಲಿವೆ. ಆದ್ದರಿಂದ ರಾಜ್ಯದಲ್ಲೂ ಟೈಲರ್‌ಗಳ ಕಲ್ಯಾಣ ಮಂಡಳಿ ಜಾರಿಗೊಳಿಸಬೇಕು. ಲಾಕ್‌ಡೌನ್ ನಿಂದಾಗಿ ಕಷ್ಟದಲ್ಲಿರುವ ಟೈಲರ್ ಗಳಿಗೆ ₹5 ಸಾವಿರ ಸಹಾಯಧನ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಗನ್ನಾಥ್ ಎಸ್. ಗಂಜಿಗಟ್ಟಿ, ಅಶೋಕ್ ಎಂ.ಆರ್, ಚಂದ್ರಶೇಖರ್ ಕೆ.ಗಣಪಾ, ಗಿರೀಶ್ ನವಲೆ, ಮನ್ಸೂರ್, ಸಂದೀಪ್, ಆನಂದರಾವ್, ವಿಜಯಕುಮಾರ್, ರಾಜೀವ್, ಜಿತೇಂದ್ರ ಇದ್ದರು.

ಸಕಾಲಕ್ಕೆ ಮಾಸಿಕ ವೇತನ ಪಾವತಿಸಲು ಮನವಿ

ಕೆಲವು ತಿಂಗಳಿನಿಂದ ಸ್ಥಗಿತವಾಗಿರುವ ವೃದ್ದಾಪ್ಯ, ಅಂಗವಿಕಲ, ವಿಧವಾ ವೇತನವನ್ನು ಕೂಡಲೇ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಯುವಜನ ಫೆಡರೇಷನ್ ದಾವಣಗೆರೆ ಜಿಲ್ಲಾ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಅವರಿಗೆ ಮನವಿ ಸಲ್ಲಿಸಿದರು.

‘ರಾಜ್ಯವು ಕೋರೋನಾ ಸಂಕಷ್ಟದಲ್ಲಿ ಸಿಲುಕಿದೆ. ಬಡವರ ಬದುಕು ನಾಶವಾಗಿದೆ. ಸರ್ಕಾರ ನೀಡುತ್ತಿದ್ದ ಅಲ್ಪ ಪ್ರಮಾಣದ ಮಾಸಿಕ ವೇತನ ನಂಬಿಕೊಂಡು ಹಲವು ಕುಟುಂಬಗಳು ಜೀವನ ಸಾಗಿಸುತ್ತಿವೆ. ವೃದ್ದಾಪ್ಯ, ಅಂಗವಿಕಲ, ವಿಧವಾ ವೇತನ ಬಂದಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಆದ್ದರಿಂದ ಸರ್ಕಾರ ವೇತನ ಪಾವತಿಗೆ ಕ್ರಮವಹಿಸಬೇಕು. ಸವಿತಾ ಸಮಾಜ, ಮಡಿವಾಳ ಹಾಗೂ ಇತರೆ ಸಮಾಜಗಳಿಗೆ ಘೋಷಿಸಿರುವ ಆರ್ಥಿಕ ನೆರವನ್ನು ಪಡೆದುಕೊಳ್ಳಲು ಸೂಕ್ತ ಸರಳ ಕ್ರಮ ಅನುಸರಿಸಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಕಟ್ಟಡ ಕಾರ್ಮಿಕರಿಗೆ, ಟ್ಯಾಕ್ಸಿ ಚಾಲಕರಿಗೆ ₹5 ಸಾವಿರ ಸಹಾಯ ಧನವನ್ನು ಎಲ್ಲಾ ಕಾರ್ಮಿಕರಿಗೂ ಅವರವರ ಖಾತೆಗೆ ಹಾಕಬೇಕು. ಈ ಕುರಿತು ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ತುರ್ತು ಕೊಡಬೇಕು, ಚಾಲಕರಿಗೆ ಡಿಎಲ್ ಇದ್ದವರಿಗೆ ಎಲ್ಲರಿಗೂ ₹5 ಸಾವಿರ ಕೊಡಬೇಕು. ಮಂಡಕ್ಕಿ ಭಟ್ಟಿ ಕಾರ್ಮಿಕರಿಗೆ ₹5 ಸಾವಿರ ಸಹಾಯಧನ, ಅಗತ್ಯವಸ್ತುಗಳ ಕಿಟ್, ಕಟ್ಟಡ ಕಾರ್ಮಿಕರಿಗೆ ವೈದ್ಯಕೀಯ ವೆಚ್ಚ ಭರಿಸಬೇಕು. ಸಹಾಯಧನ ಪಾವತಿಗೆ ವಿಳಂಬ ಮಾಡಬಾರದು ಸೇರಿ ವಿವಿಧ ಬೇಡಿಕೆ ಒತ್ತಾಯಿಸಿ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಆವರಗೆರೆ ವಾಸು, ರಾಜು ಕೆರನಹಳ್ಳಿ,ತಿಪ್ಪೇಶ್, ಗದಿಗೇಶ್, ಎಚ್.ಹನುಮಂತಪ್ಪ,ಲೋಹಿತ್, ರುದೇಶ್,ಫಜುಲ್, ಅಂಜಿನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT