ದಾವಣಗೆರೆ: ‘ನಗರದ ಕೆ.ಆರ್.ಮಾರುಕಟ್ಟೆ, ಗಡಿಯಾರ ಕಂಬ, ಬಾಪೂಜಿ ಆಸ್ಪತ್ರೆ ಸುತ್ತಮತ್ತ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ’ ಎಂದು ಆರೋಪಿಸಿ ನಗರದಲ್ಲಿ ನೂರಾರು ಬೀದಿ ಬದಿ ವ್ಯಾಪಾರಿಗಳು ‘ಜಿಲ್ಲಾ ಬೀದಿ ಬದಿ ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ’ದ ನೇತೃತ್ವದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಕೆ.ಆರ್.ಮಾರುಕಟ್ಟೆಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಮಹಾನಗರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿದರು.
‘ಎಲ್ಲ ನೈಜ ಬೀದಿ ಬದಿ ವ್ಯಾಪಾರಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಬೇಕು. ಭದ್ರತೆ ಒದಗಿಸಿ, ಕಾನೂನು ರಕ್ಷಣೆ ನೀಡಬೇಕು. ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ಒಕ್ಕಲೆಬ್ಬಿಸುವುದನ್ನು ಕೂಡಲೇ ನಿಲ್ಲಿಸಬೇಕು. ಬೀದಿ ಬದಿ ವ್ಯಾಪಾರಿಗಳ ಜೀವನ ರಕ್ಷಣೆ ಮತ್ತು ನಿಯಂತ್ರಣ ಕಾಯ್ದೆಯನ್ನು (2014) ಸಮರ್ಪಕವಾಗಿ ಜಾರಿಗೆ ತರಬೇಕು. ಬೀದಿ ಬದಿ ವ್ಯಾಪಾರಸ್ಥರ ಕಲ್ಯಾಣ ಮಂಡಳಿ ನಿಧಿಯನ್ನು ಹೆಚ್ಚಿಸಿ, ಬೀದಿ ಬದಿ ವ್ಯಾಪಾರಸ್ಥರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು’ ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
‘ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದನ್ನು ಖಂಡಿಸಿ ಹಲವು ಬಾರಿ ಪಾಲಿಕೆಗೆ ಮನವಿ ಕೊಟ್ಟರೂ ಉಪಯೋಗವಾಗಿಲ್ಲ. ದೊಡ್ಡ ದೊಡ್ಡ ಮಾಲ್ ಕಟ್ಟಲು ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಆಡಳಿತ ಶ್ರೀಮಂತರ ಪರವಾಗಿದೆ’ ಎಂದು ಕಾರ್ಮಿಕ ಮುಖಂಡ ಕೈದಾಳ್ ಮಂಜುನಾಥ್ ಆರೋಪಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಸ್ಮಾಯಿಲ್, ಗೌರವಾಧ್ಯಕ್ಷ ರೆಹಮತುಲ್ಲಾ, ಕಾರ್ಯದರ್ಶಿಗಳಾದ ದುಗ್ಗಪ್ಪ, ಭಾರತಿ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶೀಲಾ ಶ್ರೀನಿವಾಸ್, ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಮುಖಂಡರು, ನೂರಾರು ಬೀದಿಬದಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.