ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮಬದ್ಧವಾಗಿ ವಹಿವಾಟು ನಡೆಸಿ: ದಾವಣಗೆರೆ ಡಿಸಿ ಸೂಚನೆ

ವರ್ತಕರು, ಪೆಟ್ರೋಲ್ ಬಂಕ್, ಹೋಟೆಲ್, ಮುದ್ರಣಾಲಯಗಳ ಮಾಲೀಕರಿಗೆ ಡಿಸಿ ಸೂಚನೆ
Published 26 ಮಾರ್ಚ್ 2024, 16:20 IST
Last Updated 26 ಮಾರ್ಚ್ 2024, 16:20 IST
ಅಕ್ಷರ ಗಾತ್ರ

ದಾವಣಗೆರೆ: ‘ಜವಳಿ, ಚಿನ್ನ, ಬೆಳ್ಳಿ, ಅಡುಗೆ ಸಾಮಗ್ರಿಗಳ ವ್ಯಾಪಾರಿಗಳು ಸೇರಿದಂತೆ ಸಾರಿಗೆ ವಾಹನಗಳ ಮಾಲೀಕರು ನಿಯಮಬದ್ಧವಾಗಿ ವಹಿವಾಟು ನಡೆಸುವ ಮೂಲಕ ಚುನಾವಣಾ ನೀತಿಸಂಹಿತೆ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ. ತಿಳಿಸಿದರು.

ಜವಳಿ, ಚಿನ್ನ, ಬೆಳ್ಳಿ, ಸ್ಟೀಲ್ ಅಂಗಡಿ ವರ್ತಕರು, ಪೆಟ್ರೋಲ್ ಬಂಕ್, ಸಮುದಾಯ ಭವನ, ಹೋಟೆಲ್, ಸರಕು ಸಾಗಣೆ ವಾಹನಗಳು, ಮುದ್ರಣಾಲಯಗಳ ಮಾಲೀಕರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣಾ ಸಂದರ್ಭದಲ್ಲಿ ಜನರಿಗೆ ಉಚಿತ ಕೊಡುಗೆ ನೀಡಲು ವಸ್ತುಗಳನ್ನು ಖರೀದಿ ಮಾಡುವ ಸಂಭವವಿರುತ್ತದೆ. ಅಂಗಡಿಗಳ ಮಾಲೀಕರು ಇಂತಹ ಖರೀದಿ ಬಗ್ಗೆ ವಿವರ ನೀಡಬೇಕು. ಯಾವುದೇ ವಸ್ತುಗಳನ್ನು ಖರೀದಿಸಿದರೂ, ಜಿ.ಎಸ್.ಟಿ. ಬಿಲ್ ನೀಡುವುದು ಕಡ್ಡಾಯ. ಅಂಗಡಿಗೆ ವಾಣಿಜ್ಯ ತೆರಿಗೆ ಅಧಿಕಾರಿಗಳು ಬಂದಾಗ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಪರಿಶೀಲನೆಗೆ ಸಹಕರಿಸಬೇಕು’ ಎಂದು ಸೂಚಿಸಿದರು.

ಅನುಮತಿ ಪಡೆಯಿರಿ:

ವ್ಯಾಪಾರದ ಹಣವನ್ನು ಬ್ಯಾಂಕ್‍ಗೆ ಜಮಾ ಮಾಡಲು ಹೋಗುವಾಗ ನಗದು ವಶಕ್ಕೆ ಪಡೆಯುತ್ತಾರೆ ಎಂದು ವರ್ತಕರು ಪ್ರಸ್ತಾಪಿಸಿದರು. ವಹಿವಾಟು, ಹಣ ಸಾಗಣೆ ಬಗ್ಗೆ ದಾಖಲೆಗಳ ಸಮೇತ ಆಯಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗೆ ಸಲ್ಲಿಸಿ ವಹಿವಾಟು ನಡೆಸಬಹುದು ಎಂದು ಡಿ.ಸಿ. ತಿಳಿಸಿದರು.

‘ಆಭರಣ ಸಿದ್ಧಪಡಿಸಲು ನೀಡುವಾಗಲೂ, ಅದಕ್ಕೆ ಸಂಬಂಧಿಸಿದ ರಸೀದಿಯನ್ನು ನೀಡಬೇಕಾಗುತ್ತದೆ. ರಸೀದಿ ನೀಡಿದರೆ ಯಾರೂ, ವಶಕ್ಕೆ ಪಡೆಯುವುದಿಲ್ಲ’ ಎಂದು ಸಷ್ಟಪಡಿಸಿದರು.

ಕೂಪನ್ ವಹಿವಾಟು ನಡೆಸುವಂತಿಲ್ಲ:

‘ಯಾವುದೇ ಹೋಟೆಲ್, ಅಂಗಡಿಗಳಲ್ಲಿ ಕೂಪನ್ ಮೂಲಕ ವಹಿವಾಟು ನಡೆಸುವಂತಿಲ್ಲ. ಹೋಟೆಲ್‍ನಲ್ಲಿ ವಾಸ್ತವ್ಯ ಹೂಡುವವರೇ ಬಿಲ್ ಪಾವತಿಸಬೇಕು. ಯಾವುದೇ ಹೋಟೆಲ್, ಅಂಗಡಿ, ಪೆಟ್ರೋಲ್ ಬಂಕ್‍ಗಳಲ್ಲಿ ಕೂಪನ್ ಆಧರಿಸಿ ಯಾವುದೇ ವಸ್ತುಗಳು, ಉಪಾಹಾರ, ಊಟ ನೀಡುವಂತಿಲ್ಲ’ ಎಂದರು.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಿ.ಎಸ್.ಟಿ. ನಿಯಮಗಳ ಬಗ್ಗೆ ವಿವರ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು ಎಸ್. ಬಳ್ಳಾರಿ, ಎಎಸ್‌ಪಿ ವಿಜಯಕುಮಾರ ಎಂ.ಸಂತೋಷ್, ನೋಡಲ್ ಅಧಿಕಾರಿ ಗಿರೀಶ್ ಎಚ್., ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಂಜುನಾಥ್ ಮತ್ತು ಜವಳಿ ಅಂಗಡಿ ಮಾಲೀಕರು, ಬೆಳ್ಳಿ, ಬಂಗಾರದ ಅಂಗಡಿ, ಪೆಟ್ರೋಲ್ ಬಂಕ್, ಮುದ್ರಣಾಲಯ, ಸಾರಿಗೆ ವಾಹನಗಳ ಮಾಲೀಕರು ಉಪಸ್ಥಿತರಿದ್ದರು.

ವ್ಯಾಪಾರ ವಹಿವಾಟಿನಲ್ಲಿ ಯಾವುದೇ ಉಲ್ಲಂಘನೆಯಾಗಬಾರದು. ಗೋದಾಮುಗಳಲ್ಲಿ ದಾಸ್ತಾನಿರುವ ವಸ್ತುಗಳಿಗೂ ನಿಮ್ಮಲ್ಲಿರುವ ಬಿಲ್‍ಗಳಿಗೂ ತಾಳೆಯಾಗುವಂತಿರಬೇಕು
ಉಮಾ ಪ್ರಶಾಂತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT