ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನ್ನಾಳಿ | ಕೈ ಹಿಡಿದ ಟೊಮೆಟೊ: ಆರು ದಿನದಲ್ಲೇ ₹ 1 ಲಕ್ಷ ಗಳಿಸಿದ ರೈತ

ಬೇಲಿಮಲ್ಲೂರು ಗ್ರಾಮದ ರೇವಣಪ್ಪಗೆ ಬಂಪರ್‌ ಆದಾಯ
Published 4 ಆಗಸ್ಟ್ 2023, 7:23 IST
Last Updated 4 ಆಗಸ್ಟ್ 2023, 7:23 IST
ಅಕ್ಷರ ಗಾತ್ರ

ಹೊನ್ನಾಳಿ: ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದ ರೈತ ರೇವಣಪ್ಪ ಟೊಮೆಟೊ ಬೆಳೆಯಿಂದ 6 ದಿನಗಳಲ್ಲೇ ಬರೋಬ್ಬರಿ ₹ 1 ಲಕ್ಷ ಆದಾಯ ಗಳಿಸಿದ್ದಾರೆ..

1.06 ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿರುವ ಅವರಿಗೆ ಈಗ ಟೊಮೆಟೊ ದರ ಹೆಚ್ಚಾಗಿರುವ ಕಾರಣ ಚಿನ್ನದಂತಹ ಬೆಲೆ ಸಿಕ್ಕಿದೆ. ಟೊಮೆಟೊ ಹೊಲವನ್ನು ಹಗಲು ರಾತ್ರಿ ಕಾಯುವುದೂ ಅವರ ಕಾಯಕವಾಗಿದೆ.

‘ಮೇ ತಿಂಗಳಲ್ಲಿ 7,000 ಟೊಮೆಟೊ ಸಸಿಗಳನ್ನು ನಾಟಿ ಮಾಡಿದ್ದೆ. ಆಗ ಮಳೆಯ ಕೊರತೆ ಇತ್ತು. ಬಿಸಿಲಿನ ತಾಪಕ್ಕೆ ನಾಟಿ ಮಾಡಿದ ಸಸಿಗಳು ಒಣಗಿದವು. ಮತ್ತೆ 6,000 ಸಸಿಗಳನ್ನು ನಾಟಿ ಮಾಡಿದ್ದೆ. ಮಳೆ ಬಂದ ಕಾರಣ ಇಳುವರಿ ಚೆನ್ನಾಗಿ ಬಂತು. ಒಟ್ಟು ₹ 1.90 ಲಕ್ಷ ಖರ್ಚು ಮಾಡಿದ್ದೆ’ ಎಂದರು.

‘ಜುಲೈ 27ರಂದು ಮೊದಲ ಕಟಾವಿನಲ್ಲಿ 7 ಬಾಕ್ಸ್ ಟೊಮೆಟೊ ಬಂದಿತ್ತು. ಒಂದು ಬಾಕ್ಸ್‌ಗೆ ₹ 2,200ರಂತೆ ಮಾರಾಟ ಮಾಡಿದ್ದೆ. ಬಳಿಕ ಜುಲೈ 30ಕ್ಕೆ ಎರಡನೇ ಕಟಾವ್ ಮಾಡಿದ್ದು, 15 ಬಾಕ್ಸ್ ಟೊಮೆಟೊ ಸಿಕ್ಕಿತ್ತು. ಒಂದು ಬಾಕ್ಸ್‌ಗೆ ₹ 2,300ರಂತೆ ಮಾರಾಟ ಮಾಡಿದ್ದೆ. ಬುಧವಾರ ಮೂರನೇ ಕಟಾವು ಮಾಡಿದ್ದು, 25 ಬಾಕ್ಸ್ ಟೊಮೆಟೊ ಸಿಕ್ಕಿದೆ. ಮೂರು ಕಟಾವಿನಿಂದ ಒಟ್ಟು ₹ 1 ಲಕ್ಷ ಲಾಭ ಸಿಕ್ಕಿದೆ’ ಎಂದು ಸಂತಸ ಹಂಚಿಕೊಂಡರು ಅವರು.

ಟೊಮೆಟೊ ಖರೀದಿಗಾಗಿ ನ್ಯಾಮತಿಯ ದಲ್ಲಾಳಿಗಳು, ವ್ಯಾಪಾರಸ್ಥರು ಬರುತ್ತಿದ್ದು, ರೇವಣಪ್ಪ ಆದಾಯ ದಿನೇ ದಿನೇ ವೃದ್ಧಿಯಾಗುತ್ತಿದೆ.

‘ಬೆಳೆ ಬರುತ್ತಿದೆ. ಇನ್ನೂ ಒಂದು ತಿಂಗಳ ಕಾಲಾವಕಾಶ ಇದೆ‌. ಅಲ್ಲಿಯವರೆಗೂ ಇದೇ ದರ ಇದ್ದರೆ ₹ 10 ಲಕ್ಷ ಆದಾಯ ಬರುವ ನಿರೀಕ್ಷೆ ಇದೆ’ ಎಂದರು ರೇವಣಪ್ಪ.

ಟೊಮೆಟೊಗೆ ಒಳ್ಳೆಯ ಬೆಲೆ ಜತೆಗೆ ಕಳ್ಳರ ಕಾಟವೂ ಇರುವ ಕಾರಣ ಮನೆ ಮಂದಿಯೆಲ್ಲಾ ಹಗಲು ರಾತ್ರಿ ಹೊಲ ಕಾಯಬೇಕಾದ ಪರಿಸ್ಥಿತಿ ಇದೆ ಎಂದು ಆತಂಕವನ್ನು ಅವರು ವ್ಯಕ್ತಪಡಿಸಿದರು.

ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದ ರೇವಣಪ್ಪ ಅವರ ಜಮೀನಿಗೆ ಬಂದು ವ್ಯಾಪಾರಿಗಳು ಟೊಮೆಟೊ ಖರೀದಿ ಮಾಡುತ್ತಿರುವುದು
ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದ ರೇವಣಪ್ಪ ಅವರ ಜಮೀನಿಗೆ ಬಂದು ವ್ಯಾಪಾರಿಗಳು ಟೊಮೆಟೊ ಖರೀದಿ ಮಾಡುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT