ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ ಮೆಗಾ ಡೇರಿ: ಗರಿಗೆದರಿದ ನಿರೀಕ್ಷೆ

ತಾಲ್ಲೂಕಿನ ಎಚ್.ಕಲ್ಪನಹಳ್ಳಿ ಬಳಿ 14 ಎಕರೆ ಜಾಗದಲ್ಲಿ ನಿರ್ಮಾಣ
Published 6 ಅಕ್ಟೋಬರ್ 2023, 7:17 IST
Last Updated 6 ಅಕ್ಟೋಬರ್ 2023, 7:17 IST
ಅಕ್ಷರ ಗಾತ್ರ

ದಾವಣಗೆರೆ: ತಾಲ್ಲೂಕಿನ ಎಚ್.ಕಲ್ಪನಹಳ್ಳಿ ಬಳಿ ₹ 200 ಕೋಟಿ ವೆಚ್ಚದಲ್ಲಿ ಪ್ರತಿನಿತ್ಯ 3 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೇರಿ ಘಟಕ ನಿರ್ಮಾಣದ ಕನಸು ಗರಿಗೆದರಿದೆ.

ಶಿವಮೊಗ್ಗದಲ್ಲಿ ಈಚೆಗೆ ನಡೆದ ಒಕ್ಕೂಟದ 2022-23ನೇ ಸಾಲಿನ ವಾರ್ಷಿಕ ಸಭೆಯಲ್ಲಿ ದಾವಣಗೆರೆ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಿಸುವ ತೀರ್ಮಾನವಾಗಿದ್ದು, ಜಿಲ್ಲೆಯ ಹೈನುಗಾರರ ಬಹಳ ದಿನಗಳ ಕನಸಿಗೆ ಮರುಜೀವ ಬಂದಿದೆ.  

ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಬಹಳ ಹಿಂದಿನಿಂದಲೂ ಈ ಪ್ರಸ್ತಾವ ಇದ್ದು, ಮೂಲಸೌಲಭ್ಯದ ಕೊರತೆಯಿಂದಾಗಿ ಹಿನ್ನಡೆಯಾಗಿತ್ತು. ಈಗ ಎಚ್. ಕಲ್ಪನಹಳ್ಳಿಯಲ್ಲಿ 14 ಎಕರೆ ಜಮೀನು ಮಂಜೂರಾಗಿದ್ದು, 40 ಅಡಿ ಸಂಪರ್ಕ ರಸ್ತೆಯೂ ನಿರ್ಮಾಣವಾಗಿದೆ. ಅಗತ್ಯ ಮೂಲಸೌಲಭ್ಯಗಳು ಇವೆ. ಈ ನಿಟ್ಟಿನಲ್ಲಿ ₹ 200 ಕೋಟಿ ಹಣ ಬೇಕಾಗಿದ್ದು, ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಡುವಂತೆ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಅವರ ಮೇಲೆ ಒಕ್ಕೂಟದ ನಿರ್ದೇಶರು ಒತ್ತಡ ತರುತ್ತಿದ್ದಾರೆ.

ಈ ಹಿಂದೆ ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಬಜೆಟ್‌ನಲ್ಲಿ ಪ್ರತ್ಯೇಕ ಹಾಲು ಒಕ್ಕೂಟದ ಪ್ರಸ್ತಾಪವಿದೆಯಾದರೂ ಹಣ ಇಟ್ಟಿರಲಿಲ್ಲ. ಈಗ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಿದ್ದು, ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಹಣ ತರುತ್ತಾರೆ ಎಂಬ ಭರವಸೆಯಲ್ಲಿ ಇದ್ದಾರೆ.

ದಾವಣಗೆರೆಯಲ್ಲಿ ಮೆಗಾ ಡೈರಿ ಆರಂಭವಾಗಿ ಹಾಲಿನ ಪ್ಯಾಕೆಟ್‌ ಫೀಡರ್ ಯೂನಿಟ್ ಪೌಡರ್ ಪ್ಲಾಂಟ್ ನಿರ್ಮಾಣವಾದರೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯ ನಿರ್ವಹಿಸುವ 4000 ಜನರಿಗೆ ಅನುಕೂಲವಾಗಲಿದೆ. ನಿರ್ಮಾಣವಾಗಲು ಕನಿಷ್ಠ 2 ವರ್ಷಗಳಾದರೂ ಬೇಕಾಗುತ್ತದೆ.
ಬಸಪ್ಪ ಶಿಮುಲ್ ಉಪಾಧ್ಯಕ್ಷ

‘ದಾವಣಗೆರೆ ಜಿಲ್ಲೆಯಲ್ಲಿ ಪ್ರಸ್ತುತ ಪ್ರತಿನಿತ್ಯ 2.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಚಿತ್ರದುರ್ಗದಲ್ಲಿ 1.50 ಲಕ್ಷ ಲೀಟರ್ ಸೇರಿ ಒಟ್ಟು ಎರಡು ಜಿಲ್ಲೆಗಳಿಂದ 4 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದೆ. ಎರಡು ಜಿಲ್ಲೆಗಳಿಂದ 1.50 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ 395 ಹಾಲು ಉತ್ಪಾದಕ ಸಂಘಗಳು ಇವೆ. 25ರಿಂದ 27 ಸಾವಿರ ಸದಸ್ಯರು ಇದ್ದಾರೆ. ಹಾಲಿನ ಉತ್ಪನ್ನಗಳು, ಮೊಸರು, ಕ್ಷೀರಭಾಗ್ಯಕ್ಕೂ ಹಾಲು ಇಲ್ಲಿಂದ ಹೋಗುತ್ತದೆ. ಸ್ಥಳೀಯ ಹಾಲಿನ ಡೇರಿ, ಬೆಂಗಳೂರು, ಕಲಬುರಗಿಗೂ ಶಿಮುಲ್‌ನಿಂದ ಹಾಲು ಹೋಗುತ್ತದೆ. ಹತ್ತಿರದಲ್ಲೇ ಮೆಗಾ ಡೇರಿಯಾದರೆ ಹೆಚ್ಚಿನ ದರ ಸಿಗುತ್ತದೆ’ ಎಂದು ಒಕ್ಕೂಟದ ಅಧಿಕಾರಿಗಳು ಮಾಹಿತಿ ನೀಡಿದರು.

‘ದಾವಣಗೆರೆ ಜಿಲ್ಲೆಯಲ್ಲೇ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾದರೆ ಘಟಕ ಹತ್ತಿರವಾಗುತ್ತದೆ. ಕೇಂದ್ರ ಕಚೇರಿ ಈಗ ಶಿವಮೊಗ್ಗದಲ್ಲಿ ಇದ್ದು, ಕೇಂದ್ರ ಕಚೇರಿಯೂ ಹತ್ತಿರದಲ್ಲಿದ್ದಾಗ ಸೌಲಭ್ಯ ಪಡೆಯಲು ಅನುಕೂಲವಾಗುತ್ತದೆ. ಉಳಿತಾಯವಾಗಿ ಲಾಭವೂ ಆಗುತ್ತದೆ. ಸುಸಜ್ಜಿತ ಡೇರಿಯಾದರೆ ಮಾತ್ರ ಸುಸ್ಥಿರ ಕಾಪಾಡಲು ಸಾಧ್ಯ’ ಎಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

‘ದಾವಣಗೆರೆಯ ದೊಡ್ಡಬಾತಿಯಲ್ಲಿ ಡೇರಿ, ಸಂಸ್ಕರಣಾ ಘಟಕ ಈಗಾಗಲೇ ಇದೆ. ಅಲ್ಲಿ ಹಾಲು, ಮೊಸರು, ಪೇಡ ಹಾಗೂ ಮಜ್ಜಿಗೆಯನ್ನು ಉತ್ಪಾದನೆ ಮಾಡಲಾಗುತ್ತಿದೆ. ಹೊಸ ಒಕ್ಕೂಟ ಅಸ್ತಿತ್ವಕ್ಕೆ ಬೇಕಾದ ಎಲ್ಲ ಮೂಲ ಸೌಲಭ್ಯಗಳು ಈಗಾಗಲೇ ಇರುವುದರಿಂದ ದೊಡ್ಡ ಮೊತ್ತದ ಅನುದಾನ ಸಹ ಬೇಕಿಲ್ಲ’ ಎಂದು ಶಿಮುಲ್ ಉಪಾಧ್ಯಕ್ಷ ಬಸಪ್ಪ ಹೇಳಿದರು.

ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್ ಒಲವು

ದಾವಣಗೆರೆಗೆ ಪ್ರತ್ಯೇಕ ಹಾಲು ಒಕ್ಕೂಟ ನಿರ್ಮಾಣ ಮಾಡಿ ಪ್ರತಿ ಹಸು ಖರೀದಿಗೆ ಕೃಷಿ ಇಲಾಖೆಯಿಂದ ₹40 ಸಾವಿರ ಸಬ್ಸಿಡಿ ಕೊಡಲಾಗುವುದು. ಜಿಲ್ಲಾ ಪಂಚಾಯಿತಿಯಿಂದ ದನದ ಕೊಟ್ಟಿಗೆ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಯಿಂದ ಅನುದಾನ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಈಚೆಗೆ ಜನತಾದರ್ಶನ ಕಾರ್ಯಕ್ರಮದಲ್ಲಿ ತಿಳಿಸಿದ್ದರು. ಆ ಮೂಲಕ ಡಿಸಿಸಿ ಬ್ಯಾಂಕ್‌ನಿಂದ ಹಸು ಖರೀದಿಗೆ ಶೇ 3ರ ಬಡ್ಡಿ ದರದಲ್ಲಿ ₹1 ಲಕ್ಷದವರೆಗೆ ಸಾಲ ನೀಡಲಾಗುವುದು’ ಬ್ಯಾಂಕ್ ನಿರ್ದೇಶಕ ಜೆ.ಆರ್. ಷಣ್ಮುಖಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT