ಶನಿವಾರ, ಆಗಸ್ಟ್ 13, 2022
24 °C
ದಾವಣಗೆರೆ ವಿವಿ- ಆಂಧ್ರ ಬುಡಕಟ್ಟು ವಿವಿ ಒಡಂಬಡಿಕೆ

ಪ್ರಾಯೋಗಿಕ ಅಧ್ಯಯನಕ್ಕೆ ಆದ್ಯತೆ: ಪ್ರೊ.ಕಟ್ಟೀಮನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಆದಿವಾಸಿ ಬುಡಕಟ್ಟು ಜನಾಂಗದ ಸಂಸ್ಕೃತಿ, ಇತಿಹಾಸ, ಪರಂಪರೆ, ಪಾರಂಪರಿಕ ಜ್ಞಾನ, ಕಲೆಗಳ ಸಮಗ್ರ ಅಧ್ಯಯನ, ಸಂಶೋಧನೆ ಹಾಗೂ ನಶಿಸುತ್ತಿರುವ ಸಮುದಾಯದ ಏಳ್ಗೆಯ ಉದ್ದೇಶದಿಂದ ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಆಂಧ್ರಪ್ರದೇಶದ ಆದಿವಾಸಿ ಬುಡಕಟ್ಟು ಕೇಂದ್ರೀಯ ವಿಶ್ವವಿದ್ಯಾಲಯಗಳು ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಐಕ್ಯುಎಸಿ ವತಿಯಿಂದ ಶುಕ್ರವಾರ ನಡೆದ ಸಮಾರಂಭದಲ್ಲಿ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತೇಜಸ್ವಿ ಕಟ್ಟಿಮನಿ ಮತ್ತು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ಸಹಿ ಮಾಡಿದ ಒಡಂಬಡಿಕೆ ಪತ್ರವನ್ನು ಹಸ್ತಾಂತರ ಮಾಡಿಕೊಳ್ಳುವ ಮೂಲಕ ನೂತನ ಯೋಜನೆಗೆ ಚಾಲನೆ ನೀಡಿದರು.

ಪ್ರೊ. ತೇಜಸ್ವಿ ಕಟ್ಟಿಮನಿ, ‘ಆದಿವಾಸಿಗಳಲ್ಲಿ ಅಪಾರ ಜ್ಞಾನ ಸಂಪತ್ತಿದೆ. ಆದರೆ ಪ್ರಮಾಣಪತ್ರ ಇಲ್ಲ. ಹೀಗಾಗಿ ಅವರ ಜ್ಞಾನ ಬೆಳಕು ಕಾಣದು. ಅದೇ ಅವರ ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ. ಸಂಶೋಧನೆ ಮೂಲಕ ಅವರ ಪಾರಂಪರಿಕ ಜ್ಞಾನವನ್ನು ಗುರುತಿಸಿ, ವೃತ್ತಿಪರವಾಗಿ ಬೆಳೆಸಿ, ಆದಾಯದ ಮೂಲವನ್ನಾಗಿ ಪರಿವರ್ತಿಸುವ ಕೆಲಸ ಆಗಬೇಕು. ಹಾಗಾದಾಗ ಮಾತ್ರ ಬುಡಕಟ್ಟು ಜನಾಂಗದ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.

‘ಬುಡಕಟ್ಟು ವಿಶ್ವವಿದ್ಯಾಲಯವು ಅಧ್ಯಯನ, ಸಂಶೋಧನೆ, ಯೋಜನೆ ಅನುಷ್ಠಾನಕ್ಕಾಗಿ ಒಡಂಬಡಿಕೆ ಮಾಡಿಕೊಂಡ ಮೊದಲ ವಿಶ್ವವಿದ್ಯಾಲಯ ಇದಾಗಿದೆ. ಇಲ್ಲಿಯ ಕೇವಲ ಪುಸ್ತಕದ ಅಧ್ಯಯನಕ್ಕಿಂತ ಪ್ರಾಯೋಗಿಕ ಅಧ್ಯಯನಕ್ಕೆ ಆದ್ಯತೆ ನೀಡಲಾಗುವುದು. ಬುಡಕಟ್ಟು ಜನಾಂಗದ ಬಳಿ ಇರುವ ಪಾರಂಪರಿಕ ಜ್ಞಾನ ಸಂಪತ್ತು, ವೈದ್ಯ ಪದ್ಧತಿ, ಆಹಾರ, ನೀರಿನ ಸಂಗ್ರಹ ಮತ್ತಿತರ ಜ್ಞಾನಗಳನ್ನು ಕಲಿತು, ಅವುಗಳ ಮೌಲ್ಯಗಳನ್ನು ತಿಳಿಸುವ ಹಾಗೂ ಮುಂದಿನ ಪೀಳಿಗೆಗೆ ಒಯ್ಯುವ ಕೆಲಸ ಆಗಬೇಕಾಗಿದೆ. ಇದಕ್ಕೆ ಈ ಒಡಂಬಡಿಕೆ ಹೊಸ ಆಯಾಮ ನೀಡಲಿದೆ’ ಎಂದು ತಿಳಿಸಿದರು.

‘ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಮ್ಯಾಸಗೊಲ್ಲರು, ಮ್ಯಾಸನಾಯಕರು, ಕಾಡುಗೊಲ್ಲರು, ವೇಷದವರು ಮತ್ತಿತರ ಬುಡಕಟ್ಟು ಜನಾಂಗದವರ ಅಧ್ಯಯನ ಮತ್ತು ಪಾರಂಪರಿಕ ಸಂಸ್ಕೃತಿಯ ಸಂಶೋಧನೆ ನಡೆಯಬೇಕಾಗಿದೆ. ಬುಡಕಟ್ಟು ಜನಾಂಗದಿಂದಾಗಿಯೇ ದೇಶದಲ್ಲಿ ಜನಪದ ಸಂಸ್ಕೃತಿ, ಆಚರಣೆ, ಆಹಾರ ಮತ್ತು ವೈದ್ಯ ಪದ್ಧತಿಗಳು ಗಟ್ಟಿಯಾಗಿ ಉಳಿದಿವೆ. ಅವುಗಳ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ನಡೆದು, ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುವಂತಾಗಬೇಕು‘ ಎಂದರು.

ಬುಡಕಟ್ಟು ಜನಾಂಗದಲ್ಲಿ ಹಲವು ವಿಶಿಷ್ಟ ತಳಿಗಳ ಸಂಗ್ರಹ, ನೀರಿನ ಸಂಗ್ರಹ ಇದೆ. ಅವುಗಳಲ್ಲಿ ಔಷಧೀಯ ಗುಣಗಳಿದ್ದು, ಆರೋಗ್ಯ ರಕ್ಷಣೆ ಜೊತೆಗೆ ಪೂರಕವಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆರೋಗ್ಯಕರವಾದ, ಯಾವುದೇ ದುಷ್ಪರಿಣಾಮ ಇಲ್ಲದ ಚಿಕಿತ್ಸಾ ಪದ್ಧತಿ ಇದೆ. ಅದನ್ನು ಬೆಳಕಿಗೆ ತಂದು, ಇಂಗ್ಲಿಷ್ ವೈದ್ಯ ಪದ್ಧತಿಯಂತೆ ಬೆಳೆಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕಾಗಿವೆ’ ಎಂದು ಹೇಳಿದರು.

ದಾವಣಗೆರೆ ವಿವಿ ಕುಲಪತಿ ಪ್ರೊ. ಶರಣಪ್ಪ ಹಲಸೆ, ‘ಸ್ಥಳೀಯ ಸಂಪನ್ಮೂಲ, ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ವೈಜ್ಞಾನಿಕ ಸಂಶೋಧನೆ ಮೂಲಕ ಮಾರುಕಟ್ಟೆ ಒದಗಿಸುವ ಮತ್ತು ಅವುಗಳಿಗೆ ಮೌಲ್ಯಗಳನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯವು ಕಾರ್ಯ ನಿರ್ವಹಿಸುತ್ತಿದೆ. ಹಲವು  ಸಂಶೋಧನಾ ಅಧ್ಯಯನಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ’ ಎಂದು ತಿಳಿಸಿದರು.

ಕುಲಸಚಿವ ಪ್ರೊ. ಬಸವರಾಜ ಬಣಕಾರ, ಸಿಂಡಿಕೇಟ್ ಸದಸ್ಯೆ ವಿಜಯಲಕ್ಷ್ಮಿ ಹಿರೇಮಠ ಮಾತನಾಡಿದರು. ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್ ಇದ್ದರು. ಐಕ್ಯುಎಸಿ ನಿರ್ದೇಶಕಿ ಪ್ರೊ. ಗಾಯತ್ರಿ ದೇವರಾಜ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ನಾಗಸ್ವರೂಪ ಒಡಂಬಡಿಕೆ ಕುರಿತು ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು