ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸಿಇಒ ಮೇಲೆ ಸದಸ್ಯರಿಂದ ವಾಗ್ದಾಳಿ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ಕಡತ ವಿಲೇವಾರಿ ವಿಳಂಬ
Last Updated 5 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ದಾವಣಗೆರೆ: ಕಡತ ವಿಲೇವಾರಿ, ಅಭಿವೃದ್ಧಿ ಕೆಲಸಗಳು ವಿಳಂಬವಾಗುತ್ತಿರುವ ವಿಚಾರಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರು ಮತ್ತು ಸಿಇಒ ಎಚ್‌. ಬಸವರಾಜೇಂದ್ರ ನಡುವಿನ ವಾಗ್ವಾದಕ್ಕೆ ಸೋಮವಾರ ಇಲ್ಲಿ ನಡೆದ ಸಾಮಾನ್ಯ ಸಭೆ ವೇದಿಕೆಯಾಯಿತು. ಅಧಿಕಾರಿಗಳ ಮತ್ತು ಸದಸ್ಯರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದಕ್ಕೆ ಇದು ಸಾಕ್ಷಿಯಾಯಿತು.

ಸಭೆಯ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಸದಸ್ಯ ತೇಜಸ್ವಿ ಪಟೇಲ್‌, ‘ನೀವು ಸಿಇಒ ಆಗಿ ಬಂದಾಗಿನಿಂದ ಗ್ರಾಮ ಪಂಚಾಯಿತಿಯಿಂದ ತಾಲ್ಲೂಕು ಪಂಚಾಯಿತಿಗೆ, ತಾಲ್ಲೂಕು ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿಗೆ ಬರುವ ಕಡತಗಳ ವಿಲೇವಾರಿಗೆ ಬಹಳ ವಿಳಂಬವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಪಿಡಿಒಗಳು ಸದಸ್ಯರಿಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ನೀವು ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ದೂರಿದರು. ‘ಸಕಾಲ’ ಮಾದರಿಯಲ್ಲಿ ಕಡತಗಳ ವಿಲೇವಾರಿಗೆ ಕಾಲಮಿತಿ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸದಸ್ಯ ಕೆ.ಎಚ್‌. ಓಬಳಪ್ಪ, ‘ಪಿಡಿಒಗಳನ್ನು ಬದಲಾಯಿಸಬಾರದು ಎಂದು ಕಳೆದ ಸಭೆಯಲ್ಲೇ ಠರಾವು ಪಾಸು ಮಾಡಲಾಗಿತ್ತು. ಹೀಗಿದ್ದರೂ ವರ್ಗಾವಣೆ ಮಾಡಿದ್ದೀರಿ. ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವುದರಿಂದ ಅನುದಾನ ಲ್ಯಾಪ್ಸ್‌ ಆಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಇನ್ನೂ ಕೆಲ ಸದಸ್ಯರು ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಬಸವರಾಜೇಂದ್ರ, ‘ನಾನು ಬಂದ ಬಳಿಕ ಕಡತಗಳ ವಿಲೇವಾರಿಗೆ ದಾಖಲಾತಿ ಪುಸ್ತಕಗಳನ್ನು ಇಟ್ಟು ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಂಡಿದ್ದೇನೆ. ಯಾವುದೇ ಕಡತಗಳೂ ವಿಳಂಬವಾಗುತ್ತಿಲ್ಲ. ಸ್ವಂತ ಕೆಲಸ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಕೆಲವರು ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.

‘ಇ–ಕಚೇರಿ ವ್ಯವಸ್ಥೆ ಮಾಡಲಾಗುತ್ತಿದ್ದು, ಎರಡು ತಿಂಗಳ ಒಳಗೆ ಅದು ಜಾರಿಗೆ ಬರುವ ನಿರೀಕ್ಷೆ ಇದೆ. ಆಗ ಯಾವ ಕಡತ ಯಾವ ಹಂತದಲ್ಲಿದೆ ಎಂಬುದು ಆನ್‌ಲೈನ್‌ನಲ್ಲೇ ತಿಳಿಯಲಿದೆ’ ಎಂದು ಹೇಳಿದರು.

ಸದಸ್ಯ ಜಿ. ವಿರಶೇಖರಪ್ಪ, ‘ಎರಡು–ಮೂರು ತಿಂಗಳಾದರೂ ಕಡತಗಳಿಗೆ ಸಹಿ ಹಾಕುತ್ತಿಲ್ಲ. ನೀವು ಸರಿಯಾಗಿ ಕೆಲಸ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ನಾವು ಸಿಇಒ ವಿರುದ್ಧ ಮಾತನಾಡುತ್ತಿದ್ದೇವೆ’ ಎಂದು ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡರು.

ಇದರಿಂದ ತಾಳ್ಮೆ ಕಳೆದುಕೊಂಡ ಸಿಇಒ, ‘ನಿಮ್ಮ ಯಾವ ಕಡತ ವಿಳಂಬವಾಗಿದೆ ಎಂಬ ಪಟ್ಟಿಯನ್ನು ಕೊಡಿ. ಸುಮ್ಮನೆ ಆರೋಪ ಮಾಡಬೇಡಿ’ ಎಂದು ಏರು ಧ್ವನಿಯಲ್ಲೇ ಸಮರ್ಥಿಸಿಕೊಂಡರು. ಈ ವೇಳೆ ಸಿಇಒ ಹಾಗೂ ಆಡಳಿತ–ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ದಾದ ನಡೆಯಿತು.

ಕೊಳವೆಬಾವಿ ಬಿಲ್‌ ಬಾಕಿ:ಅಧ್ಯಕ್ಷೆ ಶೈಲಜಾ ಬಸವರಾಜ್‌, ‘ಕೊಳವೆಬಾವಿ ಕೊರೆಸಿರುವ ಬಿಲ್‌ಗಳನ್ನು ಪಾವತಿಸದೇ ಇರುವುದರಿಂದ ಹೊಸದಾಗಿ ಕೊಳವೆಬಾವಿ ಕೊರೆಯಲು ಮುಂದೆ ಬರುತ್ತಿಲ್ಲ. ಕಡತಕ್ಕೆ ಏಕೆ ಸಹಿ ಹಾಕುತ್ತಿಲ್ಲ’ ಎಂದು ಸಿಇಒ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ‘ಈಗಾಗಲೇ 620 ಕೊಳವೆಬಾವಿಗಳಿಗೆ ಬಿಲ್‌ ಹಣ ಪಾವತಿಸಲಾಗಿದೆ. ಒಪ್ಪಿಗೆ ಪಡೆಯದೇ ಕೊರೆಸಿದ ಕೊಳವೆಬಾವಿಯನ್ನು ಟಾಕ್ಸ್‌ಪೋರ್ಸ್‌–3ರ ಕಾಮಗಾರಿಯಲ್ಲಿ ಸೇರಿಸಿ ಕೊಡುವಂತೆ ಸೂಚಿಸಿದ್ದೇನೆ. ಈ ಬಗ್ಗೆ ಯಾವುದೇ ಕಡತ ನಮಗೆ ಬಂದಿಲ್ಲ’ ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜು, ‘ಮೇ ತಿಂಗಳಲ್ಲೇ ಕಡತವನ್ನು ನೀಡಿದ್ದೇನೆ. ಇದಕ್ಕೆ ರಸೀದಿಯನ್ನೂ ಪಡೆದಿದ್ದೇನೆ’ ಎಂದರು.

ಈ ವೇಳೆ ಸದಸ್ಯರು ಸಿಇಒ ನಿಲುವಿನ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತಮ್ಮ ಗಮನಕ್ಕೆ ತರದೇ ಕೊಳವೆಬಾವಿ ಕೊರೆಸಿದ್ದಾರೆ ಎಂಬ ಕಾರಣಕ್ಕೆ ಸಿಇಒ ಕಡತಕ್ಕೆ ಸಹಿ ಹಾಕುತ್ತಿಲ್ಲ ಎಂದು ಅಧ್ಯಕ್ಷರು ಆರೋಪಿಸಿದರು.

ಮಧ್ಯಪ್ರವೇಶಿಸಿದ ಶಾಸಕ ಎಸ್‌.ಎ. ರವೀಂದ್ರನಾಥ, ‘ಕೊಳವೆಬಾವಿ ಕೊರೆಸಿರುವ ಬಗ್ಗೆ ವಿಶ್ವಾಸ ಇಲ್ಲದಿದ್ದರೆ ನೀವು ಹೋಗಿ ಸ್ಥಳ ಪರಿಶೀಲಿಸಿಕೊಂಡು ಬರಬಹುದು. ವಿಳಂಬ ಮಾಡದೇ ಹಣ ಪಾವತಿಸಿ’ ಎಂದು ಸಿಇಒಗೆ ಸೂಚಿಸಿದರು.

ಅಡಿಕೆ ಬೆಳೆಯಲು ಸಹಾಯಧನ: ಉಪಾಧ್ಯಕ್ಷ ಸುರೇಂದ್ರ ನಾಯ್ಕ, ‘ನರೇಗಾ ಯೋಜನೆಯಡಿ ಅಡಿಕೆ ಬೆಳೆಯಲು ರೈತರಿಗೆ ಗರಿಷ್ಠ ₹ 2 ಲಕ್ಷ ಸಹಾಯಧನ ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಒಂದು ಬಾರಿ ಮಾತ್ರ ನೀಡುವುದರಿಂದ ಬೆಳೆ ವಿಸ್ತರಣೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿ ವರ್ಷವೂ ಒಬ್ಬ ರೈತನಿಗೆ ₹ 2 ಲಕ್ಷ ಸಹಾಯಧನ ನೀಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಮನವಿ ಮಾಡಿದರು. ಡ್ರಿಪ್‌ ಹಾಗೂ ಟ್ಯಾಂಕರ್‌ ಖರೀದಿಯಲ್ಲಿ ಸಬ್ಸಿಡಿ ಪಡೆಯುವಲ್ಲಿ ಉಂಟಾಗುತ್ತಿರುವ ತೊಂದರೆ ಬಗೆಗೂ ಗಮನ ಸೆಳೆದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಟಿಪ್ಪು ಜಯಂತಿ, ಕಾಶ್ಮೀರ ವಿಚಾರ: ಗದ್ದಲ
ಸಭೆಯ ಆರಂಭದಲ್ಲಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್‌. ಮಹೇಶ್‌ ಮಾತನಾಡಿ, ‘ನೂತನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಜಿಲ್ಲಾ ಪಂಚಾಯಿತಿಯಿಂದ ಸ್ವಾಗತ ಕೋರುತ್ತೇವೆ. ಟಿಪ್ಪು ಸರ್ಕಾರಿ ಜಯಂತಿ ರದ್ದುಗೊಳಿಸಿರುವುದು ಸ್ವಾಗತಾರ್ಹ. ಕೇಂದ್ರ ಸರ್ಕಾರ ಜಮ್ಮು–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿರುವುದನ್ನೂ ಸ್ವಾಗತಿಸುತ್ತೇವೆ’ ಎಂದು ‘ಭಾರತ್‌ ಮಾತಾಕಿ ಜೈ’ ಎಂದು ಘೋಷಣೆಗಳನ್ನು ಕೂಗಿದರು.

ವಿರೋಧ ಪಕ್ಷದ ಸದಸ್ಯರಾದ ಕೆ.ಎಸ್‌. ಬಸವರಾಜ್‌, ಕೆ.ಎಚ್‌. ಓಬಳಪ್ಪ, ಡಿ.ಜಿ. ವಿಶ್ವನಾಥ್‌, ಜಿ.ಸಿ. ನಿಂಗಪ್ಪ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರಾಜಕೀಯ ವಿಷಯ ಹೊರಗೆ ಮಾತನಾಡಿ ಎಂದು ಪ್ರತಿಪಾದಿಸಿದರು.

ಈ ವೇಳೆ ಮಹೇಶ್‌ ಹಾಗೂ ಪ್ರತಿ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆದು, ಕೆಲ ಕಾಲ ಸಭೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ಬಳಿಕ ಮಧ್ಯ ಪ್ರವೇಶಿಸಿದ ಅಧ್ಯಕ್ಷೆ ಶೈಲಜಾ ಬಸವರಾಜ್‌, ‘ಇದು ಸಭೆಗೆ ಬೇಡವಾದ ವಿಚಾರ. ಈ ಬಗ್ಗೆ ಚರ್ಚಿಸುವುದು ಬೇಡ’ ಎಂದು ಹೇಳುವ ಮೂಲಕ ವಿಷಯಕ್ಕೆ ತೆರೆ ಎಳೆದರು.

ರೇವಣಪ್ಪ ಬೆಂಬಲಕ್ಕೆ ನಿಂತ ಸದಸ್ಯರು
ಹಿಂದುಳಿದ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಬಿ. ರೇವಣ್ಣ ಅವರ ಬೆಂಬಲಕ್ಕೆ ನಿಂತ ಜಿಲ್ಲಾ ಪಂಚಾಯಿತಿ ಸದಸ್ಯರು, ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿರುವ ದೇವರಾಜ ಅರಸು ಅಭಿವೃದ್ಧಿ ನಿಗಮದ ಹೊರಗುತ್ತಿಗೆ ಆಧಾರದ ಮಹಿಳಾ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು.

‘ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಅಧಿಕಾರಿಯಾಗಿ ಯಾರೂ ಬರಲು ಸಿದ್ಧ ಇರಲಿಲ್ಲ. ಹೀಗಿರುವಾಗ ನಮ್ಮೆಲ್ಲರ ಕೋರಿಕೆ ಮೇಲೆ ರೇವಣ್ಣ ಅವರನ್ನು ನಿಗಮಕ್ಕೂ ಪ್ರಭಾರ ವ್ಯವಸ್ಥಾಪಕರಾಗಿ ಕಳುಹಿಸಿಕೊಡಲಾಗಿತ್ತು. ಆದರೆ, ಪ್ರಭಾವಶಾಲಿಯಾಗಿರುವ ಆ ಮಹಿಳಾ ಸಿಬ್ಬಂದಿ ಇವರ ವಿರುದ್ಧವೇ ದೂರು ನೀಡಿ ಬೆದರಿಕೆ ಒಡ್ಡುತ್ತಿದ್ದಾರೆ. ಇಂಥ ಪ್ರಕರಣ ಮುಂದುವರಿದರೆ ಅಧಿಕಾರಿಗಳು ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಕಳೆದ ಸಭೆಯಲ್ಲೇ ಆ ಮಹಿಳಾ ಸಿಬ್ಬಂದಿಯನ್ನು ತೆಗೆದು ಹಾಕುವಂತೆ ಹೇಳಿದ್ದರೂ ಏಕೆ ಇನ್ನೂ ಕ್ರಮ ಕೈಗೊಂಡಿಲ್ಲ’ ಎಂದು ತೇಜಸ್ವಿ ಪಟೇಲ್‌, ಓಬಳಪ್ಪ, ಬಸವರಾಜ್‌ ಸೇರಿ ಹಲವು ಸದಸ್ಯರು ಸಿಇಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ತಾತ್ಕಾಲಿಕವಾಗಿ ಆ ಇಲಾಖೆಗೆ ಬೇರೊಬ್ಬ ಅಧಿಕಾರಿಯನ್ನು ನೇಮಿಸಬೇಕು. ಕೆಲಸಕ್ಕೆ ಅಡ್ಡಿಪಡಿಸುತ್ತಿರುವ ಮಹಿಳೆಯನ್ನು ಇಂದೇ ಕೆಲಸದಿಂದ ವಜಾಗೊಳಿಸಬೇಕು’ ಎಂದು ಸದಸ್ಯರು ಪಟ್ಟು ಹಿಡಿದರು.

ತಕ್ಷಣವೇ ಕ್ರಮ ಕೈಗೊಳ್ಳುವುದಾಗಿ ಸಿಇಒ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT