ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಣ್ಣುಮಗು ತನ್ನಿಂದಲೇ ಗುರುತಿಸಿಕೊಳ್ಳಲಿ: ಡಿಸಿ ಮಹಾಂತೇಶ ಬೀಳಗಿ

‘ಕೆನರಾ ವಿದ್ಯಾ ಜ್ಯೋತಿ’ ವಿದ್ಯಾರ್ಥಿವೇತನ ವಿತರಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
Last Updated 6 ಫೆಬ್ರುವರಿ 2020, 15:13 IST
ಅಕ್ಷರ ಗಾತ್ರ

ದಾವಣಗೆರೆ: ಇಂಥವರ ಮಗಳು, ಪತ್ನಿ, ತಾಯಿ, ಅಜ್ಜಿ ಎಂದು ಬೇರೆಯವರ ಮೂಲಕ ಗುರುತಿಸಿಕೊಳ್ಳುವ ಬದಲು ನಿಮ್ಮಿಂದಲೇ ಕುಟುಂಬ ಗುರುತಿಸಿಕೊಳ್ಳುವಂಥ ಸಾಧನೆ ಮಾಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ನಿಂದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಕೆನರಾ ವಿದ್ಯಾ ಜ್ಯೋತಿ ಯೋಜನೆಯಡಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ ವಿತರಸಿ ಮಾತನಾಡಿದರು.

ಬಾಲ್ಯವಿವಾಹ ಮಾಡಿ ಅವರನ್ನು ಹೂವಾಗಿರುವಾಗಲೇ ಮುದುಡಿಸುವ ಕೆಲಸವನ್ನು ಪೋಷಕರು ಮಾಡಬಾರದು. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಕೆನರಾ ಬ್ಯಾಂಕ್‌ ವಿದ್ಯಾರ್ಥಿವೇತನ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.

ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ವಿದ್ಯಾರ್ಥಿನಿಯರು ಪಿ.ಯು ಫಲಿತಾಂಶವನ್ನು ತಮ್ಮ ಪತಿಯೊಂದಿಗೆ ಬಂದು ನೋಡುವ ಪರಿಸ್ಥಿತಿ ಇದೆ. ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದರೂ ವಿದ್ಯಾರ್ಥಿನಿಯರು ಮದುವೆಗಾಗಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ಕನಿಷ್ಠ ಪದವಿ ಪಡೆಯುವ ಕನಸನ್ನಾದರೂ ವಿದ್ಯಾರ್ಥಿನಿಯರು ಇಟ್ಟುಕೊಳ್ಳಬೇಕು. ಬಾಲ್ಯ ವಿವಾಹ ಮಾಡಲು ಮುಂದಾದರೆ 1098 ಸಂಪರ್ಕಿಸಿ ಎಂದು ಹೇಳಿದರು.

ಡಿಡಿಪಿಐ ಸಿ.ಆರ್ ಪರಮೇಶ್ವರಪ್ಪ ಮಾತನಾಡಿ, ‘ಪ್ರತಿ ಬಾರಿ ಪರೀಕ್ಷಾ ಫಲಿತಾಂಶಗಳು ಬರುವಾಗ ವಿದ್ಯಾರ್ಥಿನಯರದ್ದೇ ಮೇಲುಗೈ ಆಗಿರುತ್ತದೆ. ಆದರೆ 7ನೇ ತರಗತಿ, ಎಸ್‌ಎಸ್‌ಎಲ್‌ಸಿ, ಪಿಯು ಮಟ್ಟದಲ್ಲಿ ವಿದ್ಯಾಭ್ಯಾಸ ನಿಲ್ಲಿಸುವವರಲ್ಲಿ ಕೂಡ ಹೆಣ್ಣು ಮಕ್ಕಳ ಸಂಖ್ಯೆಯೇ ಜಾಸ್ತಿ ಇರುವುದು ದುರದೃಷ್ಟಕರ. ಬುದ್ಧಿವಂತರಾಗಿದ್ದರೂ ವಿದ್ಯೆ ಮುಂದುವರಿಸ ಸ್ಥಿತಿ ಇದೆ’ ಎಂದು ವಿಷಾದಿಸಿದರು.

ಮಹಿಳೆಯರ ಮೇಲೆ ಆಗುವ ಎಲ್ಲ ದೌರ್ಜನ್ಯ, ಅಪರಾಧಗಳನ್ನು ಎದುರಿಸಲು ಶಿಕ್ಷಣವೊಂದೇ ದಾರಿ. ಮಹಿಳೆ ಆರ್ಥಿಕವಾಗಿ ಸಬಲಳಾದಾಗ ಎದುರಿಸಿ ನಿಲ್ಲುವ ಶಕ್ತಿ ಬರುತ್ತದೆ ಎಂದು ತಿಳಿಸಿದರು.

ಕೆನರಾ ಬ್ಯಾಂಕ್‌ ಕ್ಷೇತ್ರೀಯ ಕಾರ್ಯಾಲಯ ಸಹಾಯಕ ಮಹಾಪ್ರಬಂಧಕ ಎಚ್. ರಘುರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಪ್ರತಿಭಾವಂತ ಬಡ ವಿದ್ಯಾರ್ಥಿನಿಯರನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರ ಅಲೋಚಿಸುವ ಮುನ್ನವೇ ಕೆನರಾ ಬ್ಯಾಂಕ್ ಶೈಕ್ಷಣಿಕ ಸಾಲ ನೀಡಲು ಆರಂಭಿಸಿತ್ತು. ವಿದ್ಯಾರ್ಥಿನಿಯರು ವಿದ್ಯಾವಂತರಾಬೇಕು. ಬಡತನದ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಯು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಕಾಳಜಿ ಇದಕ್ಕೆ ಕಾರಣ’ ಎಂದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಮ್ಮ ಬ್ಯಾಂಕ್ ಸದಾ ಪ್ರೋತ್ಸಾಹ ನೀಡುತ್ತದೆ. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ನಂತರ ಕೆಲಸಕ್ಕೆ ಸೇರಿದ ಬಳಿಕ ಶೈಕ್ಷಣಿಕ ಸಾಲವನ್ನು ಮರು ಪಾವತಿಸಬಹುದು ಎಂದು ತಿಳಿಸಿದರು.

ಕೆನರಾ ಬ್ಯಾಂಕ್‌ನ ಕ್ಷೀತ್ರೀಯ ಕಾರ್ಯಾಲಯದ ವಿಭಾಗೀಯ ಪ್ರಬಂಧಕರಾದ ಜಿ.ಆರ್ ನಾಗರತ್ನ ಸ್ವಾಗತಿಸಿದರು. ಜಿ.ಜಿ. ದೊಡ್ಡಮನಿ ವಂದಿಸಿದರು. ಲೀಡ್‌ ಬ್ಯಾಂಕ್‌ ವಿಭಾಗೀಯ ಪ್ರಬಂಧಕ ಸುಶೃತ ಡಿ. ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT