ಬುಧವಾರ, ಸೆಪ್ಟೆಂಬರ್ 22, 2021
22 °C
ಅಪಘಾತಗಳು ಕಡಿಮೆಯಾಗಿರುವುದರಿಂದ ಸಾವಿನ ಪ್ರಮಾಣವೂ ಕಡಿಮೆ

ದಾವಣಗೆರೆ: ಮಾರ್ಚ್‌ನಿಂದ ಇಳಿಕೆಯಾದ ಕೊರೊನಾ ಮರಣ ಪ್ರಮಾಣ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ದಾವಣಗೆರೆ: ಕೊರೊನಾ ಬಂದು ಲಾಕ್‌ಡೌನ್‌ ಆಗಿದ್ದರಿಂದ ಜನರ ಓಡಾಟ ಕಡಿಮೆ ಆಗಿರುವುದರಿಂದ ಐದು ತಿಂಗಳುಗಳಲ್ಲಿ ಒಟ್ಟು ಮರಣ ಪ್ರಮಾಣವೇ ಕಡಿಮೆಯಾಗಿದೆ.

ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ 2019ರಲ್ಲಿ ಮಾರ್ಚ್‌ನಿಂದ ಜುಲೈ ಅಂತ್ಯದವರೆಗೆ ವಿವಿಧ ಕಾರಣಗಳಿಂದ 816 ಮಂದಿ ಮೃತಪಟ್ಟಿದ್ದರು. 2020ರ ಇದೇ ಅವಧಿಯಲ್ಲಿ ಕೊರೊನಾದಿಂದ ಮೃತಪಟ್ಟವರೂ ಸೇರಿ ಒಟ್ಟು 392 ಮಂದಿ ಅಸುನೀಗಿದ್ದಾರೆ. ಕಳೆದ ವರ್ಷಕ್ಕಿಂತ ಶೇ 52ರಷ್ಟು ಕಡಿಮೆ ಸಾವು ಸಂಭವಿಸಿದೆ.

ಕೊರೊನಾ ಪೂರ್ವದ ಎರಡು ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚಿದೆ. 2019ರ ಜನವರಿಯಲ್ಲಿ 160 ಮಂದಿ ಮೃತಪಟ್ಟಿದ್ದರೆ, 2020ರಲ್ಲಿ ಜನವರಿಯಲ್ಲಿ 179 ಮಂದಿ ಸಾವನ್ನಪ್ಪಿದ್ದರು. ಫೆಬ್ರುವರಿಯಲ್ಲಿ ಕಳೆದ ವರ್ಷ 124 ಮತ್ತು ಈ ವರ್ಷ 123 ಮಂದಿ ಸತ್ತಿದ್ದರು.

ಸಹಜ ಮರಣ, ಅಪಘಾತ, ಕಾಯಿಲೆ ಹೀಗೆ ಯಾವುದೇ ಕಾರಣದಿಂದ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮರಣ ಉಂಟಾದರೆ ಪಾಲಿಕೆಯಲ್ಲಿ ಅದು ದಾಖಲಾಗುತ್ತದೆ. ಮನೆಯಲ್ಲಿ ಮೃತ ಪಟ್ಟರೂ ಮರಣ ಪ್ರಮಾಣಕ್ಕಾಗಿ ಪಾಲಿಕೆಗೆ ಮಾಹಿತಿ ನೀಡಲಾಗುತ್ತದೆ. ಮನೆಯವರು ಮಾಹಿತಿ ನೀಡದೇ ಇದ್ದರೂ ಪಾಲಿಕೆ ವ್ಯಾಪ್ತಿಯ ಸ್ಮಶಾನಗಳಿಗೆ ಕೊಂಡು ಹೋದಾಗಲೂ ಅಲ್ಲಿಂದ ಮಾಹಿತಿ ಬರುತ್ತದೆ ಎಂದು ಪಾಲಿಕೆಯ ಜನನ–ಮರಣ ನೋಂದಣಾಧಿಕಾರಿ ತಿಳಿಸಿದ್ದಾರೆ.

ಪಾಲಿಕೆಯಲ್ಲಿ ದಾಖಲಾದ ಪ್ರಕಾರ 2019ರಲ್ಲಿ ಮಾರ್ಚ್‌ನಿಂದ ಜುಲೈವರೆಗೆ 2,604 ಮಂದಿ ಮೃತಪಟ್ಟಿದ್ದಾರೆ. 2020ರಲ್ಲಿ ಇದೇ ಸಮಯದಲ್ಲಿ 1,656 ಮಂದಿ ನಿಧನರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆ 944 ಕಡಿಮೆ ಇದೆ.


ಹನುಮಂತರಾಯ

‘ಕೊರೊನಾ ಬಂದಿದ್ದರಿಂದ ಜನರು ಮನೆಯಲ್ಲಿಯೇ ಇದ್ದಿದ್ದರಿಂದ ಓಡಾಟ ಕಡಿಮೆಯಾಗಿದೆ. ಹೊರಗೆ ಬರುವವರು ಕೂಡಾ ಯರ‍್ರಾಬಿರ‍್ರಿಯಾಗಿ ವಾಹನಗಳನ್ನು ಚಲಾಯಿಸುವುದನ್ನು ಕಡಿಮೆ ಮಾಡಿದ್ದಾರೆ. ಲಾಕ್‌ಡೌನ್‌ ಕಾಲದಲ್ಲಿ ದ್ವಿಚಕ್ರವಾಹನಗಳಿಗೆ ದಂಡ ವಿಧಿಸಿದ್ದರಿಂದ ಅವರ ಓಡಾಟವೂ ಕಡಿಮೆಯಾಗಿತ್ತು ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಹಜವಾಗಿ ಸಂಭವಿಸುವ ಸಾವನ್ನು ತಡೆಯಲು ಸಾಧ್ಯವಿಲ್ಲ. ರೋಗಗಳಿಂದ ಮೃತಪಡುವಾಗಲೂ ಅದು ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ ಅಪಘಾತ ನಮ್ಮಿಂದಲೇ ಆಗುತ್ತದೆ. ಲಾಕ್‌ಡೌನ್‌ ಕಾಲದಲ್ಲಿ ಅಪಘಾತ ಕಡಿಮೆ ಆಗಿರುವುದೇ ಮರಣ ಪ್ರಮಾಣ ಕಡಿಮೆಯಾಗಲು ಕಾರಣ’ ಎಂದು ವಿಶ್ಲೇಷಿಸಿದರು.

ಚಿಗಟೇರಿ ಆಸ್ಪತ್ರೆಯ ಮರಣ ಅಂಕಿ ಅಂಶ

ತಿಂಗಳು20192020
ಮಾರ್ಚ್174150
ಏಪ್ರಿಲ್‌16048
ಮೇ18240
ಜೂನ್13553
ಜುಲೈ165101

ಪಾಲಿಕೆಯಲ್ಲಿ ದಾಖಲಾದ ಮರಣ ಪ್ರಮಾಣ

ತಿಂಗಳು20192020
ಮಾರ್ಚ್468238
ಏಪ್ರಿಲ್‌ 435268
ಮೇ573345
ಜೂನ್‌ 451428
ಜುಲೈ674379

(ಮಾಹಿತಿ: ಪಾಲಿಕೆಯ ಜನನ–ಮರಣ ನೋಂದಣಿ ವಿಭಾಗ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು